spot_img
Wednesday, January 29, 2025
spot_imgspot_img

ಸಾವಯವ ಕೃಷಿಯತ್ತ ಹೊಸ ನೋಟ: ಇದು ನಿತ್ಯಾನಂದ ನಾಯಕ್ ಅವರ ಸಮೃದ್ಧ ತರಕಾರಿ ತೋಟ ,

ಸೊಪ್ಪು, ಗೆಡ್ಡೆ, ಗಿಡ, ಬಳ್ಳಿಯ ತರಕಾರಿ ಹಾಗೂ ಬಹುವಾರ್ಷಿಕವಾದ ತರಕಾರಿ ಬೆಳೆಗಳು ನಮ್ಮ ಆಹಾರದಲ್ಲಿ ಮಹತ್ವದ ಸ್ಥಾನ ಪಡೆದುಕೊಂಡಿದೆ. ಪ್ರಕೃತಿಯಿತ್ತ ಈ ಆಹಾರದಲ್ಲಿ ದೇಹಕ್ಕೆ ಬೇಕಾದ ಬಹಳಷ್ಟು ಪೋಷಕಾಂಶಗಳು, ಔಷಧೀಯ ಗುಣಗಳು ನಮ್ಮ ಆರೋಗ್ಯದ ರಕ್ಷಾ ಕವಚಗಳಾಗಿ ಕಾರ್ಯನಿರ್ವಹಿಸುತ್ತಿವೆ.

ಈ ತರಕಾರಿಗಳ ಮಹತ್ವವನ್ನು ಅರಿತ ನಮ್ಮ ಹಿರಿಯರು ತಮ್ಮ ಹಿತ್ತಲಿನಲ್ಲಿ ಅವುಗಳಿಗೂ ಜಾಗವಿತ್ತಿದ್ದರು. ನಗರ ಕೇಂದ್ರಿತ ವ್ಯವಸ್ಥೆಗಳು ಹೆಚ್ಚಾಗುತ್ತಿದ್ದಂತೆ ತರಕಾರಿಗಳ ಬೇಡಿಕೆ ಮತ್ತು ಅವಶ್ಯಕತೆ, ವ್ಯಾಪಾರ-ವ್ಯವಹಾರ, ತರಕಾರಿ ಬೆಳೆಗೆೆ ಆರ್ಥಿಕ ಬಲ ತಂದಿತ್ತು. ಅಧಿಕ ಉತ್ಪಾದನೆಗಾಗಿ ರಾಸಾಯನಿಕ ಗೊಬ್ಬರ ಬಳಕೆ, ಗಿಡ-ಉತ್ಪನ್ನಗಳ ಸಂರಕ್ಷಣೆಗೆ ಕೀಟನಾಶಕ, ರಾಸಾಯನಿಕ ಬಳಕೆಯ ತರಕಾರಿ ಮಾರುಕಟ್ಟೆಗೆ ಹರಿದು ಬಂತು. ಅದರ ದುಷ್ಪರಿಣಾಮ ಮನಗಂಡ ಕೆಲ ಕೃಷಿಕರು ಸಹಜ-ಸಾವಯುವ ಕೃಷಿಯತ್ತ ಹೊರಳಿದರು. ಕೃಷಿ ಭೂಮಿಯ ಫಲವತ್ತತೆ ಕಾಪಾಡುವುದರೊಂದಿಗೆ ಸಾವಯವ ಕೃಷಿ ಉತ್ಪನ್ನ, ಸ್ವಾದಿಷ್ಟವಾದ ತರಕಾರಿ ಒದಗಿಸುವತ್ತ ಚಿಂತನೆ ಹರಿಸಿದವರಿದ್ದಾರೆ. ಅಂತಹ ಕೃಷಿಕರಲ್ಲಿ ಸಾವಯವ ತರಕಾರಿ ಕೃಷಿಕ ನಿತ್ಯಾನಂದ ನಾಯಕ್ ನರಸಿಂಗೆ ಪ್ರಮುಖರು

