spot_img
Friday, May 15, 2026
spot_imgspot_img

ಇಲ್ಲಿದೆ ಅಪೂರ್ವ ಹಣ್ಣಿನ ಗಿಡಗಳ ಮೋಹಕ ಲೋಕ: ಬೈಂದೂರಿನ ಬೆನ್ನಿ ಪಿ.ಸಿ ಅವರ ತೋಟದಲ್ಲಿದೆ ಅಪರೂಪದ ಹಸಿರ ಸಂಪತ್ತು

ಬರಹ-ರಾಧಾಕೃಷ್ಣ ತೊಡಿಕಾನ – ಗಣೇಶ ಆರ್.ಎಮ್. ಮಟ್ನಕಟ್ಟೆ

ಅಲ್ಲಿರುವುದು ಅಪೂರ್ವವಾದ ಹಣ್ಣಿನ ಗಿಡಗಳ ಲೋಕ. ವಿವಿಧ ಜಾತಿಯ ಹಣ್ಣುಗಳ ಉಪಪ್ರಭೇದಗಳು, ನೂರಾರು ಬಗೆಯ ವೈವಿಧ್ಯಮಯ ಹಣ್ಣುಗಳು—ಅತ್ಯಂತ ಸಿಹಿಯಿಂದ ಹಿಡಿದು ಹುಳಿ-ಸಿಹಿಯ ಮಿಶ್ರ ರುಚಿಯವರೆಗೆ. ದೇಶ-ವಿದೇಶಗಳ ಅಪರೂಪದ ಹಣ್ಣಿನ ಗಿಡಗಳನ್ನು ಬೆಳೆಸಿ, ಅದರ ಸವಿಯನ್ನು ಜನರಿಗೆ ಪರಿಚಯಿಸುತ್ತಿರುವವರು ಕರ್ನಾಟಕ ಫಾರ್ಮ್ಸ್ ಮತ್ತು ನರ್ಸರಿಯ ಮುಖ್ಯಸ್ಥ ಬೆನ್ನಿ ಪಿ.ಸಿ.

ಬೈಂದೂರು ಸಮೀಪದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಕರ್ನಾಟಕ ಫಾರ್ಮ್ಸ್ ಮೂಲಕ ಪ್ರಸಿದ್ಧರಾಗಿರುವ ಬೆನ್ನಿಯವರು, ಮೂಡನಗದ್ದೆಯ ಚಂದನ ಪ್ರದೇಶದಲ್ಲಿ ವಿಶಿಷ್ಟ ಹಣ್ಣಿನ ತೋಟವನ್ನು ನಿರ್ಮಿಸಿದ್ದಾರೆ. ಮೇಲ್ನೋಟಕ್ಕೆ ಸಾಮಾನ್ಯ ಮರಗಿಡಗಳ ತೋಟದಂತೆ ಕಾಣುವ ಈ ಪ್ರದೇಶದೊಳಗೆ ಕಾಲಿಟ್ಟಾಗ ಪ್ರತಿಯೊಂದು ಗಿಡವೂ ಒಂದೊಂದು ಕಥೆಯನ್ನು ಹೇಳುತ್ತದೆ.

ಸುಮಾರು ಮೂರುವರೆ ಎಕರೆ ವಿಸ್ತೀರ್ಣ ಹೊಂದಿರುವ ಈ ತೋಟದಲ್ಲಿ ಬೆಳೆದಿರುವ ಹಣ್ಣಿನ ಮರಗಳೇ ಹೊಸ ಕಸಿ ಗಿಡಗಳ ತಾಯಿಗಿಡಗಳಾಗಿವೆ. ವಿವಿಧ ಪ್ರದೇಶಗಳಿಂದ ತರಲಾದ ಹಣ್ಣಿನ ತಳಿಗಳನ್ನು ಇಲ್ಲಿ ನೆಟ್ಟು, ಅವುಗಳ ಬೆಳವಣಿಗೆ, ರುಚಿ ಹಾಗೂ ಗುಣಮಟ್ಟವನ್ನು ಅಧ್ಯಯನ ಮಾಡಿ ಉತ್ತಮ ತಳಿಗಳಿಂದಲೇ ಹೊಸ ಕಸಿ ಗಿಡಗಳನ್ನು ತಯಾರಿಸಲಾಗುತ್ತದೆ.

