-ರಾಧಾಕೃಷ್ಣ ತೊಡಿಕಾನ
ಇಟ್ಟರೆ ಸಗಣಿಯಾದೆ ತಟ್ಟಿದರೆ ಕುರುಳಾದೆ
ಸುಟ್ಟರೆ ನೊಸಲಿಗೆ ವಿಭೂತಿಯಾದೆ
ತಟ್ಟದೇ ಹಾಕಿದರೆ ಮೇಲುಗೊಬ್ಬರವಾದೆ
ಗೋವು ಮತ್ತು ಸಗಣಿಯ ಮಹತ್ವ ಬಿಂಬಿಸುವ ಕವಿವಾಣಿಯಿದು. ಸಗಣಿಗೆ ಪಾವಿತ್ರö್ಯತೆಯ ಪರಂಪರೆಯಿದೆ. ಅದರ ಉಪ ಉತ್ಪನ್ನಗಳಿಗೊಂದು ಮೇಲ್ಮೆಯಿದೆ. ಕೆಲ ದಶಕಗಳ ಹಿಂದೆ ಹಳ್ಳಿಯ ಮನೆಗಳಲ್ಲಿ ನೆಲಕ್ಕೆ ಸಗಣಿ ಸಾರಿಸಲಾಗುತ್ತಿತ್ತು. ಮಣ್ಣಿನ ಗೋಡೆಗಳು ಸುಣ್ಣ ಬಣ್ಣ ಮೆತ್ತಿಕೊಳ್ಳುತ್ತಿರಲಿಲ್ಲ. ಸಗಣಿಗೆ ಒಂದಿಷ್ಟು ಬ್ಯಾಟರಿಯಲ್ಲಿದ್ದ ಕಪ್ಪು ಪುಡಿ ಅಥವಾ ತೆಂಗಿನ ಗೆರಟೆಯನ್ನು ಸುಟ್ಟು ಮಾಡಿದ ಮಸಿಯನ್ನು ಸಗಣಿಗೆ ಮಿಶ್ರ ಮಾಡಿ ಗೋಡೆಗೆ ಬಳಿದು ಅಂದಗೊಳಿಸುತ್ತಿದ್ದರು. ಆ ನಂತರ ಮನೆಗಳು ಸುಣ್ಣ ಬಣ್ಣಗಳಿಂದ ಅಲಂಕಾರಗೊಳ್ಳಲಾರಂಭಿಸಿದವು. ಮನೆಕಟ್ಟಡದ ವಸ್ತು ವಿನ್ಯಾಸಗಳು, ನೆಲದ ಚಹರೆ ಬದಲಾದವು.
ರಾಸಾಯನಿಕ ಯುಕ್ತವಾದ ಬಣ್ಣಗಳು ಗೋಡೆಯ ರಂಗು ಹೆಚ್ಚಿಸಿದ್ದವು. ಕಾಲಚಕ್ರ ಉರುಳುತ್ತಿದೆ. ಗೋಡೆ ಅಂದವನ್ನು ಇಮ್ಮಡಿಗೊಳಿಸುವುದಕ್ಕೆ ಸಗಣಿ ಮತ್ತೆ ಉಪಯೋಗವಾಗುತ್ತಿದೆ. ಆದರೆ ಮೊದಲಿನ ಹಾಗಲ್ಲ. ಹೊಸ ರೂಪದೊಂದಿಗೆ ಸಗಣಿಯ ಪೈಂಟ್ ಮನೆ ಮನೆಗೆ ರಾಜಸ್ಥಾನದ ಜೈಪುರದಲ್ಲಿರುವ ಖಾದಿ ಇಂಡಿಯಾದ ಮೂಲಕ ಪರಿಚಯವಾದ ಸಗಣಿ ಪೈಂಟ್ ಕರ್ನಾಟಕಕ್ಕೆ ಪ್ರಥಮವಾಗಿ ಕರಾವಳಿಯ ಅಕ್ಷತಾ ಎ. ಅವರು ಪರಿಚಯಿಸಿದ್ದಾರೆ.