ಉಡುಪಿ ತಾಲೂಕಿನ ಮಣಿಪಾಲದ ಸಮೀಪದ ಪ್ರಸಿದ್ಧ ನರಸಿಂಗೆ ನರಸಿಂಹ ದೇವಸ್ಥಾನದ ಬಳಿಯ ನರಸಿಂಗೆ ನಿತ್ಯಾನಂದ ನಾಯಕ್ ಅವರ ವಿವಿಧ ತರಕಾರಿಗಳ ಸಾವಯುವ ತೋಟ ಹೊಸ ಲೋಕವನ್ನು ತೆರೆದಿಡುತ್ತದೆ. ಇಲ್ಲಿ ಬೆಂಡೆ ಬೀಗಿದೆ. ಬದನೆ ಬಾಗಿದೆ. ಮೂಲಂಗಿ ಮೇಲೆದ್ದು ಬಂದಿದೆ. ಮೆಣಸು ಮೌನವಾಗಿ ಜೋತುಕೊಂಡಿದೆ. ಗೆಣಸು ಗೌಣವಾಗದೆ ನೆಲದ ನೆಲೆ ಭದ್ರಪಡಿಸಿಕೊಂಡಿದೆ. ಹರಿವೆ, ಟೊಮೆಟೊ, ಪಾಲಕ್, ಪುದಿನಾ, ಪಚ್ಚೆ ಪಚ್ಚೆಯಾಗಿ ನಳ ನಳಿಸುತ್ತಿವೆ.

ನಿತ್ಯಾನಂದ ನಾಯಕ್ ಅವರಿಗೆ ನರಸಿಂಗೆಯಲ್ಲಿ ತಂದೆಯ ಆಸ್ತಿ ಸೇರಿದಂತೆ ಸುಮಾರು ೧೮ ಎಕರೆ ಜಾಗವಿದೆ. ಹಿಂದೆ ಭತ್ತದ ಕೃಷಿಯಿತ್ತು. ಮುಂಗಾರು ಬೆಳೆ ತೆಗೆದ ನಂತರ ಸಿರಿ ಧಾನ್ಯ, ದ್ವಿದಳ ಧಾನ್ಯಗಳು ತರಕಾರಿ ಬೆಳೆಯುತ್ತಿದ್ದರು. ಬೆಂಡೆ, ಅಲಸಂಡೆ, ಮೆಣಸು ಅಗತ್ಯ ತರಕಾರಿಗಳನ್ನು ಬೆಳೆಸಿ ಮನೆಗೆ ಬೇಕಾದಷ್ಟು ಉಪಯೋಗಿಸಿ ಉಳಿದುದ್ದನ್ನು ಮಾರಾಟ ಮಾಡುತ್ತಿದ್ದರು. ದನಕರುಗಳಿದ್ದವು. ಹೆಚ್ಚುವರಿ ಹಾಲು ಸುತ್ತಮುತ್ತಲಿನ ಮನೆಗಳಿಗೆ ಮಾರಾಟ, ತೆಂಗಿನೆಣ್ಣೆ ತಯಾರಿ ಎಲ್ಲವೂ ಸ್ವಾವಲಂಬನೆಯ ಮಂತ್ರ. ಆದರೇನು ಕಾಲದ ನಡಿಗೆ ಒಂದೇ ರೀತಿಯದ್ದಲ್ಲ.

ಕೃಷಿ ಕಾರ್ಮಿಕರ ಸಮಸ್ಯೆ ಕಾಡಿದಾಗ ಕೃಷಿ ಹಿಂದುಳಿಯಿತು ಕೃಷಿಭೂಮಿ ಪಾಳು ಬೀಳ ತೊಡಗಿತ್ತು. ಮರಗಿಡಗಳು ಆವರಿಸಿಕೊಂಡು ಕೃಷಿಭೂಮಿಯನ್ನು ನುಂಗಿ ಹಾಕಿತ್ತು ಮಣಿಪಾಲದ ಶಿಕ್ಷಣ ಸಂಸ್ಥೆಯ ಪಕ್ಕದಲ್ಲಿ ಇರುವ ಈ ಜಾಗಕ್ಕೆ ಭಾರೀ ಬೇಡಿಕೆಯಿತ್ತು. ಭೂ ಪರಿವರ್ತನೆ ಮಾಡಿ ಮಾರಾಟ ಮಾಡಿದ್ದರೆ ಕೋಟಿ ಕೋಟಿ ಹಣ ಎಣಿಸಬಹುದಿತ್ತು. ನಿತ್ಯಾನಂದ ನಾಯಕರಿಗೆ ಅದು ಇಷ್ಟವಿರಲಿಲ್ಲ. ತಂದೆಯಿಂದ ಬಂದ ಹಾಗೂ ತಾನು ಸಂಪಾದಿಸಿದ ಈ ಜಾಗವನ್ನು ಉಳಿಸಿಕೊಂಡು ಕೃಷಿಯಿಂದಲೇ ಖುಷಿ ಪಡೆಯಬೇಕೆಂಬ ತುಡಿತವಿತ್ತು.

