ಭಟ್ರಮನೆಯ ಗಣೇಶನು ಚೆನ್ನಾಗಿ ಕಾಳು ಮೆಣಸು ಬೆಳೆದಿದ್ದಾನೆ. ಹೈನು ಉದ್ಯಮವನ್ನು ಬಹಳ ಆಸಕ್ತಿಯಿಂದ ಮಾಡ್ತಾ ಇದ್ದಾರೆ ಎನ್ನುವ ಮಾತು ಕೇಳಿದಾಕ್ಷಣ ಆ ಸಮಯದಲ್ಲಿ ಆ ಪ್ಲಾಟನ್ನು ಕಣ್ಣಾರೆ ನೋಡಿಕೊಂಡು ಬರೋಣ ಎಂಬ ಆಸೆಯಾಗಿತ್ತು. ಒಂದು ದಿನ ಬಿಡುವು ಮಾಡಿಕೊಂಡು ಬೆಣ್ಣೆಮನೆಯ ಗಣೇಶ ಭಟ್ರ ಅಡಿಕೆ ತೋಟವನ್ನು ಕಣ್ತುಂಬಿಕೊಂಡು ಬರಲು ಉತ್ಸಾಹದಿಂದ ಹೋಗಿದ್ದೆ.
ಬೆಣ್ಣೆಮನೆ ಉ. ಕ. ಜಿಲ್ಲೆಯ ಯಲ್ಲಾಪುರ ತಾಲೂಕಿನ ತುಡುಗುಣಿಯ ಸಮೀಪವಿದೆ. ಉತ್ಸಾಹಿ ಯುವಕ ಗಣೇಶ ಭಟ್ ತಂದೆ ಕೃಷ್ಣ ಭಟ್ ಅವರೊಂದಿಗೆ ಕೃಷಿ ಕಾರ‍್ಯದಲ್ಲಿ ತೊಡಗಿಕೊಂಡ ಗಟ್ಟಿ ಆಳು. ಶಿಕ್ಷಣದ ನಂತರ ನೌಕರಿಗಾಗಿ ಅಲೆಯದೇ ತಮಗಿರುವ ಗದ್ದೆ- ತೋಟದಲ್ಲಿ ಇನ್ನಷ್ಟು ವ್ಯವಸ್ಥಿತವಾಗಿ, ವೈಜ್ಞಾನಿಕ ಪದ್ಧತಿಯಲ್ಲಿ ಬೆಳೆಗಳನ್ನು ಬೆಳೆಯಲು ಉತ್ಸಾಹ ತೋರಿದರು. ಅವರಿಗೆ ಈಗ ಸುಮಾರು ಮೂರುವರೆ ಎಕರೆ ಅಡಿಕೆ ತೋಟವಿದೆ. (ಒಂದು ಸಮಯದಲ್ಲಿ ಈ ಎಲ್ಲ ಭೂಮಿಯೂ ಭತ್ತ ಬೆಳೆಯುವ ಪ್ರದೇಶವಾಗಿತ್ತು ಭತ್ತದ ಕೃಷಿಯ ಸಮಸ್ಯೆಯನ್ನು ನಿವಾರಿಸಿಕೊಳ್ಳಲು ಆ ಭೂಮಿಯನ್ನು ಹಂತ ಹಂತವಾಗಿ ಅಡಿಕೆ ತೋಟವಾಗಿ ಪರಿವರ‍್ತಿಸಿದರು.) ಒಂದು ಭಾಗದಲ್ಲಿ ಹಳೆ ತೋಟವಿದ್ದು 16 ಫೂಟಿನ ಬರಣವಾಗಿದೆ. ಇಲ್ಲಿ ಅಡಿಕೆ ಮರದ ಸಂಖ್ಯೆ ಹೆಚ್ಚಿದ್ದರೂ, ಇಳುವರಿಯಲ್ಲಿ ಅಂಥಹ ವ್ಯತ್ಯಾಸವೇನು ಇಲ್ಲದೇ, ಯೋಗ್ಯ ಫಲವನ್ನು ನೀಡುತ್ತಿದೆ ಎನ್ನುತ್ತಾರೆ ಗಣೇಶ ಭಟ್. ಆದ್ರೆ ಈ ಭೂಮಿ ಹಳ್ಳದ ಪಕ್ಕದಲ್ಲಿ ಇರುವುದರಿಂದ ಜಲಾವೃತ ನಿಶ್ಚಿತ, ಅದೇ ದೊಡ್ಡ ಸಮಸ್ಯೆ ಎನ್ನುತ್ತಾರೆ.
