spot_img
Tuesday, September 17, 2024
spot_imgspot_img
spot_img
spot_img

ಮನೆಯಲ್ಲಿಯೇ ತಯಾರಿಸಿ ಫಲವತ್ತಾದ ಜೀವಾಮೃತ :ಹೀಗಿದೆ ಸುಲಭ ವಿಧಾನ

ಬೊರಯ್ಯಾ, ಬಿ., ವಿಘ್ನೇಶ, ಮಹಾಂತೇಶ, ಬಿ. ಎನ್. ಮತ್ತು ಕುಶಾಲ್
ಬೇಸಾಯಶಾಸ್ತ್ರ ವಿಭಾಗ, ಕೃಷಿ ವಿಶ್ವವಿದ್ಯಾಲಯ ಬೆಂಗಳೂರು

ಸುಮಾರು ವರ್ಷಗಳ ಹಿಂದೆಯೇ ನಮ್ಮ ಪೂರ್ವಿಕರು ಪ್ರಯತ್ನಿಸಿ, ದಾಖಲಿಸಿದ ‘ಕುನಪಜಲ’ ಎಂಬ ತಂತ್ರಜ್ಞಾನವನ್ನು ಮಹಾರಾಷ್ಟçದ ಅಮರಾವತಿಯ ಶ್ರೀ ವಾಲ್ಮೀಕಿ ಅಯ್ಯಂಗಾರ ಎಂಬುವರು ಪರಿಷ್ಕರಿಸಿ ಸಸ್ಯಗವ್ಯ ಎಂಬ ದ್ರವ ರೂಪದ ಗೊಬ್ಬರದ ಅವಿಷ್ಕಾರ ಮಾಡಿದರು, ಆ ಸಸ್ಯಗವ್ಯವೇ ಇಂದು ಜೀವಾಮೃತ ಎನ್ನುವ ರೂಪದಲ್ಲಿ ಸಾವಯವ ಕೃಷಿಕರಿಂದ ಅಳವಡಿಸಲ್ಪಟ್ಟಿದೆ. ಸಾವಯವ ಕೃಷಿ ಮಾಡಿದ ಅನೇಕ ರೈತರಿಗೆ ಸಗಣಿ, ಗಂಜಲ, ಬೆಲ್ಲ ಹಾಗೂ ಹಿಟ್ಟುಗಳಿಂದ ತಯಾರಾದ ಜೀವಾಮೃತದಿಂದ ಮಣ್ಣಿನ ಫಲವತ್ತತೆ ಹೆಚ್ಚಾಗುವುದು ಸಾಮಾನ್ಯವಾಗಿ ಕಂಟುಬಂದಿದೆ. ಜೀವಾಮೃತದ ತಯಾರಿಸುವ ತಂತ್ರಜ್ಞಾನವನ್ನು ಸಾವಯವ ಕೃಷಿಕರು ಯಶಸ್ವಿಯಾಗಿ ಅನುಸರಿಸಿ, ಭೂ -ಫಲವತ್ತತೆಯನ್ನು ಹೆಚ್ಚಿಸುವ ನೈಸರ್ಗಿಕ ವಿಧಾನವನ್ನು ಜಗತ್ತಿಗೆ ಪರಿಚಯಿಸಿದ್ದಾರೆ.

