spot_img
Wednesday, February 18, 2026
spot_imgspot_img
spot_img

ಸ್ವ ಉದ್ಯೋಗಕ್ಕೆ ಇವರಿಗೆ ವರವಾಯಿತು ಭತ್ತದ ತೋರಣ- ಲಾವಂಚದ ಕರಕುಶಲ ವಸ್ತುಗಳು

– ರಾಧಾಕೃಷ್ಣ ತೊಡಿಕಾನ

ಭತ್ತದ ತೆನೆಗಳನ್ನು ಬಾಗಿಲಿನ ಚೌಕಟ್ಟಿಗೆ ಕಟ್ಟುತ್ತಾರೆ. ಅದೊಂದು ಸಂಸ್ಕೃತಿ. ಪರಂಪರೆ. ಬಿತ್ತಿ ಬೆಳೆದ ಭತ್ತವನ್ನು ಮನೆ ತುಂಬಿಸಿಕೊಳ್ಳುವ ಸಾಂಪ್ರದಾಯಿಕ ಸಂಕೇತ. ಅದರಂತೆ ಭತ್ತದ ತೆನೆಯಿಂದ ನೆಯ್ದ ಅಂದದ ಭತ್ತದ ತೋರಣವೇ ಕೆಲ ಮನೆಯ ಬಾಗಿಲಲ್ಲಿ ಅಲಂಕೃತವಾಗಿರುತ್ತದೆ. ಭತ್ತ ಹೊಟ್ಟೆಗೆ ಅನ್ನ ಕೈಗೆ ದುಡಿಮೆ ಕೊಡುವ ಕರಕುಶಲತೆಗೂ ಸಂಪನ್ಮೂಲ. ಭತ್ತದ ತೋರಣ, ಲಾವಂಚದ ಕರಕುಶಲ ವಸ್ತುಗಳಿಂದಲೇ ಉದ್ಯೋಗವನ್ನು ಸೃಷ್ಟಿಸಿಕೊಂಡು ತಮ್ಮ ಆರ್ಥಿಕತೆಯನ್ನು ಸುಧಾರಿಸಿಕೊಂಡ ಹಲವು ಮಂದಿ ಮಹಿಳೆಯರು ಇದ್ದಾರೆ. ಅಂತಹವರಲ್ಲಿ ಹೇಮಾ ವೆಂಕಟರಮಣ ನಾಯ್ಕ್ ಒಬ್ಬರು.

ಲಾವಂಚದ ಕಲಾಕೃತಿಯಿಂದ ಭತ್ತದ ತೋರಣದವರೆಗೆ ಕಲಾತ್ಮಕವಾದ ಕೆಲಸ ಮಾಡುತ್ತಾ ತನ್ನ ಹಳ್ಳಿಯಲ್ಲೇ ಕರಕುಶಲತೆಯ ಪುಟ್ಟ ಉದ್ಯಮವನ್ನು ಸೃಷ್ಟಿಸಿಕೊಂಡವರು. ಭತ್ತದ ಮಾಲೆಯಲ್ಲದೆ ಅಂದ ಚೆಂದದ ಭತ್ತದ ಗೊಂಡೆಗಳು. ಲಾವಂಚದಿಂದ ಮಾಡಿದ ಮುಖವರ್ಣಿಕೆಗಳು. ಲಾವಂಚದ ಗಣೇಶ, ಪುರಾಣ ಇತಿಹಾಸಗಳನ್ನು ಬಿಂಬಿಸುವ ಸುಂದರವಾದ ಮುಖಚಿತ್ರಗಳು ಮನೆಯ ಸೌಂದರ್ಯವನ್ನು ವೃದ್ಧಿಸುವಂತಹ ಕಲಾಕೃತಿಗಳ ಅವರ ಸಂಗ್ರಹದ ಅನನ್ಯತೆಯನ್ನು ಸಾರಿವೆ.

  ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಬೇಂಗ್ರೆಯ ಹೇಮಾ ವೆಂಕಟರಮಣ ನಾಯ್ಕ್ ತನ್ನ ಗೃಹ ಕೃತ್ಯಗಳ ನಡುವೆ ಬಿಡುವಿನ ವೇಳೆಯಲ್ಲಿ ಕರಕುಶಲ ವಸ್ತುಗಳ ತಯಾರಿ ಕಲಿತ್ತಿದ್ದರು. ಭಟ್ಕಳದ ಎಂ. ಡಿ. ಮ್ಯಾಥ್ಯೂ ರವರಿಂದ ಲಾವಂಚದ ಕಚ್ಛಾ ಆಕೃತಿಗಳನ್ನು ತಂದು ಕುಸುರಿ ಕೆಲಸಗಳನ್ನು ಮನೆಯಲ್ಲಿ ಮಾಡಿಕೊಡುತ್ತಿದ್ದರು. ಇವರ ಸಹಕಾರ ಮಾರ್ಗದರ್ಶನ ಕರಕುಶಲ ವಸ್ತುಗಳ ತಯಾರಿಕೆಗೆ ಹೇಮಾ ಅವರಿಗೆ ಪ್ರೇರಣೆಯಾಯಿತು.

ಈ ಸಂದರ್ಭದಲ್ಲಿ ಸಮಾನ ಮನಸ್ಕ ಹತ್ತು ಹನ್ನೆರಡು ಮಹಿಳೆಯರು ಒಟ್ಟುಗೂಡಿಸಿ ಸಂಜೀವಿನಿ ಯೋಜನೆಯಡಿ ಶ್ರಿ ಗುರುಪೂರ್ಣಿಮಾ ಸ್ವಸಹಾಯ ಸಂಘವನ್ನು ಆರಂಭಿಸಿದರು. ಸಂಜೀವಿನಿ ಯೋಜನೆಯ ಪ್ರಯೋಜನ ಪಡೆದು ಸ್ವ ಉದ್ಯೋಗದ ದಾರಿ ಕಂಡುಕೊಂಡರು.

ಲಾವಂಚದ ಗಣಪತಿ ಮತ್ತು ಇತರ ಆಕೃತಿಗಳಿಗೆ ಕಲಾತ್ಮಕ ಸ್ಪರ್ಶ ನೀಡುವುದರೊಂದಿಗೆ ಭತ್ತದ ಹಾರವೂ ಸಿದ್ಧವಾಯಿತು. ಇದರಿಂದ ಸಂಘದ ಕೆಲಮಂದಿಗೆ ಭತ್ತದ ತೋರಣ ಇತರ ಅಲಂಕಾರಿಕ ವಸ್ತುಗಳ ತಯಾರಿ ಉದ್ಯೋಗವಾಯಿತು. ಗೃಹಕೃತ್ಯದಲ್ಲಿ ತೊಡಗಿಕೊಂಡು ಬಿಡುವಿನ ವೇಳೆಯಲ್ಲಿ ಸ್ವಲ್ಪ ಸಂಪಾದನೆಯ ಅವಕಾಶ ಕರಕುಶಲತೆಯಿಂದ ಲಭ್ಯವಾಯಿತು. ಮಹಿಳೆಯರಲ್ಲಿ ಆರ್ಥಿಕ ಚೈತನ್ನವನ್ನು ತುಂಬಲು ಸಹಕಾರಿಯಾಯಿತು.

