ಬೆಟ್ಟ ಗುಡ್ಡಗಳಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಕಂಡು ಬರುವ ಮಧ್ಯಮ ಗಾತ್ರದ ಹುಳಿ ಹುಳಿ ನೆಲ್ಲಿಕಾಯಿಯನ್ನು ‘ಆಮ್ಲ’ ಅಥವಾ ‘ಇಂಡಿಯನ್ ಗೂಸ್ಬರ್ರಿ ಎಂಬ ಹೆಸರುಗಳಿಂದ ಕರೆಯಲ್ಪಡುತ್ತದೆ. ಈ ಬೆಟ್ಟದ ನೆಲ್ಲಿಯ ವೈಜ್ಞಾನಿಕ ಹೆಸರು ಎಂಬ್ಲಿಕಾ ಅಫಿಷಿನ್ಯಾಲಿಸ್ ಗಾರ್ಡನ್. ಬಿಟ್ಟರ್ ಈಸ್ ಬೆಟ್ಟರ್ ಇನ್ ವಿಂಟರ್ ಎನ್ನುವ ಹಾಗೆ ಬೆಟ್ಟದ ನೆಲ್ಲಿಯು ಕೆಮ್ಮು, ಕಫಕ್ಕೆ ರಾಮಬಾಣವಾಗಿದೆ. ಬೆಟ್ಟದ ನೆಲ್ಲಿಯಲ್ಲಿ ಅನೇಕ ಔಷಧಿ ಗುಣಗಳಿರುವುದರಿಂದ ಹಲವಾರು ವರ್ಷಗಳಿಂದ ಮನೆ ಮದ್ದಾಗಿದೆ. ಆಯುರ್ವೇದ ಔಷಧಿಗಳಾದ ಚವಾನ್ಪ್ರಶ್, ಮಧುಮೇಹ ಚೂರ್ಣಗಳ ತಯಾರಿಕೆಯಲ್ಲಿ ಬೆಟ್ಟದ ನೆಲ್ಲಿಯನ್ನು ಉಪಯೋಗಿಸುತ್ತಾರೆ.
1೦೦ ಗ್ರಾಮ್ ಬೆಟ್ಟದ ನೆಲ್ಲಿಕಾಯಿಯ ತಿರುಳಿನಲ್ಲಿರುವ ಪೋಷಕಾಂಶಗಳು
ತೇವಾಂಶ– 81.2 ೮೧.೨ಗ್ರಾಂ, ಪ್ರೋಟೀನ್-0.5 ೦.೫ಗ್ರಾಂ, ಜಿಡ್ಡು– 0.1 ೦.೧ಗ್ರಾಂ, ನಾರು-3.4 ೩.೪ಗ್ರಾಂ, ಶರ್ಕರಪಿಷ್ಟ-14 ಗ್ರಾಂ, ಸುಣ್ಣ– ೦.೦5ಗ್ರಾಂ, ರಂಜಕ–೦.೦2ಗ್ರಾಂ, ಕಬ್ಬಿಣ–೦.೦2 ಗ್ರಾಂ, ‘ಸಿ‘ ಜೀವಸತ್ವ-6೦೦-7೦೦ಮಿ.ಗ್ರಾಂ ‘ಬಿ‘ ಜೀವಸತ್ವ–೦.೦3ಮಿ.ಗ್ರಾಂ
ಪ್ರತಿ 1೦೦ಗ್ರಾಂ ಬೆಟ್ಟದ ನೆಲ್ಲಿಯಲ್ಲಿ 6೦೦-7೦೦ ಮಿಲಿಗ್ರಾಂ ನಷ್ಟು ಜೀವಸತ್ವ ‘ಸಿ’ ಇರುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಉಂಟುಮಾಡುತ್ತದೆ. ಅಲ್ಲದೇ ಕೇಶವರ್ಧಕ ಉತ್ಪಾದನೆಗಳಲ್ಲಿ ಶ್ಯಾಂಪೂ, ಎಣ್ಣೆ ಹಾಗೂ ನೈಸರ್ಗಿಕ ಹೇರ್ ಡೈಗಳಲ್ಲಿ ಉಪಯೋಗಿಸುತ್ತಾರೆ, ನೆಲ್ಲಿಕಾಯಿಯನ್ನು ಮೊರಬ್ಬ, ಉಪ್ಪಿನಕಾಯಿ, ಸುಫಾರಿ, ಕ್ಯಾಂಡಿ ಹಾಗೂ ಆಮ್ಲ ಚೂರ್ಣಗಳ ರೀತಿಯಲ್ಲಿ ಬಳಸಬಹುದಾಗಿದೆ.