ಸಾವಯವ ಕೃಷಿಯಲ್ಲಿ ಜೀವಾಮೃತವೆಂಬುದು ಪೋಷಕಾಂಶ ನೀಡುವ ದ್ರವ ರೂಪದ ಗೊಬ್ಬರವಲ್ಲ. ಹೀಗಾಗಿ ಅದನ್ನು ರಸಗೊಬ್ಬರಕ್ಕೋ, ಕೊಟ್ಟಿಗೆ ಗೊಬ್ಬರಕ್ಕೋ ಹೋಲಿಸುವುದು ಸಮಂಜಸವಲ್ಲ, ವಾಸ್ತವವಾಗಿ ಜೀವಾಮೃತ ಎಂಬುದು ಪ್ರಯೋಜನಕಾರಿ ಸೂಕ್ಷ್ಮಾಣು ಜೀವಿಗಳ ಸಂಪದ್ಭರಿತ ದ್ರವ ರೂಪದ ಸಾರ. ಇದನ್ನು ಪದೇ ಪದೇ ಜಮೀನಿಗೆ ಕೊಟ್ಟಾಗ ಮಣ್ಣಿನ ಜೈವಿಕಕ್ರಿಯೆ ಹೆಚ್ಚಾಗಿ ಸಾವಯವ ಪದಾರ್ಥಗಳು ಬೇಗ ಕೊಳೆತು, ಬೆಳೆಗಳಿಗೆ ಬೇಕಾಗುವ ಪೋಷಕಾಂಶಗಳನ್ನು ಕೊಡುವವು. ಇದರಿಂದ ಕೃಷಿ ಜಮೀನು ನೈಸರ್ಗಿಕವಾಗಿ ಫಲವತ್ತಾಗುವುದು ಇದರ ಜೊತೆಗೆ ಆ ದ್ರವದಲ್ಲಿ ಇರುವ ಅಲ್ಪ ಪ್ರಮಾಣದ ಸಾರಜನಕ, ರಂಜಕ, ಪೊಟ್ಯಾಶ್ ಹಾಗೂ ಲಘು ಪೋಷಕಾಂಶಗಳು ಬೆಳೆಗಳಿಗೆ ಸುಲಭವಾಗಿ ಲಭ್ಯವಾಗುವುದರಿಂದ ಬೆಳೆಯ ಬೆಳವಣಿಗೆ ಹೆಚ್ಚಿಸುವುದರ ಜೊತೆಗೆ ಅದರ ಇಳುವರಿ ಕೂಡ ಹೆಚ್ಚಿಸುತ್ತದೆ. ಬೆಳೆಯ ಇಳುವರಿ ಹೆಚ್ಚಳಕ್ಕಿಂತ ನಿರಂತರವಾಗಿ ಉತ್ಪಾದನೆಗೆ ಸಹಾಯವಾಗುವಂತೆ ಭೂಮಿಯ ಫಲವತ್ತತೆ ಹೆಚ್ಚಿಸುವುದೇ ಜೀವಾಮೃತದ ಉದ್ದೇಶ.

ಜೀವಾಮೃತದ ವೈಶಿಷ್ಟ್ಯಗಳು
• ಕೃಷಿ ಮತ್ತು ತೋಟಗಾರಿಕೆ ಎಲ್ಲಾ ಬೆಳೆಗಳಲ್ಲಿ ಉಪಯೋಗಿಸಬಹುದು.
• ಇದನ್ನು ರೈತರೇ ಅವರ ಅಗತ್ಯೆಗೆ ತಕ್ಕಂತೆ ತಯಾರು ಮಾಡಿಕೊಳ್ಳಬಹುದು.
• ಜಾನುವಾರಿರುವ ಎಲ್ಲ ರೈತರ ಮನೆಯಲ್ಲಿ ಸುಲಭವಾಗಿ ಸಿಗುವ ಸಗಣಿ, ಗಂಜಲ ಪುಡಿಯಾದ ಬೆಲ್ಲ ಹಾಗೂ ದ್ವಿದಳ ಧಾನ್ಯದ ಹಿಟ್ಟು ಇವೇ ಜಿವಾಮೃತ ತಯಾರಿಸಲು ಬೇಕಾಗುವ ವಸ್ತುಗಳು.
• ಇದು ಬೆಳೆ ವರ್ಧನೆ ಜೊತೆಗೆ ಅದರ ಇಳುವರಿಯನ್ನು ಹೆಚ್ಚಿಸುತ್ತದೆ.
• ಇದು ಕೀಟ ಮತ್ತು ರೋಗಗಳ ಪ್ರತಿರೋಧವನ್ನು ನೀಡುತ್ತದೆ.
• ಮಣ್ಣಿನ ಜೈವಿಕ ಚಟುವಟಿಕೆಯ ಜತೆಗೆ ಸಾವಯವ ಇಂಗಾಲವನ್ನು ಉತ್ತೇಜಿಸುತ್ತದೆ.
ಜೀವಾಮೃತ ತಯಾರಿಸುವ ವಿಧಾನ
• 2೦೦ ಲೀ ನೀರಿನಲ್ಲಿ (ಪ್ಲಾಸ್ಟಿಕ್ ಡ್ರಂ ಅಥವಾ ಸಿಮೆಂಟ್ ತೊಟ್ಟಿಗಳು) 1೦ ಕೆ.ಜಿ ಹಸಿ ಸಗಣಿ, 1೦ ಲೀ ಗಂಜಲ, 2 ಕೆ.ಜಿ ಪುಡಿಯಾದ ಬೆಲ್ಲ ಹಾಗೂ 2 ಕೆ. ಜಿ. ದ್ವಿದಳಧಾನ್ಯದ ಹಿಟ್ಟನ್ನು ಹಾಕಿ ಕಲಸಿ, ಪ್ರತಿದಿನ 2 ಬಾರಿ ತಿರುವಿ ಮುಚ್ಚಿಟ್ಟು 2 ರಿಂದ 7 ದಿನಗಳ ಒಳಗೆ ಉಪಯೋಗಿಸುವುದು ಸೂಕ್ತ.
• ನೆರಳಿನಲ್ಲಿ ತಯಾರಿಸುವುದು ಸರಿಯಾದ ಕ್ರಮ. ವರ್ಷದ ಎಲ್ಲಾ ಕಾಲದಲ್ಲೂ ಮನೆಯಲ್ಲಿ, ಹಿತ್ತಲಲ್ಲಿ, ಮರದ ಅಡಿಯಲ್ಲಿ ತಯಾರಿಸಬಹುದು.
• ಕಡಿಮೆ ಗುಣಮಟ್ಟದ, ಪುಡಿಯಾದ ತ್ಯಾಜ್ಯ ಬೆಲ್ಲ/ದ್ವಿದಳ ಧಾನ್ಯಗಳನ್ನು ಕೂಡ ಉಪಯೋಗಿಸಬಹುದು. (ದ್ವಿದಳ ಧಾನ್ಯವು ಹಿಟ್ಟಾಗಿರಬೇಕು).
• ಪರಿಕರಗಳ ಬೆಲೆಗನುಗುಣವಾಗಿ ಪ್ರತಿ ಲೀ. ಗೆ 50-65 ಪೈಸೆ ವೆಚ್ಚ ಆಗಬಹುದು

