-ಡಾ. ಎಂ.ಜಿ. ಬಸವರಾಜ ಮೈಸೂರು
ಅರಣ್ಯಗಳು ನಾನಾ ವಿಧದ ಪ್ರಾಣಿಗಳು, ಪಕ್ಷಿಗಳು, ಹಾವು, ಹಲ್ಲಿ, ಕೀಟ, ಜಲಚರಗಳು ಮುಂತಾದ ಜೀವಿಗಳು ವಾಸಿಸಲು ಅನುಕೂಲ ಮಾಡಿಕೊಟ್ಟಿವೆ. ವನ್ಯಜೀವಿಗಳು ಅರಣ್ಯಗಳಲ್ಲಿ ಆಭರಣಗಳಂತೆ ಕಂಗೊಳಿಸುತ್ತಿರುತ್ತವೆ. ಅರಣ್ಯಗಳಲ್ಲಿ ವಿವಿಧ ಗಿಡ, ಮರ, ಬಳ್ಳಿ, ಗೆಡ್ಡೆ ಗೆಣಸು ಮುಂತಾದ ನಾನಾ ರೀತಿಯ ವನ್ಯಜೀವಿಗಳು ಜೀವಿಸುತ್ತಿವೆ. ಸುಖ-ಸಂತೋಷ ನೋವು-ನಲಿವು ಅವುಗಳಲ್ಲಿಯೂ ಇದೆ.
ವನ್ಯಜೀವಿಗಳ ಗುಣ ಸ್ವಭಾವಗಳು ವಿವಿಧ ರೀತಿಯಲ್ಲಿರುತ್ತವೆ. ಚಟುವಟಿಕೆಯಿಂದ ಕೂಡಿರುವುದು, ಸೋಮಾರಿತನ, ಮೃದುತ್ವ, ಭಯಾನಕತೆ, ರೌದ್ರತೆಯ ಗುಣ ಸ್ವಭಾವಗಳನ್ನು ವನ್ಯಜೀವಿಗಳಲ್ಲಿ ಕಾಣಬಹುದು. ಮನುಷ್ಯರಂತೆ ವನ್ಯಜೀವಿಗಳು ಕೌಟುಂಬಿಕ ಜೀವನವನ್ನು ನಡೆಸುತ್ತವೆ. ಮತ್ತು ತಮ್ಮ ಮರಿಗಳನ್ನು ಜೋಪಾನವಾಗಿ ನೋಡಿಕೊಂಡು ಪ್ರೀತಿ ವಾತ್ಸಲ್ಯ, ಒಲವು, ಭಾವನೆಗಳು, ಸಿಟ್ಟು,ಸೇಡು, ಅಸೂಯೆ, ವೈಯಾರ, ಸಂಬಂಧಗಳ ಕಾಪಾಡುವಿಕೆಯಂತಹ ನಡವಳಿಕೆಗಳು ವನ್ಯಜೀವಿಗಳು ಕಾಣಬಹುದು.
ವಿವಿಧ ದೇಶಗಳ ಅರಣ್ಯಗಳಲ್ಲಿ ವಿವಿಧ ಪ್ರಭೇದಗಳ ವನ್ಯಜೀವಿಗಳಿವೆ. ಗಿಡ ಮರಗಳು, ಸಸ್ಯ ಸಂಪತ್ತು, ಸಾಮಾಜಿಕ, ಆರ್ಥಿಕವಾಗಿ ಜನರಿಗೆ ಪ್ರಯೋಜನಕಾರಿಯಾಗಿವೆಯೋ, ಅದೇ ರೀತಿ ವನ್ಯ ಜೀವಿಗಳೂ ಜನರಿಗೆ ಪ್ರಯೋಜನಕಾರಿ. ವನ್ಯಜೀವಿಗಳು ಅನುವಂಶಿಕ ಸಂಪನ್ಮೂಲಗಳಾಗಿವೆ. ಜೀವರಾಶಿಗಳಿಗೆ ಬೇಕಾದ ಹಣ್ಣು ಹಂಪಲುಗಳು, ದವಸ ಧಾನ್ಯಗಳು, ಎಣ್ಣೆ ಬೀಜಗಳು ಮುಂತಾದ ಅಗತ್ಯ ಉತ್ಪನ್ನಗಳು, ಉತ್ಪಾದನೆ ಆಗಲು ಪರಾಗಸ್ಪರ್ಶ ಮುಖ್ಯ.ಜೇನು ನೊಣ, ಪಕ್ಷಿಗಳು, ಕೀಟಗಳು, ವನ್ಯಜೀವಿಗಳು ಆ ಕೆಲಸಗಳನ್ನು ಮಾಡುತ್ತವೆ.
