spot_img
Tuesday, September 17, 2024
spot_imgspot_img
spot_img
spot_img

ಈ ದಂಪತಿಯ ಕೃಷಿಯ ದಾರಿಗೆ ಖುಷಿ ಕೊಡುತ್ತಿವೆ ಕೃಷಿ ಸಂಬಂಧಿ ಹವ್ಯಾಸಗಳು!

ಬರಹ:ಅಡ್ಡೂರು ಕೃಷ್ಣ ರಾವ್

ಹಲವರು ಕೃಷಿ ತೊರೆದು, ನಗರಗಳಲ್ಲಿ ನೆಲೆಸುತ್ತಿರುವ ಇಂದಿನ ಕಾಲಘಟ್ಟದಲ್ಲಿ, ಕೃಷಿಯಲ್ಲೇ ಬದುಕು ಕಟ್ಟಿಕೊಂಡಿರುವ ಶ್ರೀಹರಿ ದರ್ಬೆ ಆ ಟ್ರೆಂಡಿಗೆ ವಿನಾಯ್ತಿ. ಕೃಷಿಯ ಜೊತೆಗೆ ಅನೇಕ ಹವ್ಯಾಸಗಳಲ್ಲಿ ತೊಡಗಿಕೊಂಡು, ಸಮಾಜಮುಖಿ ಕೆಲಸಗಳಲ್ಲಿ ತೊಡಗಿಕೊಂಡಿರುವ ಶ್ರೀಹರಿ ದರ್ಬೆಯವರೊಂದಿಗೆ ಅವರ ತೋಟಕ್ಕೊಂದು ಸುತ್ತು ಬಂದಾಗ ಕೃಷಿ ಬದುಕಿನ ಸಾಧ್ಯತೆಗಳ ಅನಾವರಣ.

ದಕ್ಷಿಣ ಕನ್ನಡದ ಪುತ್ತೂರಿನಿಂದ ಕಾರಿನಲ್ಲಿ ಹೊರಟು, ಅಡ್ಕಸ್ಥಲ ಸೇತುವೆ ದಾಟಿ, ಗುಡ್ಡದ ರಸ್ತೆಯಲ್ಲಿ ಸಾಗುತ್ತಿದ್ದೆವು. ಆಗ ಬಲಬದಿಯಲ್ಲಿ ಆಳದ ಕಣಿವೆಯಲ್ಲಿ “ಸೀರೆ ಹೊಳೆ” ಯ ಹರಿವಿಗೆ ಅಡ್ಡವಾಗಿ ಕಾಣಿಸಿತು,“ದರ್ಬೆ ಕಟ್ಟ”. ಅದು ಅಲ್ಲಿನ 25 ಕುಟುಂಬದವರು ಸಾಮೂಹಿಕ ಶ್ರಮದಾನದಿಂದ ಹೊಳೆ ನೀರಿನ ಹರಿವು ತಡೆಯಲು ಹೊಳೆಗೆ ಅಡ್ಡವಾಗಿ ವರುಷಕ್ಕೊಮ್ಮೆ ನಿರ್ಮಿಸುವ ಕಟ್ಟ. ಅದರ ಫಲಾನುಭವಿಗಳಲ್ಲಿ ಒಬ್ಬರು ಶ್ರೀಹರಿ ದರ್ಬೆ. ನಾವು ಕಾರಿನಿಂದ ಇಳಿಯುತ್ತಲೇ ಎದುರಾದರು ಶ್ರೀಹರಿ.

ಅನಂತರ, ಅವರೊಂದಿಗೆ ನಡೆಯುತ್ತಾ ಅವರ ತೋಟ ದಾಟಿದೊಡನೆ ಎದುರಾಯಿತು 180 ಅಡಿ ಉದ್ದದ ದರ್ಬೆ ಕಟ್ಟ. ರೂ.4,500 ಬೆಲೆಯ ವಿಶಾಲವಾದ ಪ್ಲಾಸ್ಟಿಕ್ ಹಾಳೆ ಬಳಸಿ ನಿರ್ಮಿಸಿದ ಕಟ್ಟ. ಪ್ಲಾಸ್ಟಿಕ್ ಹಾಳೆಯ ಮೇಲೆ ಹಿತಾಚಿ ಯಂತ್ರದಿಂದ ಮರಳು ಅಗೆದುಅಗೆದು ಹಾಕಿ, ಮರಳಿನ ತಡೆಗೋಡೆ ಐದಡಿ ಎತ್ತರವಾದಾಗ, ಎರಡೂ ಬದಿಗಳಿಂದ ಪ್ಲಾಸ್ಟಿಕ್ ಹಾಳೆ ಎತ್ತಿ, ತಡೆಗೋಡೆಯನ್ನು ಮುಚ್ಚಿದರೆ ಆ ನೀರಿನ ಕಟ್ಟ ತಯಾರು.

