-ರಾಧಾಕೃಷ್ಣ ತೊಡಿಕಾನ
ಭೀಮ ತೇಜಸ್ವಿಯವರಿಗೆ ಬೆಂಗಳೂರಿನ ಕಂಪೆನಿಯೊಂದರಲ್ಲಿ ಉದ್ಯೋಗವಿತ್ತು. ಕೈತುಂಬಾ ಸಂಪಾದನೆಯಿತ್ತು. ಆದರೇನು, ಮನಸ್ಸು ಮಾತ್ರ ಹಳ್ಳಿಯತ್ತ ತುಡಿಯುತ್ತಿತ್ತು. ತನ್ನ ಹಳ್ಳಿಯಲ್ಲೇ ಏನಾದರೂ ಸಾಧನೆ ಮಾಡಬೇಕೆಂಬ ಆಸೆ. ಅವರಿಗೆ. ನಗರ ಬಿಟ್ಟು ಹೊರಬಂದ ಭೀಮ ತೇಜಸ್ವಿಯವರು ಹುಟ್ಟುಹಾಕಿದ್ದು ತನ್ನದೇ ಆದ ಗ್ರಾಮೀಣ ಉದ್ಯಮ.
ಬೆಳ್ತಂಗಡಿ ತಾಲೂಕಿನ ಪದ್ಮುಂಜದವರಾದ ಭೀಮ ತೇಜಸ್ವಿಯವರಿಗೆ ಹಳ್ಳಿಯಲ್ಲಿ ಅಡಿಕೆ, ತೆಂಗು, ಕಾಳುಮೆಣಸು ಹೀಗೆ ಸಮ್ಮಿಶ್ರ ಬೆಳೆಯ ಕೃಷಿಯಿತ್ತು. ಕೃಷಿಯ ಜೊತೆ ಜೊತೆಗೆ ಏನಾದರೂ ಸಾಧನೆ ಮಾಡಬೇಕೆಂಬ ಆಸೆಯಿತ್ತು. ನಗರ ಕೇಂದ್ರೀಕ್ರತವಾದ ಕಚ್ಚಾವಸ್ತುಗಳನ್ನು ತಂದು ಹಳ್ಳಿಯಲ್ಲಿ ಉದ್ಯಮ ಮಾಡುವುದಾಗಲಿ, ಮಾರುಕಟ್ಟೆ ಕಂಡುಕೊಳ್ಳುವುದಾಗಲಿ ಅಷ್ಟು ಸುಲಭವಲ್ಲ. ಎಂಬುದನ್ನು ಅರಿತ ಅವರು ಹಳ್ಳಿಯಲ್ಲೇ ಸಿಗುವ ನೈಸರ್ಗಿಕ ಸಂಪನ್ಮೂಲಗಳನ್ನು ಬಳಸಿ ಸೌಂದರ್ಯ ವರ್ಧಕಗಳನ್ನು ತಯಾರಿಸುವ ಯೋಜನೆ ರೂಪಿಸಿಕೊಂಡರು.

ಭೀಮ ತೇಜಸ್ವಿಯವರ ಸಹೋದರಿ ಡಾ. ಅಮೃತ ಗೌರಿ ವೈ ಮತ್ತು ಭಾವ ಡಾ. ಎಂ.ವಿ.ವಿ. ದುರ್ಗಾಪ್ರಸಾದ್ ಅವರು ಆಯುರ್ವೇದ ವೈದ್ಯರು. ಗಿಡ ಮೂಲಿಕೆಯನ್ನು ಒಳಗೊಡ ಹಲವಾರು ಔಷಧಿಗಳನ್ನು ಬಲ್ಲವರಾಗಿದ್ದರು. ಅವರ ಸಲಹೆ, ಮಾರ್ಗದರ್ಶನವು ಗಿಡಮೂಲಿಕೆಯ ಆರೋಗ್ಯ ಹಾಗೂ ಸೌಂದರ್ಯವರ್ಧಕ ಉತ್ಪನ್ನಗಳ ತಯಾರಿಕೆಗೆ ಸಹಕಾರಿಯಾದವು. ತಂದೆ ರಘುರಾಮ ಅವರ ಅಗಲುವಿಕೆಯ ನಂತರ ತಾಯಿ ವಿದ್ಯಾ ಪರಮೇಶ್ವರಿ ಅವರು ನೀಡಿದ ಬೆಂಬಲ, ತೇಜಸ್ವಿ ಅವರ ಸ್ವ ಉದ್ಯೋಗದ ಕಲ್ಪನೆ ಸಾಕಾರಗೊಳ್ಳಲು ಚೈತನ್ಯದಾಯಕವಾಯಿತು.