ವನ್ಯಜೀವಿಗಳು ವಿವಿಧ ಔಷಧಗಳ ತಯಾರಿಕೆ ಸಹಕಾರಿ. ಬೆಳೆಗಳಿಗೆ ರೋಗವನ್ನುಂಟು ಮಾಡುವ ಕೀಟಗಳನ್ನು ನಿಯಂತ್ರಿಸುತ್ತವೆ. ವನ್ಯಜೀವಿಗಳಿಂದ ಆಹಾರ ದೊರೆಯುತ್ತದೆ. ಕಾಡುಗಳ್ಳರ ಹಾವಳಿ ನಿಯಂತ್ರಣದಲ್ಲಿ ವನ್ಯಜೀವಿಗಳು ಉಪಕಾರಿಯಾಗಿವೆ. ಅರಣ್ಯಗಳನ್ನು ವನ್ಯಜೀವಿಗಳನ್ನು ನೋಡಲು ಪ್ರವಾಸಿಗಳು ಬರುತ್ತಾರೆ. ಇದರಿಂದ ಪ್ರವಾಸ ಉದ್ಯಮ ಅಭಿವೃದ್ಧಿಯಾಗುತ್ತದೆ. ಬೀಜ ಪ್ರಸಾರ ಮಾಡಿ ವಿವಿಧ ಪ್ರದೇಶಗಳಲ್ಲಿ ಅಮೂಲ್ಯ ಗಿಡ ಮರಬಳ್ಳಿ, ಸಸ್ಯ ರಾಶಿಗಳು ಬೆಳೆಯಲು ಉಪಕಾರ ಮಹತ್ತರವಾದುದು. ಫಲವತ್ತತೆಯ ನಿರಂತರತೆಯನ್ನು ಕಾಪಾಡುವಲ್ಲಿ ವನ್ಯಜೀವಿಗಳು ಉಪಕಾರಿಯಾಗಿದೆ.
ಅರಣ್ಯಗಳು-ವನ್ಯಜೀವಿಗಳು ಮತ್ತು ಮಾನವ ಜನಾಂಗದ ಸಂಬಂಧ ಅನಾದಿಕಾಲದಿಂದಲೂ ಇರುವುದಾಗಿದ್ದು ಆ ಸಂಬಂಧವು ನಿರಂತರವಾಗಿ ಮುಂದುವರಿಯಬೇಕಾಗಿದೆ. ವನ್ಯಜೀವಿಗಳು ಸುರಕ್ಷಿತವಾಗಿದ್ದರೆ ಅರಣ್ಯಗಳು ಉಳಿದು ಬೆಳೆಯುತ್ತಿರಬೇಕು. ಜನಸಂಖ್ಯೆ ಹೆಚ್ಚಳ, ಅಭಿವೃದ್ಧಿ ಕಾರ್ಯಗಳು, ಕೈಗಾರಿಕಾ ಅಭಿವೃದ್ಧಿ, ರಿಯಲ್ ಎಸ್ಟೇಟ್ ವಿಸ್ತರಣೆ, ನಗರ ಅಭಿವೃದ್ಧಿಯಿಂದ ಅರಣ್ಯ ನಾಶ ವಿಪರೀತ ವೇಗದಲ್ಲಿ ಆಗುತ್ತಿದೆ. ಅರಣ್ಯವಿದ್ದರೆ ವನ್ಯ ಜೀವಿಗಳಿರುತ್ತವೆ ಅರಣ್ಯ ನಾಶವಾಗುತ್ತಿರುವುದರಿಂದ ವನ್ಯಜೀವಿಗಳ ವಾಸ ಬಹಳಷ್ಟು ಬಹಳ ಕಷ್ಟವಾಗುತ್ತಿದೆ.ಊರುಕೇರಿಗಳಿಗೆ, ನಗರಗಳಿಗೆ ನುಗ್ಗುತ್ತವೆ. ರೈತರು ಕಷ್ಟಪಟ್ಟು ಬೆಳೆದ ಬೆಳೆಗಳನ್ನು ಹಾಳುಗೈಯುತ್ತವೆ. ದನಕರುಗಳು, ಕುರಿ, ಕೋಳಿ,ಮೇಕೆಗಳನ್ನು ತಿಂದು ಹಾಕುತ್ತವೆ. ಜನರನ್ನು ಕೊಲ್ಲುತ್ತವೆ.
