-ರಾಧಾಕೃಷ್ಣ ತೊಡಿಕಾನ
ಗೊಂಬೆಗಳು ಕೇವಲ ಮಕ್ಕಳ ಆಟಿಕೆಗಳಲ್ಲ. ಅವು ದೃಶ್ಯ ಕಾವ್ಯಗಳು. ಅದ್ಭುತವಾದ ಲೋಕವನ್ನು ಅನಾವರಣಗೊಳಸುತ್ತವೆ. ನಮ್ಮ ಸಂಸ್ಕೃತಿ, ಪರಂಪರೆ ಇತಿಹಾಸವನ್ನು ಜೀವಂತವಾಗಿ ಇರಿಸುವ ರೂಪಕಗಳು.. ಇವುಗಳಲ್ಲಿ ದೇವರ, ಮಹಾನುಭಾವರ ದರ್ಶನವಿದೆ. ಜನಪದರ ಕಥೆಗಳಿವೆ. ರೈತರ ಜೀವನ ಗಾಥೆಯಿದೆ. ಕಣ್ಮನ ತಣಿಸುವ ಗೊಂಬೆಗಳ ಲೋಕ ನಮ್ಮ ಸಂಸ್ಕೃತಿ ಮೌಲ್ಯವನ್ನು ಬಿಂಬಿಸುತ್ತದೆ.
ರಾಮನಗರ ಜಿಲ್ಲೆಯ ಚನ್ನಪಟ್ಟಣ ಮರದ ಗೊಂಬೆಗಳಿಂದಲೇ ವಿಶ್ವ ಪ್ರಸಿದ್ಧ. ಅಲ್ಲಿಯ ಅನೇಕ ಕುಟುಂಬಗಳ ಬದುಕು ಅರಳುವುದು ಗೊಂಬೆಗಳ ಮೂಲಕ. ಗೊಂಬೆಗಳ ಗುಡಿ ಕೈಗಾರಿಕೆ ಅಲ್ಲಿಯ ಜನರ ಕಲೆಗಾರಿಕೆಯ ಕಲಾ ಕುಸುಮಗಳು.
ಈ ಕಲೆ ಒಂದೇ ಜಾತಿ ಸಮುದಾಯವನ್ನು ಸೀಮಿತವಾಗಿಲ್ಲ. ಹಿಂದು ಮುಸ್ಲಿಂ ಎಲ್ಲರೂ ಒಂದಾಗಿ ಈ ಕಲೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಆಟಿಕೆ, ಗೊಂಬೆಗಳ ಕಸುರಿ ಕೆಲಸಗಳಿಂದಲೇ ಚನ್ನಪಟ್ಟಣಕ್ಕೆ ರಂಗು ತುಂಬಿದೆ. ವಿಶಿಷ್ಟ ಗುರುತು ಮೂಡಿಸಿದೆ.
ರಾಮನಗರ ಜಿಲ್ಲೆಯ ಚೆನ್ನಪಟ್ಟಣದ ರವಿರಾಜ್ ಅವರು ಚನ್ನಪಟ್ಟಣದ ಗೊಂಬೆ ತಯಾರು ಮಾಡುವ ಕಲಾಕಾರಲ್ಲಿ ಒಬ್ಬರು. ಅವರ ಕುಟುಂಬವು ತಲೆಮಾರಿನಿಂದ ಈ ಕಲೆಯನ್ನು ಮುಂದುವರಿಸಿಕೊಂಡು ಬಂದಿದೆ. ಎಲ್ಲರೂ ಗೊಂಬೆಗಳ ತಯಾರಿಯಲ್ಲಿ ತೊಡಗಿಕೊಂಡವರು. ಹಿರಿಯರಿಂದ ಬಂದ ಪರಂಪರೆಯನ್ನು ರವಿರಾಜ ಕುಟುಂಬ ಮುಂದುವರಿಸಿದೆ. “ಸೂರ್ಯೋದಯ ಹ್ಯಾಂಡಿ ಕ್ರಾಫ್ಟ್ “ ಎಂಬ ಹೆಸರಿನ ಗುಡಿ ಕೈಗಾರಿಕೆಯನ್ನು ನಡೆಸುತ್ತಿರುವ ಅವರು ಕಳೆದ 4೦ -42 ವರ್ಷಗಳಿಂದ ಕರಕುಶಲ ವಸ್ತುಗಳನ್ನು ತಯಾರಿಸುತ್ತಿದ್ದಾರೆ. ಇವರೊಂದಿಗೆ ಜತೆಯಾಗಿ ಗೊಂಬೆ ತಯಾರಿಯಲ್ಲಿ ತೊಡಗಿಕೊಂಡವರು ಅಲ್ತಾಫ್ ಶರೀಫ್
ಇವರ ಕೈಗಳಲ್ಲಿ ರೂಪು ಪಡೆವ ಗೊಂಬೆಗಳು ಹಲವು. ದೇವರ ಮೂರ್ತಿಗಳು, ಸಂತರು, ಮಹಾನುಭಾವರು, ಗ್ರಾಮೀಣ ಜನರ ಜೀವನ ಚಿತ್ರಣ, ಮನೆಯನ್ನು ಅಂದಗೊಳಿಸಬಹುದಾದ ಅಲಂಕಾರಿಕ ಆಕೃತಿಗಳು, ಮಕ್ಕಳ ಆಟಿಕೆಗಳು, ಕಾರು ಬೈಕು, ಆಕರ್ಷಕ ಬಳೆಗಳು, . ಸರಗಳನ್ನು ಪೋಣಿಸುವ ಮುತ್ತಿನ ಮಾದರಿಯ ಮರದ ಗುಂಡುಗಳು, ಬೀಗದ ಕೈಗೊಂಚಲುಗಳು ಒಂದಕ್ಕೊಂದು ಆಕರ್ಷಣೀಯ.
