ಬರಹ-ರಾಧಾಕೃಷ್ಣ ತೊಡಿಕಾನ, ಪ್ರಸಾದ್ ಶೆಣೈ ಕಾರ್ಕಳ
“ಕಬ್ಬು ಡೊಂಕಾದರೇನು, ಸಿಹಿ ಡೊಂಕೇ” ಎಂಬುದು ಜನಪದರ ನುಡಿ. ಕಬ್ಬಿನ ಸ್ವಭಾವವನ್ನಷ್ಟೇ ಅಲ್ಲ, ಅದರೊಳಗಿನ ಸಿಹಿಯ ಮಹತ್ವವನ್ನೂ ಸಾರುವ ಅನುಭವದ ಮಾತಿದು. ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಪ್ರಮುಖ ವಾಣಿಜ್ಯ ಬೆಳೆಯಾಗಿರುವ ಕಬ್ಬು, ಸಾವಿರಾರು ರೈತ ಕುಟುಂಬಗಳ ಆರ್ಥಿಕತೆಗೆ ಆಸರೆಯಾಗಿದೆ. ಆದರೆ ಕಬ್ಬು ಕಟಾವು, ಸಾಗಣೆ ಹಾಗೂ ಸಕ್ಕರೆ ಕಾರ್ಖಾನೆಗಳಿಗೆ ಪೂರೈಕೆ ಮಾಡುವ ಸಂದರ್ಭದಲ್ಲಿ ರೈತರು ಹಲವು ಸವಾಲುಗಳನ್ನು ಎದುರಿಸುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಕಚ್ಚಾ ಉತ್ಪನ್ನವನ್ನೇ ಮಾರಾಟ ಮಾಡುವ ಬದಲು, ಅದಕ್ಕೆ ಮೌಲ್ಯವರ್ಧನೆ ಮಾಡಿದರೆ ಉತ್ತಮ ಆದಾಯ ಗಳಿಸಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಕೆಲಮಂದಿ ರೈತರು. ಹೊಸಹೊಸ ಪ್ರಯೋಗ ಮತ್ತು ಸಾಧನೆಗಳಿಂದ ಗುರುತಿಸಿಕೊಂಡ ರೈತರಲ್ಲಿ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ತುಂಗಳ ಗ್ರಾಮದ ಕೃಷಿಕ ಪರಗೌಡ ಸದಾಶಿವ ಶೇಗುಣಶಿ ಕೂಡಾ ಒಬ್ಬರು
ಕಬ್ಬಿನಿಂದ ವಿವಿಧ ಬಗೆಯ ಸಾವಯವ ಬೆಲ್ಲ ತಯಾರಿಸಿ, ಸ್ವಂತ ಬ್ರಾಂಡ್ ಮೂಲಕ ಮಾರುಕಟ್ಟೆಗೆ ಪರಿಚಯಿಸಿರುವ ಪರಗೌಡ ಸದಾಶಿವ ಶೇಗುಣಶಿ ಅವರಿಗೆ ಕೃಷಿ ಜೀವನೋಪಾಯ ಮಾತ್ರವಲ್ಲ, ಕೃಷಿ ಉತ್ಪನ್ನಗಳನ್ನು ಮೌಲ್ಯವರ್ಧನೆಗೊಳಿಸಿ ಸ್ವ ಉದ್ಯೋಗ ಹಾಗೂ ಕೃಷಿಯಾಧಾರಿತ ಗ್ರಾಮೀಣ ಉದ್ಯಮವಾಗಿ ರೂಪಿಸಿಕೊಂಡಿದ್ದಾರೆ.

ಸಾವಯವ ಕೃಷಿ
ಕೃಷಿ ಕುಟುಂಬದಿಂದ ಬಂದ ಪರಗೌಡ ಸದಾಶಿವ ಶೇಗಣಶಿ ಅವರು ಕೃಷಿಯ ಒಡನಾಟದಿಂದಲೇ ಬೆಳೆದವರು. ಆದರೆ ಕೃಷಿಯ ಹೊರತಾದ ಉದ್ಯೋಗಕ್ಕೆ ಹೋಗಬೇಕು. ಎಂಬ ತುಡಿತವಿತ್ತು. ಸೈನ್ಯ ಸೇರುವ ಆಸೆಯೂ ಅವರಲ್ಲಿತ್ತು. ಹಲವು ಕಾರಣಗಳಿಂದ ಆ ಪ್ರಯತ್ನಗಳು ಕೈಗೂಡಲಿಲ್ಲ. ಸರ್ಕಾರಿ ಉದ್ಯೋಗ ಪಡೆಯಲು ಎದುರಾದ ಸಮಸ್ಯೆಗಳಿಂದ ಸಾಧ್ಯವಾಗಲಿಲ್ಲ. ಆನಂತರ ಉದ್ಯೋಗದ ಹುಡುಕಾಟವನ್ನು ನಿಲ್ಲಿಸಿದರು. ತಮ್ಮದೇ ಜಮೀನಿನಲ್ಲಿ ಕೃಷಿಕಾಯಕದಲ್ಲಿ ತೊಡಗಿಸಿಕೊಂಡರು.