ಮತ್ತೊಂದು ಭಾಗದಲ್ಲಿ ಸುಧಾರಿತ ಪದ್ಧತಿಯಲ್ಲಿ ತೋಟವನ್ನು ಹಾಕಲಾಗಿದೆ. 18 ಫೂಟಿನ ಬರಣ ಮಾಡಿ 9*9 ಅಂತರದಲ್ಲಿ ಸುಮಾರು 25 ವರುಷದ ಹಿಂದೆಯೇ ಅಡಿಕೆ ಸಸಿಯನ್ನು ನೆಟ್ಟು ಪೋಷಿಸಲಾಗಿದೆ. ಪ್ರತೀ ಮರಕ್ಕೆ ಸುಮಾರು 30 kg ಯಷ್ಟು ದಡ್ಡಿ ಗೊಬ್ಬರವನ್ನು ನೀಡುತ್ತಾರೆ. ಇವರದ್ದು ಹೈನು ಉದ್ಯಮ ಇರುವುದರಿಂದ ಸಾಕಷ್ಟು ಕೊಟ್ಟಿಗೆ ಗೊಬ್ಬರವನ್ನು ಸಿದ್ಧ ಮಾಡಿಕೊಳ್ಳುತ್ತಾರೆ. ಕಡಿಮೆ ಬಿದ್ದಷ್ಟು ಗೊಬ್ಬರವನ್ನು ಸ್ಥಳೀಯವಾಗಿ ಖರೀದಿಸಿ ತಂದು ಸೂಕ್ತ ಸಮಯದಲ್ಲಿಯೇ ಮರಕ್ಕೆ ಹಾಕುತ್ತಾರೆ.
ಇನ್ನು ಮಳೆಗಾಲದ ಶುರುವಿನಲ್ಲಿ 14.06 (ಕೃಷಿಕ ಮಿತ್ರ ಎನ್ನುವ ರಾಸಾಯನಿಕಗೊಬ್ಬರವನ್ನು ಪ್ರತೀ ಮರಕ್ಕೆ 4೦೦ ಗ್ರಾಂ. ನಂತೆ ಹಾಕಿ ಆರೈಕೆಮಾಡುತ್ತಾರೆ. ಜೊತೆಗೆ ಎನ್.ಪಿ.ಕೆ. ಗೊಬ್ಬರವನ್ನು ಪ್ರತೀ ಮರಕ್ಕೆ 650 ಗ್ರಾಂ. ನಂತೆ ಸೂಕ್ತ ಸಮಯದಲ್ಲಿ ಹಾಕಿ ಪೋಷಣೆ ಮಾಡುತ್ತಾರೆ. ಗಣೇಶ ಭಟರು ಮನೆ ಸುತ್ತ ಮುತ್ತ ಸಿಗುವ ಕರಡ, ದರಕನ್ನು ಬೇಸಿಗೆಯಲ್ಲಿ ಹಾಯಿಸಿ ಮುಚ್ಚಿಗೆ ಮಾಡುತ್ತಾರೆ.
ಮಳೆಗಾಲದಲ್ಲಿ ಹಸಿ ಸೊಪ್ಪನ್ನು (ಒಂದು ಭಾಗದ ತೋಟಕ್ಕೆ) ಹಾಕುವ ಪದ್ಧತಿಯನ್ನು ಇಟ್ಟುಕೊಂಡಿದ್ದಾರೆ. ಇವರು ಅಡಿಕೆ ತೋಟಕ್ಕೆ ಹನಿ ನೀರಾವರಿ ವ್ಯವಸ್ಥೆಯನ್ನು ಅಳವಡಿಸಿದ್ದಾರೆ. ಆದರೆ, ಬಸಿಗಾಲುವೆಯನ್ನು ಸುಧಾರಿತ ಪದ್ದತಿ ಅಳವಡಿಸಿಕೊಳ್ಳದೇ ಓಪನ್ ವ್ಯವಸ್ಥೆ ಇಟ್ಟುಕೊಂಡಿದ್ದಾರೆ. ಎಲ್ಲ ಕೆಲಸವನ್ನು ಅಚ್ಚುಕಟ್ಟಾಗಿ, ಸಕಾಲದಲ್ಲಿ ನರ‍್ವಹಣೆ ಮಾಡುತ್ತಿದ್ದ ಗಣೇಶ ಭಟರು ಪರಿಶ್ರಮದಿಂದ ಅಡಿಕೆ ತೋಟ ಸಮೃದ್ಧವಾಗಿದೆ. ಒಂದು ಸೀಜನ್ನಿನಲ್ಲಿ ಎಕರೆಗೆ ಸರಾಸರಿ 16-18 ಕ್ವಿಂಟಲ್ ಅಡಿಕೆ ಫಸಲು ಲಭಿಸುತ್ತಿದೆ ಎನ್ನುತ್ತಾರೆ ಭಟ್ಟರು.
