ಹೊಸಬೆಳೆ-ಕೃಷಿಯ ಬಗ್ಗೆ ಅನುಮಾನಗಳು ಹೆಚ್ಚು. ಯಾರಾದರೂ ನೆಟ್ಟು ಬೆಳೆಸಲಿ. ಯಶಸ್ವಿಯಾದರೆ ತಾವೂ ಆರಂಭಿಸಿದರಾಯಿತು ಎಂಬ ಕಾದು ನೋಡುವ ಪ್ರವೃತ್ತಿ ಕೆಲವರಲ್ಲಿದೆ. ಕರಾವಳಿ ಜಿಲ್ಲೆಗಳಲ್ಲಿ `ಅಗರ್’ ಪರಿಚಯವಾದ ಸಂದರ್ಭದಲ್ಲಿ ಆ ಬೆಳೆಯ ಬಗ್ಗೆ ಆಸಕ್ತಿ ತಳೆದು ತಂದು ನೆಟ್ಟು ಬೆಳೆಸಿದವರಲ್ಲಿ ಕೃಷಿಕ ಶ್ರೀರಾಮ ಗೋರೆ ಪ್ರಮುಖರು.
ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ದುರ್ಗ ಗ್ರಾಮದ ಮಲೆಬೆಟ್ಟು ಕಾಡು ಮತ್ತು ತೋಟದ ಬೆಳೆಗಳನ್ನೆ ಮೇಳೈಸಿಕೊಂಡಿರುವ ಪುಟ್ಟ ಪ್ರದೇಶ. ಇಲ್ಲಿಯ ಕಾಳಾಜೆ ಶ್ರೀರಾಮ ಗೋರೆಯವರು ತಮ್ಮ ತೋಟದಲ್ಲಿ ಅಗರ್ ಬೆಳೆಯ ಪ್ರಯೋಗ ನಡೆಸಿದ್ದಾರೆ. ಮಲೆನಾಡು ಭಾಗದ ಜಿಲ್ಲೆಗಳಲ್ಲಿ ಅಗರ್ ವ್ಯಾಪಿಸಿಕೊಳ್ಳುತ್ತಿರುವುದನ್ನು ಗಮನಿಸಿದ ಶ್ರೀರಾಮ ಗೋರೆಯವರು ತೆಂಗು,ಅಡಿಕೆ, ಕೊಕ್ಕೊಗಳ ನಡುವೆ ಉಪಬೆಳೆಯಾಗಿ ಅಗರಿಗೂ ಸ್ಥಾನ ನೀಡಿದರು. ಆರಂಭದಲ್ಲಿ 100 ಗಿಡಗಳನ್ನು ನೆಟ್ಟಿದ್ದು ಈಗ ಅವುಗಳಿಗೆ ಐದು ವರ್ಷ.
ನೈಸರ್ಗಿಕ,ಸಾವಯವ ಕೃಷಿಯ ಬಗ್ಗೆ ಕಳೆದ ಹಲವು ವರ್ಷಗಳಿಂದ ಒತ್ತು ನೀಡುತ್ತಲೇ ಬಂದಿರುವ ಇವರು ಅಗರ್ ಗಿಡಗಳನ್ನು ಅದೇ ಮಾದರಿಯಲ್ಲಿ ಬೆಳೆಸಿದ್ದಾರೆ. ಮುಂದಿನ ನಾಲ್ಕೆöದು ವರ್ಷಗಳಲ್ಲಿ ಅಗರ್ ಉತ್ಪಾದನೆಗೆ ಈ ಮರಗಳು ಸಿದ್ಧಗೊಳ್ಳಲಿವೆ. ಜತೆಗೆ ಮತ್ತೆ ೭೫ ಗಿಡಗಳನ್ನೂ ಹೊಸದಾಗಿಯೂ ನಾಟಿ ಮಾಡಿದ್ದಾರೆ.
ಮಿಶ್ರ ಬೇಸಾಯ:
ಇವರದು ಮಿಶ್ರ ಬೇಸಾಯ. ಪ್ರಧಾನವಾಗಿ ಅಡಿಕೆ ಬೆಳೆಯಿದೆ. ಜತೆಗೆ ತೆಂಗು,ಕೊಕ್ಕೊ,ಬಾಳೆ,ಕಾಳುಮೆಣಸು ಬೆಳೆಗಳನ್ನು ಬೆಳೆದಿದ್ದಾರೆ. ಇವರ ಕೃಷಿಭೂಮಿಗೆ ಸಾವಯವೇ ಆಧಾರ. ರಾಸಾಯನಿಕ ಗೊಬ್ಬರಗಳಿಂದ ದೂರವುಳಿದಿದ್ದಾರೆ.
