spot_img
Tuesday, February 17, 2026
spot_imgspot_img
spot_img

ರೈಯವರ ಸ್ವ ಉದ್ಯೋಗಕ್ಕೆ ತಂಪು ನೀಡಿದ ಆಲಡ್ಕ ದ್ರಾಕ್ಷಾ ರಸ

-ರಾಧಾಕೃಷ್ಣ ತೊಡಿಕಾನ

ಬಾಯಾರಿದಾಗ ತಂಪು ಪಾನೀಯ… ಅದರಲ್ಲೂ ತಾಜಾ ಹಣ್ಣಿನ ರಸವೆಂದರೆ ಮನಸ್ಸಿಗೂ ಮುದ. ದೇಹಕ್ಕೂ ಹಿತ. ಹಣ್ಣಿನ ರಸಗಳು ಹಲವಿವೆ. ಎಲ್ಲವೂ ಬಿನ್ನ ಭಿನ್ನ ಸ್ವಾದ..ಮತ್ತೆ ಮತ್ತೆ ಸವಿಯಬೇಕೆಂಬ ರುಚಿ. ಅದರಲ್ಲೂ ದ್ರಾಕ್ಷಾ ರಸ ಆಲಡ್ಕ ದ್ರಾಕ್ಷಾರಸ. ಹಳ್ಳಿಯ ಮೂಲೆಯಲ್ಲಿ ತಯಾರಾಗುವ ಪಾನೀಯವಿದು. ತನ್ನದೇ ಛಾಪು ಮೂಡಿಸಿದ ಆಲಡ್ಕ ಗ್ರೇಪ್ ಜ್ಯೂಸ್.. ಆರಂಭಿಸಿದವರು ಆಲಡ್ಕದ ಮಹಾಬಲ ರೈ. ಅವರದು ಸ್ವ ಉದ್ಯೋಗ. ಗೃಹ ಉದ್ಯಮ. ಈ ದ್ರಾಕ್ಷಾರಸ ಹಲವರ ಮನ ತಣಿಸಿದರೆ ಕೆಲವರಿಗೆ ಬದುಕು ಕಲ್ಪಿಸಿದೆ. .

ಪುತ್ತೂರು ತಾಲೂಕಿನ ಕೆದಂಬಾಡಿಯ ಆಲಡ್ಕದ ಮಹಾಬಲ ರೈ ಕೃಷಿಕ ಕುಟುಂಬದವರು. ತೆಂಗು, ಅಡಿಕೆ, ಗೇರು, ಕಾಳುಮೆಣಸು ಸೇರಿದಂತೆ ಮಿಶ್ರ ಬೆಳೆ ಕುಟುಂಬಕ್ಕೆ ಆಸರೆ. ರೈಯವರು ಹಳ್ಳಿಯಲ್ಲಿದ್ದು ಕೃಷಿ ಚಟುವಟಿಕೆ ತೊಡಗಿಕೊಂಡು ಇರಬಹುದಾಗಿತ್ತಾದರೂ ಇತರ ಯುವಕರಂತೆ ಅವರನ್ನು ನಗರ ಸೆಳೆಯಿತು. ಬೆಂಗಳೂರು ಸೇರಿದ ನಂತರ ರೈ ಅವರು ಬೇರೆ ಬೇರೆ ಉದ್ಯೋಗಗಳನ್ನು ಮಾಡಿದರಾದರೂ ಎಲ್ಲೂ ಹೆಚ್ಚು ಕಾಲ ಉಳಿಯಲಿಲ್ಲ. ಉದ್ಯೋಗವನ್ನು ಬದಲಾಯಿಸುತ್ತಾ ಹೋದರು. ಅದೇ ಸಂದರ್ಭದಲ್ಲಿ ಬೆಂಗಳೂರಿನ ಹಾಪ್‌ಕಾಮ್‌ನ ಸಂಪರ್ಕ ಅವರಿಗಾಯಿತು.