ಹಳ್ಳಿಗಳಲ್ಲಿ ಹಾಗೂ ಅವರ ಕೃಷಿ ಭೂಮಿಯಲ್ಲಿ ಗಿಡಮೂಲಿಕೆಗಳಿದ್ದವು. ಅಲೊವೆರಾ, ಅರಸಿನ ಬೆಳೆಯಿದ್ದವು. ಅದನ್ನೇ ಬಳಸಿಕೊಂಡು ಸ್ನಾನದ ಸಾಬೂನು ತಯಾರಿಗೆ ಮುಂದಾದರು. ಚರ್ಮದ ಆರೋಗ್ಯಕ್ಕೆ ಹಿತಕಾರಕವಾದ ಅಲೋವೆರಾ ಹಾಗೂ ಅರಸಿನದಿಂದ ಸ್ನಾನದ ಸಾಬೂನು ತಯಾರಿಸಿದರು. ಇವುಗಳ ಸಂಪನ್ಮೂಲ ವಸ್ತುಗಳೆಲ್ಲಾ ಕೃಷಿ ಪರಿಸರದವೇ ಆಗಿದ್ದವು. ಅಲ್ಲದೆ ನೈಸರ್ಗಿಕವಾಗಿದ್ದವು. ಆರಂಭದಲ್ಲಿ ಮಾರುಕಟ್ಟೆ ಮಾಡುವುದೇ ಸವಾಲಾಯಿತು. ಆದರೆ ಉತ್ಪನ್ನವನ್ನು ಬಳಸಿದವರು ಮತ್ತೆ ಮತ್ತೆ ಬೇಡಿಕೆಯಿತ್ತರು. ಔಷಧೀಯ ಗುಣವುಳ್ಳ ಈ ಸಾಬೂನಿನ ಬಳಕೆ ಹೆಚ್ಚಿತು. ಇದು ತೇಜಸ್ವಿ ಅವರಲ್ಲಿಯೂ ಆತ್ಮ ವಿಶ್ವಾಸ ಮೂಡಿಸಿತ್ತು.
ಚಳಿಗಾಲದಲ್ಲಿ ಸಾಮಾನ್ಯವಾಗಿ ಹಲವು ಮಂದಿಗೆ ತುಟಿ ಒಡೆದು ಗಾಯಗಳಾಗುತ್ತವೆ. ಈ ಸಮಸ್ಯೆಗೆ ಔಷಧೀಯ ವಲಯದಲ್ಲಿ ಹಲವು ಉತ್ಪನ್ನಗಳಿವೆಯಾದರೂ ನೈಸರ್ಗಿಕವಾಗಿ ಮಾಡಿದ ಉತ್ಪನ್ನಗಳು ಕಡಿಮೆ. ಅದಕ್ಕಾಗಿ ಇವರು ಜೇನು ಮೇಣ, ತೆಂಗಿನೆಣ್ಣೆ ಹಾಗೂ ಗಿಡಮೂಲಿಕೆಯನ್ನು ಬಳಸಿಕೊಂಡು ಲಿಪ್ ಬಾಮ್ ತಯಾರಿಸಿದರು. ಈ ಲಿಪ್ ಬಾಮ್ ಬಳಸಿದವರ ಪ್ರತಿಕ್ರಿಯೆ ಉತ್ತಮವಿತ್ತು. ಬೇಡಿಕೆಯೂ ಹೆಚ್ಚಾಯಿತು. ಇದೀಗ ಲಿಪ್ ಬಾಮ್ 5 ವಿಧದಲ್ಲಿ ಲಭ್ಯವಿದೆ.