ಹಲಸು, ಮಾವು,ಚಿಕ್ಕು ಹಣ್ಣಿನ ಗಿಡಗಳಿವೆ. ಹೊಸಬೆಳೆಗಳು ಜಿಲ್ಲೆಗೆ ಪರಿಚಿತವಾದಾಗ ತನ್ನ ಜಮೀನಿನಲ್ಲೂ ತಂದು ನೆಟ್ಟಿದ್ದಾರೆ. ಹಿಂದೆ ವೆನಿಲ್ಲಾವನ್ನು ಬೆಳೆಸಿದ್ದರು. ವೆನಿಲ್ಲಾ-ಏನಿಲ್ಲಾ ಎಂದು ತಳ ಕಚ್ಚಿದಾಗ ಇವರೂ ವೆನಿಲ್ಲಾ ಕಡೆಗಣಿಸಿದರು. ಈಗ ಬಳ್ಳಿಯೇ ಏನಿಲ್ಲದ ಹಾಗೆ ಕಣ್ಮರೆಯಾಗಿದೆ. ಕಾರ್ಕಳಕ್ಕೆ ಕೊಕ್ಕೋ ಪರಿಚಯವಾದಾಗಿನಿಂದಲೇ ಇವರ ತೋಟದಲ್ಲಿ ಕೊಕ್ಕೋ ಬೆಳೆ ಬೆಳೆಯುತ್ತಿದ್ದಾರೆ. ತೋಟದ ತುಂಬೆಲ್ಲಾ ನೆಟ್ಟ ಹಾಗೂ ಸಹಜವಾಗಿ ಬೆಳೆದ ಕೊಕ್ಕೋ ಗಿಡಗಳು ಸಾಕಷ್ಟಿವೆ.
ಮುಚ್ಚಿಗೆ:
ಅಡಿಕೆ ಮರದ ಸೋಗೆ, ಹಾಳೆ, ಕೊಕ್ಕೋ ಎಲೆ, ತೆಂಗಿನ ಮಡಲು ಇವೆಲ್ಲವನ್ನು ತೋಟದಲ್ಲೇ ಹರಡಿ ಬಿಡುವುದರಿಂದ ಬೇಸಿಗೆಯಲ್ಲಿ ತೋಟದ ತೇವಾಂಶ ಉಳಿಸಿಕೊಳ್ಳಲು ಮುಚ್ಚಿಗೆಯಾಗಿ ಕೆಲಸ ಮಾಡುತ್ತವೆ. ಮಳೆಗಾಲದಲ್ಲಿ ಈ ಕೃಷಿ ತ್ಯಾಜ್ಯಗಳು ಕರಗುವುದಲ್ಲದೆ ಗೊಬ್ಬರವಾಗಿ ಮಾರ್ಪಡುತ್ತದೆ. ಎರೆಹುಳುಗಳು ಕಾಣಿಸಿಕೊಂಡು ಮಣ್ಣಿನ ಸಾರ ಮತ್ತಷ್ಟು ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ.
ಹಿಂದೆಲ್ಲಾ ಹಾಳೆ,ಸೋಗೆ ಇತರ ಉಪಯೋಗಕ್ಕಾಗಿ ಬಳಸಲಾಗುತ್ತಿತ್ತು. ಹಸಿರೆಲೆಗಳನ್ನು ತಂದು ಹಟ್ಟಿ ಗೊಬ್ಬರವಾಗಿ ತಯಾರಿಸಬೇಕಾಗಿತ್ತು. ಈಗ ಹಾಗಲ್ಲ.10-12 ವರ್ಷಗಳಿಂದ ಹಸಿರೆಲೆ ಬಳಸಿಲ್ಲ. ಕೃಷಿ ತ್ಯಾಜ್ಯಗಳು ತೋಟದಲ್ಲೆ ಕೊಳೆತು ಗೊಬ್ಬರವಾದರೆ ಸಗಣಿ ಗೊಬ್ಬರವನ್ನು ಬಳಸಲಾಗುತ್ತಿದೆ ಎನ್ನುತ್ತಾರೆ ಗೋರೆಯವರು.
