spot_img
Thursday, November 21, 2024
spot_imgspot_img
spot_img
spot_img

ಸಾವಯವ ಕೃಷಿಯಿಂದ ಯಶಸ್ಸು:ಕೃಷಿ ಅಂದ್ರೆ ಇವರಿಗೆ ತಪಸ್ಸು

ಅವರಿಗೆ ಈಗ 71 ವಯಸ್ಸು. ಈ ಇಳಿವಯಸ್ಸಿನಲ್ಲಿ, ಮೊಮ್ಮಕ್ಕಳ ಜೊತೆ ಆಡುವ ಬದಲು ಇವರು ಹೈನುಗಾರಿಕೆ, ಸಾವಯವ ಕೃಷಿಕಾಯಕದಲ್ಲೇ ತೊಡಗಿಸಿಕೊಂಡಿದ್ದಾರೆ. ಕೃಷಿ ಕಾಯಕವನ್ನು ತಪಸ್ಸಿನಂತೆ ಆಚರಿಸುತ್ತಾ ಬಂದವರು ಪುತ್ತೂರು ತಾಲೂಕಿನ ಕೊಳ್ತಿಗೆ ಗ್ರಾಮದ ಗಣಪತಿ ಭಟ್ ಎಕ್ಕಡ್ಕ. ಸಾವಯವ ಕೃಷಿಯನ್ನೇ ನೆಚ್ಚಿಕೊಂಡ ಅವರು  ಹಿಂದೆ ಸರಿದವರಲ್ಲ. ಸಾವಯವ ಕೃಷಿಯಿಂದ ನನಗೆ ಇಳುವರಿ ಕಡಿಮೆ ಬಂದಿಲ್ಲ. ಯಾವಾಗಲೂ ಒಳ್ಳೆ ಫಸಲು ಬಂದಿದೆ. ತುಂಬಾ ಬೇಕು ಎನ್ನುವ ನಿರೀಕ್ಷೆ ಕೂಡಾ ಮಾಡಿಲ್ಲ ಎನ್ನುವ ಇವರು ಒಬ್ಬ ಮಾದರಿ ಕೃಷಿಕರು, ಸಮಾಜ ಸೇವಕರು, ಇದ್ದುದರಲ್ಲಿ ಸಂತೃಪ್ತಿ ಪಟ್ಟು ಇತರರಿಗೂ ತಮ್ಮಂತೆ ಕೃಷಿ ಪದ್ಧತಿ ಅಳವಡಿಸಲು ಪ್ರೇರಣೆ ಕೊಡುವ ಪ್ರವೃತ್ತಿ ಉಳ್ಳವರು.

ಇವರು 2೦ ವರ್ಷಗಳಿಂದ ಮಳೆ ಕೊಯ್ಲು (ಮನೆಮಾಡಿನ ನೀರನ್ನು ಸೋಸಿ ಕುಡಿಯುವ ನೀರಿನ ಬಾವಿಗೆ ಇಂಗಿಸುವುದು) ಮಾಡುತ್ತಿದ್ದಾರೆ ಈಗ ನಾಲ್ಕು ವರ್ಷಗಳ ಹಿಂದೆ ಅವರ ಮನೆ ಹಿಂಭಾಗದಲ್ಲಿ ಗುಡ್ಡದಲ್ಲಿ 9೦ಅಡಿ *7೦ಅಡಿ*1೦ಅಡಿಯ ಒಂದು ನೀರಿನ ಟ್ಯಾಂಕಿಯನ್ನು ಟರ್ಪಲ್ ಹಾಕಿ ಅಳವಡಿಸಿಕೊಂಡಿದ್ದಾರೆ ಮಳೆಗಾಲದಲ್ಲಿ ಅಷ್ಟು ಸ್ಥಳದಲ್ಲಿ ಬಿದ್ದ ಮಳೆ ನೀರನ್ನು ಬೋರ್ವೆಲ್ಗೆ ಇಂಗಿಸುತ್ತಾರೆ.

ಸುಮಾರು 3೦ ವರ್ಷಗಳಿಂದ ಹೈನುಗಾರರಾಗಿದ್ದರು ಏಳು ಎಂಟು ವರ್ಷಗಳಿಂದ ಸಂಪೂರ್ಣ ದೇಶಿ ಗೋವುಗಳನ್ನು 10-12 ಸಾಕುತ್ತಿದ್ದಾರೆ ಗೀರ್ ಕಾಂಗ್ರೆಜ್, ಮಲೆನಾಡ ಗಿಡ್ಡ, ತಳಿಗಳಿವೆ.

