spot_img
Sunday, December 8, 2024
spot_imgspot_img
spot_img
spot_img

ಪರಿಸರ ಸ್ನೇಹಿ ಬಾಳೆನಾರಿನ ಈ ವಿಷಯಗಳು ನಿಮ್ಗೆ ಗೊತ್ತಿರಲೇಬೇಕು….!

-ಅಡ್ಡೂರು ಕೃ‍ಷ್ಣ ರಾವ್

“ನಮ್ಮ ಜಿಲ್ಲೆಯ ರೈತರು ಬಾಳೆಗೊನೆಗಳ ಕೊಯ್ಲಿನ ನಂತರ ಬಾಳೆಗಿಡಗಳನ್ನು ಕಸವೆಂದು ಬಿಸಾಡುತ್ತಿದ್ದುದನ್ನು ನಾನು ಬಾಲ್ಯದಿಂದಲೂ ನೋಡುತ್ತಿದ್ದೆ.ಅದರಿಂದ ಏನೇನೆಲ್ಲ ಮಾಡಬಹುದೆಂದು ಸಂಶೋಧನೆ ಮಾಡುವ ತನಕ ನನಗೂ ಅದೊಂದು ದೊಡ್ಡ ಆದಾಯದ ಮೂಲವಾಗಬಹುದೆಂದು ತಿಳಿದಿರಲಿಲ್ಲ” ಎನ್ನುತ್ತಾರೆ ಮಧ್ಯಪ್ರದೇಶದ ಮೆಹುಲ್ ಶ್ರೋಫ್.

ಈಗ ಅವರ “ಶ್ರೋಫ್ ಇಂಡಸ್ಟ್ರೀಸ್”ಘಟಕವು ತಿಂಗಳಿಗೆ ಐದು ಟನ್ ಬಾಳೆನಾರಿನಿಂದ ವಿವಿಧ ಪರಿಸರಸ್ನೇಹಿ ಉತ್ಪನ್ನಗಳನ್ನು ಉತ್ಪಾದಿಸುತ್ತಿದೆ. ಚೀಲಗಳು, ಬುಟ್ಟಿಗಳು, ಸಸಿಗಳ ಕುಂಡಗಳು, ಯೋಗಾಸನ ಚಾಪೆಗಳು, ಗೋಡೆ ಗಡಿಯಾರಗಳು, ಚಾಪೆಗಳು, ಕಸಬರಿಕೆಗಳು, ಹಗ್ಗ ಇತ್ಯಾದಿಗಳನ್ನು ಮಾರಾಟ ಮಾಡುವ ಅವರ ಘಟಕದ ವಾರ್ಷಿಕ ಆದಾಯ ರೂ. 30 ಲಕ್ಷ.ಎಂ.ಬಿ.ಎ. ಸ್ನಾತಕೋತ್ತರ ಪದವಿ ಗಳಿಸಿದ ಮೆಹುಲ್ ಶ್ರೋಫ್, ನಂತರ ತನ್ನ ಕುಟುಂಬದ ವ್ಯವಹಾರದಲ್ಲಿತೊಡಗಿಸಿಕೊಂಡರು. ಆದರೆ ಅವರಿಗೊಂದು ಕನಸು: ತನ್ನದೇ ಪರಿಸರಸ್ನೇಹಿ ಉದ್ಯಮವೊಂದನ್ನು ಸ್ಥಾಪಿಸಬೇಕೆಂದು.

ಈ ನಿಟ್ಟಿನಲ್ಲಿ ಮಧ್ಯಪ್ರದೇಶದ  ಬುರ್ಹಾನ್‌ಪುರದ ನವ್‌ಸಾರಿ ಕೃಷಿ ವಿಶ್ವವಿದ್ಯಾಲಯ ಮತ್ತು ಜಿಲ್ಲಾಡಳಿತ ಸಂಘಟಿಸಿದ ಕಾರ್ಯಾಗಾರದಲ್ಲಿ ಅವರು ಭಾಗವಹಿಸಿದರು. ಅದರಲ್ಲಿ ಬಾಳೆನಾರಿನಿಂದ ಕಾಗದ, ಉಡುಪುಗಳು ಮತ್ತು ಕರಕುಶಲ ವಸ್ತುಗಳನ್ನು ತಯಾರಿಸುವ ಬಗ್ಗೆ ತನಗೆ ಮಾಹಿತಿ ಸಿಕ್ಕಿತು ಎಂದವರು ತಿಳಿಸುತ್ತಾರೆ. ಅನಂತರ ಎರಡು ವರುಷ ಮೆಹುಲ್ ಶ್ರೋಫ್ ಬಾಳೆನಾರಿನಿಂದ ಏನೇನೆಲ್ಲ ಮಾಡಬಹುದು ಎಂಬ ಬಗ್ಗೆ ಅಧ್ಯಯನ ನಡೆಸಿ ಯೋಜನೆಯೊಂದನ್ನು ರೂಪಿಸಿದರು. ಅದರ ಅನುಸಾರ 2018ರಲ್ಲಿ “ಶ್ರೋಫ್ ಇಂಡಸ್ಟ್ರೀಸ್” ಘಟಕ ಸ್ಥಾಪಿಸಿದರು.