ಜಾಮ್
ಸಾಮಾಗ್ರಿ: ಬೆಟ್ಟದ ನೆಲ್ಲಿಕಾಯಿ-2೦, ಬೆಲ್ಲ-5 ಕಪ್, ನೀರು– 1ಕಪ್.
ವಿಧಾನ: ನೆಲ್ಲಿಕಾಯಿಗಳನ್ನು ತೊಳೆದು ತುರಿದು ಬೇಯಿಸಿ. ಬೆಲ್ಲವನ್ನು ಕರಗಿಸಿ ಸೋಸಿ ಅದನ್ನು ಬೆಂದ ನೆಲ್ಲಿಕಾಯಿ ತುರಿಗೆ ಹಾಕಿ ಸಣ್ಣ ಉರಿಯಲ್ಲಿ ಗಟ್ಟಿಯಾಗುವವರೆಗೆ ತಿರುವುತ್ತ ಬೇಯಿಸಿ ಕೆಳಗಿಳಿಸಿ. ಈ ಮಿಶ್ರಣ ಆರಿದ ಮೇಲೆ ಡಬ್ಬಿಗೆ ಹಾಕಿಡಿ.
ನೆಲ್ಲಿಕಾಯಿ ಅಡಿಕೆ/ ಸುಫಾರಿ
ನೆಲ್ಲಿಕಾಯಿಗಳನ್ನು ನೀರಿನಲ್ಲಿ ಬೇಯಿಸಿ, ಕತ್ತರಿಸಿಕೊಳ್ಳಿ. ಬೀಜ ತೆಗೆದು ಜೀರಿಗೆ ಹಾಗೂ ಮೆಣಸಿನ ಪುಡಿ, ಮೊಸರಿಗೆ ಸೇರಿಸಿ ಉಪ್ಪು ಹಾಕಿ ಬೇಯಿಸಿದ ನೆಲ್ಲಿಕಾಯನ್ನು ಎರಡು ಘಂಟೆಗಳ ಕಾಲ ನೆನೆಸಿ. ನಂತರ ನೆನೆಸಿದ ನೆಲ್ಲಿಕಾಯಿ ಹೋಳುಗಳನ್ನು ತೆಗೆದು ಬಿಸಿಲಿನಲ್ಲಿ ಬಿಸಿಲಿಗೆ ಚೆನ್ನಾಗಿ ಒಣಗಿಸಿ, ಗಾಳಿಯಾಡದ ಡಬ್ಬದಲ್ಲಿ ಶೇಖರಿಸಿ.
ನೆಲ್ಲಿಕಾಯಿ ಕ್ಯಾಂಡಿ
ಬೇಕಾಗುವ ಸಾಮಗ್ರಿಗಳು: ನೆಲ್ಲಿಕಾಯಿ – 250 ಗ್ರಾಂ, ಸಕ್ಕರೆ -250 ಗ್ರಾಂ ಸಕ್ಕರೆ ಪುಡಿ -2 ಚಮಚ
ಮಾಡುವ ವಿಧಾನ : ಚೆನ್ನಾಗಿ ತೊಳೆದ ನೆಲ್ಲಿಕಾಯಿಯನ್ನು ಒರೆಸಿಕೊಳ್ಳಿ, ಒಂದು ಪಾತ್ರೆಯಲ್ಲಿ ಕುದಿಸಿದ ನೀರಿಗೆ ನೆಲ್ಲಿಕಾಯಿಯನ್ನು ಹಾಕಿ 2 ನಿಮಿಷ ಬೇಯಿಸಿ ನಂತರ ನೀರನ್ನು ಶೋಧಿಸಿ, ನೆಲ್ಲಿಕಾಯಿಯನ್ನು ಕತ್ತರಿಸಿಕೊಳ್ಳಿ, ನಂತರ ಸಕ್ಕರೆ ಸೇರಿಸಿ ಮೇಲ್ಭಾಗವನ್ನು ಮುಚ್ಚಿ ಒಂದು ಕಡೆ ಇಡಿ. ಮೂರನೇ ದಿನ ತಳದಲ್ಲಿ ಶೇಖರಣೆಗೊಂಡಿರುವ ಕತ್ತರಿಸಿದ ತುಂಡುಗಳನ್ನು ಬಿಸಿಲಿನಲ್ಲಿ 2 ದಿನಗಳ ಕಾಲ ಒಣಗಿಸಿ ನಂತರ ಸಕ್ಕರೆ ಪುಡಿ ಅದರ ಮೇಲೆ ಉದುರಿಸಿ, ಗಾಳಿಯಾಡದ ಬಾಟಲಿಯಲ್ಲಿ ಶೇಖರಿಸಿಡಿ.
