spot_img
Thursday, April 3, 2025
spot_imgspot_img

ಬದುಕಿನ ಚಕ್ರ ತಿರುಗಿಸಿದ ಮಣ್ಣಿನ ಪಾತ್ರೆಗಳು: ಕುಂಬಾರಿಕೆ ಮೂಲಕ ಇವರು ಪರಂಪರೆ ಉಳಿಸುತ್ತಿದ್ದಾರೆ!

ರಾಧಾಕೃಷ್ಣ ತೊಡಿಕಾನ

ತಿರುಗುವ ಚಕ್ರದಲ್ಲಿರುವ ಮಣ್ಣ ಮುದ್ದೆಗೆ ಕೈಯ ಸ್ಪರ್ಶದಿಂದ ಆಕಾರ ಕೊಡುತ್ತಾ ಕಟೆದು ನಿಲ್ಲಿಸುವ ಪಾತ್ರೆ ಪಗಡಿಗಳ ಸುಂದರ ಲೋಕದ ಅನಾವರಣ. “ಮಣ್ಣಿಂದ ಕಾಯ ಮಣ್ಣಿಂದ ಸಕಲ ವಸ್ತುಗಳೆಲ್ಲ” ಎಂಬಂತೆ ಮಣ್ಣಿಂದ ವಿವಿಧ ಆಕಾರ ಪಡೆದು ಅಡುಗೆ ಮನೆಯನ್ನು ಅಲಂಕರಿಸುತ್ತಿದ್ದ ಪಾತ್ರೆಗಳು ಒಂದು ಕಾಲದ ಆವಿಷ್ಕಾರವೇ. ಸಂಸ್ಕೃತಿ, ಪರಂಪರೆಯ ಅವಿಭಾಜ್ಯ ಅಂಗವಾಗಿರುವ ಹಾಗೂ ಪರಿಸರ ಸಹ್ಯ, ಆರೋಗ್ಯಕ್ಕೆ ಪೂರಕವಾದ ಮಣ್ಣಿನ ಪಾತ್ರಗಳು ಅಡುಗೆ ಮನೆಯಿಂದ ದೂರವಾಗಿ ಕೆಲಕಾಲ ಕಳೆದಿದೆ. ಅದರ ಸ್ಥಾನದಲ್ಲಿ ದೀರ್ಘ ಬಾಳಿಕೆಯ ಅಲ್ಯೂಮಿನಿಯಂ, ಸ್ಟೀಲ್ ಪಾತ್ರೆಗಳು ಸದ್ದು ಮಾಡಲಾರಂಬಿಸಿದವು. ಆದರೂ ಮಣ್ಣಿನ ಪಾತ್ರೆಗಳು ಅಸ್ತಿತ್ವವನ್ನು ಕಳೆದುಕೊಳ್ಳದೆ ಉಳಿದದ್ದು ಮಣ್ಣಿನ ಮಹಿಮೆ

ಆಧುನಿಕತೆಗೆ ಹೆಚ್ಚು ಹೆಚ್ಚು ತೆರೆದು ಕೊಂಡಂತೆ ಮಣ್ಣ ಪಾತ್ರೆಗಳು ಮೂಲೆ ಸೇರಿದವು. ಕುಂಬಾರಿಕೆ ವೃತ್ತಿಯನ್ನೇ ನಂಬಿಕೊಂಡು ಬದುಕನ್ನು ಕಟ್ಟಿಕೊಂಡವರ ಬದುಕು ದುಸ್ತರವಾಯಿತು. ಮುಂದೇನು ಎಂಬ ಆತಂಕ ಎದುರಾದರೂ ಅದರ ವೈಶಿಷ್ಟ್ಯತೆ ಕಡಿಮೆಯಾಗಿಲ್ಲ. ಮರು ವಿನ್ಯಾಸದೊಂದಿಗೆ ಮತ್ತೆ ಮಣ್ಣಿನ ಪಾತ್ರೆಗಳು ಮನ – ಮನೆ ಸೆಳೆಯುತ್ತದೆ.

   

