spot_img
Tuesday, September 17, 2024
spot_imgspot_img
spot_img
spot_img

ಕೃಷಿ ರಂಗದಲ್ಲಿ ರೈತ ಪರವಾಗಿ ಕೆಲಸ ಮಾಡುವ ಕೆಲವು ವ್ಯವಸ್ಥೆಗಳ ಬಗ್ಗೆ – ಒಂದು ಚಿಂತನೆ

ಭಾರತದ ಕೃಷಿ ರಂಗಕ್ಕೆ ದೇಶ ಆರ್ಥಿಕ ವ್ಯವಸ್ಥೆಗಳಾದ ಬ್ಯಾಂಕುಗಳು, ಸಹಕಾರ ರಂಗ, ವಿತ್ತೇಯ ಸಂಸ್ಥೆಗಳ ಕೊಡುಗೆ ಅಪಾರ. ಕೃಷಿ ವ್ಯವಸ್ಥೆಗೆ ಆರ್ಥಿಕ ಸಹಾಯದ ಅಗತ್ಯ ಸದಾ ಇದ್ದು, ಇದು ದೇಶದ ಒಟ್ಟು ಉತ್ಪಾದನೆ (GDP), ರೈತರ ಆರ್ಥಿಕ, ಶೈಕ್ಷಣಿಕ ಹಾಗೂ ಸಮಾಜಿಕ ಅಭಿವೃದ್ಧಿಗೆ ಪೂರಕವಾಗಿ ಕೆಲಸವನ್ನು ಮಾಡಿ, ಕೃಷಿ ರಂಗ ಭಾರತದ ಒಂದು ಡೊಡ್ಡ ಆರ್ಥಿಕ ಶರ್ಕಿಯಾಗಿ ಮೂಡಿ ಬರುವಲ್ಲಿ ಸಹಕಾರಿಯಾಗಿದೆ. ಸಾಂಪ್ರದಾಯಿಕ ಸಾಲದ ವ್ಯವಸ್ಥೆಗಳನ್ನು ಮುಂದುವರಿಸಿಕೊಂಡು ಹೊಸ ಅವಿಸ್ಕಾರಗಳಿಗೆ ಒತ್ತು ಕೊಟ್ಟು, ಕೃಷಿಪರವಾದ ಹೊಸ ವ್ಯವಸ್ಥೆಗಳ ಬಗ್ಗೆ ರೈತರು ತಿಳಿದುಕೊಳ್ಳುವುದು ಉತ್ತಮ. ಇದು ರೈತಾಪಿ ವರ್ಗವನ್ನು ಬಡ್ಡಿ ವ್ಯಾಪಾರಿಗಳಿಂದ ಹಾಗೂ ದಲ್ಲಾಳಿಗಳಿಂದ ಪಾರಾಗುವಂತೆ ಮಾಡುವುದರಲ್ಲಿ ಸಹಕಾರಿಯಾಗಿದೆ. ಈ ನಿಟ್ಟಿನಲ್ಲಿ ರೈತ ಪರವಾಗಿ ಕೆಲಸ ಮಾಡುವ ಕೆಲವು ವ್ಯವಸ್ಥೆಗಳ ಬಗ್ಗೆ ಚಿಂತನೆ ಮಾಡಲಾಗಿದೆ..

ಕಿಸಾನ್‌ ಕ್ರೆಡಿಟ್‌ ಕಾರ್ಡ್‌ ಯಾ ಉತ್ಪಾಧನಾ ಸಾಲ :