ಸುಮಾರು 10 ಎಕರೆಯಲ್ಲಿ ಕಬ್ಬು, ಎಣ್ಣೆಕಾಳುಗಳು, ಸಿರಿಧಾನ್ಯಗಳು, ಏಲಕ್ಕಿ ಬಾಳೆ ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆಯುವ ಮೂಲಕ ಸಮಗ್ರ ಕೃಷಿಯತ್ತ ಗಮನ ಹರಿಸಿದರು. ಕಬ್ಬಿನಲ್ಲಿ ಎಕರೆಗೆ 60-70 ಟನ್ ಇಳುವರಿ ಪಡೆದಿದ್ದಾರೆ. ಆದರೆ ಬೆಳೆಗೆ ತಕ್ಕ ಬೆಲೆ ದೊರೆಯದಿರುವುದು ಅವರಿಗೆ ಸಮಾಧಾನ ತಂದಿರಲಿಲ್ಲ. ಕೃಷಿಯಲ್ಲಿ ವಿಭಿನ್ನವಾಗಿ ಏನಾದರೂ ಸಾಧಿಸಬೇಕು ಎಂಬ ಆಲೋಚನೆಯ ನಡುವೆ ಅವರಿಗೆ ಕಂಡ ದಾರಿ ಸಾವಯವ ಕೃಷಿ.

ಕಬ್ಬು ಬೆಳೆಯಲ್ಲಿ ಹೆಚ್ಚುತ್ತಿರುವ ಖರ್ಚು-ವೆಚ್ಚವನ್ನು ಗಮನಿಸಿದ ಅವರು ರಾಸಾಯನಿಕ ಬಳಕೆಯನ್ನು ಕಡಿಮೆ ಮಾಡಿ ಸಾವಯವ ಕೃಷಿಯತ್ತ ಮುಖ ಮಾಡಿದರು. ಆರಂಭದಲ್ಲಿ ಹಲವರು ಅನುಮಾನ ವ್ಯಕ್ತಪಡಿಸಿದರೂ ಅವರು ಪ್ರಯೋಗ ಮುಂದುವರಿಸಿದರು. ಸಾವಯವ ಗೊಬ್ಬರ ಬಳಸಿ ಕಬ್ಬು ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆದರು. ಉತ್ಪಾದನೆಯಲ್ಲಿ ಹೆಚ್ಚೇನೂ ವ್ಯತ್ಯಾಸವಾಗಲಿಲ್ಲ. ಕೃಷಿಯ ಖರ್ಚು ವೆಚ್ಚ ಕಡಿಮೆಯಾಯಿತು. ಆದರೆ ಸಾವಯವ ಕಬ್ಬಿಗೆ ದೊರೆಯುವ ಬೆಲೆಯಲ್ಲಿ ಮಾತ್ರ ದೊಡ್ಡ ಪ್ರಮಾಣದ ಬದಲಾವಣೆ ಕಾಣಲಿಲ್ಲ. ಆಗ ಅವರ ಗಮನ ಸೆಳೆದದ್ದು ಮೌಲ್ಯವರ್ಧನೆ.
