ಬರಹ: ಡಾ. ಜಯವೀರ ಎ.ಕೆ
ಕೆ.ಎಲ್.ಇ ಪದವಿ ಮಹಾವಿದ್ಯಾಲಯ ಶಿರಗುಪ್ಪಿ
ನಮ್ಮದು ಕೃಷಿ ಪ್ರಧಾನ ದೇಶ. ಇಲ್ಲಿನ ಪ್ರತಿಯೊಂದು ರಾಜ್ಯಗಳು ಒಂದೊಂದು ಬೆಳಗ್ಗೆ ಹೆಸರುವಾಸಿಯಾಗಿದೆ. ನಮ್ಮ ಕರ್ನಾಟಕ ರಾಜ್ಯ ನೆರೆಯ ಮಹಾರಾಷ್ಟ್ರ ಹೊರತುಪಡಿಸಿದರೆ ನಮ್ಮ ರಾಜ್ಯದಲ್ಲಿ ಹೇರಳವಾಗಿ ಕಬ್ಬು ಬೆಳೆಯುತ್ತಾರೆ. ದಕ್ಷಿಣ ಕರ್ನಾಟಕದಲ್ಲಿ ಮಂಡ್ಯ ಜಿಲ್ಲೆ ಬಿಟ್ಟರೆ ಉತ್ತರ ಕರ್ನಾಟಕದ ಬೆಳಗಾವಿ ಜಿಲ್ಲೆ ಅತಿ ಹೆಚ್ಚು ಕಬ್ಬು ಬೆಳೆ ಬೆಳೆಯುತ್ತಾರೆ. ಹೀಗಾಗಿ ಮಂಡ್ಯ ಹಾಗೂ ಬೆಳಗಾವಿ ಈ ಉಭಯ ಜಿಲ್ಲೆಗಳು ಸಕ್ಕರೆ ಜಿಲ್ಲೆಗಳು ಎಂದು ವಿಖ್ಯಾತಿ ಪಡೆದಿದೆ.
ಸಮೃದ್ಧ ನೀರಾವರಿ ಪ್ರದೇಶವಾದ ಬೆಳಗಾವಿ ಜಿಲ್ಲೆಯಲ್ಲಿ ನೂರಕ್ಕೆ 9೦ರಷ್ಟು ರೈತರು ವಾಣಿಜ್ಯ ಬೆಳೆಯಾದ ಕಬ್ಬನ್ನು ಬೆಳೆದು ಬದುಕು ಕಟ್ಟಿಕೊಂಡಿದ್ದಾರೆ. ಜಿಲ್ಲೆಯ ಎಲ್ಲಾ ಸಣ್ಣ ಪ್ರಮಾಣದ ಹಾಗೂ ಪ್ರಗತಿಪರ ರೈತರು ಕಬ್ಬು ಬೆಳೆಯನ್ನೇ ನಂಬಿ ಈಗ ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ಕಬ್ಬು ನಾಟಿ ಆರಂಭದಿಂದ ಹಿಡಿದು ಕಾರ್ಖಾನೆಗಳಿಗೆ ಕಬ್ಬು ಸಾಗಿಸುವವರೆಗೆ ಪ್ರತಿಯೊಬ್ಬ ಕಬ್ಬು ಬೆಳೆಗಾರ ಒಂದು ಎಕರೆಗೆ 53,500 ರೂಪಾಯಿಯಷ್ಟು ಖರ್ಚು ಮಾಡುತ್ತಾನೆ. ಕಬ್ಬು ಬೆಳೆಯಲು ಭೂಮಿಯನ್ನು ಸಿದ್ಧಗೊಳಿಸಲು ಗಳೆ, ರೂಟರ್, ಲಂಗರಿ ಬೆಲೆಗಳು ಈಗ ತೀವ್ರ ಏರಿಕೆ ಕಂಡಿವೆ. ಬೀಜ ಔಷಧೋಪಚಾರದ ವಸ್ತುಗಳು ಬೆಲೆಗಳು ಮಾರುಕಟ್ಟೆಯಲ್ಲಿ ಇಮ್ಮಡಿಯಾಗಿದ್ದು ರೈತರನ್ನು ತೀವ್ರ ಚಿಂತನೆಗೀಡು ಮಾಡಿವೆ. ಜೀವನಾವಶ್ಯಕ ವಸ್ತುಗಳು ಬೆಲೆಗಳು ಗಗನಮುಖಿಯಾಗಿದ್ದು ರೈತರ ನೆಮ್ಮದಿಯನ್ನೇ ಕಸಿದುಕೊಂಡಿದ್ದು ಸ್ಪಟಿಕ ಸ್ಪಷ್ಟ. ಜೀವನಾವಶ್ಯಕ ವಸ್ತುಗಳ ಬೆಲೆಗಳು ಪ್ರತಿ ವರ್ಷ ಏರುತ್ತದೆ. ಆದರೆ ಕಬ್ಬು ಬೆಳೆಗೆ ಈವರೆಗೂ ಸರಿಯಾದ ನ್ಯಾಯಯುತವಾದ ಬೆಲೆ ಏರಿಕೆಯಾಗದೆ ಇರುವುದು ಕಬ್ಬು ಬೆಳೆಗಾರರಲ್ಲಿ ಆತಂಕ ಮನೆ ಮಾಡಿದೆ. ಕಬ್ಬು ಬೆಳೆದು ಲೋಖಕ್ಕೆ ಸಿಹಿ ನೀಡಿರುವ ಈ ರೈತ ಮಾತ್ರ ಕಹಿ ಕ್ಷಣಗಳನ್ನೇ ಅನುಭವಿಸುತ್ತಿರುವುದು ವಿಪರ್ಯಾಸ