 

ಬುರ್-ಹಾನ್‌ಪುರದಲ್ಲಿರುವ 16,000ಎಕರೆಗಳ ಬಾಳೆತೋಟದಲ್ಲಿ ಟನ್ನುಗಟ್ಟಲೆ ಬಾಳೆಕಾಂಡ ಮತ್ತು ಎಲೆಗಳನ್ನು ಕಸವೆಂದು ಎಸೆಯಲಾಗುತ್ತಿದೆ. ಕೊಳೆತು ಹೋಗಬಹುದಾಗಿದ್ದ ಅದೆಲ್ಲವನ್ನು ತಂದು “ಕಸದಿಂದ ರಸ” ಉತ್ಪಾದಿಸುತ್ತಿರುವುದು ಮೆಹುಲ್ ಅವರ ದೊಡ್ಡ ಸಾಧನೆ. ತನ್ನ ಘಟಕದಲ್ಲಿ ಕೆಲಸ ಮಾಡಲು ಬುರ್-ಹಾನ್‌ಪುರದ ಗ್ರಾಮೀಣ ಪ್ರದೇಶಗಳ ಮಹಿಳೆಯರಿಗೆ ತರಬೇತಿ ನೀಡಿ 40 ಮಹಿಳೆಯರಿಗೆ ಉದ್ಯೋಗ ನೀಡಿರುವುದು ಅವರ ಇನ್ನೊಂದು ಸಾಧನೆ.

ಉತ್ತರಪ್ರದೇಶದ ಖುಷಿನಗರದ ರವಿ ಪ್ರಸಾದ್ ಅವರದೂ ಇಂತಹದೇ ಯಶೋಗಾಥೆ. ಅವರ ತಂದೆ ರಸ್ತೆ ಅಪಘಾತದಲ್ಲಿ ತೀರಿಕೊಂಡ ನಂತರ ಅವರು ಶಾಲೆ ತೊರೆಯಬೇಕಾಯಿತು. ಸಣ್ಣಪುಟ್ಟ ಕೆಲಸ ಮಾಡುತ್ತಾ ಅಮ್ಮನಿಗೆ ಸಹಾಯ ಮಾಡುತ್ತಿದ್ದರು. ಮುಂದೆ ಪುನಃ ಶಾಲೆಗೆ ಸೇರಿ ಪದವೀಧರರಾದರು.ಅನಂತರ ನವದೆಹಲಿಯ ಖಾಸಗಿ ಕಂಪೆನಿಯೊಂದರಲ್ಲಿ ಉದ್ಯೋಗಕ್ಕೆ ಸೇರಿದರು.

ಆ ಸಂದರ್ಭದಲ್ಲೊಮ್ಮೆ ದೆಹಲಿಯ ಪ್ರಗತಿ ಮೈದಾನದ ಸುಪ್ರಸಿದ್ಧ ವಸ್ತುಪ್ರದರ್ಶನದ ಭೇಟಿ ಅವರ ಬದುಕನ್ನೇ ಬದಲಾಯಿಸಿತು.ಅಲ್ಲಿ ಒಂದು ಮಳಿಗೆಯಲ್ಲಿ ಬಾಳೆನಾರಿನ ಹಲವು ಉತ್ಪನ್ನಗಳನ್ನೂ ಕರಕುಶಲ ವಸ್ತುಗಳನ್ನೂ ಕಂಡರು. ತನ್ನೂರು ಹರಿಹರಪುರದ ಸುತ್ತಮುತ್ತಲಿನ 30,000 ಹೆಕ್ಟೇರುಗಳ ಬಾಳೆ ತೋಟಗಳ ಬಾಳೆಕಾಂಡಗಳನ್ನು ಕಸವಾಗಿ ಎಸೆಯುತ್ತಿದ್ದದ್ದು ಅವರಿಗೆ ನೆನಪಾಯಿತು. ಆ ಟನ್ನುಗಟ್ಟಲೆ ಬಾಳೆನಾರಿನಿಂದ ಹಲವಾರು ಉತ್ಪನ್ನಗಳನ್ನು ತಯಾರಿಸಬಹುದೆಂಬ ಐಡಿಯಾ ಮಿಂಚಿತು.