ಬೆನ್ನಿಯವರಿಗೆ ನರ್ಸರಿ ಉದ್ಯಮ ಕುಟುಂಬ ಪಾರಂಪರ್ಯವಾಗಿ ಬಂದದ್ದು. ಅವರ ಸಹೋದರರು ಕೇರಳದಲ್ಲಿ ನರ್ಸರಿ ಉದ್ಯಮ ಮುಂದುವರಿಸಿಕೊಂಡು ಬರುತ್ತಿದ್ದಾರೆ. ಪ್ರೌಢ ಶಿಕ್ಷಣವನ್ನು ಅರ್ಧದಲ್ಲೇ ಮೊಟಕುಗೊಳಿಸಿದ ಬೆನ್ನಿಯವರು ನರ್ಸರಿ ಕೆಲಸ ಕಾರ್ಯಗಳಲ್ಲಿ ತೊಡಗಿ ಉದ್ಯಮದ ಸೂಕ್ಷ್ಮತೆಯನ್ನು ತಿಳಿದುಕೊಂಡರು. ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ಶಿವಮೊಗ್ಗ ಭಾಗದ ರೈತರು ರಬ್ಬರ್ ಗಿಡಗಳಿಗಾಗಿ ಕೇರಳದ ನರ್ಸರಿಗೆ ಬರುತ್ತಿದ್ದ ಸಂದರ್ಭ, ಈ ಭಾಗದಲ್ಲೇ ನರ್ಸರಿ ಆರಂಭಿಸಿದರೆ ರೈತರಿಗೆ ಅನುಕೂಲವಾಗುತ್ತದೆ ಎಂಬ ಯೋಚನೆಯಿಂದ ಸುಮಾರು 25-30 ವರ್ಷಗಳ ಹಿಂದೆ ಬೈಂದೂರು ಭಾಗದಲ್ಲಿ ರಬ್ಬರ್ ನರ್ಸರಿ ಆರಂಭಿಸಿದರು.

ನಂತರ ತೆಂಗು, ಗೇರು ಸೇರಿದಂತೆ ವಿವಿಧ ಗಿಡಗಳು ಸೇರಿಕೊಂಡವು. ರೈತರಿಂದ ಬೇರೆ ಬೇರೆ ಹಣ್ಣಿನ ಗಿಡಗಳಿಗೆ ಬೇಡಿಕೆ ಹೆಚ್ಚಾದಂತೆ ಕರ್ನಾಟಕ ನರ್ಸರಿ ಕೂಡ ವಿಸ್ತಾರವಾಯಿತು. ಇಂದು ರಾಜ್ಯದಷ್ಟೇ ಅಲ್ಲದೆ ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ, ಕೇರಳ ಹಾಗೂ ತಮಿಳುನಾಡಿನ ರೈತರೂ ಇಲ್ಲಿಗೆ ಬಂದು ಹಣ್ಣಿನ ಗಿಡಗಳನ್ನು ಕೊಂಡೊಯ್ಯುತ್ತಾರೆ. ಸಣ್ಣ ಗಿಡದಿಂದ ಕಾಯಿಬಿಟ್ಟಿರುವ ಹಂತದವರಗಿನ ಗಿಡಗಳಿವೆ.

7೦೦ಕ್ಕೂ ಅಧಿಕ ಹಣ್ಣಿನ ತಳಿಗಳು

ಮೂಡನಗದ್ದೆಯ ಹಣ್ಣಿನ ತೋಟದಲ್ಲಿ ಸುಮಾರು 7೦೦ರಿಂದ 8೦೦ಕ್ಕೂ ಅಧಿಕ ಹಣ್ಣಿನ ತಳಿಗಳಿವೆ. ಈ ತೋಟವನ್ನು ಹಣ್ಣು ಮಾರಾಟಕ್ಕಾಗಿ ನಿರ್ಮಿಸಿಲ್ಲ. ಉತ್ತಮ ಗುಣಮಟ್ಟದ ತಾಯಿ ಗಿಡಗಳನ್ನು ಬೆಳೆಸಿ ಕಸಿ ಗಿಡಗಳನ್ನು ತಯಾರಿಸುವುದೇ ಮುಖ್ಯ ಉದ್ದೇಶ.