ಕಬ್ಬು ಬೆಳೆಯುವ ರೈತ ಚಿಂತೆಯ ಮೂಟೆ ಹೊತ್ತುಕೊಂಡು ನಿರುತ್ಸಾಹಿಯಾಗಿ, ಸಾಲದ ಬಾಧೆಯಿಂದ ಕಂಗಾಲಾಗಿ ಅತ್ಯಂತ ದುಸ್ತರ ಜೀವನ ನಡೆಸುತ್ತಿದ್ದಾನೆ. ಒಂದು ಕಾಲದಲ್ಲಿ ರೊಕ್ಕದ ಬೆಳೆಯಾಗಿದ್ದ ಇವನಿಗೆ ಇತ್ತೀಚೆಗೆ ದುಃಖದ ಬೆಳೆಯಾಗಿದ್ದು ಮಾತ್ರ ಸಖೇದಾಶ್ಚರ್ಯ.
ಪಕ್ಕದ ಮಹಾರಾಷ್ಟ್ರದಲ್ಲಿರುವ ಸಕ್ಕರೆ ಕಾರ್ಖಾನೆಗಳು ಸ್ವಲ್ಪಮಟ್ಟಿಗೆ ದರ ಏರಿಕೆ ಮಾಡಿವೆ. ಆದರೆ ನಮ್ಮ ರಾಜ್ಯದಲ್ಲಿ ಮಾತ್ರ ಪ್ರತಿಬಾರಿ ಹಂಗಾಮು ಆರಂಭದಲ್ಲಿ ಸೂಕ್ತ ನ್ಯಾಯಸಮ್ಮತ ಬೆಲೆ ನಿರ್ಧಾರ ಮಾಡದೇ ಇರುವುದು ಕಬ್ಬು ಬೆಳೆಗಾರರು ನಿರಾಶೆಯ ಕಡಲಲ್ಲಿ ತೇಲುವಂತೆ ಮಾಡಿದೆ.
ಸರಿಯಾದ ಅವಧಿಗೆ ಕಬ್ಬು ಖರೀದಿಸಬೇಕಾದ ಕಾರ್ಖಾನೆಗಳು ಕಬ್ಬು ಕಟಾವಿಗೆ ಆದೇಶ ಮಾಡದೆ ಇರುವುದು ಹಾಗೂ ಕಬ್ಬು ಕಟಾವು ಮಾಡಲು ಪ್ರತಿ ವರ್ಷ ತೋಡ್ನಿ ಗ್ಯಾಂಗಿನವರು ಸಾಕಣಿಕೆ ದರ ಏರಿಕೆ ಮಾಡುತ್ತಿರುವುದು ರೈತರನ್ನು ನಿದ್ದೆಗೆಡಿಸಿದೆ. ನಿಯತ್ತಿಗೆ ಹೆಸರಾದ ರೈತರು ಎಂದೆಂದಿಗೂ ಯಾರಿಗೂ ಅನ್ಯಾಯ ಮಾಡಲಾರರು. ಆದರೆ ಕಾರ್ಖಾನೆಗಳಿಗೆ ಕಬ್ಬು ಕಳಿಸುವ ಸಂದರ್ಭದಲ್ಲಿ ಹಲವಾರು ರೈತರು ತೂಕ ಮಾಡದೆ ಹಾಗೆ ಕಳಿಸುತ್ತಾರೆ. ಆದರೆ ಕಾರ್ಖಾನೆಯಲ್ಲಿ ನಡೆಯುವ ತೂಕದಲ್ಲಿ ಪ್ರತಿವರ್ಷ ವ್ಯತ್ಯಾಸ ಕಂಡುಬರುತ್ತದೆ. ಇತ್ತೀಚೆಗೆ ಬೆಳಗಾವಿ ಜಿಲ್ಲಾಧಿಕಾರಿಗಳು ದರ ವಂಚನೆ ತಡೆಗಟ್ಟಲು ಅನುಷ್ಠಾನ ಸಮಿತಿಗಳನ್ನು ರಚಿಸಿ ತೂಕ ವಂಚನೆ ಕಡಿವಾಣ ಹಾಕಲಾಗುವುದು ಎಂದು ಹೇಳಿರುವುದು ರೈತ ವಲಯದಲ್ಲಿ ಕೊಂಚ ಸಂತಸ ಮೂಡಿಸಿದೆ.