ನೆಲ್ಲಿಯ ಸ್ಕಾö್ಯಶ್
ಬೇಕಾಗುವ ಸಾಮಾಗ್ರಿಗಳು: ನೆಲ್ಲಿಕಾಯಿ – 15, ಶುಂಠಿ – 1 ಚೂರು, ಜೀರಿಗೆ ಪುಡಿ – 1 ಚಮಚ
ಒಣಗಿದ ಶುಂಠಿ ಪುಡಿ – 1 ಚಮಚಕಾಳು ಮೆಣಸು – ಅರ್ಧ ಚಮಚ ಉಪ್ಪು – ರುಚಿಗೆ ತಕ್ಕಷ್ಟು
ಮಾಡುವ ವಿಧಾನ : ಚೆನ್ನಾಗಿ ತೊಳೆದ ನೆಲ್ಲಿಕಾಯಿಯನ್ನು ಒರೆಸಿಕೊಳ್ಳಿ, ಒಂದು ಪಾತ್ರೆಯಲ್ಲಿ ಕುದಿಸಿದ ನೀರಿಗೆ ನೆಲ್ಲಿಕಾಯಿಯನ್ನು ಹಾಕಿ 2 ನಿಮಿಷ ಬೇಯಿಸಿ ನಂತರ ನೀರನ್ನು ಶೋಧಿಸಿ, ನೆಲ್ಲಿಕಾಯಿಯನ್ನು ಕತ್ತರಿಸಿಕೊಳ್ಳಿ, ಕತ್ತರಿಸಿದ ಮೇಲ್ಭಾಗಕ್ಕೆ ಜೀರಿಗೆ ಹಾಗೂ ಶುಂಠಿ ಪುಡಿ ಸೇರಿಸಿ ನಂತರ ಸಕ್ಕರೆ ಸೇರಿಸಿ ಮೂರನೇ ದಿನ ನೆಲ್ಲಿಕಾಯಿಗಳು ತಳದಲ್ಲಿ ಶೇಕರಿಣೆಗೊಂಡಿರುತ್ತವೆ, ಶರಬತ್ತನ್ನು ಶೋಧಿಸಿ 2 ನಿಮಿಷ ಕುದಿಸಿ ಆರಿದ ಮೇಲೆ ಬಾಟಲಿಗೆ ಹಾಕಿಡಿ. ಇದನ್ನು ನೆಲ್ಲಿಕಾಯಿ ಶರಬತ್ತಿನಂತೆ ನೀರು ಸೇರಿಸಿ ಉಪಯೋಗಿಸಬಹುದು.
ನೆಲ್ಲಿಕಾಯಿ ಉಪ್ಪಿನಕಾಯಿ
ಸಾಮಗ್ರಿ: ನೆಲ್ಲಿಕಾಯಿ-10, ಮೆಂತ್ಯೆ ಕಾಳು-2 ಚಮಚ, ಸಾಸಿವೆ-1 ಚಮಚ, ಅರಶಿನ ಪುಡಿ–ಕಾಲು ಚಮಚ, ಅಚ್ಚ ಖಾರ ಪುಡಿ-3 ಚಮಚ, ಎಣ್ಣೆ-4 ಚಮಚ, ಉಪ್ಪು–ರುಚಿಗೆ ತಕ್ಕಷ್ಟು, ಹಸಿ ಮೆಣಸಿನಕಾಯಿ-4.