ಈಗಲೂ ಕುಂಬಾರಿಕೆಯನ್ನು ನೆಚ್ಚಿಕೊಂಡು ಅದರಿಂದಲೇ ಜೀವನ ನಿರ್ವಹಣೆ ಮಾಡುವ ಕುಟುಂಬಗಳು ಹಲವಿವೆ. ಆಲೂರಿನ ರಘುರಾಮ ಕುಲಾಲ್ ಆ ಪರಂಪರೆಯನ್ನು ಉಳಿಸಿಕೊಂಡು ತನ್ನ ಕಲೆಗೆ ಹೊಸ ಮೆರುಗನ್ನು ನೀಡಿದ್ದಾರೆ. ಮಣ್ಣಿನಿಂದ ಮಾಡಿದ ದೇವರ ಕಲಾಕೃತಿಗಳು. ಸುತ್ತು ದೀಪಗಳು, ಕಾಣಿಕೆಹುಂಡಿ, ದೂಪದ ಪಾತ್ರೆ, ಚಾ, ತಂಪು ಪಾನೀಯಗಳ ಅಂದದ ಕಪ್‌ಗಳು, ಮೊಸರು ಕುಡಿಕೆ, ಹೂಕುಂಡ, ಮೇಜಿನ ಮೇಲೆ ಇರಿಸಬಹುದಾದ ಅಲಂಕಾರಿಕ ಕುಂಡಗಳು, ಹೀಗೆ 2೦೦ಕ್ಕೂ ಹೆಚ್ಚು ವಿವಿಧ ಕಲಾಕೃತಿಗಳನ್ನು ತಯಾರಿಸುತ್ತಾರೆ. ಬಂಗಾರ, ಬೆಳ್ಳಿ, ವಜ್ರದ ಆಭರಣಗಳು ಸಾಮಾನ್ಯ. ಆದರೆ ಇವರಲ್ಲಿ ಸರಗಳು… ಕಿವಿಯ ಓಲೆಗಳು ಮಣ್ಣಿನಿಂದಲೇ ಅರಳುತ್ತವೆ. ಆಕರ್ಷಣೆಯ ಕೇಂದ್ರ ಬಿಂದುಗಳಾಗುತ್ತವೆ.

ಕುಂದಾಪುರ ತಾಲೂಕಿನ ಆಲೂರಿನ ಹಳ್ಳಿಯಲ್ಲಿ ಮಣ್ಣಿಗೊಂದು ರೂಪ ಕೊಡುವ ಕಾಯಕ ಕೈಗೊಂಡಿರುವ ರಘುರಾಮ ಕುಲಾಲ್ ಪ್ರಾಥಮಿಕ ಶಾಲೆ ವಿದ್ಯಾಭ್ಯಾಸ ಮುಗಿಸಿದ ನಂತರ ಬೆಳಗಾವಿಯಲ್ಲಿ ಹೋಟೆಲ್ ಕೆಲಸಕ್ಕೆ ಸೇರಿದ್ದರು. ಐದು ವರ್ಷ ಹೋಟೆಲಿನಲ್ಲಿದ್ದರು. ಮನೆಯ ಜವಾಬ್ಧಾರಿ ಅವರ ಹೆಗಲಿಗೆ ಬಿದ್ದಾಗ ಮರಳಿ ಊರಿಗೆ ಬಂದು ಪಾರಂಪರಿಕ ವೃತ್ತಿ ಕೈಗೊಂಡರು. ಅನುಭವವೇನು ಹೆಚ್ಚಿಲ್ಲದಿದ್ದರೂ ಮಣ್ಣಿನ ಪಾತ್ರೆಗಳ ತಯಾರಿಗೆ ಕೊರತೆಯಾಗಲಿಲ್ಲ. ಆದರೂ ಇನ್ನಷ್ಟು ಕರಕುಶಲತೆ ಹೆಚ್ಚಿಸಿಕೊಳ್ಳುವುದಕ್ಕಾಗಿ ಕುಂದಾಪುರದ “ನಮ್ಮ ಭೂಮಿ” ಸಂಸ್ಥೆಯಲ್ಲಿ ಮಣ್ಣಿನ ಕಲಾತ್ಮಕ ವಸ್ತುಗಳ ತರಬೇತಿ ಪಡೆದುಕೊಂಡರು. ಹಳೆಯ ಸಂಪ್ರದಾಯಿಕ ಪಾತ್ರೆಗಳಲ್ಲದೆ ಹೊಸ ಹೊಸ ವಿನ್ಯಾಸದ ಉತ್ಪನ್ನಗಳನ್ನು ತಯಾರಿಸಲು ಆರಂಭಿಸಿದರು. ಆದರೆ ಅವರಲ್ಲಿದ್ದದು ಹಳೆಯ ಸಾಂಪ್ರದಾಯಿಕ ಪದ್ಧತಿ. ಆಸಕ್ತಿ ಇದ್ದರೂ ಕಲಾತ್ಮಕ ವಸ್ತುಗಳ ತಯಾರಿಗೆ ಮೂಲ ಸೌಕರ್ಯಗಳು ಕಡಿಮೆಯಿದ್ದವು.

ಇದನ್ನು ಮನಗಂಡ ಸೆಲ್ಕೋ ಫೌಂಡೇಶನ್ ಅವರಿಗೆ ವಿದ್ಯುತ್ ಚಾಲಿತ ಚಕ್ರ , ಪಗ್ಮಿನ್, ಮಣ್ಣು ಮಿಶ್ರಣ ಯಂತ್ರ, ಮಡಿಕೆ ಸುಡುವ ಭಟ್ಟಿ ಮೊದಲಾದವುಗಳಿಗೆ ನೆರವು ನೀಡಿ ಪ್ರೋತ್ಸಾಹಿಸಿತು. ಈ ಸೌಕರ್ಯ ಅವರ ಮಣ್ಣಿನ ಪಾತ್ರೆಗಳ ಗುಣಮಟ್ಟ ಹೆಚ್ಚಿಸಿತು, ಉತ್ಪಾದನೆಯು ಜಾಸ್ತಿ ಆಯ್ತು. ಜೊತೆಗೆ ಬೇಡಿಕೆಗಳು ಬಂದವು. ಕುಲಾಲರ ವೃತ್ತಿಯಲ್ಲಿ ಹೊಸತನದ ಕಸುವು ವೃದ್ಧಿಸಿತು. ಅವರು ಹುಟ್ಟು ಹಾಕಿದ “ಗುರುವಂದನ ಫೊಟರಿ ಪ್ರೊಡೆಕ್ಟ್” ಯಶಸ್ಸು ಪಡೆಯಿತು.

ಆಲೂರು, ತೆಕ್ಕಟ್ಟೆ ಪರಿಸರದಿಂದ ಆವೆ ಮಣ್ಣು ಸಂಗ್ರಹಿಸುವ ಅವರು ಹಳ್ಳಿಯ ಮೂಲೆಯಲ್ಲಿ ಐದು ಮಂದಿಗೆ ಕೆಲಸವನ್ನು ನೀಡಿದ್ದಾರೆ. ಅಡುಗೆ ಸಂಬಂಧಿಸಿದ ಪಾತ್ರೆಗಳು, ಐಸ್ ಕುಡಿಕೆ ಮಡಿಕೆಗಳು ಹೆಚ್ಚು ಬೇಡಿಕೆಯುಳ್ಳವು. ವ್ಯಾಪಾರ ವ್ಯವಹಾರವಿದ್ದರೂ ಆದಾಯ ದೊಡ್ಡಮಟ್ಟಿನದಲ್ಲ. ಅವರಿಗೆ ತನ್ನ ವೃತ್ತಿ ಕೌಶಲ ಇನ್ನಷ್ಟು ಅಭಿವೃದ್ಧಿಪಡಿಸಲು ಆಸಕ್ತಿ ಯಿದ್ದರೂ ಮನೆ ಬಳಿ ಸಾಕಷ್ಟು ಜಾಗವಿಲ್ಲ.

ಸುಮಾರು 6ರೂವಿನಿಂದ 6೦೦ರೂ ವರೆಗಿನ ಮಣ್ಣಿನ ಪಾತ್ರೆಗಳು ಅವರಲ್ಲಿವೆ. ಮಂಗಳೂರು, ಉಡುಪಿ, ಕುಂದಾಪುರ ಮೊದಲಾದ ಕಡೆಗಳಲ್ಲಿ ಇವರ ಕಲೆಗಾರಿಕೆಯ ಉತ್ಪನ್ನಗಳಿವೆ. ಅಂಗಡಿಗಳ ಮೂಲಕವೇ ಹೆಚ್ಚು ಮಾರಾಟವಾಗುತ್ತಿದೆ. ಮತ್ತೆ ಕೆಲವರು ಪರಿಸರಕ್ಕೆ ಬಂದು ಪಾತ್ರೆಗಳನ್ನು ಕೊಂಡೊಯ್ಯುತ್ತಾರೆ. ದೊಡ್ಡ ಮಟ್ಟದಲ್ಲಿ ಮಾಡಲು ಸರಿಯಾದ ಸ್ಥಳಾವಕಾಶಗಳು ಇಲ್ಲದಿರುವುದು ಅವರ ಮುಂದಿರುವ ಸಮಸ್ಯೆ. ಗ್ರಾಮೀಣ ಆರ್ಥಿಕತೆಗೆ ಬಲನೀಡುವ ಇಂತಹ ಗೃಹ ಉದ್ಯಮಗಳನ್ನು ಹುಡುಕಿ ಅವರ ನೆರವಿಗೆ ಬರಬೇಕಾದುದು ಸರಕಾರ ಮತ್ತು ಇಲಾಖೆಗಳ ಜವಾಬ್ದಾರಿ.

ಪರಿಸರ ಸ್ನೇಹಿಯಾದ ಈ ಉತ್ಪನ್ನಗಳು ಇತ್ತೀಚೆಗಿನ ದಿನಗಳಲ್ಲಿ ಬಡವ, ಶ್ರೀಮಂತರೆನ್ನದೆ ಎಲ್ಲರ ಮನೆಯಲ್ಲೂ ಆಶ್ರಯ ಪಡೆಯುತ್ತಿರುವುದು ಈ ಉದ್ಯಮಕ್ಕೊಂದು ಹೊಸತನ ಸೃಷ್ಟಿಸಿದೆ. ಮಣ್ಣಿನ ಪಾತ್ರೆಯಲ್ಲಿ ಮಾಡುವ ಸಸ್ಯಾಹಾರ ಅಥವಾ ಮತ್ತು ಮಾಂಸಾಹಾರದ ಅಡುಗೆ ಬೇಗನೆ ಹಾಳಾಗುವುದಿಲ್ಲ. ಆರೋಗ್ಯಕ್ಕೂ ಒಳ್ಳೆಯದು ಎಂಬುದು ಅನುಭವಿಗಳ ಮಾತು. ಮಾಹಿತಿಗೆ:7892323303

spot_img

ಸಂಬಂಧಿತ ಲೇಖನಗಳು

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group