ತೋಟದ ತುಂಬಾ ಕಪ್ಪು ಬಂಗಾರ:
ಬೆಣ್ಣೆ ಮನೆ ಗಣೇಶ ಭಟ್ ಕೇವಲ ಅಡಿಕೆ ಬೆಳೆಯನ್ನು ಮಾತ್ರ ಬೆಳೆಯುತ್ತಿಲ್ಲ. ಅವರು ಕಾಳು ಮೆಣಸಿನ ಕೃಷಿಯನ್ನು ಸಹಾ ಬಹಳ ಆಸಕ್ತಿ, ಛಲದಿಂದ ಮಾಡುತ್ತಿದ್ದಾರೆ.
ಇವರು ಸುಮಾರು ಇಪ್ಪತ್ತು ವರುಷದ ಹಿಂದೆಯೇ ಈ ಕಪ್ಪು ಬಂಗಾರ ಕೃಷಿಯನ್ನು ಮಾಡಲು ಆರಂಭಿಸಿದ್ದಾರೆ. ಅಲ್ಪ ಪ್ರಮಾಣದಲ್ಲಿ ಈ ಕೃಷಿ ಮಾಡಲು ಉತ್ಸಾಹ ತೋರಿದ ಗಣೇಶ ಭಟ್ ಹಂತ ಹಂತವಾಗಿ ಬಳ್ಳಿಗಳ ಸಂಖ್ಯೆಯನ್ನೂ ಹೆಚ್ಚಿಸಿಕೊಂಡರು. ಕೇವಲ ಕುಡಿ ನೆಟ್ಟಿಯೇ ಬಳ್ಳಿಯನ್ನು ಬೆಳೆಸಿದ ಗಣೇಶ ಭಟರ ತೋಟದಲ್ಲಿ ಬಹುತೇಕ ಪಣಿಯೂರ ತಳಿಗಳಿವೆ. ಅಲ್ಪ ಪ್ರಮಾಣದಲ್ಲಿ ‘ಕುದುರು ಗುಟ್ಟ’ ಸ್ಥಾನಿಕ ತಳಿಗಳು ಇವೆ. ಇವರ ಅಡಿಕೆ ತೋಟದಲ್ಲೀಗ ಸು. 1500 ಮೆಣಸಿನ ಬಳ್ಳಿಗಳಿದ್ದು, ಅವೆಲ್ಲ ಹುಲುಸಾಗಿ ಬೆಳೆದು ಯೋಗ್ಯ ಫಸಲನ್ನು ನೀಡುತ್ತಿವೆ.
ಮೆಣಸಿನ ಕೃಷಿಗಾಗಿ ಯಾವುದೇ ಹೆಚ್ಚುವರಿ ಗೊಬ್ಬರವನ್ನು ನೀಡುವುದಿಲ್ಲ. ಮಳೆಗಾಲದಲ್ಲಿ ಎರಡು ಬಾರಿ ಬೋಡೋ ದ್ರಾವಣ, ನೈಟಿನ್ ಐಲ್, ಪಣಿಯೂರ ಸ್ಪೇಷಲ್… ಇದೆಲ್ಲವನ್ನು ಸೂಕ್ತ ಸಮಯದಲ್ಲಿ ಸಿಂಪಡಿಸಿ ಬಳ್ಳಿಗಳ ಪೋಷಣೆ ಮಾಡುತ್ತಾರೆ. ತನ್ನ ಇತಿಮಿತಿಯಲ್ಲಿ ಮೆಣಸಿನ ಕೃಷಿಯನ್ನು ಮಾಡುತ್ತಿದ್ದೇನೆ. ನನಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ, ಬಹಳ ಚೆನ್ನಾಗಿಯೂ ಈ ಮೆಣಸಿನ ಕೃಷಿ ಮಾಡುವವರು ನಮ್ಮೂರ ಅಕ್ಕ-ಪಕ್ಕದಲ್ಲಿ ಇದ್ದಾರೆ. ಅವರಷ್ಟು ಫಸಲು ನಮ್ಮ ತೋಟದಲ್ಲಿ ಬರದಿದ್ದರೂ ತೃಪ್ತಿದಾಯಿಕ ಬೆಳೆ ಅದರಿಂದ ಸಿಗುತ್ತಾ ಇದೆ. ಒಂದು ಸಮಯದಲ್ಲಿ ಇಪ್ಪತ್ತು ಕ್ವಿಂಟಲ್ ವರೆಗೂ ಮೆಣಸಿನ ಫಲ ಪಡೆದಿದ್ದೆ. ಆದ್ರೆ, ಇತ್ತೀಚಿನ ದಿನದಲ್ಲಿ ತೋಟಕ್ಕೆ ಹಳ್ಳದ ನೀರು ನುಗ್ಗಿ ಬರುವುದರಿಂದ ಮೆಣಸಿನ ಬಳ್ಳಿಗಳು ನಾಶ ಆಗ್ತಾಯಿದೆ. ಹೀಗಾಗಿ ಬಳ್ಳಿಗಳನ್ನು ಉಳಿಸಿಕೊಳ್ಳುವುದೇ ದೊಡ್ಡ ಸವಾಲಾಗಿದೆ ಎನ್ನುತ್ತಾರೆ ಗಣೇಶ ಭಟ್. ತೋಟದಲ್ಲಿ ಇರುವಂತ ಬಳ್ಳಿಗಳು ಅತ್ಯಧಿಕ ಅಲ್ಲದಿದ್ದರೂ ತೃಪ್ತಿದಾಯಿಕ ಫಲ ನೀಡುತ್ತಿವೆ. ಕಳೆದ ಸೀಜನ್ನಿನಲ್ಲಿ 2021-22 ರಲ್ಲಿ ಸುಮಾರು 14 ಕ್ವಿಂಟಲ್ ಮೆಣಸಿನ ಫಸಲು ಲಭಿಸಿತ್ತು. ಈ ಸೀಜನ್ನಿನಲ್ಲಿಯೂ ಅಷ್ಟೇ ಸಿಗುವ ನಿರೀಕ್ಷೆ ಇದೆ ಎನ್ನುತ್ತಾರೆ ಗಣೇಶ ಭಟ್.
ಹೈನು ಉದ್ಯಮವೂ ಉಂಟು!
ಕೃಷಿಕರಿಗೆ ಕೊಟ್ಟಿಗೆ ಚಾಕರಿ (ಹೈನುಗಾರಿಕೆ) ಅವಿಭಾಜ್ಯ ಅಂಗ, ಆದ್ರೆ ಈ ಹೈಟೆಕ್ ಜೀವನ ಶೈಲಿಯಲ್ಲಿ ಹೈನುಗಾರಿಕೆ ಕಾಯಕ ಕಷ್ಟ ಎನ್ನುವ ಸ್ಥಿತಿಯೂ ಉಂಟು. ಮನೆ ಬಳಕೆಗೆ ಹಾಲು, ಕೃಷಿಗೆ ದಡ್ಡಿ ಗೊಬ್ಬರವನ್ನು ಕೊಂಡುಕೊಳ್ಳುವುದೇ ಉತ್ತಮ ಎನ್ನುವವರೇ ಹೆಚ್ಚು. ವಾಸ್ತವಿಕ ಚಿತ್ರಣ ಹೀಗಿದ್ದರೂ ಬೆಣ್ಣೆಮನೆಯ ಪ್ರಗತಿಪರ ಉತ್ಸಾಹಿ ಯುವ ಕೃಷಿಕ ಗಣೇಶ ಭಟ್ ಉಮೇದಿಯಿಂದ ಹೈನು ಉದ್ಯಮದಲ್ಲಿ ಸಕ್ರೀಯವಾಗಿ ತೊಡಗಿಕೊಂಡಿದ್ದಾರೆ. ಸದ್ಯ ಅವರ ಕೊಟ್ಟಿಗೆಯಲ್ಲಿ ಮೂರು ಆಕಳಿದ್ದು, ದಿನಕ್ಕೆ ಸುಮಾರು 14 ಲೀ. ಹಾಲು ಹಿಂಡುತ್ತಿದ್ದಾರೆ. ಮನೆ ಬಳಕೆಗೆ ಹೆಚ್ಚಾದ ಹಾಲನ್ನು ಸಮೀಪದ ಡೇರಿಗೆ ಹಾಕುತ್ತಿದ್ದಾರೆ.