ಕಬ್ಬಿನಿಂದ ಸಾವಯವ ಬೆಲ್ಲ
ಕಬ್ಬಿನ ಮೌಲ್ಯವರ್ಧನೆಗಾಗಿ ಪರಗೌಡ ಅವರು ತಮ್ಮದೇ ಕಬ್ಬಿನ ಆಲೆಮನೆ ಹೊಂದಿದ್ದು ಇಲ್ಲಿ ಕಬ್ಬಿನಿಂದ ವಿವಿಧ ರೀತಿಯ ಬೆಲ್ಲಗಳನ್ನು ತಯಾರಿಸುತ್ತಿದ್ದಾರೆ. ಶುಂಠಿ ಬೆಲ್ಲ, ಕಾಕಂಬಿ, ಹರಳು ಬೆಲ್ಲ, ಪೆಂಟಿ ಬೆಲ್ಲ, ಪುಡಿ ಬೆಲ್ಲ ಸೇರಿದಂತೆ ಹಲವು ಉತ್ಪನ್ನಗಳನ್ನು ತಯಾರಿಸಲಾಗುತ್ತಿದೆ. ಇವುಗಳಲ್ಲಿ ಯಾವುದೇ ರಾಸಾಯನಿಕಗಳನ್ನು ಬಳಸದೆ ಸಾವಯವ ವಿಧಾನಕ್ಕೆ ಆದ್ಯತೆ ನೀಡಲಾಗುತ್ತಿದೆ. ತಮ್ಮ ಉತ್ಪನ್ನಗಳನ್ನು ‘ಅಪ್ಪಾಜಿ’ ಬ್ರಾಂಡ್ನಡಿ ಮಾರುಕಟ್ಟೆಗೆ ಪರಿಚಯಿಸಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ಅಪ್ಪಾಜಿ ಬ್ರಾಂಡ್ನ ಬೆಲ್ಲ ಮತ್ತು ಸಾವಯವ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಮೌಲ್ಯವರ್ಧನೆಯ ಮೂಲಕ ಆದಾಯ ಹೆಚ್ಚಿಸಿಕೊಂಡಿದ್ದಾರೆ.
ಈ ಕೆಲಸದಲ್ಲಿ ಕುಟುಂಬದ ಸದಸ್ಯರೇ ಪ್ರಮುಖವಾಗಿ ತೊಡಗಿಸಿಕೊಂಡಿದ್ದಾರೆ. ಅಗತ್ಯವಿದ್ದಾಗ ಕೂಲಿ ಕಾರ್ಮಿಕರ ಸಹಾಯ ಪಡೆಯುತ್ತಾರೆ. ಕಚ್ಚಾ ಕಬ್ಬನ್ನು ಮಾರಾಟ ಮಾಡುವ ಬದಲು ಅದನ್ನು ಸಂಸ್ಕರಿಸಿ ವಿವಿಧ ಉತ್ಪನ್ನಗಳಾಗಿ ಮಾರುಕಟ್ಟೆಗೆ ತರುವುದರಿಂದ ಹೆಚ್ಚಿನ ಆದಾಯ ಗಳಿಸಬಹುದು ಎಂಬುದನ್ನು ತಮ್ಮ ಅನುಭವದ ಮೂಲಕ ತೋರಿಸಿಕೊಟ್ಟಿದ್ದಾರೆ.

ಎಣ್ಣೆಕಾಳು ಮೌಲ್ಯವರ್ಧನೆ
ಪರಗೌಡ ಸದಾಶಿವ ಶೇಗುಣಶಿ ಅವರು ಕೇವಲ ಕಬ್ಬಿನ ಬೆಳೆಯನ್ನೇ ಅವಲಂಬಿಸಿಲ್ಲ. ಕಬ್ಬಿನೊಂದಿಗೆ ಬಿಳಿ ಕುಸುಬೆ, ಸೂರ್ಯಕಾಂತಿ ಮತ್ತು ಶೇಂಗಾ ಸೇರಿದಂತೆ ವಿವಿಧ ಎಣ್ಣೆಕಾಳುಗಳನ್ನು ಬೆಳೆಯುತ್ತಾರೆ. ಈ ಉತ್ಪನ್ನಗಳನ್ನು ಕಚ್ಚಾ ರೂಪದಲ್ಲಿಯೇ ಮಾರಾಟ ಮಾಡುವ ಬದಲು ಸಂಸ್ಕರಿಸಿ ಎಣ್ಣೆ ತಯಾರಿಸಿ ಮಾರಾಟ ಮಾಡುತ್ತಾರೆ. ಉತ್ಪನ್ನವನ್ನು ಸಂಸ್ಕರಿಸಿ ಮೌಲ್ಯವರ್ಧನೆ ಮಾಡುವುದರಿಂದ ಉತ್ತಮ ಬೆಲೆ ದೊರೆಯುತ್ತದೆ. ಗುಣಮಟ್ಟದ ಉತ್ಪನ್ನಗಳನ್ನು ನೀಡುತ್ತಿರುವುದರಿಂದ ಗ್ರಾಹಕರು ನೇರವಾಗಿ ಸಂಪರ್ಕಿಸಿ ಖರೀದಿಸುತ್ತಾರೆ.