ಪರಿಸರ ಸ್ನೇಹಿ ಕಲಾಕೃತಿಗಳು
ಈ ಗೊಂಬೆಗಳ ತಯಾರಿಗೆ ಹಗುರವಾದ ಆಲೆಮರಗಳನ್ನು ಬಳಸಲಾಗುತ್ತದೆ. ಈ ಮರದ ಸಣ್ಣ ಸಣ್ಣ ತುಂಡುಗಳು ಉಪಯುಕ್ತ. ಯಾವುದಾದರೂ ಒಂದು ಆಕೃತಿಯನ್ನು ರಚನೆ ಮಾಡಲಾಗುತ್ತಿದೆ. ಚಿಕ್ಕ ವಸ್ತುವಿನಿಂದ ದೊಡ್ಡ ಆಕೃತಿಯವರೆಗೆ ವಿವಿಧ ಕಲಾಕೃತಿಗಳನ್ನು ಇದರಿಂದ ಮಾಡಬಹುದು. ಗೊಂಬೆಗಳಿಗೆ ರಾಸಾಯನಿಕ ಬಣ್ಣ ಬಳಸುವುದಿಲ್ಲ. ನೈಸರ್ಗಿಕವಾದ ಬಣ್ಣ . ಲಾಕರ್ ವಿಧಾನಗಳಿಂದ ಗೊಂಬೆಗಳಿಗೆ ಆಕರ್ಷಕ ಬಣ್ಣ ನೀಡಲಾಗುತ್ತದೆ. ಎಲ್ಲವೂ ನೈಸರ್ಗಿಕ ಮತ್ತು ಪರಿಸರ ಸ್ನೇಹಿಯಾದ ಚಿತ್ತಾರಗಳು
.ಈ ಗೊಂಬೆಗಳನ್ನು ಮಾರುಕಟ್ಟೆಯಲ್ಲಿ ಮತ್ತು ರಾಜ್ಯ ,ರಾಷ್ಟ್ರಮಟ್ಟದಲ್ಲಿ ನಡೆಯುವ ಕರಕುಶಲ ವಸ್ತು ಪ್ರದರ್ಶನಗಳಲ್ಲಿ ಮಾರಾಡಟ ಮಾಡಲಾಗುತ್ತಿದೆ. ಅನೇಕ ಮಂದಿ ಚನ್ನಪಟ್ಟಣಕ್ಕೆ ಬಂದು ಗೊಂಬೆ ತಯಾರಿಕೆಯನ್ನು ನೋಡಿ ಖರೀದಿಸಿಕೊಂಡು ಹೋಗುತ್ತಿದ್ದಾರೆ. ರವಿರಾಜ್ ದೇಶದ ಬೇರೆ ಬೇರೆ ಭಾಗಗಳಲ್ಲಿ ಗೊಂಬೆ ತಯಾರಿ ಪ್ರಾತ್ಯಕ್ಷಕೆ ನೀಡಿದ್ದು ಸಾಮಾಜಿಕ ಜಾಲತಾಣದ ಮೂಲಕವೂ ಮಾರಾಟ ಮಾಡಿದ್ದಾರೆ.

ಈ ಕಲೆ ನಮಗೆ ಬದುಕುವನ್ನು ಕಲಿಸಿದೆ. ಉದ್ಯೋಗ ನೀಡಿದೆ. ಕುಟುಂಬ ನಿರ್ವಹಣೆಗೆ ಬೇಕಾದ ಆದಾಯವನ್ನು ಒದಗಿಸಿದೆ ಎಂದು ರವಿರಾಜ್ ಹೇಳುತ್ತಾರೆ
ಇವರ ಜೊತೆಯಲ್ಲಿ ಕೆಲಸ ಮಾಡುವ ಅಲ್ತಾಫ್ ಶರೀಫ್ ಅವರು ಓದಿದ್ದು ನಾಲ್ಕನೇ ತರಗತಿ ಮಾತ್ರ. ಗೊಂಬೆಗಳ ತಯಾರಿ ಕಲೆ ಅವರನ್ನು ಎತ್ತರಕ್ಕೆ ಬೆಳೆಸಿದೆ. ಹಲವು ವರ್ಷಗಳಿಂದ ರವಿರಾಜ್ ಜತೆ ಸೇರಿ ಗೊಂಬೆ ತಯಾರಿಕೆಯಲ್ಲಿ ತೊಡಗಿಕೊಂಡಿದ್ದಾರೆ. ಈ ಕಲೆಯೇ ಬದುಕಿನ ದಾರಿಯನ್ನು ತೋರಿಸಿದೆ. ಇವರ ತಂದೆ ಮಹಮ್ಮದ್ ಶರೀಫ್ ಅವರ ಕಲಾಕೌಶಲ ಗುರುತಿಸಿ ಕರಕುಶಲ ಮಂಡಳಿಯ ಅವರಿಗೆ ಮನೆಯೊಂದನ್ನು ನೀಡಿದೆ ಎಂದು ಅಲ್ತಾಫ್ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಕಲಾ ಕೌಶಲ್ಯತೆಯನ್ನೇ ವೃತ್ತಿಯಾಗಿಸಿ ಇಂದಿಗೂ ಅನೇಕ ಕುಟುಂಬಗಳು ಬದುಕಿನ ಬೆಳಕು ಕಾಣುತ್ತಿರುವುದು ಕಲೆಯ ಹೆಚ್ಚುಗಾರಿಕೆ, ಮಾಹಿತಿಗೆ:9845331743, 8970435413