ಕೋವಿಡ್ ಲಾಕ್‌ಡೌನ್ ನಂತರ ಗ್ರಾಮೀಣ ಆರ್ಥಿಕ ಪುನಶ್ಚೇತನ ಮತ್ತು ಅಭಿವೃದ್ಧಿ

ಕೋವಿಡ್ ಲಾಕ್‌ಡೌನ್ ಸಂದರ್ಭದಲ್ಲಿ ಒಂದಿಷ್ಟು ಕೃಷಿ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು. ೨೦೨೧ರಲ್ಲಿ ಮಂಗಳೂರು ಆಕಾಶವಾಣಿಯ ಕೊಂಕಣಿ ಕಾರ್ಯಕ್ರಮದಲ್ಲಿ “ಕೋವಿಡ್ ಲಾಕ್‌ಡೌನ್ ನಂತರ ಗ್ರಾಮೀಣ ಆರ್ಥಿಕ ಪುನಶ್ಚೇತನ ಮತ್ತು ಅಭಿವೃದ್ಧಿ “ ಕುರಿತಾದ ಅವರ ವಿಚಾರ ಪ್ರಸಾರವಾಗಿತ್ತು. ಗ್ರಾಮೀಣ ಪರಿಸರದಲ್ಲಿ ತರಕಾರಿ ಕೃಷಿ, ಹೂವು, ಔಷಧಿಯ ಗಿಡಮೂಲಿಕೆಗಳ ಮೂಲಕವೂ, ಇದ್ದ ಸಂಪನ್ಮೂಲಗಳನ್ನೆ ಬಳಸಿ ಬದುಕು ಕಟ್ಟಿಕೊಡುವ ಪ್ರಸ್ತಾಪ ಮಾಡಿದ್ದರು. ಈ ಯೋಚನೆಯನ್ನೇ ತನ್ನ ಭೂಮಿಯಲ್ಲೂ ಅಳವಡಿಸಿ ಪಾಳುಬಿದ್ದ ಕೃಷಿಭೂಮಿಗೆ ಮರುಜೀವ ತುಂಬಲು ನಾಯಕರು ಮುಂದಾದರು.

ಗದ್ದೆಗಳಲ್ಲಿ ಬೆಳೆದ ಗಿಡಗಂಟಿಗಳನ್ನು ಯಂತ್ರೋಪಕರಣ ಬಳಸಿ ಸುಮಾರು 1೦ ಎಕರೆಯಷ್ಟು ಭೂಮಿಯನ್ನು ಹದಗೊಳಿಸಿಸಲಾಯಿತು. 10-12  ಲಕ್ಷ ರೂಪಾಯಿ ಅದಕ್ಕಾಗಿ ಕೈಚೆಲ್ಲಿತ್ತು. ಆನಂತರ ನೀರಿನ ವ್ಯವಸ್ಥೆಗೆ ವೈಜ್ಞಾನಿಕವಾಗಿ ಪೈಪುಗಳನ್ನು ಅಳವಡಿಸಲಾಯಿತು. ಸುಮಾರು ೪ಲಕ್ಷ ಅದಕ್ಕೂ ಜಾರಿತು. ಆರಂಭದಲ್ಲಿ ಸಮತಟ್ಟುಗೊಳಿಸಿದ ಭೂಮಿಗೆ ಹರಿವೆ ಬಿತ್ತಿದರು. ಮಳೆರಾಯ ಹರಿವೆಯನ್ನು ಹರಿದು ಮುಕ್ಕಿತು. ಆ ನಂತರ ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದಿಂದ ಬಿಳಿ ಬೆಂಡೆ ಬೀಜವನ್ನು ತರಿಸಿಕೊಂಡು ನಾಟಿ ಮಾಡಿದರು. ಅದಕ್ಕೆ ಪ್ರಕೃತಿ ಮುನಿಸಿಕೊಂಡು ಅರ್ಧಂಬರ್ಧ ಫಸಲು ಬಂತು. ಆದರೂ ಧೃತಿಗೆಡಲಿಲ್ಲ. ಮತ್ತೆ ಬಿಳಿ ಬೆಂಡೆ, ಗುಳ್ಳ ಬದನೆ, ಮೂಲಂಗಿ, ಹರಿವೆ, ಗೆಣಸು, ಜವಾರಿ ಟೊಮೆಟೊ, ಕ್ವಾಲಿಪ್ಲವರ್, ಪಾಲಕ್ ಹೀಗೆ ಕಳೆದ ಆರು ತಿಂಗಳಲ್ಲಿ ಇವರ ಪಾಳುಬಿದ್ದ ಗದ್ದೆಗಳು ತರಕಾರಿ ಮಯ.