ವನ್ಯಜೀವಿಗಳು, ಮಾನವ ಜನಾಂಗ ಹಾಗೂ ಸಕಲ ಜೀವರಾಶಿಗಳು, ಜಲಸಂಪತ್ತು ಉಳಿಯಬೇಕಾದರೆ ಅರಣ್ಯಗಳು ನಿರಂತರ ಅಭಿವೃದ್ಧಿ ಸ್ಥಿತಿಯಲ್ಲಿರಬೇಕು. ಇಂದು ಭಾರತವೂ ಒಳಗೊಂಡಂತೆ ವಿವಿಧ ದೇಶಗಳ ಅರ್ಧದಷ್ಟು ಅರಣ್ಯಗಳು ನಾಶವಾಗಿವೆ. ಅಮೆರಿಕ, ಗ್ರೀಸ್, ಬ್ರೆಜಿಲ್, ಏಷ್ಯಾ ಖಂಡದ ವಿವಿಧ ದೇಶಗಳಲ್ಲಿ ರಿಯಲ್ ಎಸ್ಟೇಟ್ ಉದ್ದೇಶಕ್ಕಾಗಿ ಅರಣ್ಯಗಳಿಗೆ ಬೆಂಕಿ ಹಚ್ಚಿ ಅದು ನೈಸರ್ಗಿಕ ಬೆಂಕಿ ಎಂಬಂತೆ ಬಿಂಬಿಸುತ್ತಾರೆ. ಕೈಗಾರಿಕೆ, ಗೃಹ ನಿರ್ಮಾಣಕ್ಕಾಗಿ ಅಮೂಲ್ಯ ಗಿಡಮರಗಳನ್ನು ಕಡಿದು ಮಾರಾಟ ಮಾಡುತ್ತಾರೆ. ವಿದೇಶಗಳಿಗೆ ರಫ್ತು ಮಾಡುತ್ತಾರೆ. ನೀರು ಸಂಗ್ರಹವನ್ನು ನಿರಂತರವಾಗಿ ಮಾಡುತ್ತಿದ್ದ ಔಗು ಭೂಮಿಗಳು ಮಾನವನ ದುರಾಸೆಯಿಂದ ಇಂದು ನೀರು ಸಂಗ್ರಹ ಮಾಡಲಾಗುತ್ತಿಲ್ಲ. ಅಲ್ಲಿನ ನೀರೆಲ್ಲ ಸೋರಿ ಹೋಗುವ ರೀತಿಯಲ್ಲಿ ಭೂಮಿಯನ್ನು ಮಾನವನ್ನು ವಿಕೃತಗೊಳಿಸಿದ್ದಾನೆ.