ಹೈನುಗಾರಿಕೆ ಸಾವಯವ ಕೃಷಿಗೆ ಸತ್ವ
ಪಾರಂಪರಿಕ ಕೃಷಿ ಪದ್ಧತಿಯಲ್ಲಿ ಹೈನುಗಾರಿಕೆಗೆ ಪ್ರಮುಖ ಸ್ಥಾನವಿದೆ. ಪರಗೌಡ ಅವರ ಕೃಷಿ ಚಟುವಟಿಕೆಯೂ ಹೈನುಗಾರಿಕೆಯನ್ನು ಅವಲಂಭಿಸಿದೆ. ದೇಸೀಯ ದನಗಳಲ್ಲದೆ ಮೇಕೆಯನ್ನೂ ಸಾಕುತ್ತಾರೆ. ಅದರ ಗೊಬ್ಬರವನ್ನೂ ಕೃಷಿಗೆ ಬಳಸಿಕೊಳ್ಳುತ್ತಾರೆ. ಆಕಳಿಂದ ದೊರೆಯುವ ಸಗಣಿ ಮತ್ತು ಗಂಜಲವನ್ನು ಬಳಸಿ ಬಯೋಗ್ಯಾಸ್ ಉತ್ಪಾದನೆ ಮಾಡುತ್ತಿದ್ದು ಜೀವಾಮೃತ, ಗೋಕೃಪಾಮೃತ, ಗೋನಂದಾಜಲ, ಎನ್ಪಿಕೆಯಂತಹ ಸಾವಯವ ಗೊಬ್ಬರ ತಯಾರಾಗುತ್ತದೆ.
ತಾವು ತಯಾರಿಸುವ ಸಾವಯವ ಗೊಬ್ಬರವನ್ನು ತಮ್ಮ ಕೃಷಿ ಭೂಮಿಗೇ ಬಳಸಿಕೊಳ್ಳುತ್ತಾರೆ. ಅದನ್ನು ಉದ್ಯಮವನ್ನಾಗಿ ಮಾಡುವ ಅವಕಾಶವಿದ್ದರೂ, ಹಾಗೆ ಮಾಡದೆ ಸಾವಯವ ಗೊಬ್ಬರ ತಯಾರಿಕೆಯಲ್ಲಿ ಆಸಕ್ತಿ ಇರುವ ರೈತರಿಗೆ ಮಾಹಿತಿ ನೀಡಿ, ಅವರೇ ತಯಾರಿಸಿಕೊಳ್ಳುವಂತೆ ಪ್ರೋತ್ಸಾಹಿಸುತ್ತಿದ್ದಾರೆ. ಕನ್ನೇರಿ ಮಠದ ಶ್ರೀಗಳ ಮಾರ್ಗದರ್ಶನದಿಂದ ಸಾವಯವ ಗೊಬ್ಬರ ತಯಾರಿಸುತ್ತಿರುವುದಾಗಿ ಪರಗೌಡ ಸದಾಶಿವ ಶೇಗುಣಶಿ ಅವರು ಹೇಳುತ್ತಾರೆ.
“ನಾನು ಸಾವಯವ ಗೊಬ್ಬರ ತಯಾರಿಸುವುದು ದುಡ್ಡಿಗಾಗಿ ಅಲ್ಲ. ನನ್ನ ಕೃಷಿ ಭೂಮಿಯನ್ನು ರಾಸಾಯನಿಕಗಳಿಂದ ಮುಕ್ತವಾಗಿರಿಸಬೇಕು. ಆರೋಗ್ಯಯುತ ಆಹಾರ ಉತ್ಪನ್ನಗಳನ್ನು ಜನರಿಗೆ ನೀಡಬೇಕು ಎಂಬುದು ನನ್ನ ಉದ್ದೇಶ. ನಾನು ಕಲಿತದ್ದನ್ನು ಇತರರಿಗೂ ತಿಳಿಸಬೇಕು ಎಂಬ ಮನೋಭಾವದಿಂದ ಇತರರಿಗೆ ಮಾಹಿತಿ ಮಾರ್ಗದರ್ಶನ ನೀಡುತ್ತಿದ್ದೇನೆ” ಎನ್ನುವುದು ಅವರ ನಿಲುವು-ಒಲವು
