–ಪರ್ಣಾಶಾ ತಿರುಮಲೇಶ್ವರ ಭಟ್ ಶಿಶಿಲ
ಅದೊಂದು ಕಾಲವಿತ್ತು. “ಹಳ್ಳಿ”ಗಳೆಂದರೆ ಪುರಾತನ ಸಂಸ್ಕೃತಿಯ ತವರೂರು ಎಂಬಂತೆ. ಹಚ್ಚ ಹಸುರಿನ ಪರಿಸರ, ನದಿ, ಕೆರೆ, ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿದ್ದವು. ಪ್ರಾಣಿ ಪಕ್ಷಿಗಳ ಸ್ವಚ್ಛಂದ ವಿಹಾರ. ಭೂಗರ್ಭದಿಂದ ಮೇಲ್ಬಂದು ಕಟ್ಟೆಯ ಮಟ್ಟಕ್ಕೆ ತುಂಬಿ ನಿಂತಿರುವ ಬಾವಿಗಳು. ಭೂಮಿತಾಯಿ ಹಸುರು ಸೀರೆಯುಟ್ಟು ಕಂಗೊಳಿಸುವಂತೆ ತೋಟ ಗದ್ದೆಗಳಲ್ಲಿ, ಪಚ್ಚೆ ತೆನೆ, ಗೊನೆಗಳ ನರ್ತನ. ಆಹಾ ! ಭೂಲೋಕವೇ ಸ್ವರ್ಗ ಎನಿಸುವಷ್ಟು ಕ್ರಮೇಣ ಕಾರಣಾಂತರಗಳಿಂದ ಹಳ್ಳಿಯ ಜನ ನಗರಗಳತ್ತ ಆಕರ್ಷಿತರಾಗಿ, ಕೃಷಿಯ ಕಡೆಗಿನ ಒಲವು ಕಡಿಮೆಯಾಗತೊಡಗಿತು.
ಇಲ್ಲಿ ಕಷ್ಟಪಟ್ಟು ದುಡಿದು ತಿನ್ನುವ ಆಹಾರ ಅಲ್ಲಿ ಒಂದೆರಡು ಗರಿಗರಿ ನೋಟು ಕೊಟ್ಟರೆ ಸುಲಭವಾಗಿ ಸಿಗುವಾಗ ಇಷ್ಟು ಕಷ್ಟ ಯಾಕೆ ಪಡಬೇಕು ಎನ್ನುವ ಧೋರಣೆಯೋ… ಎಷ್ಟು ಕಷ್ಟ ಪಟ್ಟರೂ ಕಾಲಿಗೆ ಎಳೆದರೆ ತಲೆಗೆ ಬಾರದು ಎನ್ನುವ ಪರಿಸ್ಥಿತಿಯೋ… ಅಂತೂ ಎಲ್ಲವೂ ಅಂಗಡಿಗಳಿಂದ ತರುವ ಕಾಲ ಬಂದಿದೆ.
ಪ್ರಸಕ್ತ ವಿದ್ಯಮಾನದಲ್ಲಿ ಹಳ್ಳಿಯ ಈ ರಮ್ಯ ನೋಟವು ಕಣ್ಮರೆ ಆಗತೊಡಗಿದೆ. ಮಕ್ಕಳಿಗೆ ಯಾವ ಬೆಳೆ ಹೇಗೆ ಬೆಳೆಯಲ್ಪಡುತ್ತದೆ ಎಂಬ ಕನಿಷ್ಟ ಪರಿಚಯವೂ ಇಲ್ಲದಂತಾಗಿದೆ. ತಿನ್ನುವ ಆಹಾರವನ್ನು ಪೋಲು ಮಾಡುವ, ಬೇಕು ಬೇಕಾದಂತೆ ಆಹಾರವನ್ನು ತಯಾರಿಸಿ ಸ್ವಲ್ಪವೇ ತಿಂದು ಉಳಿದುದನ್ನು ಎಸೆಯುವ ಉದ್ಧಟತನ ಬೆಳೆದಿದೆ. ಮಕ್ಕಳಲ್ಲಿ ಇಂಥಾ ಪ್ರವೃತ್ತಿ ಬದಲಾಗಬೇಕಿದ್ದರೆ, ಎಳವೆಯಲ್ಲೇ ಪೂರಕ ಶಿಕ್ಷಣದ ಅಗತ್ಯ ಖಂಡಿತಾ ಇದೆ.