ಇದರ ಮೂಲ ಉದ್ದೇಶ ಬೆಳೆಸಾಲದ ವ್ಯವಸ್ಥೆ. ರೈತರು ತಾವು ಬೆಳೆಯುವ ಬೆಳೆಗಳಿಗೆ ಬೇಕಾದ ಮೂಲ ವ್ಯವಸ್ಥೆಗಳಾದ ಬೀಜ, ಗೊಬ್ಬರ, ಕೀಟನಾಶಕ, ಮಾನವ ಸಂಪನ್ಮೋಲದ ಖರ್ಚುವೆಚ್ಚ, ಮಾರಾಟ ವ್ಯವಸ್ಥೆ ಇತ್ಯಾದಿಗಳನ್ನು ಗಣನೆಗೆ ತೆಗೆದುಕೊಂಡು ರೈತರ ಸ್ವಂತ ಖರ್ಚುವೆಚ್ಚಗಳನ್ನು ಪರಿಗಣಿಸಿ ಬೆಳೆಸಾಲದ ಮೊತ್ತವನ್ನು ಪ್ರತಿ ಬೆಳೆಗೆ ನಿರ್ಧಾರ ಮಾಡುತ್ತಾರೆ. ಈ ವ್ಯವಸ್ಥೆಯನ್ನು ರಾಜ್ಯದ ಬ್ಯಾಂಕುಗಳ ಸಮಿತಿ ಜಿಲ್ಲಾ ಮಟ್ಟದ ಸಮಿತಿ, ಬ್ಯಾಂಕುಗಳ ಘಟಕ ಸಮಿತಿ ( BLOCK LEVEL BANKERs COMMITTE) ಈ ಬಗ್ಗೆ ತುಲನ್ಮಾತಕವಾಗಿ ವಿಮರ್ಶೆಮಾಡಿ , ಪ್ರತಿ ಪ್ರದೇಶದ ಬೆಳೆಗಳಿಗೆ ಮೇಲೆ ತಿಳಿಸಿದ ಆಧಾರದ ಅಡಿಯಲ್ಲಿ ಬೌಗೋಳಿಕವಾಗಿ ಒಂದು ಸಾಲದ ಮೊತ್ತವನ್ನು ನಿಗದಿ ಮಾಡುತ್ತಾರೆ. ಇದರ ಮರು ಪಾವತಿ ಅವದಿ 6ತಿಂಗಳಿನಿಂದ 18 ತಿಂಗಳ ತನಕ ಬೆಳೆಯ ಅವಧಿಯನ್ನು ಗಣನೆಗೆ ತೆಗೆದುಕೊಂಡು ನಿರ್ಧಾರ ಮಾಡುತ್ತಾರೆ. ಉದಾಹರಣೆಗೆ ಹೇಳುವುದಾದರೆ ಭತ್ತ, ಗೋಧಿ , ಹೆಸರು, ಉದ್ದು ಇತ್ಯಾದಿಗಳ ಬೆಳೆ ಅವಧಿ 4ತಿಂಗಳು ಇರುತ್ತದೆ. ನಾವು ಕಬ್ಬು ಬೆಳೆಗಳನ್ನು ಪರಿಗಣಿಸಿದಾಗ ಇದರ ಅವಧಿ 12 ತಿಂಗಳಿನಿಂದ 18ತಿಂಗಳು ಇದ್ದು ಇದರ ಮರುಪಾವತಿ ಅವಧಿ 18 ತಿಂಗಳು ಆಗಿರುತ್ತದೆ. ಇದು ಹಳೇ ಸಂಪ್ರಾದಾಯದ ಬೆಳೆ ಸಾಲದ ವ್ಯವಸ್ಥೆ ಆಗಿದ್ದು, ಇದರಲ್ಲಿ ನಾವು ಕೆಲವು ನ್ಯೂನತೆಯನ್ನು ಕಾಣುತ್ತೇವೆ. ಇದು ರೈತರಿಗೆ ಒಂದು ಸುಲಭವಾಗಿ ನಿಭಾಯಿಸುವ ವ್ಯವಸ್ಥೆ ಆಗಿರುವುದಿಲ್ಲ.