‘’ನಮ್ಮಲ್ಲಿ ತರಕಾರಿ ಆಗುವುದಿಲ್ಲ. ಅದೇನಿದ್ದರೂ ಘಟ್ಟದ ಮೇಲಿನ ರೈತರಿಗೆ ಸೈ’’ ಎಂದು ಕರಾವಳಿ ಮತ್ತು ಮಲೆನಾಡು ಭಾಗದ ಕೆಲ ರೈತರು ಸಬೂಬು ಹೇಳುತ್ತಿರುತ್ತಾರೆ. ಕಾರ್ಮಿಕರ ಸಮಸ್ಯೆ, ಕಾಡುಪ್ರಾಣಿಗಳ ಹಾವಳಿಯಿಂದ ತರಕಾರಿ ಬೆಳೆದು ಹಾನಿ ಮಾಡಿಕೊಳ್ಳುವ ಬದಲು ಆಂಗಡಿಯಿಂದ ತರುವುದೇ ಲೇಸೆಂಬ ಮನೋಭಾವ ಹಲವರಲ್ಲಿದೆ. ಆದರೆ ನಿತ್ಯಾನಂದ ನಾಯಕ್ ಅವರು ಬಗೆಬಗೆಯ ತರಕಾರಿಗಳನ್ನು ಸಾವಯವದಲ್ಲಿ ಬೆಳೆದು ‘ಮನಸ್ಸಿದ್ದರೆ ಮಾರ್ಗವಿದೆ’ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

ಇವರ ಕೃಷಿಯಲ್ಲಿ ಬಳಕೆಯಾಗುತ್ತಿರುವುದು ಸಾವಯವ ಗೊಬ್ಬರ. ಪ್ರಮುಖವಾಗಿ ಎರೆಗೊಬ್ಬರ ಭೂಮಿ ಮಿತ್ರ ಗೋ ಕೃಪಾಮೃತ. ಜೀವಾಮೃತ ರೀತಿಯಲ್ಲಿ ಗೋ ಕೃಪಾಮೃತ ನೀರು, ಬೆಲ್ಲ, ಮೊಸರು ಸೇರಿಸಿ 15 ದಿನಗಳ ಕಾಲ ಕೊಳೆಯಲು ಬಿಟ್ಟು ನಂತರ ತರಕಾರಿಗೆ ಸಿಂಪಡಿಸಲಾಗುತ್ತದೆ. ಸುಮಾರು 70 ಸೆಂಟ್ಸ್ ಜಾಗದಲ್ಲಿ ನಾಟಿ ಮಾಡಿರುವ ಕೆಂಪು ಗೆಣಸಿನ ಬಳ್ಳಿ ಈಗ ಹುಲುಸಾಗಿ ಬೆಳೆಯಲಾರಂಭಿಸಿದೆ. 3-4 ತಿಂಗಳಲ್ಲಿ ಗೆಣಸು ಬೆಳೆಯಲಿದ್ದು ಸುಮಾರು 25  ಕ್ವಿಂಟಾಲ್ ಬರಬಹುದೆಂಬ ನಿರೀಕ್ಷೆ ನಾಯಕರದು.