ಅನಂತರ ರವಿಪ್ರಸಾದ್ ಸುಮ್ಮನೆ ಕೂರಲಿಲ್ಲ.ಆ ಪ್ರದರ್ಶನದಲ್ಲಿ ಮಳಿಗೆ ಹಾಕಿದ್ದ ಒಬ್ಬ ಉದ್ಯಮಶೀಲನನ್ನು ಸಂಪರ್ಕಿಸಿ, ಆತನ ಕೊಯಂಬತ್ತೂರು ಹತ್ತಿರದ ತರಬೇತಿ ಸಂಸ್ಥೆಯಲ್ಲಿ ತರಬೇತಿಗೆ ಸೇರಿದರು. ತಮಿಳು ಭಾಷೆ ಗೊತ್ತಿಲ್ಲದಿದ್ದರೂ, ಅಲ್ಲಿನ ಆಹಾರ ಒಗ್ಗದಿದ್ದರೂ, ಇತರರು ಮಾಡುತ್ತಿದ್ದುದನ್ನು ನೋಡುತ್ತಾ ಬಾಳೆನಾರಿನಿಂದ ವಿವಿಧ ಉತ್ಪನ್ನ ತಯಾರಿಸಲು ಕಲಿತರು.

 

ತನ್ನೂರಿಗೆ ಮರಳಿದ ನಂತರ ಒಂದು ಖಾಸಗಿ ಬ್ಯಾಂಕಿನಿಂದ ರೂ. 5 ಲಕ್ಷ ಸಾಲ ಪಡೆದು, 2018ರಲ್ಲಿ ಮಾಳವ ಕೇಳ ರೆಸ ಉತ್ಪಾದನಾ ಲಘು ಉದ್ಯೋಗ ಕೇಂದ್ರ ಸ್ಥಾಪಿಸಿದರು. ಹ್ಯಾಟ್, ಚೀಲಗಳು, ನೆಲಗಂಬಳಿಗಳು, ಚಪ್ಪಲಿಗಳು ಇತ್ಯಾದಿಗಳನ್ನು ತಯಾರಿಸಲು ಶುರುವಿಟ್ಟರು. ಕೆಲವೇ ವರುಷಗಳಲ್ಲಿ ಅವರ ಕರಕುಶಲ ವಸ್ತುಗಳು ಸರಕಾರದ “ಒಂದು ಜಿಲ್ಲೆ ಒಂದು ಉತ್ಪನ್ನ” ಯೋಜನೆಗೆ ಆಯ್ಕೆಯಾದವು.ಇದರಿಂದಾಗಿ ರಾಜ್ಯಮಟ್ಟದ ವಸ್ತುಪ್ರದರ್ಶನಗಳಲ್ಲಿ ತನ್ನ ಉತ್ಪನ್ನಗಳನ್ನು ಪ್ರದರ್ಶಿಸಲು ಅವರಿಗೆ ಸಾಧ್ಯವಾಯಿತು.