ಮೇಲಿನ ಸಾಲದ ವ್ಯವಸ್ಥೆ ಅಡಿಯಲ್ಲಿ ನಾವು ಸಾಲವನ್ನು ವಾರ್ಷಿಕ ಅವಧಿಯಲ್ಲಿ ಕಟ್ಟಿ ಪುನ: ಸಾಲವನ್ನು ತೆಗೆದುಕೊಳ್ಳಬೇಕಾಗಿತ್ತು. ಇದು ರೈತರಿಗೆ ಒಂದು ಖರ್ಚು ಹಾಗೂ ಸಮಯದ ವ್ಯವಸ್ಥೆ ಆಗಿ, ರೈತ ಸ್ನೇಹಿಯಾಗಿ ಕೆಲಸವನ್ನು ಮಾಡಲಿಲ್ಲ. ಬದಲಾಗಿ ಇದು ರೈತರಿಗೆ ಒಂದು ಸಮಸ್ಯೆಯಾಗಿ ಪರಿಗಣಿಸಿ, ರೈತರು ಲೇವಾದೇವಿಗಾರರ ಮತ್ತು ದಲ್ಲಾಳಿಗಳ ಮೂಲಕ ತಮ್ಮ ಆರ್ಥಿಕವ್ಯವಸ್ಥೆಯನ್ನು ಮಾಡಿಕೊಳ್ಳುತ್ತಿದ್ದರು. ಇದು ಸಾಲದ ಮೂಲ ಉದ್ದೇಶಕ್ಕೆ ಮಾರಕವಾಗಿ ಪರಿಣಮಿಸಿ, ರೈತರ ಆರ್ಥಿಕ ಸಮಸ್ಯೆಯನ್ನು ನಿವಾರಣೆ ಮಾಡುವಲ್ಲಿ ಸರಕಾರದ ಉದ್ದೇಶ ವಿಫಲವಾಯಿತು. ಇದನ್ನು ಗಣನೆಗೆ ತೆಗೆದುಕೊಂಡು ಕೇಂದ್ರ ಸರಕಾರ , ರೈತ ಸ್ನೇಹಿಯಾದ ಕಿಸಾನ್‌ ಕ್ರೆಡಿಟ್‌ ಕಾರ್ಡ್‌ ಮೂಲಕ ಉತ್ಪಾದನ ಸಾಲದ ವ್ಯವಸ್ಥೆಯನ್ನು ಮಾಡಿತು. ಮೇಲೆ ತಿಳಿಸಿದ ಮುಖ್ಯವಾದ ಅಂಶಗಳನ್ನು ಗಣನೆಗೆ ತೆಗೆದುಕೊಂಡು ಸಾಲದ ಮೊತ್ತವನ್ನು ನಿಗದಿ ಮಾಡಿ, ಅವನ್ನು ಚಾಲ್ತಿ ಖಾತೆಯಾಗಿ ಪರಿರ್ವತಿಸಿ, ರೈತರು ತಮ್ಮ ಕೃಷಿ ಆದಾಯವನ್ನು ಈ ಖಾತೆಗೆ ಜಮಾಮಾಡಿ ತಮ್ಮ ಕೃಷಿ ಖರ್ಚು ವೆಚ್ಚಗಳನ್ನೂ ಆ ಖಾತೆಯಿಂದ ಚಕ್ಕ್‌ ಅಥವಾ ಕಾರ್ಡ್‌ ಮೂಲಕ ಸಂದಾಯ ಮಾಡಬಹುದು. ಈ ಸಾಲದ ಅವಧಿ ಹಿಂದೆ 3 ವರ್ಷ ಇದ್ದು ಈಗ ಸರಕಾರ 5 ವರ್ಷಕ್ಕೆ ವಿಸ್ತರಿಸಿದೆ. ಇದು ಪ್ರತಿ ವರ್ಷ ರೈತರು ಸಾಲ ತೆಗೆಯುವ ಬಗ್ಗೆ ಅದಕ್ಕೆ ಬೇಕಾದ ಕಾಗದ ಪತ್ರದ ಖರ್ಚನ್ನು ಮುದ್ರಾಂತ ಶುಲ್ಕ, ಜಮೀನಿನ ಆಧಾರ ಇತ್ಯಾದಿ ತೊಂದರೆಗಳನ್ನು ತಪ್ಪಿಸುತ್ತದೆ. ರೈತರು ಪ್ರತಿ ವರ್ಷ ಈ ಖಾತೆಯನ್ನು ವರ್ಷದ ಒಳಗೆ, ಬ್ಯಾಂಕಿನಿಂದ ಪರಿಶೀಲಿಸಿ, ತಮ್ಮ ಖಾತೆಯನ್ನು ಚಾಲ್ತಿಯಲ್ಲಿ ಇಡತಕ್ಕದ್ದು.

ಈ ವ್ಯವಸ್ಥೆಯ ಅಡಿಯಲ್ಲಿ ರೈತರ ಒಟ್ಟು ಕೃಷಿ ವ್ಯವಸ್ಥೆಯು ಜಮಾ ಅಥವಾ ಆದಾಯ ಹಾಗೂ ಖರ್ಚು ವೆಚ್ಚಗಳ ಬಗ್ಗೆ ರೈತರಿಗೆ ಹಾಗೂ ಬ್ಯಾಂಕಿನವರಿಗೆ ದೊರೆಕುತ್ತದೆ. ಇದರಿಂದ ಬ್ಯಾಂಕ್‌ ಮುಂದಿನ ರೈತರ ಕೃಷಿ ಆರ್ಥಿಕ ಸಹಾಯಕ್ಕಾಗಿ ನಿರ್ಧಾರ ತೆಗೆದುಕೊಳ್ಳುವಲ್ಲಿ ಮಾನದಂಡವಾಗಿದೆ. ನಿಗದಿತ ಸಮಯಕ್ಕೆ ಈ ವ್ಯವಸ್ಥೆಯನ್ನು ಮಾಡಿದರೆ ಸರಕಾರದ ಕಡಿಮೆ ಬಡ್ಡಿ ವ್ಯವಸ್ಥೆ ಮತ್ತು ಇತರ ಸರಕಾರದ ಸಹಾಯಗಳು ದೊರೆಯುವಲ್ಲಿ ಸಹಕಾರಿಯಾಗಿ ಕಾರ್ಯನಿರ್ವಹಿಸುತ್ತದೆ. ಕೇಂದ್ರ ಸರಕಾರದ ಫಸಲ್‌ ಭೀಮ ಯೋಜನೆ ಯಾ ಕೃಷಿ ವಿಮಾ ಯೋಜನೆಯನ್ನು ಕೂಡಾ ಈ ವ್ಯವಸ್ಥೆಗೆ ಜೋಡಿಸಲಾಗಿ, ರೈತ ಬೆಳೆ ನಾಶದ ಅಪಾಯವನ್ನು ತಪ್ಪಿಸಬಹುದು. 5ವರ್ಷದ ನಂತರ ಆಗಿನ ಮಾನದಂಡದ ಅಡಿಯಲ್ಲಿ ಸಾಲವನ್ನು ನವೀಕರಿಸಬಹುದು. ಈ ಸಾಲದ ವ್ಯವಸ್ಥೆ ಈಗ ತುಂಬಾ ಪ್ರಚಲಿತವಾಗಿದ್ದು, ಈ ಸುಧಾರಿತ ವ್ಯವಸ್ಥೆ 2004 ರಲ್ಲಿ ಮತ್ತು 2012ರಲ್ಲಿ ಇದರ ಲೋಪದೋಶಗಳನ್ನು ಗಣನೆಗೆ ತೆಗೆದುಕೊಂಡು ರೈತ ಸ್ನೇಹಿಯನ್ನಾಗಿ ಮಾಡಲಾಗಿದೆ. ಈಗಿನ ಕೇಂದ್ರ ಸರಕಾರದ ನೀತಿಯಲ್ಲಿ 2022ರಲ್ಲಿ ರೈತರ ಆದಾಯ ದ್ವಿಗುಣಗೊಳಿಸುವ ಗುರಿ ಹೊಂದಿದ್ದು, ಈ ವರ್ಷ ಅಂದರೆ 2020-21ರ ವಾರ್ಷಿಕ ಆಯವ್ಯಯ ಪಟ್ಟಿಯಲ್ಲಿ ಕೇಂದ್ರ ಸರಕಾರ ಪ್ರಾಮುಖ್ಯ ಗುರಿಯನ್ನು ಮುಂದಿರಿಸಿಕೊಂಡ ಈ ವಿತ್ತ ವರ್ಷದಲ್ಲಿ ಕೃಷಿಗೆ ರೈತರಿಗೆ ವಾರ್ಷಿಕ ಕೃಷಿ ಸಾಲ 15ಲಕ್ಷ ಕೋಟಿ ನೀಡಲು ಯೋಜನಾ ಬದ್ದವಾಗಿದೆ.