ಮಾಡುವ ವಿಧಾನ: ನೆಲ್ಲಿಕಾಯಿಯನ್ನು ಚೆನ್ನಾಗಿ ತೊಳೆದು ಒರೆಸಿ ಬೀಜ ತೆಗೆದು ಬಾಟಲಿಯಲ್ಲಿ ಹಾಕಿ ಇದಕ್ಕೆ ಸಾಸಿವೆ ಮತ್ತು ಮೆಂತ್ಯ ಕಾಳುಗಳನ್ನು ಹುರಿದು ಪುಡಿಮಾಡಿ ಉಪ್ಪು, ಅಚ್ಚಖಾರದ ಪುಡಿ, ಅರಿಶಿನ ಪುಡಿಯನ್ನು ಸೇರಿಸಿ ಚೆನ್ನಾಗಿ ಬೆರೆಸಿ ಮೂರು ದಿನಗಳ ಕಾಲ ಬಟ್ಟೆ ಕಟ್ಟಿ ಇಡಿ. ನಾಲ್ಕನೆಯ ದಿನ ಎಣ್ಣೆ ಬಿಸಿ ಮಾಡಿ ಸಾಸಿವೆ ಮತ್ತು ಇಂಗಿನ ಒಗ್ಗರಣೆ ಕೊಡಿ. ಇದನ್ನು ವರ್ಷಗಟ್ಟಲೆ ಶೇಖರಿಸಿ ಬಳಸಬಹುದು.
ನೆಲ್ಲಿಕಾಯಿ ಮೊರಬ್ಬ
ಸಾಮಾಗ್ರಿ: ಸ್ವಲ್ಪ ಕೆಂಪಗಾದ ನೆಲ್ಲಿಕಾಯಿ-1 ಕೆ.ಜಿ, ಸಕ್ಕರೆ–ಒಂದೂವರೆ ಕೆ.ಜಿ, ಏಲಕ್ಕಿ ಪುಡಿ–ಕಾಲು ಚಮಚ, ಕಾಳುಮೆಣಸಿನ ಪುಡಿ–ಸ್ವಲ್ಪ.
ನೆಲ್ಲಿಕಾಯಿಗಳನ್ನು ತೊಳೆದು ನೀರಿನಲ್ಲಿ ಒಂದು ದಿನ ನೆನೆಸಿಡಿ. ಮಾರನೇ ದಿನ ನೀರು ಬಸಿದು ನೆಲ್ಲಿಕಾಯಿಗೆ ನಾಲ್ಕೈದು ಕಡೆ ಚುಚ್ಚಿ. ಈ ನೆಲ್ಲಿಕಾಯಿಗಳಿಗೆ ಸಾಕಷ್ಟು ನೀರು ಹಾಕಿ ಐದು ನಿಮಿಷ ಕುದಿಸಿ ಆರಿಸಿ ಐದು ನಿಮಿಷ ಮುಚ್ಚಿಡಿ. ನಂತರ ನೆಲ್ಲಿಕಾಯಿಗಳನ್ನು ನೀರಿನಿಂದ ತೆಗೆದಿಡಿ. ಆ ನೆಲ್ಲಿಕಾಯಿಗಳಿಗೆ ಸಕ್ಕರೆ ಹಾಕಿ ಕಪ್ ನೀರು ಮತ್ತು ಹಾಕಿ ಚೆನ್ನಾಗಿ ತಿರುವಿ. ಸಕ್ಕರೆ ಕರಗಿ ಪಾಕ ಬಂದ ಮೇಲೆ ಏಲಕ್ಕಿ ಪುಡಿ, ಕಾಳುಮೆಣಸಿನ ಪುಡಿ ಹಾಕಿ ಚೆನ್ನಾಗಿ ಬೆರೆಸಿ ಆರಿದ ಮೇಲೆ ಬಾಟಲಿಯಲ್ಲಿ ತುಂಬಿಡಿ.
ನೆಲ್ಲಿಕಾಯಿ ಔಷಧೀಯ ಗುಣಗಳು:-
ತಾಜಾ ಹಣ್ಣು ಅಥವಾ ಹೋಳುಗಳನ್ನು ತಿನ್ನುತ್ತಿದ್ದಲ್ಲಿ, ಒಸಡುಗಳ ಊತ, ಕೀವು ಸೋರುವುದು, ಬಾಯಿಯ ದುರ್ಗಂಧ ಮುಂತಾದವು ಸುಲಭವಾಗಿ ದೂರಗೊಳ್ಳುತ್ತವೆ ಹಾಗೂ ಜೊಲ್ಲುರಸ ಹೆಚ್ಚಿನ ಪ್ರಮಾಣದಲ್ಲಿ ಉತ್ಪತ್ತಿಯಾಗುತ್ತದೆ.