ಹಾಫ್ ಕಾಮ್ಸ್ ನ ದ್ರಾಕ್ಷಾರಸ, ಮಾವಿನ ಹಣ್ಣಿನ ರಸ ಮೊದಲಾದ ಪೇಯಗಳು ಜನಪ್ರಿಯವಾಗಿದ್ದವು. ಈ ಪೇಯಗಳ ರುಚಿ ಅನುಭವಿಸಿದ, ಪೇಯ ತಯಾರಿಯನ್ನು ಹತ್ತಿರದಿಂದ ಕಂಡಿದ್ದ ಅವರಿಗೆ . ಇದನ್ನೇ ಸ್ವ ಉದ್ಯೋಗವಾಗಿ ತನ್ನೂರಿನಲ್ಲಿ ಆರಂಭಿಸಿದರೆ ಹೇಗೆ ಎಂಬ ಆಲೋಚನೆ ಹೊಳೆಯಿತು.

ದ್ರಾಕ್ಷಿ ಹಣ್ಣಿನ ರಸ ತೆಗೆವ ಸ್ವ ಉದ್ಯೋಗ ಸಾಧ್ಯವೇ ಎಂಬ ಯೋಚನೆ ಅವರನ್ನು ಕೆಲವೊಮ್ಮೆ ವಿಚಲಿತರಾಗುವಂತೆ ಮಾಡಿತು. ಪುತ್ತೂರು ಸುತ್ತಮುತ್ತಲು ಪಾನೀಯ ತಯಾರಿ ಘಟಕಗಳಿದ್ದರೂ ದ್ರಾಕ್ಷಾರಸ ತಯಾರಿಯ ಕಿರು ಉದ್ಯಮವಿರಲಿಲ್ಲ. ಈ ಪರಿಸರಕ್ಕೆ ಹೊಸದಾದ ಪರಿಕಲ್ಪನೆಯನ್ನು ಇಟ್ಟುಕೊಂಡು ದ್ರಾಕ್ಷಾರಸವನ್ನು ಪರಿಚಯಿಸಬೇಕೆಂಬ ಅಪೇಕ್ಷೆ ಅವರಲ್ಲಿ ಬಲವಾಯಿತು.  ಆದರೆ ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಬೇರೆ ಬೇರೆ ಹಣ್ಣುಗಳಿವೆ. ಆದರೆ ದ್ರಾಕ್ಷಿಗೆ ಮಾತ್ರ ಬೆಂಗಳೂರಿನತ್ತಲೇ ಮುಖ ಮಾಡಬೇಕಾಗಿತ್ತು. ಬೆಂಗಳೂರು ಆಸು ಪಾಸಿನ ಜಿಲ್ಲೆಗಳಲ್ಲಿ ರೈತರು ಬೆಳೆಯುವ ಈ ಹಣ್ಣುಗಳನ್ನೇ ಆಶ್ರಯಿಸಸಬೇಕು. ಇಲ್ಲಾ ರಖಂ ಮಾರಾಟ ಮಾಡುವವರನ್ನು ಸಂಪರ್ಕಿಸಬೇಕು. ಆದರೂ ಅವರಲ್ಲಿರುವ ಆಸಕ್ತಿ ಕಡಿಮೆಯಾಗಲಿಲ್ಲ. ಮನೆಯಲ್ಲಿ ದ್ರಾಕ್ಷಾರಸ ತಯಾರು ಮಾಡುವುದಕ್ಕೆ ಶುರು ಮಾಡಿದರು. ಆರಂಭದಲ್ಲಿ ಉತ್ತಮ ಗುಣಮಟ್ಟದ ದ್ರಾಕ್ಷಾರಸ ತಯಾರಿ ಸಾಧ್ಯವಾಗಿರಲಿಲ್ಲ. ಆದರೆ ಪ್ರಯತ್ನವನ್ನು ಅವರು ಕೈಬಿಡಲಿಲ್ಲ. 2022ರಲ್ಲಿ ಈ ಉದ್ಯಮ ಆರಂಭಿಸಿದಾಗ ತಾಂತ್ರಿಕವಾದ ಕೆಲವು ಸಮಸ್ಯೆಗಳಿದ್ದವು. ದ್ರಾಕ್ಷಾರಸ ತಯಾರಿಗೆ ತಜ್ಞರ ನೆರವು ಪಡೆದರು. ಉತ್ತಮ ಗುಣಮಟ್ಟದ ಪೇಯವನ್ನು ಸುತ್ತಮುತ್ತಲು ಪರಿಚಯಿಸಿಲಾಯಿತು.