ಮೂಲಂಗಿ : ಬಹಳಷ್ಟು ಮಂದಿ ಸಾಂಪ್ರದಾಯಿಕ ಬೆಳೆಗಳಿಗೆ ಅಂಟಿಕೊಳ್ಳುತ್ತಾರೆ. ಅದರಿಂದ ಹೊರತಾದ ಪ್ರಯೋಗಗಳನ್ನು ಮಾಡಲು ಯತ್ನಿಸುವುದು ಕಡಿಮೆ. ದ.ಕ, ಉಡುಪಿ ಜಿಲ್ಲೆಯಲ್ಲಿ ಮೂಲಂಗಿಯನ್ನು ಬೃಹತ್ ಮಟ್ಟದಲ್ಲಿ ಬೆಳೆದವರಿಲ್ಲ. ಆದರೆ ನಿತ್ಯಾನಂದರು ಆ ಸಾಹಸ ಮಾಡಿದ್ದಾರೆ. ಸುಮಾರು 12 ಟನ್ ಮೂಲಂಗಿಯನ್ನು ಈಗಾಗಲೇ ಮಾರಾಟ ಮಾಡಿದ್ದಾರೆ ಎಂದರೆ ಅಚ್ಚರಿಯಾಗಬಹುದು. ಮೆಣಸಿನೊಂದಿಗೆ ಮಿಶ್ರ ಬೆಳೆಯಾಗಿ ಇದನ್ನು ಬೆಳೆದು ಯಶಸ್ವಿಯಾಗಿದ್ದಾರೆ.

ಬಿಳಿಬೆಂಡೆ ಬಹು ಬೇಡಿಕೆಯ ತರಕಾರಿ. ಬೆಲೆಗೆ ಹಾಗೂ ಖರೀದಿಗೆ ಋತುಮಾನಗಳ ಭೇದವಿಲ್ಲ. ಎಲ್ಲಾ ಕಾಲದಲ್ಲಿ ಬೇಡಿಕೆ ಇದ್ದೇ ಇರುತ್ತದೆ. ಅದಕ್ಕಾಗಿಯೇ ಬೆಂಡೆಯನ್ನು ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತಿದ್ದಾರೆ ಇವರ ತರಕಾರಿ ತೋಟದ ಬಹು ಭಾಗವನ್ನು ಆಕ್ರಮಿಸಿರುವುದು ಬಿಳಿ ಬೆಂಡೆಯೆ. ಎರಡು ದಿನಕ್ಕೊಮ್ಮೆ ಉತ್ಪನ್ನವನ್ನು ಕಟಾವು ಮಾಡುತ್ತಿದ್ದು ಸರಾಸರಿ 100 ಕೆಜಿ ಕೊಯ್ಲು ಮಾಡುತ್ತಾರೆ. ಈಗಾಗಲೇ 2000  ಕೆಜಿ ಮಾರಾಟ ಮಾಡಿದ್ದಾರೆ. ಒಂದು ಗಿಡದಿಂದ ಹೆಚ್ಚೆಂದರೆ ಇಪ್ಪತ್ತು ಕೊಯ್ಲು ಮಾಡಬಹುದೆನ್ನುತ್ತಾರೆ

ನರಸಿಂಗೆ ಗುಳ್ಳ :