ಗೋಬರ್ ಗ್ಯಾಸ್ ನ ಎರಡು ಸ್ಥಾವರಗಳು ಇವೆ. ಎಲ್ಪಿಜಿ ಗ್ಯಾಸ್ ಹಾಗೂ ಕಟ್ಟಿಗೆ ಉಪಯೋಗ ಇವರಿಗಿಲ್ಲ. ಅನಿಲ ಸ್ಥಾವರದಿಂದ ಹೊರಬಂದ ತ್ಯಾಜ್ಯ ಸ್ಲರಿಯು ಪಂಪಿನ ಮೂಲಕ ಎತ್ತರದಲ್ಲಿರುವ ಟ್ಯಾಂಕಿಗೆ ಹಾಕಿ ಅಲ್ಲಿಂದ ಇಡೀ ತೋಟಕ್ಕೆ ಬಿಡುತ್ತಿದ್ದಾರೆ. ಒಂದು ವರ್ಷದಲ್ಲಿ ಮೂರು ಬಾರಿ ಇಡೀ ತೋಟಕ್ಕೆ ಬಿಡಲು ಸಾಧ್ಯವಾಗುವುದು ಎನ್ನುತ್ತಾರೆ.

ಬೆಂಗಳೂರು “ಫಲದ” ಕಂಪನಿಯವರು 4-5  ವರ್ಷ ಬಂದು ನೋಡಿದ ನಂತರ ಅವರಿಗೆ ಸಾವಯವ ಕೃಷಿಕ ಎನ್ನುವ ಬಿರುದು ಸರ್ಟಿಫಿಕೇಟು ನೀಡಿರುತ್ತಾರೆ. ಪುತ್ತೂರು ಮತ್ತು ಮಂಗಳೂರು ಕೃಷಿ ಇಲಾಖೆಯವರು 2021 ಸಾಲಿನಲ್ಲಿ ಇವರ ಕ್ಷೇತ್ರವನ್ನು ವೀಕ್ಷಿಸಿ, ಜಿಲ್ಲಾಮಟ್ಟದಲ್ಲಿ ಉತ್ತಮ ಸಾವಯವ ಕೃಷಿಕ ಎಂಬುದನ್ನು ಸರ್ಟಿಫಿಕೇಟ್ ಮತ್ತು ನಗದು ಬಹುಮಾನವನ್ನು ನೀಡಿ ಪುರಸ್ಕರಿಸಿದ್ದಾರೆ.

ಅಂಗಳದಿಂದ ಅಡಿಕೆ ಇನ್ನಿತರ ಸಾಮಾನುಗಳನ್ನು ಮಾಳಿಗೆಗೆ ಸಾಗಿಸಲು ವಿದ್ಯುತ್ ಮೋಟರ್ ಅಳವಡಿಸಿ ಕ್ರೇನ್ ಸಹಾಯದಿಂದ ಮೇಲೆತ್ತುವರು ಸುಲಿದಡಿಕೆಯನ್ನು ಅದರಿಂದ ಹಾಳುಅಡಕೆ ಬೇರ್ಪಡಿಸಲು ಹಾಗೂ ಕಸವ ವನ್ನು ಬೇರ್ಪಡಿಸಲು ಅವರದೇ ಆದ ಆಲೋಚನೆಯನ್ನು ಕಬ್ಬಿಣದ ಮೇಜು 6 mm ಸರಳು ಅಳವಡಿಸಿ ಮಾಡಿಸಿಕೊಂಡಿರುವರು ಅವರು ಮಾಡಿಸಿದಂತಹ ಈ ಮೇಜನ್ನು ಇತರ ಕೃಷಿಕರು ನೋಡಿ ಅದೇ ಅಳತೆಯ ಅದೇ ಆಕೃತಿಯ 4,5  ತಾಲೂಕುಗಳಲ್ಲಿ ನೂರರ ಮೇಲೆ ಇದೆ ಎಂದು ಗಣಪತಿ ಭಟ್ಟರು ಹೇಳುತ್ತಾರೆ.

ಮನೆ ಉಪಯೋಗಕ್ಕೆ ಸೋಲಾರ ಪೆನಲ್ ಬಳಸಿ ಮೂರು ಕೆ.ವಿ ವಿದ್ಯುತ್ ಉತ್ಪಾದನೆ ಮಾಡಿ ಮನೆಯ ಎಲ್ಲಾ ವಿದ್ಯುತ್ ಬಳಸುವ ಕೆಲಸಗಳಿಗೆ ಅದನ್ನೇ ಉಪಯೋಗಿಸಿಕೊಳ್ಳುತ್ತಾರೆ. ವಾಷಿಂಗ್ ಮಿಷನ್, ಫ್ರಿಜ್, ಗ್ರೈಂಡರ್ ಅಲ್ಲದೆ ಅಂಗಳದ ಅಡಿಕೆ ಮೇಲೆ ಸಾಗಿಸುವ ಕ್ರೇನನ್ನೂ ಅದರಲ್ಲಿ ಉಪಯೋಗಿಸಿದ್ದಾರೆ. ಕೆಇಬಿಯವರ ಸಪ್ಲೈ ಇಲ್ಲದಿದ್ದರೂ ಸಾಮಾನ್ಯ ಸುಧಾರಿಸಲು ಸಾಕಾಗುವುದು ಎನ್ನುವರು ಭಟ್ಟರು.