ಕಬ್ಬು ಬೆಳೆಗಾರರನ್ನು ರುಬ್ಬುತ್ತಿರುವ ಸಕ್ಕರೆ ಉದ್ದಿಮೆಗಳಿಗೆ ಸೂಕ್ತ ಲಗಾಮು ಹಾಕಿ ನಿಯಂತ್ರಣ ಮಾಡಬೇಕಾದ ಸರಕಾರ ಭರವಸೆಗಳನ್ನು ನೀಡಿ ಮೌನವಹಿಸಿರುವುದು ವಿಷಾಧನೀಯ. ಈ ಬಾರಿ ಮಳೆಯ ಅಭಾವದಂದ ಉತ್ಪಾದನೆ ಜೊತೆಗೆ ಇಳುವರಿಯೂ ಕುಂಠಿತವಾಗಿದೆ. ಜನಪ್ರತಿನಿಧಿಗಳು ರೈತರ ಸಮಸ್ಯೆಗಳನ್ನು ಆಲಿಸದಿರುವುದು ರೈತರಲ್ಲಿ ನೋವುಂಟು ಮಾಡಿದೆ.
ಬೆಳಗಾವಿ, ವಿಜಯಪುರ, ಬಾಗಲಕೋಟೆ ಜಿಲ್ಲೆಗಳ ಜನಪ್ರತಿನಿಧಿಗಳು ತಮ್ಮ ಒಡೆತನದಲ್ಲಿಯೇ ಇರುವ ಬಹುತೇಕ ಸಕ್ಕರೆ ಕಾರ್ಖಾನೆಗಳು ಇಲ್ಲಿಯವರೆಗೆ ಕಬ್ಬು ಬೆಳೆಗಾರರಿಗೆ ನ್ಯಾಯಯುತ ಬೆಲೆ ನೀಡಿವೆಯೇ?.. ನೀಡಿದ್ದರೆ ಅವರೆಲ್ಲ ರೈತ ಪರ ಕಾಳಜಿ ಉಳ್ಳವರು ಎನ್ನಬಹುದು. ಕಬ್ಬು ಬೆಳೆಯಿಂದ ಆರ್ಥಿಕವಾಗಿ ಜೀವನಮಟ್ಟ ಸುಧಾರಿಸಿಕೊಂಡು ನೆಮ್ಮದಿಯ ಬದುಕು ಕಟ್ಟಿಕೊಳ್ಳಬೇಕಾಗಿದ್ದ ಕಬ್ಬು ಬೆಳೆಗಾರರ ಪಾಲಿಗೆ “ಕಬ್ಬು ಡೊಂಕು ಸಿಹಿಯೂ ಡೊಂಕು” ಆಗಿರುವುದು ಅಕ್ಷರಶ: ಸತ್ಯವಾಗಿದೆ.
೨೦೨೩-೨೪ನೇ ಸಾಲಿನ ಕಬ್ಬು ನುರಿಸುವ ಹಂಗಾಮು ಆರಂಭವಾಗಿದೆ. ಪ್ರಸ್ತುತ ಸಕ್ಕರೆ ಕಾರ್ಖಾನೆಗಳು ಘೋಷಣೆ ಮಾಡಿದ ಎಫ್.ಆರ್.ಪಿ ಬೆಲೆಗಿಂತ ಹೆಚ್ಚಿನ ದರ ನೀಡಬೇಕೆಂದು ಬೆಳಗಾವಿ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ ಆದರೆ ಈ ಆದೇಶ ನಿಯಮಗಳು ಕಾಗದಲ್ಲಿ ಕಂಗೊಳಿಸದೆ ಸಂಬAಧಿಸಿದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಮನಪೂರ್ವಕವಾಗಿ ಏಕತ್ರಯಗೊಂಡು ಅನುಷ್ಠಾನದ ರೂಪದಲ್ಲಿ ತಂದರೆ ಮಾತ್ರ ರೈತರ ಹಿತ ಕಾಪಾಡಲು ಸಾಧ್ಯವಾದೀತು. ಕಬ್ಬು ಬೆಳೆಗಾರರ ಈ ಕಟು ವಾಸ್ತವ ಕತೆಗೆ ಇತಿಶ್ರೀ ಹಾಡುವುದು ಯಾವಾಗ? ಕಾಲವೇ ನಿರ್ಧರಿಸಬೇಕು