ಮಟ್ಟುಗುಳ್ಳ ತನ್ನದೇ ಅಸ್ತಿತ್ವ ಹಾಗೂ ಖ್ಯಾತಿಯನ್ನು ಪಡೆದಿದೆ. ಇವರು ಬೆಳೆಸುವ ಗುಳ್ಳ ಬದನೆ ನರಸಿಂಗೆ ಗುಳ್ಳವೆಂದೇ ತರಕಾರಿ ಅಂಗಡಿಯವರ ಹಾಗೂ ಗ್ರಾಹಕರಲ್ಲಿಯೂ ಹೆಸರು ಪಡೆದಿದೆ. ‘ನರಸಿಂಗೆ ಗುಳ್ಳ ಕೊಡಿ’ ಎಂದು ಗ್ರಾಹಕರು ಕೇಳುವಷ್ಟರ ಮಟ್ಟಿಗೆ ತನ್ನತನ ಗಟ್ಟಿಗೊಳಿಸಿದೆ. ಜನರ ಬೇಡಿಕೆಗನುಗುಣವಾಗಿ ತರಕಾರಿ ತೋಟದ ಬಹಳಷ್ಟು ಜಾಗವನ್ನು ಗುಳ್ಳ ಆವರಿಸಿಕೊಂಡಿದೆ. 1200 ಕೆಜಿ ಬದನೆ ಈಗಾಗಲೇ ಮಾರಾಟ ಮಾಡಲಾಗಿದೆ. ನೇರಳೆ ಬದನೆಯೂ ಅವರ ಕೃಷಿ ತೋಟದಲ್ಲಿದೆ. ಕ್ವಾಲಿಫ್ಲವರ್ ಉತ್ತಮ ತರಕಾರಿಗಳಲ್ಲಿ ಒಂದು ಎಂಬುದನ್ನು ಬೇರೆ ಹೇಳಬೇಕಾಗಿಲ್ಲ. ಯಾವುದರೊಂದಿಗೂ ಹೊಂದಿಕೊಳ್ಳಬಹುದು. ಕ್ವಾಲಿ ಫ್ಲವರ್‌ಗೆ ಉತ್ತಮ ಬೆಲೆಯಿದೆ. ಉಡುಪಿಯಲ್ಲಿ ಮಾರಾಟಕ್ಕಾಗಿಯೇ ಈ ತರಕಾರಿ ಬೆಳೆಸಿದವರು ಇಲ್ಲ. ಇದೀಗ ನಾಟಿಯ ಹಂತದಲ್ಲಿದೆ. ಅವರ ತರಕಾರಿ ತೋಟದಲ್ಲಿ ಟೊಮೆಟೊ ಕೂಡ ಸ್ಥಾನ ಪಡೆದಿದೆ. ಇದಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡದಿದ್ದರೂ ಜವಾರಿ ಟೊಮೆಟೊ ಉತ್ತಮ ಫಸಲು ನೀಡಿದ್ದಂತೂ ಸತ್ಯ. ಅವಕಾಶಕೊಟ್ಟರೆ ಈ ಮಣ್ಣಿನಲ್ಲಿ ನಾನು ಗಟ್ಟಿ ನೆಲೆಯಾಗ ಬಲ್ಲೆ ಎಂಬ ಸಂದೇಶವನ್ನು ಅದು ಸಾರಿದೆ. ಕೆಂಪು ಹರಿವೆ, ಪುದಿನಾ, ಪಾಲಕ್ ಇವರ ತರಕಾರಿ ತೋಟದ ಮಾಮೂಲಿ ಸದಸ್ಯರು. ಸಾಂಬಾರ್ ಸೌತೆ, ಮುಳ್ಳುಸೌತೆ, ಬೂದು ಗುಂಬಳ, ಸಿಹಿಗುಂಬಳ(ಚೀನಿಕಾಯಿ/ಕೆಬುಡೆ), ಸುವರ್ಣಗೆಡ್ಡೆ, ದಿವಿಹಲಸು, ನುಗ್ಗೆ, ಹಾಗಲ ಹಲವು ಬಗೆಯ ತರಕಾರಿಗಳನ್ನು ಬೆಳೆಸಿಕೊಳ್ಳಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಹಿಂದೆಯಿದ್ದ ಸಣ್ಣ ಸಣ್ಣ ಬೆಟ್ಟು ಗದ್ದೆಗಳ ರೂಪವನ್ನು ಧಕ್ಕೆಯಾಗದಂತೆ ಹಾಗೆ ಉಳಿಸಿಕೊಂಡು ವಿವಿಧ ತರಕಾರಿಗಳನ್ನು ಬೆಳೆಯುವುದು ಅವರ ಆಶಯವಾಗಿದೆ.

