spot_img
Sunday, September 8, 2024
spot_imgspot_img
spot_img
spot_img

ಹಸಿರು ರಸಗಳ ಮಹತ್ವವನ್ನು ಒಂದಷ್ಟು ತಿಳಿದುಕೊಳ್ಳಿ!

-ಡಾ. ಎಂ.ಜಿ.ಬಸವರಾಜ

ಇಂದು ಎಲ್ಲರೂ ತಮ್ಮ ಮನೆಯಲ್ಲಿ ರೆಫ್ರಿಜರೇಟರ್ ಇಟ್ಟುಕೊಳ್ಳಬೇಕು ಎಂಬ ಮನೋಭಾವದಲ್ಲಿದ್ದಾರೆ ಗ್ರಾಮಾಂತರ ಪ್ರದೇಶಗಳಲ್ಲಿಯೂ ರೆಪ್ರಿಜರೇಟರ್ ಇಟ್ಟುಕೊಳ್ಳುವ ಅಭ್ಯಾಸವಾಗುತ್ತಿದೆ. ರೆಫ್ರಿಜರೇಟರ್ ಕಂಡು ಹಿಡಿದ ಉದ್ದೇಶ ಬೇರೆ ಇತ್ತು. ಇಂದು ಮೊಸರು, ಮಜ್ಜಿಗೆ, ಹಾಲು, ಹಣ್ಣು, ಸಾಂಬಾರು, ತಿಳಿಸಾರು, ಅನ್ನ ದೋಸೆ ಇಡ್ಲಿ ಹಿಟ್ಟು, ಉಪ್ಪಿನಕಾಯಿ, ಇಟ್ಟುಕೊಂಡು ಬಳಸುತ್ತಾರೆ. ಮೈಯಲ್ಲಿ ಕಸುವು, ಶಾಖ ಇರುವವರಿಗೆ ತಕ್ಷಣವೇ ರೆಫ್ರಿಜರೇಟರ್ ತಂಗಳು ಪದಾರ್ಥಗಳ ಅಪಾಯ, ಅವು ತಂದೊಡ್ಡುವ ಸಮಸ್ಯೆಗಳ ಅರಿವು, ಪರಿಜ್ಞಾನವಿರುವುದಿಲ್ಲ. ಈಗಿನ ಉದ್ಯೋಗದ ಒತ್ತಡಗಳು, ದೂರಕ್ಕೆ ವಾಹನಗಳನ್ನು ಚಲಿಸುವುದು, ಕೂತಲ್ಲಿ ಕೂರುವುದು, ವ್ಯಾಯಾಮ ಇಲ್ಲದಿರುವುದು, ಹೊರಗಿನ ತಿಂಡಿ ತಿನಿಸುಗಳನ್ನು ತಿನ್ನುವುದು, ಎ.ಸಿ ಹಾಕಿಕೊಂಡು ಕೆಲಸ ಮಾಡುವುದು, ಇಂತಹ ಜೀವನ ಶೈಲಿ, ಇವೆಲ್ಲ ಒಟ್ಟಾಗಿ ಕೂಡಿ ಮಾನಸಿಕ ಮತ್ತು ದೈಹಿಕ ನೋವುಗಳು ಬರುವಂತೆ ಮಾಡುತ್ತವೆ. ತಲೆನೋವು, ಕೈಕಾಲು, ಬೆನ್ನು ನೋವು ಮುಂತಾದವುಗಳು ಜನರನ್ನು ಕಾಡುತ್ತದೆ

ಕಾಲಿನ್ ಕ್ಯಾಂಪ್‌ಬೆಲ್ ಎಂಬ ಆಹಾರ ತಜ್ಞ ಮತ್ತು ಅವರ ಮಗ ಥಾಮಸ್ ಕ್ಯಾಂಪ್‌ಬೆಲ್ ಅವರು ಬರೆದಿರುವ ಪುಸ್ತಕದಲ್ಲಿ ಹಾಗೂ ಡೀನ್ ಓರ್ನಿಶ್, ಕೀತ್ ಸ್ಕಾಟ್ ಮಂಬಿ ಅವರುಗಳು ಸಸ್ಯಾಹಾರಗಳಿಂದ ಅನೇಕ ಕಾಯಿಲೆ ವಾಸಿಯಾಗುತ್ತವೆ ಎಂದು ತಿಳಿಸಿದ್ದಾರೆ. ಇವರಿಗಿಂತ ಬಹಳ ಹಿಂದೆ ನಮ್ಮ ಆಯುರ್ವೇದ ಋಷಿ ಪರಂಪರೆಯಲ್ಲಿ ನಮ್ಮ ಸುತ್ತಮುತ್ತ ಜಮೀನುಗಳಲ್ಲಿ ಬೆಳೆಯುವ ಸೊಪ್ಪುಗಳ ಶ್ರೇಷ್ಠತೆಯನ್ನು ತಿಳಿಸಲಾಗಿದೆ. ನೈಸರ್ಗಿಕವಾಗಿ ಅಣ್ಣಿಸೊಪ್ಪು, ಕೊಮ್ಮೆ ಸೊಪ್ಪು, ಗೊರ್ಜಿ ಸೊಪ್ಪು, ಬಳೆ ಒಡಕೆ, ಸಬ್ಬಸಿಗೆ, ಮುಳ್ಳು ದಂಟು, ಶಂಖ ಪುಷ್ಪ, ಕಾಡುಬಸಳೆ, ನೆಲಬಸಳೆ, ಬಳ್ಳಿ ಬಸಳೆ, ಪುಂಡಿ ಸೊಪ್ಪು , ನುಗ್ಗೆ ಸೊಪ್ಪು ,ಹಾಲೇ ಸೊಪ್ಪು , ಹಾಲೆ ಸೊಪ್ಪು, ದೊಡ್ಡಪತ್ರೆ, ನೆಲಬೇವು, ಹೊನೆಗೊನೆ ಸೊಪ್ಪು , ಹೀಗೆ ಪ್ರಕೃತಿ ಮಾತೆಯು ವೈವಿಧ್ಯಮಯ ಸೊಪ್ಪುಗಳನ್ನು ನೀಡಿದ್ದಾಳೆ. ಮಳೆಗಾಲದಲ್ಲಿ ಅನೇಕ ಸೊಪ್ಪುಗಳು ತಾವಾಗಿಯೇ ಬೆಳೆಯುತ್ತವೆ.