ಕಾಲಿನ ಹಿಮ್ಮಡಿ ಒಡೆದರೆ ಅದರ ನಿವಾರಣೆಗಾಗಿ ಪಾದುಕಾ ಬಾಮ್. ಸುಟ್ಟಗಾಯಗಳ ಶಮನಕ್ಕೆ ದಗ್ಧ ಶಮನ, ಹೀಗೆ ಒಂದೊಂದೆ ಗಿಡಮೂಲಿಕೆ ಔಷಧಿಯನ್ನು ಪರಿಚಯಿಸಿದರು. ಇವೆಲ್ಲವೂ ಬಳಕೆದಾರರಿಗೆ ಪ್ರಿಯವಾಯಿತು. ಬೇಡಿಕೆಯೂ ಹೆಚ್ಚಿತು. ಇದಾದ ನಂತರ ತುಟಿ ಸೌಂದರ್ಯ ವರ್ಧಿಸಬಲ್ಲ ಲಿಪ್‌ಸ್ಟಿಕ್ ಕೂಡಾ ಮಾರುಕಟ್ಟೆ ಪ್ರವೇಶಿಸಿತು.

ಈ ಗೃಹ ಉದ್ಯಮಕ್ಕಾಗಿ ಅವರು ದೊಡ್ಡ ಬಂಡವಾಳ ಹೂಡಲು ಮುಂದಾಗಲಿಲ್ಲ. ತನ್ನ ಪರಿಸರದಲ್ಲಿರುವ ಕೃಷಿ ಉತ್ಪನ್ನ ಮತ್ತು ಗಿಡ ಮೂಲಿಕೆಯನ್ನೇ ಮುಖ್ಯ ಸಂಪನ್ಮೂಲವಾಗಿ ಬಳಸಿಕೊಂಡರು. 2022 ರಲ್ಲಿ ಕೇವಲ 6,೦೦೦ ರೂವಿನೊಂದಿಗೆ ಆರಂಭಸಿದ ಈ ಕಿರು ಉದ್ಯಮ ಮೂರುವರ್ಷಗಳಲ್ಲಿ ಹಲವು ಸವಾಲುಗಳನ್ನು ಎದುರಿಸಿಯೂ ಬೆಳೆದಿದೆ. ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿದೆ.
ಗಿಡ ಮೂಲಿಕೆಯ ಸ್ನಾನದ ಸಾಬೂನಿಂದ ಆರಂಭವಾಗಿ, ಈಗ ಹಲವು ಆರೋಗ್ಯ ಹಾಗೂ ಸೌಂದರ್ಯವರ್ಧಕ ಉತ್ಪನ್ನಗಳ ತಯಾರಿವರೆಗೆ ಅವರು ಯಶಸ್ಸು ಕಂಡಿದ್ದಾರೆ. ಅಲೊವೆರಾ, ಅರಸಿನ ಸೇರಿದಂತೆ 5 ಬಗೆಯ ಸಾಬೂನು, 5 ಬಗೆಯ ಲಿಪ್ ಬಾಮ್, 5 ವರ್ಣಗಳ ಲಿಫ್ಟಿಕ್ ಸದ್ಯಕ್ಕಿದೆ. ಇನ್ನೂ ಹೆಚ್ಚಿನ ಬಣ್ಣಗಳಲ್ಲಿ ಪರಿಚಯಿಸುವ ಉದ್ದೇಶವಿದೆ. ಮುಂದಿನ ದಿನಗಳಲ್ಲಿ ಕಣ್ಣಿನ ಅಂದ ಹೆಚ್ಚಿಸುವ ನೈಸರ್ಗಿಕ ಕಾಡಿಗೆ, ಮುಖದ ಸೌಂದರ್ಯ ವೃದ್ಧಿಸುವ ಫೇಸ್ ಕ್ರೀಮ್ ತಯಾರಿಯ ಯೋಜನೆ ಹಾಕಿಕೊಂಡಿದ್ದಾರೆ. ದೇಹಕ್ಕೆ ಉತ್ತಮ ಪರಿಣಾಮ ಬೀರುವ ಗುಣಮಟ್ಟದ ದ್ರವ್ಯಗಳನ್ನು ಬಳಸಿ ಆರೋಗ್ಯಕರವಾದ ಉತ್ಪನ್ನಗಳನ್ನು ತಯಾರಿಸಲಾಗುತ್ತಿದೆ. ಜನರ ಸ್ಪಂದನೆಯೂ ಪ್ರೋತ್ಸಾಹದಾಯಕವಾಗಿದೆ ಎನ್ನುತ್ತಾರೆ ಭೀಮತೇಜಸ್ವಿ.