ಸಗಣಿಯನ್ನು ಆಧುನಿಕತೆಯ ಸ್ಪರ್ಶದೊಂದಿಗೆ ಬಗೆಬಗೆಯ ಬಣ್ಣದ ಪೈಂಟ್ ತಯಾರಿಸಿ ಸಗಣಿಯ ಮಹತ್ವವನ್ನು ಮತ್ತೆ ಸಾರಿದ್ದಾರೆ. “ಕೊರೋನಾ” ಎಂಬ ಗುಮ್ಮ ಬಹಳಷ್ಟು ಮಂದಿಯ ಬದುಕನ್ನು ಪಲ್ಲಟಗೊಳಿಸಿತು. ಹಲವರ ಉದ್ಯೋಗ ಉದ್ಯಮವನ್ನು ಕಸಿದು ಗೃಹ ಬಂಧನದಲ್ಲಿರಿಸಿದರೆ ಮತ್ತೆ ಕೆಲವರಿಗೆ ಹೊಸ ಬದುಕನ್ನು ಕಟ್ಟಿಕೊಳ್ಳಲು ಪ್ರೇರೇಪಿಸಿತು. ಮಂಗಳೂರು ಸಮೀಪದ ಸುರತ್ಕಲ್ಲಿನವರಾದ ಅಕ್ಷತಾ ಗೃಹಿಣಿ. ಕೊರೋನ ಸಂದರ್ಭದ ಕಟ್ಟು ಪಾಡುಗಳು ಹೊಸಿಲು ತುಳಿಯದಂತೆ ಮಾಡಿತ್ತಾದರೂ ಹೊಸತನದ ಹುಡುಕಾಟಕ್ಕೇನೂ ಅಡ್ಡಿಯಾಗಿರಲಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಕಣ್ಣಾಡಿಸುತ್ತಿದ್ದಾಗ ಇತ್ತೀಚಿಗೆ ಖಾದಿ ಇಂಡಿಯಾವು ಸಗಣಿಯಿಂದ ಪೈಂಟ್ ತಯಾರಿಸಿದ್ದ ಮಾಹಿತಿ ಸಿಕ್ಕಿತ್ತು. ಕುತೂಹಲ ಮತ್ತಷ್ಟು ಹೆಚ್ಚಾಯಿತು. ತನಗೂ ಇಂತದ್ದೆ ಸ್ವದ್ಯೋಗ ಮಾಡಬೇಕೆಂಬ ಆಸಕ್ತಿ ಅವರಲ್ಲಿ ಮೂಡಿತು. ಜೈಪುರದಲ್ಲಿರುವ ಖಾದಿ ಇಂಡಿಯಾ (ಕೆಎನ್ಎಚ್‌ಪಿಐ) ಸಂಸ್ಥೆಯನ್ನು ಸಂಪರ್ಕಿಸಿ ತರಬೇತಿಯನ್ನು ಪಡೆದು ಪೈಂಟ್ ತಯಾರಿಸುವ ಕಲೆ ಕರಗತ ಮಾಡಿಕೊಂಡರು. ಆದರೆ ಅವರಿದ್ದುದು ನಗರ ಪ್ರದೇಶದಲ್ಲಿ. ಅವರ ಪೈಂಟ್ ತಯಾರಿಕೆಗೆ ಬೇಕಾದ ಮೂಲ ಕಚ್ಚಾ ವಸ್ತು ಹೇರಳವಾಗಿರುವುದು ಹಳ್ಳಿಗಳಲ್ಲಿ.
ಸುರತ್ಕಲ್ಲಿನಲ್ಲಿ ಆರಂಭಿಸಿದರೆ ಕಚ್ಚಾವಸ್ತುಗಳ ಕೊರತೆಯಾಗುತ್ತದೆ. ಆದುದರಿಂದ ಸಗಣಿಯಿಂದ ತಯಾರಿಸುವ ಪೈಂಟ್ ಉದ್ಯಮಕ್ಕೆ ಸೂಕ್ತವಾದ ಹಳ್ಳಿ ಪರಿಸರವನ್ನು ಹುಡುಕಾಡುತ್ತಿದ್ದರು. ಹಳೆಯಂಗಡಿ ಪ್ರದೇಶದ ತೋಕೂರು ಪೇಟೆಯ ಪರಿಸರಕ್ಕೆ ಅಂಟಿಕೊಂಡಿರುವ ಊರು. ಕೃಷಿಕರು ಹೆಚ್ಚಾಗಿರುವ ಪ್ರದೇಶ. ಹೈನುಗಾರಿಕೆಯುಳ್ಳ ಕೃಷಿಕರಿಗೆ ಸಗಣಿ ಗೊಬ್ಬರವಾಗಿ ಬಳಕೆಯಾಗುತ್ತದೆ. ಕೃಷಿಕರಲ್ಲದ ಹೈನುಗಾರರು, ಗೋಶಾಲೆಗಳನ್ನು ನಡೆಸುವವರಿದ್ದರು. ಪೈಂಟು ಉದ್ಯಮಕ್ಕೆ ಬೇಕಾದ ಸಗಣಿ ಸಾಕಷ್ಟು ಸಿಗಬಹುದಾದ ಹಿನ್ನಲೆಯಲ್ಲಿ ಗೋವಿನ ಸಗಣಿಯ ಆಧಾರಿತ ಪ್ರಾಕೃತಿಕ್ ಪೈಂಟ್ ತಯಾರಿಕೆಯ “ಸನ್ನಿಧಿ ಪ್ರಾಕೃತಿಕ್ ಪೈಂಟ್” ಉದ್ಯಮವನ್ನು ತೋಕೂರಿನಲ್ಲೇ ಆರಂಭಿಸಿದರು.