ಈ ವಿಧಾನದ ಅನಾನುಕೂಲ: ಪ್ರತಿ ವರುಷ ಹೊಸ ಪ್ಲಾಸ್ಟಿಕ್ ಹಾಳೆ ಅಗತ್ಯ.
ಈ ಕಟ್ಟ ಕಟ್ಟುವುದು ಡಿಸೆಂಬರ್‍ನಲ್ಲಿ. ಕಟ್ಟ ನಿರ್ಮಿಸುವ ವೆಚ್ಚವನ್ನು ಎಲ್ಲ ಫಲಾನುಭವಿ ಕುಟುಂಬಗಳು ಹಂಚಿಕೊಳ್ಳುವುದು ವಾಡಿಕೆ. ಹಿತಾಚಿ ಯಂತ್ರದ 19 ಗಂಟೆ ಬಾಡಿಗೆ ಮತ್ತು ಪ್ಲಾಸ್ಟಿಕ್ ಹಾಳೆಯ ವೆಚ್ಚ ಸೇರಿಸಿ, ಒಟ್ಟು ಆದ ವೆಚ್ಚ ರೂ.28,000. ಇದರಲ್ಲಿ ಶ್ರೀಹರಿ ಅವರ ಪಾಲು ರೂ.3,000. ಇಷ್ಟೇ ವೆಚ್ಚದಲ್ಲಿ ಅವರ ತೋಟಕ್ಕೆ ಸಮೃದ್ಧ ನೀರು. ಕಟ್ಟದ ನೀರನ್ನು ಪಂಪ್-ಸೆಟ್ಟಿನಿಂದ ಎತ್ತುವವರು ಹದಿನಾರು ಕೃಷಿಕರು. ಇನ್ನೊಂದು ಲಾಭ 10 ಅಡಿ ಆಳದ ಕಟ್ಟದ ಕೆರೆಯಿಂದ ಸಿಗುವ ಕ್ವಿಂಟಾಲುಗಟ್ಟಲೆ ಮೀನು.

ಶ್ರೀಹರಿ ಅವರದು ಪುತ್ತೂರು ತಾಲೂಕಿನ ಬೆಟ್ಟಂಪಾಡಿ ಗ್ರಾಮದಲ್ಲಿ ಎರಡೆಕ್ರೆ ಅಡಿಕೆ ತೋಟ. ಉಪಬೆಳೆಗಳು ಕರಿಮೆಣಸು, ಕೊಕ್ಕೋ ಮತ್ತು ತೆಂಗು. ಅಡಿಕೆ ಮರಗಳಿಗೆ ಸ್ಪ್ರಿಂಕ್ಲರ್ ಜಾಲದಿಂದ ನೀರಾವರಿ. “ನಾನು ಪ್ರತಿಯೊಂದು ಅಡಿಕೆ ಮರಕ್ಕೆ ವರುಷಕ್ಕೆ ಎರಡು ಹೆಡಿಗೆ ಸೆಗಣಿ ಗೊಬ್ಬರ ಮತ್ತು ಸುಡುಮಣ್ಣು ಮಾತ್ರ ಹಾಕುತ್ತೇನೆ. ಯಾವುದೇ ರಾಸಾಯನಿಕ ಗೊಬ್ಬರ ಹಾಕೋದಿಲ್ಲ. ಹಾಗಾಗಿ ನನ್ನ ತೋಟದ ಖರ್ಚು ಬಹಳ ಕಡಿಮೆ” ಎಂದರು.