ಕೃಷಿ ಭೂಮಿ ಯಾಂತ್ರೀಕರಣದ ಬಗ್ಗೆ ಆಧ್ಯತೆ:

ಈ ಸಾಲ ವ್ಯವಸ್ಥೆಯ ಅಡಿಯಲ್ಲಿ ರೈತರು ತಮ್ಮ ಕೃಷಿ ಸಲಕರಣೆಗಳು, ಭೂಮಿ ಮತ್ತು ಕೃಷಿ ಮಾನವ ಸಂಪನ್ಮೊಲಕ್ಕೆ ಬೇಕಾದ ಪೊರಕ ವ್ಯವಸ್ಥೆ, ನೀರಾವರಿ ವ್ಯವಸ್ಥೆಗೆ , ದೀರ್ಘಾವಧಿ ಸಾಲದ ವ್ಯವಸ್ಥೆಯನ್ನು ಮಾಡುತ್ತಾರೆ. ವಿಶ್ವ ಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆಯ ಅಂದಾಜಿನಂತೆ ನಮ್ಮ ದೇಶದ ಶೇ50 ಕೃಷಿ ವ್ಯವಸ್ಥೆ ಯಾಂತ್ರೀಕರಣಕ್ಕೆ ಓತ್ತು ಕೊಟ್ಟಿದೆ. ಮತ್ತು ಹೆಚ್ಚು ಭೂಮಿಯ ಅಭಿವೃದ್ಧಿ ಬಗ್ಗೆ ಒತ್ತು ಕೊಡಬೇಕಾಗಿದೆ. ಸಣ್ಣ ಮತ್ತು ಅತೀ ಸಣ್ಣ ರೈತರು ಈ ವ್ಯವಸ್ಥೆಯಡಿಯಲ್ಲಿ ಬರುವುದಕ್ಕೆ ಅವರ ಆದಾಯ ಮತ್ತು ಆರ್ಥಿಕ ಶಕ್ತಿ ನೆರವಾಗುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ರೈತರು ಒಂದು ಗುಂಪು ರಚನೆ ಮಾಡಿ ಈ ಸಾಲದ ವ್ಯವಸ್ಥೆಯನ್ನು ಸಹಕಾರಿ ತತ್ಸದ ಅಡಿಯಲ್ಲಿ ಪಡೆದುಕೊಳ್ಳಬಹುದು. ಈ ವ್ಯವಸ್ಥೆ ಪಂಜಾಬ್‌, ಹರಿಯಾಣ, ಕೇರಳ , ಕರ್ನಾಟಕ ಮತ್ತು ಆಂದ್ರ ಪ್ರದೇಶದಲ್ಲಿ ಉತ್ತಮ ಕಾರ್ಯವನ್ನು ಮಾಡುತ್ತದೆ.