 

ಹಣ್ಣುಗಳು ಹಕ್ಕಿ ಹಾಗೂ ಕಾಡುಪ್ರಾಣಿಗಳಿಗೆ ಆಹಾರವಾಗುತ್ತವೆ. ಉಳಿದ ಹಣ್ಣುಗಳನ್ನು ಮನೆಮಂದಿ, ಬಂಧುಗಳು ಹಾಗೂ ನೆರೆಹೊರೆಯವರೊಂದಿಗೆ ಹಂಚಿಕೊಳ್ಳುವುದು ಬೆನ್ನಿಯವರ ಸ್ವಭಾವ.

ಈ ಮಣ್ಣಿನಲ್ಲಿ ಯಾವ ಗಿಡ ಹೇಗೆ ಫಲ ನೀಡುತ್ತದೆ ಎಂಬುದನ್ನು ಗಮನಿಸಿ, ಅದಕ್ಕೆ ಅನುಗುಣವಾಗಿ ಹೊಸ ಕಸಿ ಗಿಡಗಳನ್ನು ತಯಾರಿಸಲಾಗುತ್ತದೆ. ಹಣ್ಣಿನ ರುಚಿ, ಗಾತ್ರ ಹಾಗೂ ಬೆಳವಣಿಗೆಗೆ ಆದ್ಯತೆ ನೀಡಲಾಗುತ್ತದೆ.

ಹಲಸು, ಮಾವು ಮತ್ತು ಅಪರೂಪದ ಹಣ್ಣುಗಳು

ಈ ತೋಟದಲ್ಲಿ ನೂರಕ್ಕೂ ಹೆಚ್ಚು ಹಲಸಿನ ತಳಿಗಳಿವೆ. ಬುಡದಿಂದ ತುದಿವರೆಗೆ ವಿವಿಧ ಗಾತ್ರದ ಹಲಸುಗಳು ನೇತಾಡುತ್ತಿರುತ್ತವೆ. ಒಂದು ಕಾಲದಲ್ಲಿ “ಬಡವರ ಹಣ್ಣು” ಎಂದು ಕರೆಯಲ್ಪಟ್ಟ ಹಲಸು, ಈಗ ಎಲ್ಲ ವರ್ಗದವರ ಮೆಚ್ಚಿನ ಹಣ್ಣಾಗಿದೆ. ವರ್ಷಪೂರ್ತಿ ಫಲ ಕೊಡುವ ಹಲಸಿನ ತಳಿಗಳಿವೆ. ದೇಶೀಯ ವಿದೇಶಿಯ ಕಸಿಗಿಡಗಳು ಇಲ್ಲಿವೆ

ಹಣ್ಣುಗಳ ರಾಜ ಎಂದೇ ಕರೆಯುವ ಮಾವಿಗೂ ಇಲ್ಲಿ ವಿಶೇಷ ಸ್ಥಾನವಿದೆ. ವಿವಿಧ ಜಾತಿಯ ಮಾವಿನ ತಳಿಗಳ ಜೊತೆಗೆ ಒಂದೇ ಮರದಲ್ಲಿ ನಾಲ್ಕೈದು ಬಗೆಯ ಮಾವುಗಳನ್ನು ಕಾಣಬಹುದು. ಋತುಭೇದವಿಲ್ಲದೆ ವರ್ಷವಿಡೀ ಹೂ ಬಿಟ್ಟು ಹಣ್ಣು ಕೊಡುವ “151-ಊ” ತಳಿ ತೋಟದ ಪ್ರಮುಖ ಆಕರ್ಷಣೆ. ಸುಮಾರು ನಾಲ್ಕು ಕಿಲೋ ತೂಕದವರೆಗೆ ಬೆಳೆಯುವ ಈ ಮಾವು ಗಾತ್ರದಲ್ಲೂ ರುಚಿಯಲ್ಲೂ ವಿಶೇಷ. ಗಿಡ ಚಪ್ಪರವಾಗಿ ಬೆಳೆಯುವುದರಿಂದ ಮನೆ ಅಂಗಳ ಅಥವಾ ತಾರಸಿ ಕೃಷಿಗೂ ಇದು ಸೂಕ್ತ.