ಹನಿ ನೀರಾವರಿ:
ಇವರು ತೋಟದ ಮೇಲ್ಭಾಗದಲ್ಲಿ ಹನಿ ನೀರಾವರಿ ಅಳವಡಿಸಿಕೊಂಡಿದ್ದಾರೆ. ಎತ್ತರದ ಭಾಗದಲ್ಲಿ ಟ್ಯಾಂಕಿಯೊಂದನ್ನು ನಿರ್ಮಿಸಿ, ಕೊಳವೆ ಬಾವಿಯಿಂದ ನೀರೆತ್ತಿ ಟ್ಯಾಂಕಿನಲ್ಲಿ ಸಂಗ್ರಹಿಸಿಕೊಂಡು ಡ್ರಿಪ್‌ನ ಮೂಲಕ ನೀರುಣಿಸುತ್ತಾರೆ. ಗುಡ್ಡದ ಭಾಗದಲ್ಲಿರುವ ಬಾವಿಯಿಂದ ಪೈಪು ಅಳವಡಿಸಿ ನೇರವಾಗಿ ಕೆಳಭಾಗದ ತೋಟಕ್ಕೆ ನೀರು ಹಾಯಿಸುತ್ತಿದ್ದಾರೆ.
ಹೈನುಗಾರಿಕೆ:
ಹಿಂದೆ ಹೈನುಗಾರಿಕೆಯಿತ್ತು. ಮಿಶ್ರ ತಳಿಯ ದನ ಸಾಕಿದ್ದರು. ದನ ಸಾಕಾಣಿಕೆ ಈಗಲೂ ಬಿಟ್ಟಿಲ್ಲ. ಆದರೂ ಹಿಂದಿನ ಹಾಗೆ ಹೆಚ್ಚು ಹಾಲು ಕೊಡುವ ಹಸುಗಳಿಲ್ಲ. ಒಂದು ಹಸು ಮತ್ತು ಮೂರು ಕರುಗಳನ್ನು ಸಾಕುತ್ತಿದ್ದು ತೋಟಕ್ಕೆ ಬೇಕಾದ ಸಾವಯವ ಗೊಬ್ಬರಕ್ಕೆ ಇವು ಮೂಲ ಆಧಾರ.
ನೀರ್ಬಾಳೆ: ತೋಟದಲ್ಲಿ ಹಾಗೂ ತೋಟದ ಸುತ್ತಮುತ್ತ ನೀರ್ಬಾಳೆಯಿದೆ. ಯಾವ ಗೊಬ್ಬರದ ಅಬ್ಬರಗಳಿಲ್ಲದೆ ಸಹಜವಾಗಿ ಮಣ್ಣಿನ ಸಾರ ಹೀರಿಕೊಂಡು ಬೆಳೆದ ನೀರ್ಬಾಳೆಯ ಹಿಂಡು ಈ ಪರಿಸರದಲ್ಲಿದೆ. ಊಟದ ಎಲೆಗಳಿಗೆ ಬಳಕೆಯಗುತ್ತಿದ್ದ ನೀರ್ಬಾಳೆ ಸ್ಥಳೀಯ ತಳಿಗಳಂತೆ ಕಂಡರೂ ಹಣ್ಣಿನಲ್ಲಿ ವ್ಯತ್ಯಾಸವಿದೆ. ರೋಗ ನಿರೋಧಕ ಶಕ್ತಿಯನ್ನು ಹೊಂದಿದೆ. ಕಾಡುಕೋಣಗಳ ಹಾವಳಿಯ ನಡುವೆಯೂ ಈ ಬಾಳೆ ತನ್ನ ಅಸ್ತಿತ್ವವನ್ನು ಉಳಿಸಿಕೊಂಡು ಸಮೃದ್ಧವಾಗಿ ಬೆಳೆದುಕೊಂಡಿರುವುದು ವಿಶೇಷ.