ಸಭೆ, ಸಮಾರಂಭಗಳಲ್ಲಿ ದ್ರಾಕ್ಷಾರಸ ಪರಿಚಯಿಸಿದಾಗ ಬರ ಬರುತ್ತಾ ಈ ಪೇಯ ಆದ್ಯತೆಯ ಆಯ್ಕೆಯಾಯಿತು. ದ್ರಾಕ್ಷಾರಸ ತಯಾರಿಗೆ ಬೇಕಾಗಿರುವುದು ಬೆಂಗಳೂರು ಬ್ಲೂ ದ್ರಾಕ್ಷಿ . ದ್ರಾಕ್ಷಾರಸಕ್ಕೆ ಹೆಚ್ಚು ಯೋಗ್ಯವಾದ ತಳಿಯಿದು. ಉತ್ತಮ ರುಚಿಯನ್ನು ಕೂಡ ಹೊಂದಿದೆ. ಬೆಂಗಳೂರು, ಚಿಕ್ಕ ಬಳ್ಳಾಪುರ, ದೊಡ್ಡ ಬಳ್ಳಾಪುರ ಮೊದಲಾದ ಕಡೆಗಳಲ್ಲಿ ಬೆಳೆಯುವ ಈ ದ್ರಾಕ್ಷಿಯನ್ನು ಖರೀದಿಸಿ ತಂದು ಪುತ್ತೂರಿನಲ್ಲಿ ಸಂಸ್ಕರಿಸಿ ದ್ರಾಕ್ಷಾರಸ ತಯಾರಿಸುತ್ತಾರೆ. ಚಳಿಗಾಲದಲ್ಲಿ ಉತ್ಕೃಷ್ಟ ದ್ರಾಕ್ಷಿ ಸಿಕ್ಕರೆ ಸೆಕೆಗಾಲದಲ್ಲಿ ಹಣ್ಣಿನಲ್ಲಿ ಸಿಹಿಯ ಅಂಶ ಹೆಚ್ಚು. ಇರುತ್ತದೆ.

ಮಾರುಕಟ್ಟೆ ಹೇಗೆ?

ದ್ರಾಕ್ಷಿಯ ರಸ ಹಿಂಡಿ ಸಂಸ್ಕರಿಸಿ ಬಾಟಲಿಗಳಲ್ಲಿ ತುಂಬಿ ಮುಚ್ಚಳ ಭದ್ರಪಡಿಸಿ ಮಾರುಕಟ್ಟೆಗೆ ನೀಡಲಾಗುತ್ತದೆ. 200 ಎಂ.ಎಲ್,3 ೦೦ಎಂಎಲ್ ಎರಡು ನಮೂನೆಯ ಬಾಟಲಿಗಳಲ್ಲಿ ದೊರೆಯುತ್ತದೆ. ಪುತ್ತೂರು, ಸುಳ್ಯ, ಬೆಳ್ತಂಗಡಿ ಮೊದಲಾದ ಕಡೆಗಳಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದೆ. ಉಳಿದಂತೆ ಸಭೆ ಸಮಾರಂಭಗಳಲ್ಲಿ ಮಾರಾಟ ಮಾಡಲಾಗುತ್ತದೆ. 1,೦೦೦ ಲೀಟರ್ ದ್ರಾಕ್ಷಿ ರಸ ತಯಾರು ಮಾಡಿದರೆ ಬಾಟಲಿಯಲ್ಲಿ 5೦೦೦ ಮಂದಿಗೆ ಆದರೆ ಸಭೆ ಸಮಾರಂಭಗಳಲ್ಲಿ ಇನ್ನೂ ಹೆಚ್ಚಿನ ಮಂದಿಗೆ ವಿತರಿಸಲು ಸಾಧ್ಯವಾಗುತ್ತದೆ. ದ್ರಾಕ್ಷಿಯ ಸಂಸ್ಕರಣೆಯಯ ನಂತರ ಉಳಿಯುವ ಬೀಜ ಮತ್ತು ತ್ಯಾಜ್ಯವನ್ನು ಬಣ್ಣ ತಯಾರಿಯಲ್ಲಿ ಬಳಸಿಕೊಳ್ಳಲಾಗುತ್ತದೆ.