ಪುಲಸಾನ್, ಮ್ಯಾಂಗೋಸ್ಟಿನ್, ಮಟೋವಾ, ರಾಂಬುಟಾನ್, ಲಾಂಗೂನ್, ಜಬೊಟಿಕಾ, ಮೊದಲಾದ ವಿದೇಶಿ ಹಣ್ಣುಗಳನ್ನೂ ಇಲ್ಲಿ ಬೆಳೆಸಲಾಗಿದೆ. ಪುಲಸಾನ್ ನೆರಳಲ್ಲಿಯೂ ಬೆಳೆಯಬಲ್ಲದು. ಇದಕ್ಕೆ ಗಂಡು ಹಾಗೂ ಹೆಣ್ಣು ಗಿಡಗಳು ಅಗತ್ಯ. ಮ್ಯಾಂಗೋಸ್ಟಿನ್ ಉತ್ತಮ ರುಚಿ ಹಾಗೂ ಮಾರುಕಟ್ಟೆ ಬೇಡಿಕೆ ಹೊಂದಿರುವ ಹಣ್ಣು. ಮಟೋವಾ ಒಂದು-ಒಂದೂವರೆ ವರ್ಷದಲ್ಲೇ ಫಲ ನೀಡುತ್ತದೆ ಮತ್ತು ವರ್ಷಕ್ಕೆ ಎರಡು-ಮೂರು ಬಾರಿ ಹಣ್ಣು ಬಿಡುತ್ತದೆ. ಇಲ್ಲಿಯ ರಾಂಬುಟಾನ್ ಗಿಡಗಳನ್ನು ಕೊಂಡೊಯ್ದು ತೋಟವನ್ನೇ ನಿರ್ಮಿಸಿ ಈ ಹಣ್ಣಿನ ಬೆಳೆಯಲ್ಲಿ ಯಶಸ್ಸು ಕಂಡಿದ್ದಾರೆ. ಇದಲ್ಲದೆ ವಿವಿಧ ಪ್ರಬೇಧದ ನೇರಳೆ, ಪೇರಳೆ, ಜಾಂಬು ನೇರಳೆ, ಮಲ್ಬೇರಿ, ಲಿಚಿ,ಅಭಿಯು, ಸ್ಟಾರ್ ಪ್ರುಟ್, ಲಕ್ಷö್ಮಣ ಪಲ, ಅಂಜೂರ ಚಿಕ್ಕು, ತೆಂಗು ಹಾಗೂ ಇನ್ನೂ ಅನೇಕ ಹಣ್ಣಿನ ತಳಿಗಳು ಇಲ್ಲಿವೆ.

ಕ್ಯಾಶ್ಯೂ ಕಿಂಗ್

ಬೆನ್ನಿಯವರ ನರ್ಸರಿಯ “ಕ್ಯಾಶ್ಯೂಕಿಂಗ್” ಗೇರು ಕಸಿ ಗಿಡಗಳು ರೈತರಲ್ಲಿ ಹೆಚ್ಚು ಜನಪ್ರಿಯವಾಗಿವೆ. ಸಣ್ಣ ಹಣ್ಣಿನ ದೊಡ್ಡ ಗಾತ್ರದ ಗೇರು ಬೀಜ ಹಾಗೂ ಹೆಚ್ಚು ಫಸಲು ನೀಡುವ ಈ ತಳಿಗಳು ಅನೇಕ ರೈತರ ತೋಟಗಳಲ್ಲಿ ನೆಲೆ ಕಂಡಿವೆ. ಎಕರೆಗೆ ಸುಮಾರು 15-18 ಕ್ವಿಂಟಾಲು ಇಳುವರಿ ನೀಡುವ ಈ ಗೇರು ದಶಂಬರಿನಿಂದ ಮೇ-ಜೂನ್ ವರೆಗೂಫಸಲು ನೀಡುತ್ತದೆ. “ವ್ಯವಹಾರಕ್ಕಿಂತ ರೈತರಿಗೆ ಉತ್ತಮ ಗಿಡಗಳನ್ನು ನೀಡುವುದು ಮುಖ್ಯ” ಎನ್ನುವುದು ಬೆನ್ನಿಯವರ ಧ್ಯೇಯ.