ಪಿಎಮ್‌ಜಿಪಿ ಯೋಜನೆಯ ಸಹಕಾರವೂ ದೊರೆಯಿತು. ಪೈಂಟ್ ತಯಾರಿಕೆಗೆ ಪೂರಕವಾದ ಯಂತ್ರೋಪರೋಪಕರಣವನ್ನು ರಾಜಸ್ಥಾನದ ಜೈಪುರದಿಂದ ತರಿಸಿಕೊಂಡಲ್ಲದೆ ಮತ್ತೆ ಕೆಲವನ್ನು ತಮಿಳುನಾಡಿನಿಂದ ಖರೀದಿಸಿದರು. ಇಷ್ಟೆಲ್ಲಾ ಆಸಕ್ತಿ ವಹಿಸಿ ತಯಾರು ಮಾಡಿಕೊಂಡರೂ ಪೈಂಟ್ ಒಮ್ಮಲೇ ಹೆಚ್ಚು ಮಾಡಿಡುವ ಧೈರ್ಯ ಬಂದಿರಲಿಲ್ಲ. ಬಳಕೆದಾರರು ಹೇಗೆ ಸ್ವೀಕರಿಸುವರೋ ಎಂಬ ಅಳುಕು ಅವರಲ್ಲಿತ್ತು. ಆರಂಭದಲ್ಲಿ 5೦ರಿಂದ 1೦೦ ಲೀಟರ್ ಪೇಯಿಂಟ್ ತಯಾರಿಸಿ ಕೆಲವು ಮನೆಗಳ ಗೋಡೆಗಳಿಗೆ ಈ ಪೈಂಟನ್ನು ಬಳಿದಾಗ ಸಾರ್ಥಕ ಭಾವ ಮೂಡಿತ್ತಾದ್ದರೂ ಕೈಗೆ ಕಾಸು ಬರುವಂತಾಗಲಿಲ್ಲ. “ಸಗಣಿಯ ಪೈಂಟ್ ಒಳ್ಳೆದಿದೆಯಲ್ಲಾ ..”ಎಂಬ ಸಂದೇಶ ರವಾನೆ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣದ ಮೂಲಕ ಈ ಪೈಂಟ್‌ಗೆ ಬೇಡಿಕೆ ಬರತೊಡಗಿತು.
ಸುತ್ತಮುತ್ತಲ ಹೈನುಗಾರರಿಂದ ಸಗಣಿಯನ್ನು ಖರೀದಿಸಲಾರಂಭಿಸದರು. ಹೈನುಗಾರರಿಗೆ ಸಗಣಿ ಮಾರಾಟದಿಂದ ಒಂದಿಷ್ಟು ಆದಾಯಕ್ಕೆ ದಾರಿಯಾದರೆ ಉದ್ಯಮಕ್ಕೆ ಬೇಕಾದ ಸಗಣಿಗಾಗಿ ಅಲೆದಾಡುವ ಪರಿಸ್ಥಿತಿ ಉಂಟಾಗಲಿಲ್ಲ. ಸಗಣಿಯನ್ನು ಮೂರು ಹಂತಗಳಲ್ಲಿ ಸಂಸ್ಕರಣೆಗೆ ಒಳಪಡಿಸಲಾಗುತ್ತದೆ. ಮೊದಲ ಹಂತದಲ್ಲಿ ಸಗಣಿಯಲ್ಲಿರುವ ಕಸಕಡ್ಡಿಗಳನ್ನು ಸ್ವಚ್ಛಗೊಳಿಸಿ ರಿಬ್ಬನ್ ಮಿಕ್ಸರ್ ಮಿಷನ್ ಮೂಲಕ ಎರಡು ಗಂಟೆಗಳ ಕಾಲ ಮಿಶ್ರ ಮಾಡಲಾಗುತ್ತದೆ. ಆನಂತರ “ಟಿಡಿಆರ್” ಮಿಷನ್‌ನಲ್ಲಿ ನುಣ್ಣಗೆ ಅರೆದು ಸೋಸಿ ಬೇರೊಂದು ಟ್ಯಾಂಕಿಗೆ ವರ್ಗಾಯಿಸಲಾಗುತ್ತದೆ. ಆನಂತರ 9೦ಡಿಗ್ರಿ ಉಷ್ಣಾಂಶದಲ್ಲಿ ಕುದಿಸಿ ಒಂದು ದಿನ ತಣ್ಣಗಾಗಲು ಬಿಡಲಾಗುತ್ತದೆ. ಆ ದ್ರಾವಣವನ್ನು ಉಪಯೋಗಿಸಿಕೊಂಡು ಹಲವು ಬಣ್ಣದ ಪೈಂಟ್ ತಯಾರಿಸಲಾಗುತ್ತದೆ.