ಪರಗೌಡ ಸದಾಶಿವ ಶೇಗುಣಶಿ ಅವರ ಕೃಷಿ ಮತ್ತು ಮೌಲ್ಯವರ್ಧನೆ ಚಟುವಟಿಕೆಗಳಿಗೆ ಕೃಷಿ ಇಲಾಖೆಯಿಂದಲೂ ಪ್ರೋತ್ಸಾಹ ದೊರೆತಿದೆ. ಅವರ ಸಾಧನೆಯನ್ನು ಗುರುತಿಸಿ ಕೃಷಿ ಇಲಾಖೆ ತಾಲೂಕು ಮಟ್ಟದ ಪ್ರಶಸ್ತಿ ನೀಡಿ ಗೌರವಿಸಿದೆ. ಸಿರಿಧಾನ್ಯಗಳ ಮೌಲ್ಯವರ್ಧನೆ ಕ್ಷೇತ್ರದಲ್ಲಿನ ಕಾರ್ಯಕ್ಕೆ ಬಾಗಲಕೋಟೆ ಜಿಲ್ಲಾಮಟ್ಟದ ಗೌರವವೂ ದೊರೆತಿದೆ. ಈ ಸಾಧನೆಯ ಹಿಂದೆ ಕುಟುಂಬದ ಸಹಕಾರವೂ ಇದೆ. ಪತ್ನಿ ನಿಂಬವ್ವ ಅವರ ಸಹಕಾರ ಮತ್ತು ಬೆಂಬಲ ಹಾಗೂ ತಂದೆ ಸದಾಶಿವ ಅವರ ಪ್ರೋತ್ಸಾಹ ತಮ್ಮ ಕೃಷಿ ಪಯಣದಲ್ಲಿ ಮಹತ್ವದ ಪಾತ್ರ ವಹಿಸಿದೆ ಎಂದು ಅವರು ಹೇಳುತ್ತಾರೆ.
ಕೃಷಿಯಲ್ಲಿದೆ ಅವಕಾಶ
ಕೃಷಿ ಕುಟುಂಬದ ಯುವಕರು ಪೇಟೆ ಪಟ್ಟಣಗಳಿಗೆ ಉದ್ಯೋಗವರಸಿ ಹೋಗುವ ಬದಲು ತಮ್ಮ ಕೃಷಿ ಭೂಮಿಯಲ್ಲೇ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು ಕೃಷಿ ಮಾಡಬಹುದು. ಕೇವಲ ಬೆಳೆ ಬೆಳೆಯುವುದಷ್ಟೇ ಅಲ್ಲದೆ, ಉತ್ಪನ್ನಗಳನ್ನು ಸಂಸ್ಕರಿಸಿ, ಮೌಲ್ಯವರ್ಧನೆ ಮಾಡಿ, ಬ್ರಾಂಡ್ ರೂಪಿಸಿ ನೇರವಾಗಿ ಗ್ರಾಹಕರಿಗೆ ತಲುಪಿಸುವ ಮೂಲಕ ಕೃಷಿಯನ್ನು ಆದಾಯದ ಉತ್ತಮ ಮೂಲವನ್ನಾಗಿ ರೂಪಿಸಬಹುದು. ಇದರಿಂದ ಕೃಷಿಯಲ್ಲಿ ಗೌರವಯುತ ಸಂಪಾದನೆಯನ್ನೂ ಮಾಡಬಹುದು. ಎಂದು ಪರಗೌಡ ಸದಾಶಿವ ಶೇಗುಣಸಿ ಅವರು ಹೇಳುತ್ತಾರೆ

ಕಬ್ಬನ್ನು ಕಚ್ಚಾ ಉತ್ಪನ್ನವಾಗಿ ಮಾರಾಟ ಮಾಡುವ ಬದಲು ಅದರಿಂದ ವಿವಿಧ ಬಗೆಯ ಬೆಲ್ಲ ತಯಾರಿಸಿ, ಎಣ್ಣೆಕಾಳುಗಳಿಂದ ಎಣ್ಣೆ ತೆಗೆದು, ಸಾವಯವ ಕೃಷಿಯೊಂದಿಗೆ ಹೈನುಗಾರಿಕೆಯನ್ನು ಬೆಸೆದು, ತಮ್ಮದೇ ಬ್ರಾಂಡ್ ನಿರ್ಮಿಸಿಕೊಂಡಿರುವ ಪರಗೌಡ ಸದಾಶಿವ ಶೇಗುಣಶಿ ಅವರ ಪ್ರಯತ್ನ, ಮೌಲ್ಯವರ್ಧನೆ ಕೃಷಿಕನ ಆದಾಯ ಹೆಚ್ಚಿಸುವ ಪ್ರಮುಖ ಮಾರ್ಗಗಳಲ್ಲಿ ಒಂದಾಗಿದೆ. ಇವರ ಸಂಪರ್ಕ ಸಂಖ್ಯೆ: 9591161766 / 9448819936