ತೋಟಗಾರಿಕಾ ವ್ಯವಸ್ಥೆ:

ಕಳೆದ 2ದಶಕಗಳಿಂದ ತೋಟಗಾರಿಕೆ ಬೆಳೆಗಳ ವಿಸ್ತರಣೆ ವಾರ್ಷಿಕವಾಗಿ 4% ಗಿಂತಲೂ ಹೆಚ್ಚಿದ್ದು, ಉತ್ಪಾಧನೆ ಕೂಡಾ ಹೆಚ್ಚಿದೆ. ಇದು ರೈತರು ಸುಧಾರಿತ ಕೃಷಿ ಪದ್ಧತಿಗೆ ಬದಲಾಗುತ್ತಿರುವ ಸಂಕೇತ. ರಾಷ್ಟ್ರೀಯ ತೋಟಗಾರಿಕಾ ಮಿಶನ್‌, ಹತ್ತನೇ ಪಂಚವಾರ್ಷಿಕ ಯೋಜನೆ ಅಡಿಯಲ್ಲಿ ಕೊಟ್ಟ ಉತ್ತೇಜನದ ಫಲ , ಈ ವೃದ್ಧಿಗೆ ಕಾರಣ ಎಂದರೆ ತಪ್ಪಾಗಲಾರದು. ಈ ನಿಟ್ಟಿನಲ್ಲಿ ಕೆಲವೊಂದು ಸಾಧನೆಗಳನ್ನು , ಉತ್ಪಾದನಾ ತಾಂತ್ರಿಕತೆ, ಪಾಲಿಮನೆ ಕೃಷಿ, ಟಿಸ್ಯು ಕ್ರಮದ ಕೃಷಿ ಅಧಿಕ ಮತ್ತು ಕಡಿಮೆ ಸಾಂದ್ರತೆಯ ಕೃಷಿ, ಸಮಗ್ರ ಕೀಟನಾಶಕ ನಿವಾರಣೆ , ನೀರಾವರಿ ಮೂಲಕ ಪೋಷಕಾಂಶಗಳ ವ್ಯವಸ್ಥೆ, ಹನಿ ನೀರಾವರಿ ವ್ಯವಸ್ಥೆ, ಸಾವಯವ ಕೃಷಿ ಪದ್ಧತಿ , ಇಸ್ರೇಲ್‌ ಕೃಷಿ ಪದ್ದತಿ ಇತ್ಯಾದಿ ಭಾರತದ ತೋಟಗಾರಿಕಾ ಕ್ರಾಂತಿಗೆ ಉದಾಹರಣೆಗಳು. ಈ ಕೃಷಿ ವ್ಯವಸ್ಥೆಗಳು ಹವಮಾನದ ಬಗ್ಗೆ ತಿಳುವಳಿಕೆ ಮತ್ತು ಕೃಷಿ ಆಸ್ಪತ್ರೆಗಳ ವ್ಯವಸ್ಥೆ, (AGRI CLINIC)ಕೃಷಿ ಅಪಾಯಗಳ ಬಗ್ಗೆ ಮುನ್ನೆಚ್ಚರಿಕೆ ಇತ್ಯಾದಿಗಳಿಗೆ ವ್ಯವಸ್ಥೆಯಲ್ಲಿ ಒತ್ತುಕೊಟ್ಟಿದೆ. ಭಾರತ ಈಗ ತೋಟಗಾರಿಕೆ ಬೆಳೆ ವ್ಯವಸ್ಥೆ ಅಡಿಯಲ್ಲಿ ಮುಂಚೂಣಿಯಲ್ಲಿ ಇದ್ದು, ನಮ್ಮ ಉತ್ಪಾದನೆಗೆ ಜಾಗತಿಕ ಮಟ್ಟದಲ್ಲಿ ಬೇಡಿಕೆ ಇದೆ.

ಜೈವಿಕ ತಂತ್ರಜ್ಞಾನ :

ಈ ವ್ಯವಸ್ಥೆಯಲ್ಲಿ ನಮ್ಮ ದೇಶ ಪ್ರಗತಿಯಲ್ಲಿ ಇದ್ದು ಮುಂದಿನ ಗುರಿ ಈ ಕ್ಷೇತ್ರದಲ್ಲಿ ರಾಷ್ಟ್ರವ್ಯಾಪಿ ತಾಂತ್ರಿಕತೆ ಅಭಿವೃದ್ಧಿ ಮಾಡಿ, ನಾವು ಕಂಪ್ಯೂಟರ್‌ ಕ್ಷೇತ್ರದಲ್ಲಿ ಮಾಡಿದ ಸಾದನೆಗೆ ಮಿಗಿಲಾದ ಸಾಧನೆಯನ್ನು ಮಾಡಬೇಕಾಗಿದೆ.

ಪೊರೆ ಕೃಷಿ ವ್ಯವಸಾಯ ( TISSUE CULTURE ) :

ಗುಣಮಟ್ಟದ ಬೀಜೋತ್ಪದನೆ ರೈತನ ಬೆಳೆ ಹಾಗೂ ಆದಾಯವನ್ನು ವೃದ್ದಿ ಮಾಡುವ ಸಲುವಾಗಿ ಸರಕಾರವು ಟಿಸ್ಯು ಆಧಾರಿತ ತೋಟಗಾರಿಕೆಯ ಕೃಷಿಗೆ ಉತ್ತೇಜನವನ್ನು ನೀಡುತ್ತದೆ. ಮುಖ್ಯವಾಗಿ ಬಾಳೆ ಕೃಷಿಯಲ್ಲಿ ಈ ವ್ಯವಸ್ಥೆ ಕ್ರಾಂತಿಯನ್ನು ಮಾಡಿದೆ ಎಂದರೆ ತಪ್ಪಾಗಲಾರದು.