ನೈಸರ್ಗಿಕವಾಗಿ ಹರಿದು ಬರುವ ನೀರು ಕೃಷಿಗೆ ದೊರೆತಿರುವುದು ಅವರ ಭಾಗ್ಯವೇ ಸರಿ. 1೦ ಎಕರೆಯಲ್ಲಿ ಬೆಳೆಯುವ ತರಕಾರಿಗೆ ನೈಸರ್ಗಿಕ ನೀರೇ ಪೂರ್ಣ ಆಧಾರ. ನರಸಿಂಹ ದೇವಸ್ಥಾನದ ಬಳಿ ಹರಿದು ಹೋಗುವ ತೋಡಿಗೆ ಅಲ್ಲಲ್ಲಿ ಕಟ್ಟಗಳನ್ನು ನಿರ್ಮಿಸಿದ್ದಾರೆ. ಹರಿವ ನೀರಿನ ಮೂಲ ಸೆಲೆಯ ಬಳಿಯೇ ಬಾವಿ ನಿರ್ಮಿಸಿ ಶುದ್ಧವಾದ ನೀರಿನಿಂದ ತರಕಾರಿ ಬೆಳೆಯುತ್ತಿದ್ದಾರೆ.

ಹೆಚ್ಚು ಉತ್ಪಾದನೆಗೆ ಆಸೆಪಟ್ಟು ರಾಸಾಯನಿಕ ಗೊಬ್ಬರಗಳ ರಾಶಿ ಸುರಿದು ಉತ್ಪತ್ತಿ ತೆಗೆಯುವ ಆಸೆ ನಾಯಕರಲ್ಲಿಲ್ಲ. ಹೊಸ ತಂತ್ರಜ್ಞಾನದೊಂದಿಗೆ ಅಪ್ಪಟ ಸಾವಯವ ಕೃಷಿ ಇವರ ಸಾಧನೆ. ಸಾವಯವ ತರಕಾರಿ ಬೆಳೆಯ ಬೆಲೆ ಮಾರುಕಟ್ಟೆಗಳಲ್ಲಿ ತುಸು ಹೆಚ್ಚು. ಆದರೆ ನಿತ್ಯಾನಂದರ ಮನೋಭಾವನೆ ಹೆಚ್ಚು ದರ ಪಡೆಯುವುದಲ್ಲ, ರಾಸಾಯನಿಕದಲ್ಲಿ ಬೆಳೆದ ತರಕಾರಿ ದರದಲ್ಲಿಯೇ ಸಾವಯವ ತರಕಾರಿಯನ್ನು ನೀಡುತ್ತಿದ್ದಾರೆ. ಇದರಲ್ಲಿ ಬರಬಹುದಾದ ಆದಾಯ ಕಡಿಮೆ. ಆದರೂ ಉತ್ತಮ ಗುಣಮಟ್ಟದ ಶುದ್ಧ ನೀರು, ಸಾವಯವ ಗೊಬ್ಬರದಿಂದ ಬೆಳೆದ ತರಕಾರಿಯನ್ನು ಮಾರುಕಟ್ಟೆ ಹಾಗೂ ಗ್ರಾಹಕರಿಗೆ ನೀಡುತ್ತೇವೆ ಎಂಬ ಸಂತೃಪ್ತಿ ಅವರದು. ತರಕಾರಿ ವ್ಯಾಪಾರಸ್ಥರು ಹಾಗೂ ಗ್ರಾಹಕರು ತರಕಾರಿ ತೋಟಕ್ಕೆ ಬಂದು ತರಕಾರಿ ಖರೀದಿಸುತ್ತಿದ್ದಾರೆ. ಪಪ್ಪಾಯಿ, ಕಲ್ಲಂಗಡಿ ಹಾಗೂ ಇತರ ಹಣ್ಣುಗಳನ್ನು ಬೆಳೆಸುವ ಆಶಯವಿದೆ.

 

ತರಕಾರಿ ಕೃಷಿಯಿಂದ ಉತ್ತೇಜಿತರಾಗಿರುವ ಅವರು ತನ್ನ ಕೃಷಿ ಕ್ಷೇತ್ರದಲ್ಲಿ ಬೆಳೆದ ಉತ್ಪನ್ನಗಳನ್ನು ನರಸಿಂಗೆ ಬ್ರಾö್ಯಂಡ್‌ನಲ್ಲಿ ಮಾರಾಟ ಮಾಡುವ ಚಿಂತನೆ ನಡೆಸಿದ್ದಾರೆ.

