ದೇಶದ ಅಭಿವೃದ್ಧಿಯಲ್ಲಿ ಕೃಷಿ ಪಾಲು ಮಹತ್ವದ್ದು. ರಾಜ್ಯ, ಕೇಂದ್ರ ಸರಕಾರಗಳು ಕೃಷಿಕರಿಗಾಗಿ ಹಲವಾರು ಯೋಜನೆಗಳನ್ನು ರೂಪಿಸಿವೆ. ಪ್ರೋತ್ಸಾಹ ಧನ, ಸಹಾಯಧನಗಳನ್ನು ನೀಡುತ್ತಲೇ ಬಂದಿವೆ. ಆದರೆ ರ‍್ಯತರ ಆದಾಯ ಇಮ್ಮಡಿಗೊಳಿಸುವ ಆಶಯಕ್ಕೆ ಯಶಸ್ಸು ಸಿಕ್ಕಿದಂತೆ ಕಾಣುತ್ತಿಲ್ಲ. ಸರಕಾರದ ಈಗಿನ ಯೋಜನೆಗಳು, ನೆರವು ಬಿತ್ತಿ ಬೆಳೆಯುವುದಕ್ಕೆ ಸಹಕಾರಿಯೇ ವಿನಹ ಆರ್ಥಿಕ ಅಭಿವೃದ್ಧಿಗೆ ಅವು ಪೂರಕವಾಗಿ ಪರಿಣಮಿಸಿಲ್ಲ. ರೈತ ಬೆಳೆದ ಕೃಷಿ ಉತ್ಪನ್ನಗಳು ಮಾರುಕಟ್ಟೆಗೆ ಬರುವ ಹೊತ್ತಿಗೆ ಬೆಲೆಗಳು ಕುಸಿಯುತ್ತವೆ.
ತಳ ಹಿಡಿದ ಬೆಲೆಗಳು ಮತ್ತೆ ಮೇಲೇರುವುದು ರೈತನಲ್ಲಿ ಉತ್ಪನ್ನಗಳು ಬರಿದಾದ ನಂತರವೇ. ವೈಜ್ಞಾನಿಕವಾದ ಬೆಲೆ ಕೃಷಿ ಉತ್ಪನ್ನಗಳಿಗೆ ಇಲ್ಲದಿರುವುದು, ಅಸಂಘಟಿತ ವಲಯದಲ್ಲಿರುವ ಕೃಷಿಕ ತನ್ನ ಕೃಷಿ ಉತ್ಪನ್ನಗಳಿಗೆ ಬೆಲೆ ಕಟ್ಟುವ ಸಾಮರ್ಥ್ಯ ಹೊಂದಿಲ್ಲದಿರುವುದು, ಮಾರುಕಟ್ಟೆಯನ್ನು ನಿಯಂತ್ರಿಸುವ ಶಕ್ತಿಯಿಲ್ಲದಿರುವುದು, ರೈತರನ್ನು ಹೆಚ್ಚು ಅಸಹಾಯಕರನ್ನಾಗಿ ಮಾಡುತ್ತಲೇ ಹೋಗಿದೆ. ಇಂತಹ ಸಂದರ್ಭದಲ್ಲಿ ರೈತರ ಆದಾಯವನ್ನು ಹೆಚ್ಚಿಸುವುದು ಹೇಗೆ ಎಂಬ ಪ್ರಶ್ನೆ ಕಾಡುತ್ತದೆ. ಇಂತಹ ಸಂದರ್ಭದಲ್ಲಿ ಉತ್ಪನ್ನಗಳ ಸುದೀರ್ಘ ಬಾಳಿಕೆಯತ್ತ ಗಮನ, ಮೌಲ್ಯವರ್ಧನೆ, ಸಂಸ್ಕರಿತ ಆಹಾರ ಉತ್ಪನ್ನಗಳ ತಯಾರಿ ಮೊದಲಾದುವುಗಳು ರೈತರಿಗೆ ಅನುಕೂಲವಾಗಬಲ್ಲವು.