ಸೌರವಿದ್ಯುತ್‌ ಯೋಜನೆಗಳು ಈ ವರ್ಷದ ಬಜೆಟ್‌ನಲ್ಲಿ ಪ್ರಧಾನ ಮಂತ್ರಿ ಕಿಸಾನ್‌ ಯೋಜನೆ ವಿಸ್ತರಿಸಿ 20ಲಕ್ಷ ಕೃಷಿಕರಿಗೆ ಸೋಲಾರ್‌ ಪಂಪ್‌ ಸೆಟ್ಟ ವಿತರಣೆಯ ಗುರಿ ಇದರಲ್ಲಿ ಉತ್ಪಾದಿಸಿದ ಹೆಚ್ಚುವರಿ ವಿದ್ಯುತ್‌ ನ್ನು ಸರಕಾರ ಖರೀದಿಸಿ ರೈತರ ಆದಾಯಕ್ಕೆ ಕೊಡುಗೆಯನ್ನು ನೀಡುತ್ತದೆ. ಈ ಬಗ್ಗೆ ವಿತ್ತೀಯ ಸಂಸ್ಥೆಗಳು ಸಾಲದ ವ್ಯವಸ್ಥೆ ಮಾಡಿ , ಸರಕಾರದ ನಿರ್ದೇಶನದಂತೆ ರೈತ ಸ್ನೇಹಿಯಾಗಿ ಕೆಲಸವನ್ನು ಮಾಡಬೇಕಾಗಿದೆ. ಇದು ದೇಶದ ರೈತರ ಆರ್ಥಿಕ ಶಕ್ತಿ ಹಾಗೂ ದೇಶದ ವಿಧ್ಯುತ್‌ ಕೊರತೆಗೆ ಕೂಡಾ ತನ್ನ ಕೊಡುಗೆಯನ್ನು ನೀಡಬಲ್ಲದು. ಮತ್ತು ಪೇಟ್ರೋಲಿಂ ಆಮದು ಕೂಡಾ ಕಡಿಮೆಯಾಗುವಂತೆ ಮಾಡಿ, ವಿದೇಶಿ ವಿನಿಮಯದ ಉಳಿತಾಯವನ್ನು ಮಾಡುತ್ತದೆ.

ಹಸಿರು ಮನೆ ತಾಂತ್ರಿಕತೆ : ಇದು ಕೂಡಾ ಪ್ರಾರಂಭ ಹಂತದಲ್ಲಿ ಇದ್ದು, ವಿಧ್ಯಾವಂತ ಮತ್ತು ದೊಡ್ಡ ಹಿಡುವಳಿದಾರ ರೈತರು ಈ ಬಗ್ಗೆ ಚಿಂತನೆ ಮಾಡಿ, ಮುಖ್ಯವಾಗಿ ಉತ್ಪಾದನೆಯ ನಿರ್ಯಾತಕ್ಕೆ ಒತ್ತನ್ನು ಕೊಡುತ್ತಾರೆ. ಈ ಕೃಷಿ ಪದ್ಧತಿಯಲ್ಲಿ ಗಿಡಗಳಿಗೆ ಹೆಚ್ಚು ಆಹಾರ ಉತ್ಪಾದನೆಗೆ ಅವಕಾಶವಿದ್ದು, ಕೀಟದಿಂದ ಹಾಗೂ ರೋಗದಿಂದ ರಕ್ಷಿಸಿಕೊಳ್ಳಬಲ್ಲದು. ಇದು ಕಡಿಮೆ ರಸಾಯನಿಕ ಗೊಬ್ಬರ ಹಾಗೂ ಕೀಟನಾಶಕಕ್ಕೆ ಕೂಡಾ ಪ್ರಯೋಜನ ಆಗಬಲ್ಲದು. ಹೆಚ್ಚಾಗಿ ಹೂ ಬೆಳೆಗಳು, ತರಕಾರಿ ಅಧಿಕ ದರದ ಕೃಷಿ ಉತ್ಪನ್ನಗಳಿಗೆ ಅಧ್ಯತೆ ಕೊಟ್ಟು ರೈತರು ಹೆಚ್ಚು ವರಮಾನಗಳನ್ನು ಗಳಿಸಿಬಹುದು. ಇದಕ್ಕೆ ಸರಕಾರವು ಹೆಚ್ಚು ಅನುದಾನ ನೀಡಿ, ರಾಷ್ಟ್ರೀಯ ತೋಟಗಾರಿಕಾ ಸಂಸ್ಥೆ, ರಾಜ್ಯ ತೋಟಗಾರಿಕಾ ವಿಭಾಗ , ರಾಷ್ಟ್ರೀಯ ತೋಟಗಾರಿಕ ಮಿಶನ್‌, ಮತ್ತು ಅಫೇಡಾ ಇತ್ಯಾದಿ ಸಂಸ್ಥೆಗಳ ನೆರವನ್ನು ನೀಡುತ್ತದೆ. ಸರಕಾರ ಈ ನಿಟ್ಟಿನಲ್ಲಿ ಸಣ್ಣ ಹಾಗೂ ಅತೀ ಸಣ್ಣ ರೈತರಿಗೆ ಒತ್ತನ್ನು ನೀಡುತ್ತದೆ.