ಇವರು ಹಸುವಿಗೆ ಒಣ ಮೇವನ್ನು ಹಾಕುವುದು ಬಹಳ ಕಡಿಮೆ. ಆದರೂ ಒಂದು ಟ್ರ‍್ಯಾಕ್ಟರ್ ಬಿಳಿ ಹುಲ್ಲನ್ನು ಖರೀದಿಸುತ್ತಾರೆ. ಹೆಚ್ಚಿನ ಪ್ರಮಾಣದಲ್ಲಿ ಹಸಿ ಮೇವನ್ನು ಬೆಳೆಸಿಕೊಂಡಿರುವ ಗಣೇಶ ಭಟ್ ಅದನ್ನೇ ಯಥೇಚ್ಛ ಪ್ರಮಾಣ ಹಾಕಿ ಹಸುಗಳನ್ನು ಪೋಷಣೆ ಮಾಡುತ್ತಾರೆ. ಸಾಕಷ್ಟು ಪ್ರಮಾಣದಲ್ಲಿ ದಡ್ಡಿ ಗೊಬ್ಬರವನ್ನು ಸಿದ್ಧ ಮಾಡಿಕೊಳ್ಳುವ ಈ ರೈತರು ಅವೆಲ್ಲವನ್ನು ತಮ್ಮ ಅಡಿಕೆ ತೋಟಕ್ಕೆ ಬಳಕೆ ಮಾಡುತ್ತಾರೆ.
ಗಣೇಶ ಭಟ್ಟರ ಜಮೀನಿನ ಸುತ್ತ ಮುತ್ತ ಸಾಕಷ್ಟು ತೆಂಗಿನ ಮರಗಳಿವೆ. ವೆಂಗುಲಾ- ತಳಿಯ ಗೇರಿನ ಗಿಡಗಳಿವೆ. ಅಲ್ಲದೇ ಮನೆ ಬಳಕೆಗೆ ಬೇಕಾಗುವಷ್ಟು ತರಕಾರಿ, ಚಿಕ್ಕು, ಲಿಂಬು, ಸೇಬು, ಪಪ್ಪಾಯಿ…. ಹೀಗೆ ವಿವಿಧ ಹಣ್ಣು ಹಂಪಲಗಳು ಅಲ್ಲಿವೆ.
ಹೊಸಕ್ಕಿ ಹಬ್ಬ, ಪ್ರಧಾನ ಬಾಗಿಲಿಗೆ ಹಾಕಲು ಬೇಕು ಎನ್ನುವ ದೃಷ್ಠಿಯಿಂದ ಸೀಮಿತ ಜಾಗದಲ್ಲಿ ಭತ್ತದ ಪೈರನ್ನು ಬೆಳೆಸಿಕೊಂಡಿದ್ದಾರೆ. ಈ ಉತ್ಸಾಹಿ ಕೃಷಿಕರ ಜಮೀನನ್ನು ಸುತ್ತಾಡಿದರೇ ಇರುವಷ್ಟು ಜಾಗವನ್ನು ಯಾವ ವಿಧಾನದಲ್ಲಿ ಸದ್ಭಳಕೆ ಮಾಡಿಕೊಂಡಿದ್ದಾರೆ ಎನ್ನುವುದು ಅರ್ಥವಾಗುತ್ತದೆ.
ಖುಷಿಯಿದೆ!
ನಾವು ಬಹಳ ಪುಣ್ಯವಂತರು. ಗ್ರಾಮೀಣ ಪ್ರದೇಶದಲ್ಲಿ ನೆಲೆಸಿ ಕೃಷಿಯಲ್ಲಿ ಸಕ್ರೀಯವಾಗಿ ತೊಡಗಿಕೊಂಡರೇ, ಅದ್ರಲ್ಲಿ ಸಿಗುವಷ್ಟು ಖುಷಿ, ಆತ್ಮ ತೃಪ್ತಿ, ಬೇರೆ ಉದ್ಯೋಗದಲ್ಲಿ ಸಿಗುವುದು ಅನುಮಾನ! ನಮ್ಮ ಭೂಮಿಯಲ್ಲಿ ಆಗಬಹುದಾದ ಬೆಳೆಗಳನ್ನು ಬೆಳೆದರೆ, ದಿನವಿಡೀ ದುಡಿದರೂ ಕೃಷಿಯ ಕೆಲಸ ಪೂರೈಸಿಕೊಳ್ಳುವುದೇ ಕಷ್ಟ. ಇನ್ನು ಬೇರೆ ಬೇರೆ ಚಟುವಟಿಕೆಗಳಿಗೆ ತಲೆಯೆತ್ತಿ ನೋಡುವುದೇ ಕಷ್ಟ ಎಂದು ಗಣೇಶ ಭಟ್ ಮನದೊಳಗಿನ ಭಾವನೆಯನ್ನು ಅಭಿವ್ಯಕ್ತಿಪಡಿಸುತ್ತಾರೆ.
ಚಿತ್ರ-ಬರಹಃ ಗಣಪತಿ ಹಾಸ್ಪುರ