ಈ ನಿಟ್ಟಿನಲ್ಲಿ ಇಲ್ಲೊಂದು ಸರ್ಕಾರಿ ಶಾಲೆಯಲ್ಲಿ “ಗದ್ದೆ ಬೇಸಾಯ” ಮಾಡುವ ಮೂಲಕ ಬೇಸಾಯ ಹಾಗೂ ಕೃಷಿಯ ಬಗ್ಗೆ ಮಕ್ಕಳಲ್ಲಿ ಆಸಕ್ತಿ ಮೂಡುವಂತೆ ಮಾಡಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಕಟ್ಟ ಕಡೆಯ ಗ್ರಾಮ ಶಿಶಿಲ. ಶಿಶಿಲ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಹೇವಾಜೆಯಲ್ಲಿ ಶಾಲಾ SDMC, ಪೋಷಕರ ಮತ್ತು ಶಿಕ್ಷಕರ ಮುತುವರ್ಜಿಯಲ್ಲಿ ಗದ್ದೆಯೊಂದನ್ನು ನಿರ್ಮಾಣ ಮಾಡಿ, ಮಕ್ಕಳಿಗೆ ಮಾಹಿತಿಯನ್ನು ನೀಡುತ್ತಾ ಪ್ರತಿ ಹಂತದ ಕೆಲಸಗಳನ್ನು ಮಾಡಲಾಗುತ್ತಿದೆ.
ಶಾಲಾ ಮಕ್ಕಳ ಪೋಷಕರು ಹಾಗೂ ಹಳೆ ವಿದ್ಯಾರ್ಥಿಗಳ ಪೋಷಕರು ಸಂಭ್ರಮದಿಂದ ಬಂದು ನೇಜಿ ನೆಡುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಾರೆ. ಕಳೆದ 2 ವರ್ಷಗಳಿಂದ ಯಶಸ್ವಿಯಾಗಿ ನಡೆದ ಗದ್ದೆ ಬೇಸಾಯ ಇದೀಗ 3ನೇ ವರ್ಷವೂ ಸಡಗರದಿಂದ ಸಂಪನ್ನಗೊಂಡಿದೆ.ಮಕ್ಕಳೂ ಈ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವುದರಿಂದ, ಕೃಷಿಯ ಬಗ್ಗೆ ಒಲವು ಮೂಡುವುದಲ್ಲದೆ ಬೇಸಾಯದ ಪ್ರತಿ ಹಂತಗಳೂ ಮಕ್ಕಳ ಮನದಲ್ಲಿ ಬೇರೂರುತ್ತದೆ. ಸಮಯಕ್ಕೆ ಸರಿಯಾಗಿ ಔಷಧಿ ಸಿಂಪಡಣೆ, ನೀರು ಹಾಯಿಸುವುದು ಹಾಗೂ ಕಟಾವು ಮಾಡುವವರೆಗೂ ಮಕ್ಕಳಿಗೆ ಎಲ್ಲಾ ಮಾಹಿತಿ ನೀಡಲಾಗುತ್ತದೆ. ಇದರಿಂದ ಮಕ್ಕಳಿಗೆ ಕೃಷಿಯ ಹಿಂದಿರುವ ಪರಿಶ್ರಮದ ಅರಿವಾಗಲಿ ಎಂಬ ಉದ್ದೇಶವೂ ಇದೆ. ಅಂತೆಯೇ ಕಟಾವಿನ ನಂತರ ಎಲ್ಲರೂ ಸೇರಿ “ಹೊಸ ಅಕ್ಕಿ ಊಟ” ಮಾಡುವ ಮೂಲಕ ಸಾಂಪ್ರದಾಯಿಕ ಆಚರಣೆಗಳನ್ನೂ ಆಚರಿಸಲಾಗುತ್ತದೆ.
ನಮ್ಮ ಪೂರ್ವಜರು ಪಟ್ಟ ಶ್ರಮ ಹಾಗೂ ನಮಗೆ ಪರಿಚಯಿಸಿರುವ ಕೃಷಿ ಪದ್ಧತಿಯನ್ನು ಮುಂದಿನ ಪೀಳಿಗೆಗೂ ಪರಿಚಯಿಸುವ ಈ ಸಮಾಜಮುಖಿ ಕೆಲಸವನ್ನು ಮಾಡಿ “ಮಾದರಿ ಶಾಲೆ” ಎನಿಸಿಕೊಂಡಿರುವ ಹೇವಾಜೆ ಶಾಲೆಯನ್ನು ಶಿಕ್ಷಣ ಇಲಾಖೆ ಗುರುತಿಸಿ, ಶಾಲೆಯ ಅಭಿವೃದ್ಧಿಗೆ ಸಹಕರಿಸಿ ಇನ್ನೂ ಒಳ್ಳೆಯ ಕೆಲಸಗಳಿಗೆ ಉತ್ತೇಜಿಸಬೇಕಾಗಿದೆ. ಎಲ್ಲಾ ಶಾಲೆಗಳಲ್ಲೂ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಿ ಪೂರಕ ಶಿಕ್ಷಣ ಒದಗಿಸುವುದು ನಮ್ಮ ನಿಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ.