-ಎಂ.ಟಿ. ಶಾಂತಿಮೂಲೆ, ಪೈಲಾರ್
ಗಾಂಧಾರ ದೇಶದಿಂದ ಮಹಾಭಾರತದ ಧೃತರಾಷ್ಟ್ರನ ವಧುವಾಗಿ ಬಂದವಳು ಗಾಂಧಾರಿ. ಅಪಘಾನಿಸ್ತಾನದ ಕಂದಹಾರ್ ಆಗಿನ ಗಾಂಧಾರ ದೇಶ. ಆಕೆಯ ದೇಶದಿಂದ ಬಂದ ಮೆಣಸಿಗೆ ಆಗಲೇ ಗಾಂಧಾರಿ ಎಂದು ಕರೆದಿದ್ದರು. ನಾವು ಈಗ ಬಳಸುವ ಚಿಲಿ ದೇಶದಿಂದ ಬಂದ ರಕ್ತರಾಕ್ಷಸ ಮೆಣಸು. ನಮ್ಮ ದೇಶದಲ್ಲಿ ಹಿಂದೆ ಉಪಯೋಗದಲ್ಲಿದ್ದ ಮೆಣಸು ಕಾಳು ಮೆಣಸು. ಆರೋಗ್ಯಕ್ಕೆ ಹಿತಕಾರಿ. ತಂಪು ನೀಡುವ ಮೆಣಸು. ಗಾಂಧಾರಿಯನ್ನು ಕಾಗೆಗಳು ಇಷ್ಟಪಡುವುದರಿಂದ ಅತೀ ಚಿಕ್ಕದಾಗಿರುವ ಮೆಣಸನ್ನು ಕಾಗೆ ಗಾಂಧಾರಿ ಎಂದು ನಾಮಕರಣ ಮಾಡಿದರು. ಇದು ಕಫ ನಾಶಕ ಗುಣವುಳ್ಳದ್ದು. ನಿತ್ಯ ಸೇವನೆಯಿಂದ ಕಫದ ಉಪಟಳವನ್ನು ತಡೆಯಬಹುದು. ಜಾನುವಾರುಗಳಿಗೆ ಕಪ್ಪೆ ಆಗುವುದು ಎನ್ನುವ ಕಫದೋಷಕ್ಕೆ ಇದೇ ಗಾಂಧಾರಿ ಬೇಕು,
ಗಾಂಧಾರಿಯನ್ನು ಸ್ವಲ್ಪ ದೊಡ್ಡದಾಗಿಸಿದರೆ ಹೇಗೆ ಎಂದು 15 ವರ್ಷಗಳ ಹಿಂದೆ ಯೋಚಿಸಿ ಸತತ ಮೂರು ವರ್ಷಗಳ ಪ್ರಯೋಗದಿಂದ ನೇರಳೆ ಬಣ್ಣದ ಒಂದು ಇಂಚು ಉದ್ದದ ಗಾಂಧಾರಿ ಮೆಣಸು ಪರಾಗಸ್ಪರ್ಶದಿಂದ ಹುಟ್ಟಿತು. ಅದರ ಹಣ್ಣು ಕಾಯಿಗಳನ್ನು ಬೆಂಗಳೂರಿನ ಮಿತ್ರರಿಗೆ ಕೊಟ್ಟಿದ್ದೆ. ಗ್ರೀನ್ ಫೌಂಡೇಶನ್ ಆ ಮೆಣಸಿನ ಹಿನ್ನಲೆಯಲ್ಲಿ ನನಗೆ “ರೈತ ವಿಜ್ಞಾನಿ” ಎಂಬ ಪ್ರಶಸ್ತಿ ನೀಡಿದ್ದರು. ಮುಂದೆ ವಾತಾವರಣದ ಸಮಸ್ಯೆ ಹಾಗೂ ಇತರ ಕಾರಣಗಳಿಂದ ನನ್ನಲ್ಲಿ ಬೀಜಕ್ಕೂ ಗಿಡ ಇಲ್ಲದಾಯಿತು.
ಕಳೆದ ವರ್ಷದಿಂದ ಪುನಃ ಪ್ರಯೋಗ ಮಾಡಿದುದರಿಂದ ಹಸಿರು ಗಾಂಧಾರಿ ಬೆಳಕಿಗೆ ಬಂತು. ಇದು ಅರ್ಧ ಇಂಚು ಉದ್ದವಿದೆ. ಬಿಳಿ ಗಾಂಧಾರಿಯಿಂದ ಹುಟ್ಟಿದ ಈ ಗಾಂಧಾರಿ ಮೆಣಸಿಗೆ ಸಪೂರದ ಬಿಳಿ ಗೆರೆಯಿದೆ. ಮುಂದೆ ಪ್ರಯೋಗ ಮುಂದುವರಿಸುತ್ತೇನೆ. ಗಾಂಧಾರಿಯನ್ನು ಬಾಳಕ ಮಾಡಿ ಊಟಕ್ಕೆ ಉಪಯೋಗಿಸಬಹುದು.ಹದ ಬೆಲೆದ ಮೆಣಸನ್ನು ತಂದು ಸೂಜಿಯಿಂದ ತೂತು ಮಾಡಿ ಹುಳಿ ಮಜ್ಜಿಗೆ ಉಪ್ಪು ಸೇರಿಸಿ ಅದರಲ್ಲಿ ಅದ್ದಿಟ್ಟು ಒಂದು ದಿನ ಬಿಟ್ಟು ಬಿಸಿಲಿಗೆ ಹಾಕಿ ಒಣಗಿಸಿ ಪುನಃ ಹುಳಿಮಜ್ಜಿಗೆಯಲ್ಲಿ ಹಾಕಿ ರಾತ್ರಿ ಇಡೀ ಬಿಟ್ಟು ಮತ್ತೆ ಚೆನ್ನಾಗಿ ಒಣಗಿಸಬೇಕು.ಆ ನಂತರ ಕರಡಿಗೆಯಲ್ಲಿ ತುಂಬಿಸಿಟ್ಟುಕೊಂಡು ಬೇಕಾದಾಗ ಎಣ್ಣೆಯಲ್ಲಿ ಕರಿದು ಉಪಯೋಗಿಸಬಹುದು. ಬೀಜ ಬೇಕಿದ್ದವರು ಬಂದು ಕೊಂಡೊಯ್ಯಬಹುದು ಮಾಹಿತಿಗೆ: 9483024688, 9901722681