ತರಕಾರಿ ಕೃಷಿಯಲ್ಲಿ ಪಳಗಿದವರು ಶ್ರೀಹರಿ. ಬಸಳೆ ಮತ್ತು ತೊಂಡೆಯ ತಲಾ ನಾಲ್ಕು ಚಪ್ಪರಗಳಿಂದ ಉತ್ತಮ ಫಸಲು. ಜೊತೆಗೆ ಹೀರೆಕಾಯಿ, ಕುಂಬಳಕಾಯಿ, ಸೌತೆಕಾಯಿ, ಬೆಂಡೆಕಾಯಿ, ಗೆಣಸು, ಮೆಣಸು, ಕೂವೆ (ಆರಾರೂಟು) ಮತ್ತು ಪಪ್ಪಾಯಿ ಹಾಗೂ ಬಾಳೆ ಕೃಷಿ.

ಶ್ರೀಹರಿ ಹುಲುಸಾದ ಬೆಳೆ ಬೆಳೆಯಲು ಆಸರೆ ಮನೆ ಪಕ್ಕದ ಗುಡ್ಡದ ತುದಿಯಲ್ಲಿರುವ 25 ಲಕ್ಷ ಲೀಟರ್ ನೀರು ತುಂಬುವ ಟ್ಯಾಂಕ್. 120 ಅಡಿ ಉದ್ದ, 70 ಅಡಿ ಅಗಲ, 10 ಅಡಿ ಆಳದ ಟ್ಯಾಂಕಿನ ತಳಕ್ಕೆ ಪ್ಲಾಸ್ಟಿಕ್ ಹಾಳೆ ಹಾಸಲಾಗಿದೆ. ಇದು ಆರು ವರುಷ ಮುಂಚೆ ರೂ.1.75 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ಟ್ಯಾಂಕ್. ಈ ಬೃಹತ್ ಟ್ಯಾಂಕಿಗೆ ಸರಕಾರದಿಂದ ಪಡೆದ ಸಬ್ಸಿಡಿ ರೂ.48,000 ಎಂಬ ಮಾಹಿತಿ ನೀಡಿದರು ಶ್ರೀಹರಿ.

ದನಗಳನ್ನು ಸಾಕಿರುವ ಕಾರಣ ಅಡಿಕೆ ತೋಟಕ್ಕೆ ಮತ್ತು ತರಕಾರಿ ಕೃಷಿಗೆ ಬೇಕಾದಷ್ಟು ಗೊಬ್ಬರ ಹಾಗೂ ಗೋಬರ್ ಗ್ಯಾಸ್ ಸ್ಥಾವರದಿಂದ ಮನೆಬಳಕೆಗೆ ಬೇಕಷ್ಟು ಗ್ಯಾಸ್ ಸಿಗುತ್ತಿದೆಯೆಂದು ತಿಳಿಸಿದರು ಶ್ರೀಹರಿ.
ಮೂವತ್ತು ಜೇನ್ನೊಣ ಕುಟುಂಬ ಸಾಕಿರುವುದು ಅವರ ಬೆಳೆಗಳ ಉತ್ತಮ ಇಳುವರಿಗೆ ಪೂರಕ ಚಟುವಟಿಕೆ. ಜೇನುಸಾಕಣೆಯ ಪಟ್ಟುಗಳನ್ನು ಬಾಲ್ಯದಲ್ಲಿಯೇ ಶ್ರೀಹರಿ ಕಲಿತದ್ದು, ತನಗಿಂತ 24 ವರುಷ ಹಿರಿಯನಾದ ತನ್ನ ಹಿರಿಯಣ್ಣ ಮಹಾಬಲ ಭಟ್ ಅವರಿಂದ. ಅಣಬೆ ಕೃಷಿ ಅವರ ಮತ್ತೊಂದು ಹವ್ಯಾಸ.