ಜೀವಾಮೃತವನ್ನು ಉಪಯೋಗಿಸುವ ವಿಧಾನ
• ನೇರವಾಗಿ ಭೂಮಿಗೆ ಹಾಕಬಹುದು (ಮರಗಳ ಬುಡದ ಸುತ್ತ/ಇಡೀ ಭೂಮಿಯ ಮೇಲೆ ಎರಚುವುದು) ಮತ್ತು ಯಾವ ಬೆಳೆಗಾದರೂ ಜೀವಾಮೃತವನ್ನು ಉಪಯೋಗಿಸಬಹುದು.
• ಸೋಸಿದ ನಂತರ ಎಲೆಗಳಿಗೆ ಸಿಂಪರಣೆ ಮಾಡುವುದು (ನೀರು ಬೆರೆಸುವುದು ಅವಶ್ಯವಿಲ್ಲ)
• ಪ್ರತಿ ಎಕರೆಗೆ 5೦೦ ಲೀ ಜೀವಾಮೃತ ಬೇಕಾಗಿತ್ತುದೆ. ಅದನ್ನು ಹರಿಯುವ ನೀರಿನ ಮೂಲಕ (ಕಾಲುವೆ ಮುಖಾಂತರ / ಹನಿ ನಿರಾವರಿ ಮುಖಾಂತರ) ಬೆಳೆಗಳಿಗೆ ಕೊಡಬಹುದು.

ಜೀವಾಮೃತ ತಯಾರಿಕೆಯಲ್ಲಿನ ಗ್ರಹಿಕೆಗಳು:

ತಯಾರಿಸುವಾಗ ಹಿಡಿ ಫಲವತ್ತಾದ ಮಣ್ಣು ಹಾಕಬೇಕು. ಇದನ್ನು ಹಾಕದೆ ತಯಾರಿಸಬಹುದು, ದೇಶೀ ಹಸುವಿನ ಗಂಜಲ/ಸಗಣಿಯನ್ನೇ ಜೀವಾಮೃತಕ್ಕೆ ಉಪಯೋಗಿಸಬೇಕು ದೇಶೀ ಅಥವಾ ಮಿಶ್ರ ತಳಿ ಹಸು ಅಥವಾ ಎಮ್ಮೆ ಯಾವ ಜಾನುವಾರಿನ ಗಂಜಲ/ಸಗಣಿ ಬಳಸಬಹುದು, ಮರದ ಕೋಲಿನಿಂದಲೇ, ಎಡದಿಂದ ಬಲಕ್ಕೆ ತಿರುಗಿಸಬೇಕು ಯಾವ ಸಾಧನವಾದರೂ, ಹೇಗಾದರೂ ಉಪಯೋಗಿಸಬಹುದು, ಗಾಳಿಯಾಡಲು ಅವಕಾಶ ಮಾಡುವುದು ಮುಖ್ಯ

 

spot_img

ಸಂಬಂಧಿತ ಲೇಖನಗಳು

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group