ಬಹುಪಾಲು ಶುದ್ಧವಾಗಿರುತ್ತಿದ್ದ ನೀರು ಮಾಲಿನ್ಯಗೊಳ್ಳುತ್ತಿದೆ. ಅಮೂಲ್ಯವಾದ, ವಿಶಿಷ್ಟವಾದ ಮರಗಳು, ಸಸ್ಯ ರಾಶಿಗಳು ಹಾಗೂ ಪ್ರಾಣಿ ಪಕ್ಷಿಗಳು ಇಲ್ಲದಂತಾಗುತ್ತಿದೆ. ಅನೇಕ ಕಡೆ ಬೆಟ್ಟ ಗುಡ್ಡಗಳು, ಕೊಳ್ಳ ಕಣಿವೆಗಳು, ಉಬ್ಬು, ತಗ್ಗುಗಳು ಮಾನವನಿಂದ ತಮ್ಮ ಮೂಲ ರೂಪ ಕಳೆದುಕೊಂಡು ನಾಶವಾಗಿ ಹೋಗಿಬಿಟ್ಟಿವೆ. ಇದರಿಂದಾಗಿ ಮಳೆ ಅರಣ್ಯಗಳು ಕ್ಷೀಣಿಸುತ್ತಿವೆ. ಫಲವತ್ತಾಗಿದ್ದ ಕೃಷಿ ಭೂಮಿಗಳು ಬರಡಾಗುತ್ತಿವೆ. ಪ್ರಕೃತಿಯ ನೈಸರ್ಗಿಕ ಅಭಿವೃದ್ಧಿಯ ಚಲನೆಗೆ ಎಲ್ಲೆಲ್ಲಿ ಅಡೆತಡೆಗಳಾಗಿ ಇವೆಯೋ ಅಲ್ಲಿ ಪ್ರಾಕೃತಿಕ ಅಸಮತೋಲನವುಂಟಾಗುತ್ತಿದೆ.
ಅರಣ್ಯಗಳ ಹಸಿರು ಸಾಂದ್ರತೆ ಕಡಿಮೆಯಾಗಿ ಬರಡಾಗುತ್ತಿರುವುದರಿಂದ ನೀರು ಸಂಗ್ರಹಣೆಯ ಪ್ರದೇಶಗಳು, ನೀರ ಸೆಲೆಗಳ ಜೀವ ಕಳೆ ಕುಂದುತ್ತಿರುವುದರಿಂದ ವನ್ಯಜೀವಿಗಳ ನಿಸರ್ಗದತ್ತ ಆಹಾರದ ಕೊರತೆಯಾಗುತ್ತಿದೆ. ವನ್ಯಜೀವಿಗಳು ಅನಿವಾರ್ಯವಾಗಿ ವ್ಯವಸಾಯ ಬೆಳೆ ಪ್ರದೇಶಗಳಲ್ಲಿ ಆಹಾರ ಹುಡುಕಿ ಬರುತ್ತಿವೆ.
ರೈತರ ಬೆಳೆಗಳನ್ನು ಅವು ತಿಂದು ಹಾಕುವುದರಿಂದ ಮಾನವ – ವನ್ಯಜೀವಿಗಳ ಮಧ್ಯೆ ಸಂಘರ್ಷವಾಗಿ ಮೂಕ ವನ್ಯಜೀವಿಗಳು ಸಾವಿಗೀಡಾಗುತ್ತವೆ. ಇನ್ನೊಂದು ಕಡೆ ಕಾಡು ಕಾಡುಗಳ್ಳರು ವನ್ಯಜೀವಿಗಳಾದ ಘೇಂಡಾಮೃಗ, ಹುಲಿ, ಹಾವು, ಮೊಸಳೆ, ವಿವಿಧ ಪಕ್ಷಿಗಳು ಮೊಲ, ಜಿಂಕೆ, ಕಾಡು ಹಂದಿ ಮುಂತಾದವುಗಳನ್ನು ಹಿಡಿದು ಕೊಂದು ಅವುಗಳ ಉತ್ಪನ್ನಗಳನ್ನು ಮಾರಾಟ ಮಾಡುವ ಕ್ರೂರ ದಂಧೆಗಳಲ್ಲಿ ತೊಡಗಿ ವನ್ಯಜೀವಿಗಳ ಸಂಖ್ಯೆ ಕ್ಷೀಣವಾಗಲು ಕಾರಣವಾಗುತ್ತಿದ್ದಾರೆ. ಅನೇಕ ಗಿಡಮೂಲಿಕಗಳನ್ನು ಕತ್ತರಿಸಿ ಗೆಡ್ಡೆಗಳನ್ನು ತೆಗೆದು ಅವುಗಳ ಸಂತತಿ ನಾಶ ಮಾಡುತ್ತಿದ್ದಾರೆ. ವನ್ಯಜೀವಿ ರಕ್ಷಣಾ ಕಾನೂನುಗಳು ಬಹಳ ಕಟ್ಟುನಿಟ್ಟಾಗಿವೆಯಾದರೂ ಅರಣ್ಯಗಳ ನಾಶದಿಂದ ವನ್ಯಜೀವಿಗಳು ಆಪತ್ತಿಗೆ ಸಿಕ್ಕಿವೆ.