ಸಾವಯವ ಕೃಷಿ ಪದ್ಧತಿ: ಸಾವಯವ ಕೃಷಿ ಈಗ ಪ್ರಾಮುಖ್ಯತೆಯನ್ನು ಗಳಿಸುತ್ತಿದ್ದು, ಸರಕಾರಗಳು ಕೂಡಾ ಉತ್ತೇಜನವನ್ನು ನೀಡುತ್ತವೆ. ಸಾವಯವ ಕೃಷಿ ಉತ್ಪನ್ನಗಳಿಗೆ ದೇಶೀಯ ಹಾಗೂ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಿದ್ದು, ಇದು ರೈತರ ಆದಾಯಕ್ಕೆ ಪೂರಕವಾಗಿ ಕೆಲಸವನ್ನು ಮಾಡುತ್ತದೆ. ಇದಕ್ಕೆ ಬೇಕಾದ ಮೂಲಭೂತ ವ್ಯವಸ್ಥೆ, ಸಾವಯವ ಗೊಬ್ಬರ ಹಾಗೂ ಕೀಟನಾಶಕಗಳು ಇದರ ಯಾಂತ್ರೀಕರಣಕ್ಕೆ ಸರಕಾರಗಳು ಆಧ್ಯತೆಯನ್ನು ಕೊಟ್ಟು ರೈತರು ತಮ್ಮ ಕೃಷಿ ಭೂಮಿಯನ್ನು ಸಾವಯವ ವ್ಯವಸ್ಥೆಗೆ ಬದಲಾವಣೆಯನ್ನು ಮಾಡಲು ಆಧ್ಯತೆಯನ್ನು ಕೊಟ್ಟು ನಮ್ಮ ರಾಜ್ಯ ಈ ವ್ಯವಸ್ಥೆಯಲ್ಲಿ ಪ್ರಥಮ ಸ್ಥಾನದಲ್ಲಿ ಇದ್ದು ಮಾದರಿಯಾಗಿದೆ.

ಇದು ಅಲ್ಲದೆ ಕರಾರು ಕೃಷಿ ಪದ್ಧತಿ , ಉತ್ಪಾದನೆ , ತಯಾರು, ಸಂಸ್ಕರಣೆ, ಮಾರುಕಟ್ಟೆ ಸಾಗಣೆ ದೇಶೀಯ ಹಾಗೂ ಅಂತರಾಷ್ಟ್ರೀಯ ಮಾರುಕಟ್ಟೆಗೆ ತಮ್ಮ ಉತ್ಪಾದನೆಯನ್ನು ನಿಗದಿತ ಮಾನದಂಡ ವ್ಯವಸ್ಥೆಯಲ್ಲಿ ಮಾರಟ ಮಾಡುವ ಎರ್ಪಾಡನ್ನು ಕೂಡಾ ಮಾಡುತ್ತದೆ.

ಗೋದಾಮು ಮತ್ತು ಶೀತಲೀಕರಣ ವ್ಯವಸ್ಥೆ: ರೈತರು ಈ ನಿಟ್ಟಿನಲ್ಲಿ ಪ್ರಾಮುಖ್ಯತೆಯನ್ನು ನೀಡುತ್ತಿದ್ದು, ತನ್ನ ಕೃಷಿ ಉತ್ಪಾದನೆಯನ್ನು ಗುಣಮಟ್ಟದ ಗೋದಾಮು ಮತ್ತು ಶೀತಲೀಕರಣ ವ್ಯವಸ್ಥೆಯಲ್ಲಿ ಕಾಪಿಟ್ಟು ಉತ್ತಮ ದರದಲ್ಲಿ ಮಾರಾಟ ಮಾಡುವ ಯೋಜನೆಯನ್ನು ನಿರೂಪಿಸುತ್ತಾರೆ. ಸರಕಾರಗಳು ಈ ಬಗ್ಗೆ ಉತ್ತೇಜನವನ್ನು ನೀಡಿ ನಬಾರ್ಡ್‌ , ವಿತ್ತಿಯ ಸಂಸ್ಥೆಗಳು ಮತ್ತು ಬ್ಯಾಂಕುಗಳ ಮೂಲಕ ಈ ವ್ಯವಸ್ಥೆ ನಿರ್ಮಾಣಕ್ಕೆ ಸಾಲವನ್ನು ನೀಡುವಂತೆ ಮಾಡಿ ಅದಕ್ಕೆ ಸಹಾಯ ಧನ ಈ ಬಗ್ಗೆ ತಾಂತ್ರೀಕತೆಗೆ ರಾಷ್ಟ್ರೀಯ ಗೋದಾಮು ನಿಗಮ ಮಾರ್ಗದರ್ಶನ ನೀಡುವಂತೆ ಮಾಡಿ ಸಾರ್ವಜನಿಕ , ರೈತರು, ಹಾಗೂ ಖಾಸಗಿ ಒಗ್ಗೂಡುವಿಕೆಯಲ್ಲಿ ಹೊಸ ಯೋಜನೆಯನ್ನು ಅನುಷ್ಠಾನಗೊಳಿಸುವಲ್ಲಿ ನೆರವಾಗುತ್ತದೆ.