ರವಿ ಪ್ರಸಾದ್ ತನ್ನ ಜಿಲ್ಲೆಯ ವಿವಿಧ ತೋಟಗಳಿಂದ ಬಾಳೆಕಾಂಡಗಳನ್ನು ತನ್ನ ಉತ್ಪಾದನಾ ಘಟಕಕ್ಕೆ ತರುತ್ತಾರೆ. ಅವನ್ನು ಕತ್ತರಿಸಿ, ಒಂದು ಯಂತ್ರದ ಮೂಲಕ ಹಾಳೆಗಳಾಗಿ ಬದಲಾಯಿಸುತ್ತಾರೆ. ಅನಂತರ ಅವನ್ನು ನೂಲುಗಳನ್ನಾಗಿ ಕತ್ತರಿಸಿ,ಗ್ರೋಬ್ಯಾಗುಗಳು ಮತ್ತು ಸ್ಯಾನಿಟರಿ ನ್ಯಾಪ್‌ಕಿನ್‌ಗಳ ಸಹಿತ ವಿವಿಧ ಉತ್ಪನ್ನಗಳನ್ನು ತಯಾರಿಸುತ್ತಾರೆ. ಯೋಗಾಸನ ಚಾಪೆಯ ಮಾರಾಟ ಬೆಲೆ ರೂ. 600 ಆಗಿದ್ದರೆ, ನೆಲಗಂಬಳಿಯ ಬೆಲೆ ರೂ.6,000.ಅವರ ಘಟಕದಲ್ಲಿ ಕಸವಾಗಿ ಉಳಿಯುವ ಬಾಳೆನಾರಿನ ಚೂರುಗಳಿಗೂ ಮಾರುಕಟ್ಟೆಯಲ್ಲಿ ಬೇಡಿಕೆಯಿದೆ. ಅದನ್ನು ಮೀನುಸಾಕಣೆಯಲ್ಲಿ ಮೀನುಗಳ ಆಹಾರವಾಗಿ ಮತ್ತು ಸಾವಯವ ಗೊಬ್ಬರ ತಯಾರಿಸಲಿಕ್ಕಾಗಿ ಬಳಸಲಾಗುತ್ತದೆ. ಈಗಾಗಲೇ ಸುಮಾರು 50 ವಸ್ತುಪ್ರದರ್ಶನಗಳಲ್ಲಿ ಭಾಗವಹಿಸಿರುವ ರವಿ ಪ್ರಸಾದ್ ನವದೆಹಲಿಯ ಪಾರಂಪರಿಕ ಕಲಾ ಮಾರುಕಟ್ಟೆ ಢೆಲ್ಲಿ ಹಾತ್‌ನಲ್ಲಿ ಖಾಯಂ ಮಳಿಗೆ ಹೊಂದಿದ್ದಾರೆ. ಅಮೆಜಾನ್, ಪ್ಲಿಫ್‌ಕಾರ್ಟ್ ಇತ್ಯಾದಿ ಆನ್-ಲೈನ್ ಮಾರಾಟ ಜಾಲಗಳ ಮೂಲಕವೂ ತನ್ನ ಘಟಕದ ಉತ್ಪನ್ನಗಳನ್ನು ಮಾರುತ್ತಾ ವರುಷಕ್ಕೆ ರೂ. 9 ಲಕ್ಷ ಆದಾಯ ಗಳಿಸುತ್ತಿದ್ದಾರೆ.

ರವಿ ಪ್ರಸಾದರ ಸಾಹಸೋದ್ಯಮದಲ್ಲಿ ಅವರ ಜಿಲ್ಲೆಯ ಸುಮಾರು 450 ಮಹಿಳೆಯರು ಉದ್ಯೋಗಿಗಳಾಗಿದ್ದಾರೆ ಎಂದರೆ ನಂಬುತ್ತೀರಾ? ಮಹಿಳೆಯರಿಗೆ 20 ದಿನಗಳ ತರಬೇತಿ ಹಾಗೂ ಟೂಲ್-ಕಿಟ್ ನೀಡಲಾಗುತ್ತದೆ.“ಮನೆಯಿಂದ ಹೊರಗೆ ಬಾರದಿದ್ದ ಮಹಿಳೆಯರು ನಮ್ಮ ಘಟಕಕ್ಕೆ ಸೇರಿಕೊಂಡ ನಂತರ ಆರ್ಥಿಕ ಸಬಲೀಕರಣದಿಂದಾಗಿ ಕುಟುಂಬದಲ್ಲಿ ಹಾಗೂ ಸಮಾಜದಲ್ಲಿ ಗೌರವ ಪಡೆಯುವಂತಾಗಿದೆ” ಎಂದು ಅಭಿಮಾನದಿಂದ ಹೇಳುತ್ತಾರೆ ರವಿ ಪ್ರಸಾದ್.

ಬಾಳೆ ನಾರಿನಿಂದ ತಯಾರಿಸುವ ಈ ಮೇಲಿನ ಉತ್ಪನ್ನಗಳ ಜೊತೆಗೆ ಬಾಳೆನಾರಿನ ಸೀರೆಗಳಿಗೂ ಉತ್ತಮ ಬೇಡಿಕೆಯಿದೆ. ಬಾಳೆ ಬೆಳೆಯುವ ಎಲ್ಲ ಜಿಲ್ಲೆಗಳಲ್ಲಿಯೂ ಹಾಳಾಗಿ ಹೋಗುತ್ತಿರುವ ಬಾಳೆಕಾಂಡದ ನಾರನ್ನು ಒಳಸುರಿಯಾಗಿ ಬಳಸಿ ಇಂತಹ ಪರಿಸರಸ್ನೇಹಿ ಘಟಕಗಳನ್ನು ಯುವಜನರು ಸ್ಥಾಪಿಸಿದರೆ, ಕಸದಿಂದ ಉಪಯುಕ್ತ ವಸ್ತುಗಳ ಉತ್ಪಾದನೆ ಸಾಧ್ಯ ಮಾತ್ರವಲ್ಲ  ಉದ್ಯೋಗವಕಾಶಗಳೂ ಲಭ್ಯ, ಅಲ್ಲವೇ?

 

spot_img

ಸಂಬಂಧಿತ ಲೇಖನಗಳು

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group