ಅವರ ಪತ್ನಿ ಶೈಲಿ ಹಾಗೂ ಪುತ್ರರಾದ ಮೆಲ್ವಿನ್, ಮಿಲನ್, ಮಿರೋಸ್ ಕುಟುಂಬದ ಸದಸ್ಯರೆಲ್ಲರೂ ನರ್ಸರಿಯ ಬೆಳವಣಿಗೆಯಲ್ಲಿ ಕೈಜೋಡಿಸಿದ್ದಾರೆ.ಬೆನ್ನಿಯವರು ಉತ್ಪಾದನಾ ವಿಭಾಗದ ಜವಾಬ್ದಾರಿ ನೋಡಿಕೊಳ್ಳುತ್ತಿದ್ದರೆ, ಮೆಲ್ವಿನ್ ಮಾರಾಟ ವಿಭಾಗ ನಿರ್ವಹಿಸುತ್ತಿದ್ದಾರೆ. ಕೃಷಿ ಪದವೀಧರರಾದ ಮಿಲನ್ ಕೃಷಿ ತಂತ್ರಜ್ಞಾನ ಹಾಗೂ ನಿರ್ವಹಣೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಸಣ್ಣ ರಬ್ಬರ್ ಗಿಡಗಳಿಂದ ಆರಂಭವಾದ ಕರ್ನಾಟಕ ನರ್ಸರಿ ಇಂದು ಹಲವು ರಾಜ್ಯಗಳ ರೈತರ ನೆಚ್ಚಿನ ಕೇಂದ್ರವಾಗಿದೆ. ಇಲ್ಲಿ ಖರೀದಿಸಿದ ಗಿಡಗಳಿಂದ ಅನೇಕ ರೈತರು ಹಣ್ಣಿನ ತೋಟಗಳನ್ನು ನಿರ್ಮಿಸಿ ಅದರಿಂದ ಆದಾಯವನ್ನು ಪಡೆಯುತ್ತಿದ್ದಾರೆ.

ಹೊಸ ತೋಟ ನಿರ್ಮಿಸುವ ರೈತರಿಗೆ ಮಾರ್ಗದರ್ಶನ ಹಾಗೂ ನಿರ್ವಹಣಾ ಸಲಹೆಗಳನ್ನೂ ನೀಡಲಾಗುತ್ತದೆ. “ಹಣ್ಣಿನ ಕೃಷಿಯಲ್ಲಿ ನಷ್ಟವಿಲ್ಲ. ಸರಿಯಾದ ಸಮಯದಲ್ಲಿ ಸರಿಯಾದ ನಿರ್ವಹಣೆ ಮುಖ್ಯ” ಎಂದು ಬೆನ್ನಿಯವರು ಹೇಳುತ್ತಾರೆ.

ಜೇನು ಕೃಷಿಗೆ ಆದ್ಯತೆ

ಪರಾಗಸ್ಪರ್ಶ ಬೆಳೆಗೆ ಅತ್ಯಗತ್ಯ. ಇದಕ್ಕಾಗಿ ಹಣ್ಣಿನ ತೋಟದಲ್ಲಿ ಜೇನು ಕೃಷಿಗೂ ಒತ್ತು ನೀಡಲಾಗಿದೆ. ಇಲ್ಲಿ ಸುಮಾರು 25 ಜೇನು ಕುಟುಂಬಗಳು ಹಾಗೂ 30-40 ಮುಜೆಂಟಿ ಜೇನು ಪೆಟ್ಟಿಗೆಗಳಿವೆ. ಇದು ಪರಾಗಸ್ಪರ್ಶಕ್ಕೆ ಸಹಕಾರಿಯಾಗುತ್ತಿದೆ.