ಕಾಡುಪ್ರಾಣಿಗಳ ಹಾವಳಿ: ಅರಣ್ಯ ಪ್ರದೇಶಕ್ಕೆ ಹತ್ತಿರವಿರುವ ಇವರ ಕೃಷಿ ಕ್ಷೇತ್ರಕ್ಕೆ ಕಾಡುಪ್ರಾಣಿಗಳ ಹಾವಳಿಯಿದೆ. ಕಾಡುಕೋಣಗಳು ಮನೆಯಂಗಳದವರೆಗೂ ಬಂದು ಕೃಷಿ ಸೊತ್ತುಗಳನ್ನು ತಿಂದು ಹೋಗುತ್ತವೆ. ಮಂಗಗಳು ತೆಂಗು,ಬಾಳೆ,ಕೊಕ್ಕೊ ಫಸಲಿನ ಮೇಲೆ ಸದಾ ದಾಳಿ ಮಾಡುತ್ತವೆ. ಕಾಡುಹಂದಿಗಳು ತೆಂಗಿನಕಾಯಿಯನ್ನು ಒಡೆದು ಹಾಳು ಮಾಡುತ್ತವೆ. ಇವೆಲ್ಲವೂ ತಿಂದು ಹಾಳು ಮಾಡಿದ ನಂತರ ಉಳಿದ ಫಸಲು ಮನೆ ಸೇರುತ್ತದೆ. ಶ್ರೀ ರಾಮ ಗೋರೆಯವರು ಕೃಷಿ-ಬದುಕು-ಸಂಸ್ಕೃತಿ ಉಳಿಸುವ ಧ್ಯೇಯೋದ್ದೇಶದೊಂದಿಗೆ ಕೃಷಿ ಸಂಸ್ಕೃತಿ ಪ್ರತಿಷ್ಠಾನ ಎಂಬ ಸಂಸ್ಥೆಯನ್ನು ಹುಟ್ಟು ಹಾಕಿಕೊಂಡಿದ್ದಾರೆ.
ಗೋರೆಯವರ ಕೃಷಿ ಚಟುವಟಿಕೆಗಳಲ್ಲಿ ಪತ್ನಿ ಪುಷ್ಪಾಗೋರೆಯವರೂ ಸಹಭಾಗಿ.ಗೌರವಯುತ ಬದುಕಿಗೆ ಕೃಷಿ ಅಗತ್ಯ. ಲಾಭ ನಷ್ಟಗಳ ಲೆಕ್ಕಾಚಾರ ಹಾಕಿ ಮಾಡುವಂತದ್ದಲ್ಲ. ಮಿಶ್ರಬೆಳೆಗಳು ಹೆಚ್ಚು ಪ್ರಯೋಜನಕಾರಿ ಎಂಬ ಅಭಿಪ್ರಾಯ ಅವರದು.
ಮಲೆನಾಡು ಕರಾವಳಿ ಜಿಲ್ಲೆಗಳಲ್ಲಿ ಅಡಿಕೆಗೆ ಪರ್ಯಾಯ ಬೆಳೆಯ ಹುಡುಕಾಟದಲ್ಲಿದ್ದಾಗ ಕೆಲವರು `ತಾಳೆ’ ಬೆಳೆಯನ್ನು ಆಯ್ದುಕೊಂಡರು ಮತ್ತೆ ಕೆಲವರು `ಅಗರ್’ಕಡೆಗೆ ನೋಟ ಬೀರಿ ಉಪಬೆಳೆಯಾಗಿ ಬೆಳೆಯುತ್ತಿದ್ದಾರೆ.
ಸುಗಂಧಯುಕ್ತ ಅಗರಿಗೆ ಭಾರೀ ಬೇಡಿಕೆಯಿದೆ. ಶ್ರೀಗಂಧದ ಹಾಗೆ ಅಗರ್ ಮರ ಪರಿಮಳಯುಕ್ತವಾದುದಲ್ಲ. ಅಗರ್ ಮರಗಳಿಗೆ ಶಿಲೀಂದ್ರವನ್ನು ಇಂಜೆಕ್ಷನ್ ಮಾಡುವ ಮೂಲಕ ಮರಗಳಲ್ಲಿ ಪರಿಮಳದ ಅಂಟು ಉತ್ಪಾದನೆಯಾಗುತ್ತದೆ. ಹತ್ತು ವರ್ಷದ ಮತ್ತು ಸುಮಾರು ೨೦ ಇಂಚು ದಪ್ಪ ಬೆಳೆದ ಮರಗಳಿಂದ ಅಗರ್ ಉತ್ಪಾದಿಸಬಹುದಾಗಿದೆ.
– ನವಜಾತ ಕಾರ್ಕಳ