ರೈತ ಆಹಾರೋತ್ಪಾದನೆಯಲ್ಲಿ ರಾಷ್ಟೀಯ ಶಕ್ತಿಯಾದರೂ ಆರ್ಥಿಕವಾಗಿ ಬಲಹೀನನಾಗಿರುವುದು ನಾವು ಕಾಣುತ್ತಿರುವ ಸತ್ಯ. ಕೃಷಿ ಉತ್ಪನ್ನಗಳ ಬೆಲೆ ಹೆಚ್ಚಳಗೊಳ್ಳಬೇಕಾದರೆ ಕೃಷಿ ಉತ್ಪನ್ನಗಳು ಮಾರುಕಟ್ಟೆಗೆ ಒಮ್ಮಿಂದೊಮ್ಮೆಗೆ ಹರಿದು ಬರುವುದನ್ನು ತಡೆಯುವುದು ಹೇಗೆ ಎಂದು ಯೋಚಿಸಬೇಕು. ಈ ನಿಟ್ಟಿನಲ್ಲಿ ಶೀತಲೀಕೃತ ಸಂಗ್ರಹಾಗಾರಗಳು, ಗೋದಾಮುಗಳು ಹಳ್ಳಿಗಳಲ್ಲಿರುವುದು ಅವಶ್ಯ. ಬಹಳಷ್ಟು ರೈತರಲ್ಲಿ ಕೃಷಿ ಉತ್ಪನ್ನಗಳನ್ನು ಶೇಖರಿಸಿ ಇಡುವಂತಹ ವ್ಯವಸ್ಥೆಗಳಿಲ್ಲ. ತರಕಾರಿ ಹಣ್ಣು ಹಂಪಲುಗಳನ್ನು ಮೌಲ್ಯ ವರ್ಧನೆಗೊಳಿಸುವ ತಂತ್ರಜ್ಞಾನಗಳಿಲ್ಲ. ಆಹಾರ ಸಂಸ್ಕರಣ ಘಟಕಗಳಿಲ್ಲ. ಒಂದು ಜಿಲ್ಲೆ ಒಂದು ಉತ್ಪನ್ನ ಪರಿಕಲ್ಪನೆ ಇನ್ನೂ ವಿಕೇಂದ್ರೀಕರಣಗೊAಡು ಹಳ್ಳಿಗಳನ್ನು ಕೇಂದ್ರೀಕರಿಸಬೇಕಾಗಿದೆ. ಆಯಾ ಹಳ್ಳಿಗಳಲ್ಲಿರುವ ಉತ್ಪನ್ನಗಳ ಆಧಾರಿಸಿ ಗೃಹೋದ್ಯಮ ರೂಪುರೇಷೆಗಳನ್ನು ಸರಕಾರ ಸಿದ್ಧಪಡಿಸಿಕೊಳ್ಳಬೇಕು. ಸಹಕಾರಿ ಸಂಘಗಳಡಿಯಲ್ಲಿ ಅಥವಾ ರೈತ ಉತ್ಪಾದಕ ಸಂಘ, ರೈತರ ಗುಂಪುಗಳ ರಚನೆಗಳ ಮೂಲಕ ಸಂಸ್ಕರಣ ಘಟಕಗಳನ್ನು ತೆರೆಯಲು ಸರಕಾರ ಮುಂದಾಗಬೇಕು.
ಆಹಾರೋದ್ಯಮ ಕ್ಷೇತ್ರದಲ್ಲಿ ವಿಫಲ ಅವಕಾಶಗಳು ಇರುವುದರಿಂದ ಗ್ರಾಮೀಣ ಉದ್ಯೋಗಕ್ಕೆ ಒತ್ತು ನೀಡಿ ಕೃಷಿ ಉತ್ಪನ್ನ ಆಧಾರಿತ ಸಂಸ್ಕರಣ ಘಟಕಗಳು ಆರಂಭವಾಗಬೇಕು. ಗೇರು ಕೃಷಿಗೆ ಸರಕಾರದ ಪ್ರೋತ್ಸಾಹವಿದೆ. ರೈತರ ಕೈಗೆ ಆದಾಯ ಹೆಚ್ಚು ತಂದುಕೊಡದಿದ್ದರೂ ಗೇರು ಬೀಜ ಉದ್ಯಮ ಬಹಳಷ್ಟು ಗ್ರಾಮೀಣ ಜನರ ಕೈಗೆ ಉದ್ಯೋಗಾವಕಾಶವನ್ನು ಕಲ್ಪಿಸಿದೆ. ಗೇರು ಕೃಷಿಯಲ್ಲಿ ರೈತರಿಗೆ ಆದಾಯ ನೀಡುತ್ತಿರುವುದು ಗೇರು ಬೀಜ ಮಾತ್ರ. ಆದರ ಹಣ್ಣು ಹಾಳಾಗಿಯೇ ಹೋಗುತ್ತದೆ. ಈ ಹಣ್ಣನ್ನು ಬಳಸಿಕೊಂಡು ಉತ್ತಮವಾದ ಪೇಯ ತಯಾರಿಸಬಹುದು. ಕಲಬೆರಕೆ ಇಲ್ಲದ ಮದ್ಯ ತಯಾರಿಕೆಗೆ ಕಚ್ಛಾ ವಸ್ತುವಾಗಿಸಬಹುದು. ಅದಲ್ಲದೆ ಪಶು ಆಹಾರಗಳನ್ನು ತಯಾರಿಸಬಹುದು. ತನ್ನಗಟ್ಟಲೆ ಹಣ್ಣುಗಳು ವ್ಯರ್ಥವಾಗುವುದನ್ನು ತಡೆದು ಗೇರು ಹಣ್ಣು ಕೃಷಿಕರಿಗೆ ಲಾಭದಾಯಕವಾಗುವಂತೆ ಮಾಡಬಹುದು.
sಕರಾವಳಿ, ಮಲೆನಾಡು ಭಾಗಗಳಲ್ಲಿ ಬಿದ್ದು ಹಾಳಾಗುವ ಹಲಸಿನ ಕಾಯಿ, ಹಣು,್ಣ ಬೀಜವನ್ನು ಬಗೆಬಗೆಯ ಖಾದ್ಯಗಳಿಗೆ ಬಳಸಿಕೊಳ್ಳಬಹುದು. ಇದರಂತೆ ಮಾವು, ದ್ರಾಕ್ಷಿ, ಇತರ ಹಣ್ಣುಗಳನ್ನು, ತರಕಾರಿಗಳನ್ನು ಸಂಸ್ಕರಣೆ ಮಾಡಬಹುದು. ತೆಂಗು ಮರದಿಂದ ಕಲ್ಪರಸ ಉತ್ಪಾದನೆ, ಕೊಬ್ಬರಿ ಎಣ್ಣೆ ತಯಾರಿ, ಮೌಲ್ಯವರ್ಧನೆಗೊಳಿಸುವ ಕೆಲಸಗಳು ಹಳ್ಳಿಮಟ್ಟದಲ್ಲಿ ನಡೆಸಬಹುದು. ನಗರಗಳಲ್ಲಿ ಮಾರುಕಟ್ಟೆ ಕಂಡುಕೊಳ್ಳಲು ಸರಕಾರದ ನೆರವು ಸಿಗಬೇಕು. ಹೊಸ ಆಲೋಚನೆಗಳು, ಚಿಂತನೆ, ಪ್ರಯೋಗಶೀಲತೆಯಿಂದ ಕೃಷಿ ಆಧಾರಿತ ಗ್ರಾಮೀಣ ಉದ್ಯೋಗಗಳು ಸೃಷ್ಟಿಯಾಗುವುದಲ್ಲದೆ ರೈತಾಪಿ ವರ್ಗದ ಆದಾಯವನ್ನು ಹೆಚ್ಚಿಸಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಸರಕಾರಗಳು ಗಮನ ಹರಿಸಲಿ
-ರಾಧಾಕೃಷ್ಣ ತೊಡಿಕಾನ