ವನ್ಯಜೀವಿಗಳ ರಕ್ಷಣೆಯಾಗಬೇಕಾದರೆ ಅವುಗಳನ್ನು ಕೊಲ್ಲುವುದನ್ನು ನಿಲ್ಲಿಸಬೇಕು. ಅರಣ್ಯಗಳ ರಕ್ಷಣೆಯಾಗಬೇಕು. ವನ್ಯಜೀವಿಗಳಿಗೆ ತೊಂದರೆ ಕಿರುಕುಳ ನೀಡಬಾರದು. ಜನರು ಅರಣ್ಯ ವನ್ಯಜೀವಿಗಳ ಬಗೆಗೆ ವಿವೇಚನೆ ಸದಾ ಹೊಂದಿರಬೇಕು. ಅಜ್ಞಾನ ಮತ್ತು ಉದಾಸೀನತೆ ತೊರೆಯಬೇಕು. ಜನರು, ರಾಜಕೀಯ ಪ್ರಭಾವಿಗಳು, ಸರಕಾರದ ಉನ್ನತ ಅಧಿಕಾರಿಗಳು ಅರಣ್ಯ ಒತ್ತುವರಿ ಲಕ್ಷಾಂತರ ಎಕ್ರೆಗಳಷ್ಟು ಮಾಡಿಬಿಟ್ಟಿದ್ದಾರೆ.
ಜನರು ನಗರ ಅರಣ್ಯೀಕರಣ, ಗ್ರಾಮೀಣ ಅರಣ್ಯೀಕರಣಗಳಲ್ಲಿ ಮತ್ತು ಕೃಷಿ ಅರಣ್ಯೀಕರಣಗಳಂತಹ ಸಾಮಾಜಿಕ ಅರಣ್ಯೀಕರಣಗಳಲ್ಲಿ ತೊಡಗಬೇಕು. ಜನರು ತಮ್ಮ ಅವಶ್ಯಕತೆಗೆ ಅರಣ್ಯಗಳನ್ನು ಅವಲಂಭಿಸದೆ ಅದರ ಬದಲಾಗಿ ತಮ್ಮ ಜಮೀನುಗಳಲ್ಲಿ ಬೇಕಾದುದನ್ನು ಬೆಳೆದುಕೊಳ್ಳಬೇಕು. ಶಾಲಾ ಕಾಲೇಜು, ವಿಶ್ವವಿದ್ಯಾನಿಲಯ, ಸರಕಾರಿ ಕಚೇರಿಗಳ ಸುತ್ತಮುತ್ತ, ಕೆರೆಕಟ್ಟೆಗಳ ಸುತ್ತಮುತ್ತ, ಕೈಗಾರಿಕಾ ಪ್ರದೇಶಗಳಲ್ಲಿ, ದೇವಸ್ಥಾನಗಳ ಪ್ರದೇಶಗಳಲ್ಲಿ, ರಸ್ತೆ ಬದಿಗಳಲ್ಲಿ, ಕೈತೋಟಗಳಲ್ಲಿ ಉದ್ಯಾನವನಗಳಲ್ಲಿ ಗಿಡಮರಗಳನ್ನು, ಗೆಡ್ಡೆಗಳನ್ನು, ಬಳ್ಳಿಗಳನ್ನು ಬೆಳೆಸಿ ಹಸಿರು ಎಲ್ಲೆಡೆ ರಾರಾಜಿಸುವಂತಾಗಬೇಕು.