ತೋಟದ ಅಡಿಕೆ ಮರದ ಸೋಗೆ (ಗರಿ) ಹಾಳೆ ದಿನವೂ ತಂದು ಚಾಪ್ ಕಟರ್ ಮಿಷನ್‌ನಲ್ಲಿ ತುಂಡು ಮಾಡಿ ದನಗಳಿಗೆ ಮೇವಿಗಾಗಿ ಕೊಡುತ್ತಿದ್ದಾರೆ. ತೋಟಕ್ಕೆ ಕಳೆನಾಶಕ ಮದ್ದು ಸಿಂಪರಣೆ ಮಾಡುವುದಿಲ್ಲ, , ಎಷ್ಟಿದ್ದರೂ ಜಾನುವಾರುಗಳಿಗೆ ಉಪಯೋಗ. ಅಂಗಳದಲ್ಲಿ ಎರಡು ಸೋಲಾರ್ ಗೂಡುಗಳಿವೆ ಕೆಳಭಾಗ ಒಂದು ಮೀಟರ್ ಶೇಡ್ನೈಟ್ ಅಳವಡಿಸಿದ್ದಾರೆ .ಅದರಲ್ಲಿ ಮಳೆಗಾಲದಲ್ಲಿ ತುಂಬಾ ತರಕಾರಿ ಮಾಡುತ್ತಾರೆ.

ಜಾಯಿಕಾಯಿ ಬೆಳೆ ಮಳೆಗಾಲದಲ್ಲಿ ಆಗುವುದರಿಂದ ಅದನ್ನು ಒಣಗಿಸಲು, ಒಂದು ಬೆಂಕಿಯಲ್ಲಿ ಒಣಗಿಸುವ ಡ್ರೈಯರನ್ನು ಅವರದೇ ಆದ ಆಲೋಚನೆಯಲ್ಲಿ ಮಾಡಿದ್ದಾರೆ. ಅದರ ಒಳಗಡೆ ಹೊಗೆಯಾಡದ ರೀತಿಯಲ್ಲಿ ಅದನ್ನು ರಚಿಸಿದ್ದಾರೆ.

ಗುಜುರಿಯಿಂದ ಬೈಕಿನಚಕ್ರ ತಂದು ವರ್ಕ್ ಶಾಪಿನಲ್ಲಿ ಕೊಟ್ಟು ಅದಕ್ಕೆ ಒಂದು ಬಾಡಿ ನಿರ್ಮಿಸಿ ಒಂದು ಕೈಗಾಡಿ ಮಾಡಿಸಿ 15 ವರ್ಷಗಳಾಯಿತು. ಇಂದಿಗೂ ಅದು ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಇವರು ಕೃಷಿ ಕಾರ್ಯಗಳಲ್ಲಿ ಮಾತ್ರವಲ್ಲದೆ ಸಾಮಾಜಿಕ ಕ್ಷೇತ್ರದಲ್ಲೂ ಕೈಯಾಡಿಸಿದವರು. ಸ್ಥಳೀಯ ಹೈಸ್ಕೂಲಿನಲ್ಲಿ ಖಜಾಂಜಿಯಾಗಿ, ಹಾಲು ಉತ್ಪಾದಕರ ಸಂಘದಲ್ಲಿ ಉಪಾಧ್ಯಕ್ಷನಾಗಿ, ಬೆಳ್ಳಾರೆಯ ಹವ್ಯಕ ವಲಯದ ಅಧ್ಯಕ್ಷರಾಗಿ, ರಬ್ಬರ್ ಉತ್ಪಾದಕ ಸಂಘದ ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.

ಗಣಪತಿ ಭಟ್ಟರ ಅವರ ಪತ್ನಿ ಯಶೋದಮ್ಮ ಅವರು ಸ್ವತಹ ದನದ ಹಾಲು ಹಿಂಡಿ ಮನೆಯ ಎಲ್ಲಾ ಕೆಲಸಗಳನ್ನೂ ಅಚ್ಚುಕಟ್ಟಾಗಿ ನಿಭಾಯಿಸುವ ಮೂಲಕ ಗಣಪತಿ ಭಟ್ಟರವರೀಗೆ ಸಾತ್ ಕೊಡುವರು. ಮಗ, ಸೊಸೆಯೂ ಇವರಿಗೆ ಸಹಾಯ ಹಸ್ತ ನೀಡುವರು.

ಬರಹ-ಆಶಾ ನೂಜಿ

spot_img

ಸಂಬಂಧಿತ ಲೇಖನಗಳು

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group