ನಮ್ಮ ಸುತ್ತಮುತ್ತ ಬಳೆದಿರುವ ನೈಸರ್ಗಿಕ ಸೊಪ್ಪುಗಳನ್ನು ಕಳೆಯೆಂದು ಭಾವಿಸಬಾರದು. ಅವುಗಳು ಆಹಾರ ಸಂಜೀವಿನಿಗಳು, ರೋಗನಿರೋಧಕ ಉಚಿತವಾಗಿ ದೊರೆಯುವ ಮನೆ ಔಷಧಿಗಳು. ತಿಳಿದಂತವರು ನೈಸರ್ಗಿಕ ಸೊಪ್ಪುಗಳನ್ನು ತಿನ್ನಲು ಪ್ರಾರಂಭಿಸಿದ್ದಾರೆ. ನೈಸರ್ಗಿಕ ಸೊಪ್ಪುಗಳನ್ನು ತಂದು ಚೆನ್ನಾಗಿ ಶುಚಿಗೊಳಿಸಿ ಮಿಕ್ಸಿಯಲ್ಲಿ ಅರೆದು ರಸವನ್ನು ಸೋಸಿ ಹಿಂಡಿಕೊಂಡು ಹಸಿರು ರಸ ತಯಾರಿಸಿ ಕುಡಿಯುತ್ತಾರೆ.

ಸೊಪ್ಪು ತರಕಾರಿಗಳಿಂದ ರಸವನ್ನು ಸಂಗ್ರಹಿಸುವುದನ್ನು ಇಂಗ್ಲೀಷಿನಲ್ಲಿ ಗ್ರೀನ್ ಜ್ಯೂಸ್ ಎಂದು ಕರೆದಿದ್ದಾರೆ. ದಿನಕ್ಕೆ ಒಂದು ಲೋಟ ಗ್ರೀನ್ ಜ್ಯೂಸ್ ಕುಡಿಯುವುದರಿಂದ ಒಟ್ಟಾರೆ ಆರೋಗ್ಯ ಮತ್ತು ಯೋಗಕ್ಷೇಮ ದೊರಕಲು ಸೊಪ್ಪುಗಳಲ್ಲಿರುವ ಜೀವಸತ್ವಗಳು ಮತ್ತು ಪೋಷಕಾಂಶಗಳು ಕಾರಣವಾಗಿವೆ. ಪ್ರಾರಂಭದಲ್ಲಿ ಕೆಲವರಿಗೆ ಗ್ರೀನ್ ಜ್ಯೂಸ್ ಕುಡಿಯಲು ಕಷ್ಟವಾಗಬಹುದು. ಕಾರಣ ಹಣ್ಣಿನ ರಸದಂತೆ ಸಿಹಿಸ್ವಾದ ಹಾಗೂ ಪರಿಮಳವನ್ನು ಹೊಂದಿರುವುದಿಲ್ಲ. ಹಸಿರು ಸೊಪ್ಪು ಗಳ ರಸದಲ್ಲಿ ಜೀವ ರಕ್ಷಕ ನೀರು, ಶಕ್ತಿ ಕೊಡುವ ಕ್ಯಾಲೋರಿಗಳು, ಪ್ರೋಟೀನ್‌ಗಳು, ಕಿರು ರೂಪದ ನಾರುಗಳು, ಖನಿಜಾಂಶಗಳು, ಜೀವಸತ್ವಗಳು, ಅಮೀನೋ ಆಮ್ಲಗಳು, ವಿವಿಧ ಪೈಥೋರಾಸಾಯಿನಿಕಗಳು ಜೀವಕೋಶ ರಕ್ಷಕಗಳು ಇರುತ್ತವೆ.

ರೈತರು, ಆರ್ಥಿಕವಾಗಿ ಅನಾನುಕೂಲ ಸ್ಥಿತಿಯಲ್ಲಿ ಇರುವವರು, ಕಿರು ಸಂಸಾರದವರು, ಆಧುನಿಕ ಶೈಲಿಯ ಮಾತ್ರೆ ಮದ್ದುಗಳು ಒಗ್ಗದವರು, ತೀರಾ ದುರ್ಬಲ ಸ್ಥಿತಿ ಹೋದವರಿಗೆ ಗ್ರೀನ್ ಜ್ಯೂಸ್ ಬಹಳ ಉಪಕಾರಿ. ತಮ್ಮ ಸುತ್ತಮುತ್ತ ಹಾಗೂ ಜಮೀನುಗಳಲ್ಲಿ ಶುದ್ಧವಾಗಿ ತಾನೇ ತಾನಾಗಿ ಬೆಳೆದ, ಉಚಿತವಾಗಿ ಸುಲಭವಾಗಿ ದೊರೆಯುವ ಸೊಪ್ಪುಗಳಿಂದ ಗ್ರೀನ್ ಜ್ಯೂಸ್ ತಯಾರಿಸಿಕೊಂಡು ಸುಖ ಸಂತೋಷದಿಂದ ಇರಬಹುದು

spot_img

ಸಂಬಂಧಿತ ಲೇಖನಗಳು

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group