ಪ್ರಯೋಜನ ಮತ್ತು ವೈಶಿಷ್ಟö್ಯತೆ
* ಪರಿಸರ ಸ್ನೇಹಿ ಪೈಂಟ್
* ಸಾಂಪ್ರದಾಯಿಕತೆಗೆ ಆಧುನಿಕ ಸ್ಪರ್ಶ
* ಉತ್ತಮ ಗುಣಮಟ್ಟ
* ಇತರ ಪೈಂಟಿಗೆ ಹೋಲಿಸಿದರೆ ಕಡಿಮೆ ಖರ್ಚು. ಶೇ.೫೦ರಷ್ಟು ಉಳಿತಾಯ
* ಹೊರ ಗೋಡೆಗಳಿಗೆ ನಾಲ್ಕು ವರ್ಷ, ಒಳಗೋಡೆಗಳಿಗೆ ಐದಾರು ವರ್ಷಗಳ ಬಾಳಿಕೆ.
* ವಾಸನೆರಹಿತ, ತಾಪಮಾನ ನಿಯಂತ್ರಣ ಗುಣ
* ಕ್ರಿಮಿನಿರೋಧಕ, ಶಿಲೀಂದ್ರ ನಾಶಕ
* ವಿಷಕಾರಕವಲ್ಲ, ಹಿತವಾದ ತರಂಗಾಂತರಗಳು
* 1,4,1 ಮತ್ತು 20 ಲೀಟರ್‌ಗಳಲ್ಲಿ ಲಭ್ಯ
ಅಕ್ಷತಾ ಅವರ ಉದ್ಯಮಿಯಾಗುವ ಆಸಕ್ತಿಗೆ ಬೆಂಬಲ ನೀಡಿ ಪ್ರೋತ್ಸಾಹಿಸಿದವರು ಪತಿ ನಾರಾಯಣ ಪ್ರಸಾದ್. ಇವರು ಎಮ್‌ಆರ್‌ಪಿಎಲ್‌ನಲ್ಲಿ ಕೆಮಿಕಲ್ ಇಂಜಿನಿಯರರಾಗಿ ಉದ್ಯೋಗದಲ್ಲಿದ್ದಾರೆ. ಇಂಜಿನಿಯರಿಂಗ್ ಕಲಿಯುತ್ತಿರುವ ಪುತ್ರ ಅಂಕುಶ್ ಸಹಕಾರ ನೀಡುತ್ತಿದ್ದು ಉದ್ಯಮ ಬೆಳೆಯಲು ಸಹಕಾರಿಯಾಗಿದೆ
ಸಗಣಿ ಆಧಾರಿತ ಪ್ರಾಕೃತಿಕ್ ಪೈಂಟ್ ಮನೆಗಳಿಗೆ ಮಾತ್ರ ಬಳಕೆಯಾಗುತ್ತಿರುವುದಲ್ಲ.
ಅಡಿಕೆ ಬೆಳೆಗಾರರು ತಮ್ಮ ಅಡಿಕೆ ಮರಗಳನ್ನು ಬಿಸಿಲಿನ ಹೊಡೆತದಿಂದ ರಕ್ಷಿಸಿಕೊಳ್ಳಲು ಈ ಪೈಂಟ್ ಬಳಸಿಕೊಳ್ಳುತ್ತಾರೆ. ಅದಲ್ಲದೆ ಹುಲಿ ವೇಷಧಾರಿಗಳು ಉಪಯೋಗ ಮಾಡುತ್ತಿದ್ದಾರೆ. ಧಾರ್ಮಿಕ ಕೇಂದ್ರಗಳತ್ತ ಒಳಾಂಗಣಕ್ಕೆ ಈ ಪೈಂಟಿನ ಬಳಕೆಗೆ ಆದ್ಯತೆ ನೀಡಲಾಗುತ್ತಿರುವುದರಿಂದ ಸಗಣಿಯ ಪೈಂಟ್ ಮೆಲ್ಲನೆ ಜನಮನದಲ್ಲಿ ಭದ್ರಗೊಳ್ಳುತ್ತಿದೆ
ಮಾಹಿತಿಗೆ ಮೊ. 9008485626, 7892448962