ಉತ್ಪಾದನಾ ಕಂಪನಿಗಳು ಮತ್ತು ರೈತ ಬೆಳೆಗಾರರ ಸಂಸ್ಥೆಗಳ ಒಡಂಬಡಿಕೆ:

ಸಣ್ಣ ಅತೀ ಸಣ್ಣ ರೈತರಿಗೆ ಇಂತಹ ಸುಧಾರಿತ ಉತ್ಪಾಧನೆ ಮತ್ತು ಮಾರುಕಟ್ಟೆ ವ್ಯವಸ್ಥೆಯಲ್ಲಿ ಭಾಗ್ಯದಾರಿಯಾಗುವುದಕ್ಕೆ ಸಾಧ್ಯವಿಲ್ಲ. ಈ ರೈತರ ಬಗ್ಗೆ ಮಾಹಿತಿ ತಂತ್ರಜ್ಣಾನ , ತರಬೇತಿ ಇಲ್ಲದೆ ರೈತರು ನಷ್ಟಕ್ಕೆ ಪರಿವರ್ತಿತವಾಗುವ ಅಪಾಯ ಇದೆ. ಈ ನಿಟ್ಟಿನಲ್ಲಿ ಕೆಲವು ಉತ್ಪಾನಾ ಕಂಪೆನಿಗಳು ಇವರ ಉತ್ಪಾದನೆಯನ್ನು ಸಂಗ್ರಹಿಸಿ ಒಟ್ಟು ಸೇರಿಸಿ, ಗುಣಮಟ್ಟದ ನಿಖರತೆಯನ್ನು ಕಾಪಾಡಿಕೊಂಡು ಮಾರುಕಟ್ಟೆ ವ್ಯವಸ್ಥೆಯನ್ನು ಮಾಡುತ್ತಾರೆ. ಈ ವ್ಯವಸ್ಥೆಗಳು ರೈತರಿಗೆ ತರಬೇತಿ, ತಂತ್ರಜ್ಞಾನ , ಮಾಹಿತಿ, ಗೊಬ್ಬರದ ಆಯ್ಕೆ , ಉಪಯೋಗ, ನೀರಾವರಿ ವ್ಯವಸ್ಥೆಯ ನೂತನ ಆವಿಸ್ಕಾರದ ಬಗ್ಗೆ ಅರಿವು ರೋಗ ಹಾಗೂ ಕೀಟನಾಶಕ ವ್ಯವಸ್ಥೆ, ಬಳಕೆದಾರರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿಕೊಂಡು , ರೈತರು ಉತ್ಪಾದನೆ ಹೆಚ್ಚಿಸಿ , ರೈತರನ್ನು ದಲ್ಲಾಳಿಗಳಿಂದ ತಪ್ಪಿಸಿ, ಕೃಷಿ ಲಾಭದಾಯಕ ಉಧ್ಯಮವಾಗುವಲ್ಲಿ ನೇರವನ್ನು ನೀಡುತ್ತಾರೆ. ಕೃಷಿ ಒಂದು ಉದ್ಯಮ . ಇದು ಲಾಭದಾಯಕವಾಗ ಬೇಕಾದರೆ ಇಂತಹ ಹೊಸ ಅವಿಷ್ಕಾರಗಳು, ಹಳೆ ಕೃಷಿ ಪದ್ಧತಿ ಜತೆಯಲ್ಲಿ ಸೇರಿಕೊಂಡು ಈ ಸ್ಪರ್ಧಾತ್ಮಕ ಯುಗದಲ್ಲಿ ನಮ್ಮ ರೈತರು ಸ್ಪಂದಿಸಿ, ಕೃಷಿಯು ಲಾಭದಾಯಕವಾಗಿ ಮಾಡಿಕೊಳ್ಳುವುದು ಗುರಿಯಾಗಿದೆ ಮತ್ತು ಅವಶ್ಯಕವಾಗಿದೆ.

ಜಯರಾಮ ರೈ ನುಳಿಯಾಲು

ನುಳಿಯಾಲು ಫಾರ್ಮ್ಸ್‌ – ಸಂಪ್ಯ

ಕುರಿಯ ಗ್ರಾಮ ಮತ್ತು ಅಂಚೆ

ಪುತ್ತೂರು ತಾಲೂಕು 574210

spot_img

ಸಂಬಂಧಿತ ಲೇಖನಗಳು

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group