ದ್ರಾಕ್ಷಾರಸ ಮಾಡುತ್ತಿರುವುದು ಕರಾವಳಿ ಮತ್ತು ಮಲೆನಾಡ ಭಾಗಗಳಲ್ಲಿ ಹೊಸ ಪ್ರಯತ್ನ. ಜೀವ ಸತ್ವವುಳ್ಳ ಆರೋಗ್ಯದಾಯಕ ಪಾನೀಯವಾಗಿದೆ. ಹಸಿವನ್ನೂ ದೂರ ಮಾಡುವ ಶಕ್ತಿ ಅದಕ್ಕಿದೆ ಎಂಬುದು ರೈ ಅವರ ಅನುಭವದ ಮಾತು.

ಸ್ವ ಉದ್ಯೋಗ:

ಪುತ್ತೂರಿನ ಹಳ್ಳಿಯ ಮೂಲೆಯಲ್ಲಿ “ಆಲಡ್ಕ ಗ್ರೇಪ್ ಜ್ಯೂಸ್ ಹೋಂ ಮೇಡ್” ಹೆಸರಿನಲ್ಲಿ ಆರಂಭಿಸಿದ ಸ್ವುದ್ಯೋಗದ ಕಿರು ಉದ್ಯಮಕ್ಕೆ ಈಗ ಮೂರು ವರ್ಷ. ಆರಂಭದಲ್ಲಿ ಜನ ಹೇಗೆ ಸ್ವೀಕರಿಸುತ್ತಾರೋ ಎಂಬ ಭಯ ಇದ್ದೇ ಇತ್ತು. ಆದರೆ ಉತ್ತಮ ಸ್ಪಂದನೆ ದೊರಕಿದೆ ಎನ್ನುತ್ತಾರೆ ಮಹಾಬಲ ರೈ. ಮಳೆಗಾಲದ ಎರಡು ತಿಂಗಳು ದ್ರಾಕ್ಷಾ ರಸ ತಯಾರಿಯ ಕಾರ್ಯಚಟುವಟಿಕೆಗಳು ಸ್ಥಗಿತವಾಗುತ್ತವೆ. ದ್ರಾಕ್ಷಾ ರಸ ತಯಾರಿ ಮಾರಾಟ ಕೆಲಸ ಕಾರ್ಯಗಳಲ್ಲಿ ಮನೆ ಮಂದಿ ತೊಡಗಿಕೊಳ್ಳುವುದಲ್ಲದೆ ಇತರ ಮೂರು ಮಂದಿಗೆ ಉದ್ಯೋಗವನ್ನು ನೀಡಿದ್ದಾರೆ. ಮಾರಾಟ ವೃದ್ಧಿಸಿದಂತೆ ಇನ್ನಷ್ಟೂ ಉದ್ಯೋಗಕ್ಕೆ ಅವಕಾಶಗಳಿವೆ. ರೈತರ ಉತ್ಪನ್ನಗಳು ಸಂಸ್ಕರಣೆಗೊಂಡು ಉಪ ಉತ್ಪನ್ನಗಳು ಹೆಚ್ಚು ಹೆಚ್ಚು ತಯಾರಾದರೆ ಎಲ್ಲರಿಗೂ ಅನುಕೂಲವೇ. ಮಂಡ್ಯದ ಕೀರೆಮಡಿ ಸಾವಯವ ಬೆಲ್ಲವನ್ನು ಈ ಭಾಗಕ್ಕೆ ಪರಿಚಯಿಸುತ್ತಿದ್ದಾರೆ.

ಭಾರತೀಯ ಕಿಸಾನ್ ಸಂಘದ ಪುತ್ತೂರು ಘಟಕದ ಪ್ರಧಾನ ಕಾರ್ಯದರ್ಶಿಯಾಗಿರುವ ರೈಯವರು ಜನರಿಗೆ ಸಾವಯವದ ಉತ್ಪನ್ನಗಳ ಬಳಕೆ ಹೆಚ್ಚಿಸುವ ಉದ್ದೇಶ ಹೊಂದಿದ್ದಾರೆ ಮಾಹಿತಿಗೆ 7019013732

spot_img

ಸಂಬಂಧಿತ ಲೇಖನಗಳು

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group