ಚರ್ಮವ್ಯಾಧಿಗಳು ಹಾಗೂ ಶ್ವಾಸಕೋಶದ ತೊಂದರೆಗಳಿಂದ ರಕ್ಷಿಸಲು ನೆಲ್ಲಿ ಉಪಯುಕ್ತ.
ಯಕೃತ್ತಿನ ಶಕ್ತಿವರ್ಧಕ ಎಂದೇ ಖ್ಯಾತಿಯಾಗಿರುವ ನೆಲ್ಲಿ ಅತ್ಯಧಿಕ ಮೌಲ್ಯದ ಒಂದು ಪ್ರಮುಖ ಬೆಳೆ.
ಅಜೀರ್ಣ ಹಾಗೂ ವಾಯು ವಿಕಾರಗಳಿಂದ ಮುಕ್ತವಾಗಲು, ರಕ್ತದಲ್ಲಿ ಕೊಬ್ಬು ಮತ್ತು ಸಕ್ಕರೆ ಅಂಶ ಕಡಿಮೆ ಮಾಡಲು ಸಹಕಾರಿಯಾಗಿದೆ. ಮಧುವೇಹದಿಂದ ಉಂಟಾಗುವ ಮತ್ತು ಇನ್ನಿತರ ಕಣ್ಣಿನ ಬೇನೆಗಳ ನಿವಾರಣೆಯಲ್ಲಿ ನೆಲ್ಲಿಯ ಬಳಕೆ ಲಾಭದಾಯಕ
ಅಂಗಾಂಶಗಳ ವ್ಯವಸ್ಥೆಯನ್ನು ಪುನರುಜ್ಜೀವನಗೊಳಿಸುವಲ್ಲಿ, ಅದಕ್ಕೆ ಶಕ್ತಿಯನ್ನು ಕೊಡುವಲ್ಲಿ ಹಾಗೂ ಜೀವಕೋಶಗಳ ಆಂತರಿಕ ರಾಸಾಯನಿಕ ಕ್ರಿಯೆಯಿಂದಾಗುವ ಅಕಾಲ ಮುಪ್ಪಿನಿಂದ ನೆಲ್ಲಿ ರಕ್ಷಿಸಬಲ್ಲದು.
ಅತಿಸಾರವನ್ನು ಅಮರ್ಥವಾಗಿ ತಡೆಗಟ್ಟಬಲ್ಲದು ಹಾಗೂ ಸರಾಗವಾಗಿ ಮಲಮೂತ್ರಗಳ ವಿಸರ್ಜನೆಗೆ ಸಹಕರಿಸುತ್ತದೆ.
ಕೂದಲುಗಳ ಬುಡವನ್ನು ಸ್ಥಿರಗೊಳಿಸಿ ಅವುಗಳಿಗೆ ಶಕ್ತಿಯನ್ನು ನೀಡಿ, ಕಾಂತಿಯನ್ನು ಹೆಚ್ಚಿ, ತಲೆ ಹೊಟ್ಟು ನಿವಾರಣೆಗೊಳಿಸುವುದರ ಮೂಲಕ ಕೇಶವರ್ಧಕವಾಗಿ ಕೆಲಸ ಮಾಡುತ್ತದೆ.
ಮನೆಗೊಂದು ಮರ ನಾಡಿಗೊಂದು ಕಾಡು. ಆ ಕಾಡಿನಲ್ಲಿ ಯಪಯುಕ್ತವಾದ ಹಣ್ಣುಗಳನ್ನು ನೋಡಲು ಚೆಂದ. ಮನೆ ಅಂಗಳದಲ್ಲಿ ಗಿಡ ಬೆಳೆಸಿ ನಾಡು ಉಳಿಸಿ.
–ಜಯಲಕ್ಷ್ಮೀ ಪವಾರ್, ಪುಷ್ಪಾ. ಪಿ, ಅಂಬಿಕಾ, ಡಿ. ಎಸ್. ಮತ್ತು ನಂದಿನಿ ಬಿ,
ತೋಟಗಾರಿಕೆ ಮಹಾವಿದ್ಯಾಲಯ, ಕೋಲಾರ