ಗ್ರಾಮೀಣ ಭಾಗದಲ್ಲಿ ಸಣ್ಣ ಸಣ್ಣ ಉದ್ಯಮಗಳನ್ನು ಆರಂಭಿಸುವವರಿಗೆ ಮಾರುಕಟ್ಟೆ ಮಾಡುವುದೇ ದೊಡ್ಡ ಸವಾಲು. ಭೀಮತೇಜಸ್ವಿಯವರು ಈ ಉತ್ಪನ್ನಗಳನ್ನು ಅಂತರ್ಜಾಲದ ಮೂಲಕ ನೇರ ಮಾರುಕಟ್ಟೆ ಮಾಡುತ್ತಿದ್ದಾರೆ. “ವನಸ್ಪತಿ ಒರಿಜಿನಲ್ “ ಎಂಬ ಹೆಸರಿನಲ್ಲಿ ಉತ್ಪನ್ನಗಳನ್ನು ಮಾರುಕಟ್ಟೆ ಮಾಡುತ್ತಿದ್ದು, ನಮ್ಮ ರಾಜ್ಯ ಮಾತ್ರವಲ್ಲದೇ ಗುಜರಾತ್, ತಮಿಳುನಾಡು, ಪಶ್ಚಿಮ ಬಂಗಾಲ ಸೇರಿದಂತೆ ಹಲವು ರಾಜ್ಯಗಳಲ್ಲಿ ಈ ಉತ್ಪನ್ನಗಳಿಗೆ ಗ್ರಾಹಕರಿದ್ದಾರೆ. ಈ ಉತ್ಪನ್ನಗಳ ತಯಾರಿ ಮತ್ತು ಮಾರುಕಟ್ಟೆ ಮಾಡುವುದಲ್ಲಿ ಭೀಮತೇಜಸ್ವಿಯವರು ಸಂತೃಪ್ತಿ ಕಂಡುಕೊಂಡಿದ್ದಾರೆ. ಹಳ್ಳಿಯಲ್ಲಿ ಸಿಗಬಹುದಾದ ಸಂಪನ್ಮೂಲಗಳನ್ನೇ ಬಳಸಿಕೊಂಡು ಯಶಸ್ಸು ಕಂಡಿದ್ದಾರೆ. “ವನಸ್ಪತಿ” ಹೆಸರಿನ ಹಲವು ಉತ್ಪನ್ನಗಳು ಈಗ ಮಾರುಕಟ್ಟೆಯಲ್ಲಿವೆ.
ನಗರಗಳಲ್ಲಿ ಉದ್ಯಮಗಳನ್ನು ಆರಂಭಿಸುವವರಿಗೆ ಸೌಲಭ್ಯಗಳನ್ನು ನೀಡಿ ಸರಕಾರ ಪ್ರೋತ್ಸಾಹಿಸುತ್ತದೆ. ಅದರಂತೆ ನಗರ ಬಿಟ್ಟು ಹಳ್ಳಿಯಲ್ಲಿ ಹೊಸ ಕನಸುಗಳೊಂದಿಗೆ ಉದ್ಯಮಗಳನ್ನು ನಡೆಸುವವರಿಗೆ ಮೂಲ ಸೌಕರ್ಯಗಳನ್ನು ನೀಡಿ ಪ್ರೋತ್ಸಾಹಿಸಿದರೆ ಮತ್ತಷ್ಟು ಯುವ ಸಮುದಾಯಗಳು ಹಳ್ಳಿಗಳಿಗೆ ಮರಳಿ ಬಂದು ತಮ್ಮದಾದ ಉದ್ಯಮಗಳಲ್ಲಿ ತೊಡಗಿಕೊಳ್ಳಲು ಅವಕಾಶ ಕಲ್ಪಿಸಿದಂತಾಗುತ್ತದೆ.
ಮಾಹಿತಿಗೆ ಸಂಪರ್ಕಿಸಿ: 9483907539