ನಿತ್ಯಾನಂದ ನಾಯಕ್ ಅವರು ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ರಂಗಗಳಲ್ಲಿಯೂ ತನ್ನನ್ನು ತೊಡಗಿಸಿಕೊಂಡವರು. ಉಡುಪಿಯ ಶ್ರೀ ದುರ್ಗಾಪರಮೇಶ್ವರಿ ಸೊಸೈಟಿಯ ಮುಖ್ಯಕಾರ್ಯನಿರ್ವಹಣಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಇವರು ನರಸಿಂಹ ದೇವಸ್ಥಾನದ ಆನುವಂಶಿಕ ಮೊಕ್ತೇಸರರು, ಯು.ಎನ್ ಸಿನಿಮಾಸ್ ಸಂಸ್ಥೆಯ ಮಾಲಕರು, ತುಳು ಚಿತ್ರ ನಿರ್ಮಾಪಕರು, ರೋಟರಿ ಕ್ಲಬ್ ಮಣಿಪಾಲ ಟೌನ್ ಇದರ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಹಿಂದೆ ಮಾಡುತ್ತಿದ್ದ ಕೃಷಿಯನ್ನು ಮತ್ತೆ ಹಳಿಗೆ ತರುವಲ್ಲಿ ಮುಂದಡಿಯಿಟ್ಟಿದ್ದಾರೆ. ಸಾವಯವ ಕೃಷಿಯಾಸಕ್ತ ಕರುಣಾಕರ ಅತ್ಯಾಡಿ ಅವರು ಕೃಷಿಯ ಹೆಚ್ಚಿನ ಜವಾಬ್ದಾರಿಗಳನ್ನು ವಹಿಸಿಕೊಂಡಿದ್ದಾರೆ. 3 ಮಂದಿ ಕೃಷಿ ಕೂಲಿ ಕಾರ್ಮಿಕರಿಗೆ ಉದ್ಯೋಗ ನೀಡಿದ್ದಾರೆ. ತಾಯಿ ಶಾರದಾ ನಾಯಕ್ ಅವರ ಮಾರ್ಗದರ್ಶನ, ಪತ್ನಿ ಗಾಯತ್ರಿ ನಾಯಕ್ ಇವರ ತರಕಾರಿ ತೋಟದ ಆಸಕ್ತಿಗೆ ಬೆಂಬಲವಾಗಿ ಸಹಕರಿಸುತ್ತಿದ್ದಾರೆ

ನಿತ್ಯಾನಂದರ ತಂದೆ ರಾಮಚಂದ್ರ ನಾಯಕ್ ನರಸಿಂಗೆಯಲ್ಲಿ ಕೃಷಿಭೂಮಿ ಖರೀದಿಸಿದಾಗ ಅದರಲ್ಲಿದ್ದ ನರಸಿಂಹ ದೇವಸ್ಥಾನಕ್ಕೆ ಬೇಕಷ್ಟು ಜಾಗವನ್ನು ಬಿಟ್ಟು ಕೊಟ್ಟಿರುವುದಲ್ಲದೆ ದೇವಸ್ಥಾನದ ಬ್ರಹ್ಮಕಲಶವನ್ನು ನೆರವೇರಿಸಿದವರು. ಆ ನಂತರ ಕ್ಷೇತ್ರವನ್ನು ಸಮುದಾಯಕ್ಕೆ ಬಿಟ್ಟುಕೊಟ್ಟು ಆನುವಂಶಿಕ ಆಡಳಿತ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದರು ಮತ್ತು ಕೃಷಿಕ್ಷೇತ್ರದಲ್ಲಿ ಸಾಂಪ್ರದಾಯಕವಾದ ಕೃಷಿಯಲ್ಲೇ ಸಂತೃಪ್ತಿ ಕಂಡಿದ್ದರು. ಮಾಹಿತಿಗೆ ಮೊ: 98445477477

-ರಾಧಾಕೃಷ್ಣ ತೊಡಿಕಾನ

 

spot_img

ಸಂಬಂಧಿತ ಲೇಖನಗಳು

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group