ಮನೆಯ ಸುತ್ತ ಹಸಿರು ವಾತಾವರಣ

ಮನೆಯ ಸುತ್ತ ಮತ್ತು ಅಂಗಳಕ್ಕೆ ಇಂಟರ್‌ಲಾಕ್ ಅಳವಡಿಸಿದರೂ ಬೆನ್ನಿಯವರು ಹಸಿರು ಚಪ್ಪರ ನಿರ್ಮಿಸಿದ್ದಾರೆ. ಮನೆಯ ಹಿಂಭಾಗದಲ್ಲಿ ಗ್ರೋಬ್ಯಾಗ್‌ಗಳಲ್ಲಿ ತರಕಾರಿ ಬೆಳೆಸಲಾಗುತ್ತಿದೆ. ಬಾವಿಯ ಮೇಲ್ಭಾಗದಲ್ಲಿ ಹಾಗಲಕಾಯಿ ಚಪ್ಪರ, ಮತ್ತೊಂದು ಭಾಗದಲ್ಲಿ ಹೀರೆಕಾಯಿ, ಚಪ್ಪರದಲ್ಲಿ ತೂಗಾಡುತ್ತಿದ್ದರೆ ಗೋಡೆಗಳಿಗೆ ಸೌತೆಕಾಯಿ ಬಳ್ಳಿಗಳು ಹರಡಿಕೊಂಡಿವೆ. ಇದರಿಂದ ಬಿರು ಬಿಸಿಲಿನಲ್ಲೂ ತಂಪಾದ ವಾತಾವರಣ ನಿರ್ಮಾಣವಾಗಿದೆ. ಬೆಂಡೆಕಾಯಿ, ಬದನೆಕಾಯಿ ಸೇರಿದಂತೆ ಹಲವು ತರಕಾರಿಗಳನ್ನು ಮನೆಯ ಬಳಕೆಗೆ ಬೆಳೆಸಿ, ಹೆಚ್ಚುವರಿಯನ್ನು ನೆರೆಹೊರೆಯವರೊಂದಿಗೆ ಹಂಚಿಕೊಳ್ಳುತ್ತಾರೆ.

ಸಾವಯವ ಕೃಷಿಯತ್ತ ಒಲವು

ಬೆನ್ನಿಯವರು ಸಂಪೂರ್ಣ ಸಾವಯವ ಕೃಷಿಗೆ ಆದ್ಯತೆ ನೀಡಿದ್ದಾರೆ. ಅಗತ್ಯಕ್ಕೆ ತಕ್ಕಷ್ಟು ನೀರು ಹಾಗೂ ಗೊಬ್ಬರ ಬಳಸಲಾಗುತ್ತದೆ. ಯಾವುದೇ ರಾಸಾಯನಿಕ ಸಿಂಪಡಣೆ ಇಲ್ಲ. ಸೆಗಣಿ, ಬೇವಿನ ಹಿಂಡಿ, ಬೋನ್ಸ್ ಮಿಲ್, ಕುರಿ ಗೊಬ್ಬರ ಮೊದಲಾದ ಸಾವಯವ ಗೊಬ್ಬರಗಳೇ ಗಿಡಗಳಿಗೆ ಆಹಾರ..ಮೂಡನಗದ್ದೆಯಲ್ಲಿ ಹಣ್ಣುಗಳ ತೋಟವಾದರೆ ಎಳಜಿತ್ ತೊಂಡ್ಲೆ ಕಸಿಗಿಡಗಳ ಉತ್ಪಾದನಾ ಕ್ಷೇತ್ರ. ಬೈಂದೂರು ಸಮೀಪ ಮಾರಾಟ ಘಟಕವಿದೆ. ಇದಲ್ಲದೆ ಎಳಿಜಿತ್ ತೊಂಡ್ಲೆಯಲ್ಲಿ ಕೋಳಿ ಸಾಕಾಣೆ ಹಾಗೂ ಮೀನು ಸಾಕಾಣೆಯನ್ನೂ ಮಾಡಲಾಗುತ್ತಿದೆ.

ಕೃಷಿ ಪ್ರವಾಸೋದ್ಯಮದ ಕನಸು

ಹಣ್ಣಿನ ತೋಟ ನೋಡಲು ಹಲವಾರು ರೈತರು ಬರುತ್ತಿರುತ್ತಾರೆ. ಮಕ್ಕಳಿಗೆ ವಿವಿಧ ಮಾದರಿಯ ಕಸಿ ಕಟ್ಟುವ ವಿಧಾನ ತಿಳಿಸುವುದು, ಹಣ್ಣಿನ ಗಿಡಗಳ ಬಗ್ಗೆ ಮಾಹಿತಿ ನೀಡುವುದು ಹಾಗೂ ಕೃಷಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಯೋಜನೆಯೂ ಇವರಲ್ಲಿದೆ. ಮಾಹಿತಿಗೆ: 92414 87056, 94831 42266 (ವಾಟ್ಸಪ್) ಮಾರಾಟ ವಿಭಾಗ:77606 74510

 

ಸಂಬಂಧಿತ ಲೇಖನಗಳು

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group