ಕರಕುಶಲ ವಸ್ತುಗಳ ಮಾರಾಟ

ಹಳ್ಳಿಯ ಮೂಲೆಯಲ್ಲಿ ಕರಕುಶಲ ವಸ್ತುಗಳು ತಯಾರಾದವು. ಆದರೆ ಮಾರಾಟ ಮಾಡುವುದು ಬಹಳಷ್ಟು ಕಡೆಗಳಲ್ಲಿ ಸವಾಲೇ ಸರಿ. ಆದರೆ ಹೇಮಾ ಅವರಿಗೆ ಈ ಸಮಸ್ಯೆ ಕಾಡಲಿಲ್ಲ. ಸಂಜೀವಿನಿಯು ಇವರಿಗೆ ಸಂಜೀವಿನಿಯಾಗಿಯೇ ಬೆನ್ನಿಗೆ ನಿಂತಿತು. ಸಂಜೀವಿನಿ ಸರಸ್ ಮೇಳ, ಮಾಸಿಕ ಸಂತೆ ಈ ಉತ್ಪನ್ನಗಳ ಮಾರಾಟಕ್ಕೆ ವೇದಿಕೆಯನ್ನು ಕಲ್ಪಿಸಿದವು. ಬೆಂಗಳೂರು, ಕಾರವಾರ, ಗೋವಾ, ಮುಂಬಯಿ, ಹರಿಯಾಣ ಹೀಗೆ ಹಲವಾರು ಕಡೆಗಳಲ್ಲಿ ನಡೆದ ಮಾರಾಟ ಮೇಳ, ಪ್ರದರ್ಶನ ಮಳಿಗೆಗಳಲ್ಲಿ ಇವರ ಕರಕುಶಲ ಉತ್ಪನ್ನಗಳು ಬೇಡಿಕೆ ಪಡೆದುಕೊಂಡವು. ಕರಕುಶಲ ವಸ್ತುಗಳ ಮಾರಾಟಗಾರರು ರಖಂ ಆಗಿಯೇ ಖರೀದಿಸಿದರು. ಅಂತರ್ಜಾಲದ ಮೂಲಕವೂ ಕೊಳ್ಳಲು ಮುಂದೆ ಬಂದರು. ವಿದೇಶಿಗರೂ ತಮ್ಮಲ್ಲಿರುವ ವಸ್ತುಗಳನ್ನು ಖರೀದಿಸಿದ್ದಾರೆ ಎನ್ನುತ್ತಾರೆ ಹೇಮಾ ವೆಂಕಟರಮಣ ನಾಯ್ಕ್. ಈ ಸ್ವ ಉದ್ಯೋಗವು ಸಂತೃಪ್ತಿಯನ್ನು ತಂದಿದೆ. ಕುಟುಂಬದ ಸಹಕಾರವೂ ಪ್ರೇರಕವಾಗಿದೆ. ಸ್ವಸಹಾಯ ಸಂಘದ ಸದಸ್ಯರ ಬೆಂಬಲವೂ ಪೂರಕವಾಗಿದೆ. ಎಂದು ಅಭಿಮಾನದಿಂದಲೇ ಅವರು ಹೇಳಿಕೊಳ್ಳುತ್ತಾರೆ.

ಹೇಮಾ ವೆಂಕಟರಮಣ ನಾಯ್ಕ್ ಅವರ ಸಾಧನೆಯನ್ನು ಗುರುತಿಸಿ ಬೆಂಗಳೂರಿನಲ್ಲಿ ನಡೆದ ರಾಷ್ಟೀಯ ಮಟ್ಟದ ಸರಸ್ ಮೇಳದಲ್ಲಿ “ಅತ್ಯುತ್ತಮ ಸಾಧಕರು” ಪ್ರಶಸ್ತಿಯನ್ನು ಪಡೆದಿದ್ದಾರೆ. ಉತ್ತರ ಕನ್ನಡ ಜಿಲ್ಲಾ ಮಟ್ಟದ ಪ್ರಶಸ್ತಿ ಅಲ್ಲದೆ ಸಂಘ ಸಂಸ್ಥೆಗಳು ಗುರುತಿಸಿ ಗೌರವಿಸಿವೆ ಮೊ.8904662451

spot_img

ಸಂಬಂಧಿತ ಲೇಖನಗಳು

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group