ಇವೆಲ್ಲ ಕೃಷಿ ಚಟುವಟಿಕೆಗಳ ನಡುವೆ ಶ್ರೀಹರಿಯವರ ಮಗದೊಂದು ಹವ್ಯಾಸ ಬೋನ್‍ಸಾಯ್ ಗಿಡಗಳನ್ನು ಪೋಷಣೆ. ಅವರು ಬೆಳೆಸಿದ ಆಲ, ಅಶ್ವತ್ಥ ಇತ್ಯಾದಿ 50 ಬೊನ್‍ಸಾಯ್ ಗಿಡಗಳನ್ನು ನೋಡುವುದೇ ಖುಷಿ. “ಈ ಬೋನ್‍ಸಾಯ್ ಗಿಡಗಳು ನನ್ನ ಮಕ್ಕಳಿದ್ದಂತೆ” ಎಂದರು ಶ್ರೀಹರಿ. ಯಾಕೆಂದರೆ, ಮಕ್ಕಳನ್ನು ಸಲಹುವಂತೆ ಜತನದಿಂದ ಬೆಳೆಸಿದರೆ ಮಾತ್ರ ಅವು ಉಳಿದಾವು. ಅವರ ಇನ್ನೊಂದು ಹವ್ಯಾಸ ಪ್ಲಾಸ್ಟಿಕಿನ ಚಪ್ಪಟೆ ಪಟ್ಟಿಗಳಿಂದ ಕಿರುಬುಟ್ಟಿ, ಪೆನ್-ಹೋಲ್ಡರ್ ಇತ್ಯಾದಿ ರಚಿಸುವುದು.

ಮಳೆಗಾಲದಲ್ಲಿ ಎತ್ತರದ ಗುಡ್ಡದಿಂದ ರಭಸದಿಂದ ಇಳಿದು ಬರುವ ನೀರಿನಿಂದ ಜನರೇಟರ್ ಮೂಲಕ ಮನೆಬಳಕೆಗಾಗಿ ವಿದ್ಯುತ್ ಉತ್ಪಾದಿಸುತ್ತಾರೆ ಶ್ರೀಹರಿ. ಆ ಜನರೇಟರಿಗೆ ತೊರೆಯ ನೀರನ್ನು ಮೂರು ಇಂಚು ಗಾತ್ರದಲ್ಲಿ ಹರಿಸಿದರೆ ನಿರಂತರವಾಗಿ 230 ವೋಲ್ಟಿನ ವಿದ್ಯುತ್ ಉತ್ಪಾದನೆ. ತೋಟದಿಂದ ಹಣ್ಣಡಿಕೆ ಸಾಗಿಸಲಿಕ್ಕಾಗಿ ಅವರು ಬಳಸುವುದು  ಮಾರ್ಪಡಿಸಿದ ಆಟೋರಿಕ್ಷಾ.

ತಮ್ಮ ತಂದೆಯ ಆರು ಮಕ್ಕಳಲ್ಲಿ ಕಿರಿಯವರಾದ ಶ್ರೀಹರಿ ಬಾಲ್ಯದಿಂದಲೇ ಕೃಷಿಯಲ್ಲಿ ಆಸಕ್ತಿ ಬೆಳೆಸಿಕೊಂಡವರು. “ಸಮಾಜಕ್ಕೆ ಉಪಕಾರಿಯಾಗಿ ಬದುಕು ಎಂದಿದ್ದರು ನನ್ನ ತಂದೆ. ಊರಿನವರೊಂದಿಗೆ ಸೇರಿ ನೀರಿನ ಕಟ್ಟ ಕಟ್ಟುವಂತಹ ಕೆಲಸಗಳಿಗೆ ಆ ಮಾತೇ ಪ್ರೇರಣೆ” ಎನ್ನುವ ಶ್ರೀಹರಿ ಈಗ ಎಲ್ಲ ಕೃಷಿಕರಿಗೂ ಪ್ರೇರಣೆ. ಕೃಷಿ ಮತ್ತು ಹಲವು ಹವ್ಯಾಸಗಳಲ್ಲಿ ಸದಾ ತೊಡಗಿಸಿಕೊಂಡಿರುವ ಶ್ರೀಹರಿ ಅವರ ಎಲ್ಲ ಕೆಲಸಗಳಿಗೂ ಪತ್ನಿ ಅನುಪಮ ಅವರ ಒತ್ತಾಸೆ.

“ಕೃಷಿಯಲ್ಲಿ ಏನಿದೆ? ಬಿಸಿಲು-ಮಳೆಯಲ್ಲಿ ಒದ್ದಾಟ” ಎನ್ನುವವರಿಗೆ ಉತ್ತರವೆಂಬಂತೆ ಹತ್ತು ಹಲವು ಹವ್ಯಾಸಗಳೊಂದಿಗೆ ಕೃಷಿಯಲ್ಲಿ ಖುಷಿಯಿಂದ ಬದುಕುತ್ತಿದ್ದಾರೆ ಶ್ರೀಹರಿ ದಂಪತಿ.

spot_img

ಸಂಬಂಧಿತ ಲೇಖನಗಳು

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group