ಕಾರ್ಕಳ: ರಾಜ್ಯ, ಕೇಂದ್ರ ಸರಕಾರಗಳ ರೈತ ವಿರೋಧಿ ನೀತಿ ನಿಯಮಗಳ ವಿರುದ್ಧ ಸದಾ ಧ್ವನಿ ಎತ್ತಿ ಸಂಘಟಿತ ಹೋರಾಟ, ಪ್ರತಿಭಟನೆ ಮೂಲಕ ರೈತರ ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಭಾ.ಕಿಸಂ. ಹಕ್ಕೋತ್ತಾಯ ನಡೆಸುತ್ತಲೇ ಬರುತ್ತಿದೆ. ದೇಶಕ್ಕೆ ಆಹಾರ ಬೆಳೆದು ನೀಡುವ ರೈತರ ಪರ ನಿಲ್ಲಲೇ ಬೇಕಾದ ಸರಕಾರಗಳು ರೈತ ವಿರೋಧಿಗಳಾಗುತ್ತಿರುವುದು ದೇಶದ ಬಹು ದೊಡ್ಡ ದುರಂತವಾಗಿದೆ ಎಂದು ಭಾ. ಕಿ. ಸಂ ಘಟಕ ಕಾರ್ಯ ಪ್ರವೃತ್ತರಾಗುವಂತೆ ಭಾ.ಕಿ.ಸಂ.ದಕ್ಷಿಣ ಪ್ರಾಂತ್ಯ ಕಾರ್ಯದರ್ಶಿ ಪ್ರವೀಣ್ ಕುಮಾರ್ ದಾವಣಗೆರೆ ಹೇಳಿದರು
ಭಾರತೀಯ ಕಿಸಾನ್ ಸಂಘ, ಕರ್ನಾಟಕ ಪ್ರದೇಶ (ರಿ ), ದಕ್ಷಿಣ ಪ್ರಾಂತ್ಯ, ಉಡುಪಿ ಜಿಲ್ಲಾ ಕಾರ್ಕಳ ತಾಲ್ಲೂಕು ಸಮಿತಿಯ ಮಾಸಿಕ ಸಭೆಯು ಇತ್ತೀಚೆಗೆ ಕಾರ್ಕಳ ಕಾರ್ಯಲಯದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಭಾಗವಹಿಸಿ ಮಾತನಾಡಿದ ಪ್ರವೀಣ್ ಕುಮಾರ್ ದಾವಣಗೆರೆ ಅವರು ಸಂಘಟನೆಯ ಉದ್ದೇಶ ಹಾಗೂ ಮಹತ್ವ ಮತ್ತು ರೈತ ಪರವಾದ ಹೋರಾಟಗಳನ್ನು ತಿಳಿಸಿದರು.
ಸಭೆಯ ಅಧ್ಯಕ್ಷತೆಯನ್ನು ಭಾ.ಕಿ.ಸಂ ತಾಲೂಕು ಘಟಕದ ಅಧ್ಯಕ್ಷರಾದ ಗೋವಿಂದ ರಾಜ್ ಭಟ್ ಕಡ್ತಲ ವಹಿಸಿದ್ದರು. ಅವರು ಮಾತನಾಡಿ ಹೈನುಗಾರರಿಗೆ ರಾಜ್ಯ ಸರಕಾರ ಹಾಲಿನ ಪ್ರೋತ್ಸಾಹ ಧನ ಬಿಡುಗಡೆ ಮಾಡದೆ ಸತಾಯಿಸುತ್ತಾ ಬರುತ್ತಿದ್ದು ಇತ್ತೀಚಿಗೆ ಹಿಂದಿನ 6 ತಿಂಗಳ ಬಾಕಿ ಹಾಗೆಯೇ ಉಳಿಸಿಕೊಂಡು ಮಾರ್ಚ್ ಮತ್ತು ಏಪ್ರಿಲ್ ತಿಂಗಳ ಪ್ರೋತ್ಸಾಹಧನವೆಂದು ಸ್ವಲ್ಪ ಮೊತ್ತ ಬಿಡುಗಡೆಗೊಳಿಸಿದೆ. ಹಿಂದಿನ 6 ತಿಂಗಳ ಬಾಕಿ ಮೊತ್ತವನ್ನು ತಕ್ಷಣ ಬಿಡುಗಡೆಗೊಳಿಸುವಂತೆ ಒತ್ತಾಯಿಸಿದರು.
ಜಿಲ್ಲಾ ಉಪಾಧ್ಯಕ್ಷರಾದ ಶ್ರೀನಿವಾಸ್ ಭಟ್ ಇರ್ವತ್ತೂರು ಮಾತನಾಡಿ ನಾವು ಉತ್ಪಾದನೆ ಮಾಡುವ ಹಾಲನ್ನು ವಿವಿಧ ಉತ್ಪನ್ನಗಳಾಗಿ ಮೌಲ್ಯವರ್ಧನೆಗೊಳಿಸಲು ಮನಸ್ಸು ಮಾಡಿದ್ದಲ್ಲಿ ಹಾಲಿನ ಉತ್ಪನ್ನಗಳ ಬೇಡಿಕೆ ನಮ್ಮ ಮನೆ ಬಾಗಿಲಿಗೆ ಬರುವುದು ಖಂಡಿತ ಎಂಬ ವಿಶ್ವಾಸ ವ್ಯಕ್ತ ಪಡಿಸಿದರು. ತಾನು ಮಾಡುತ್ತಿರುವ ಹೈನು ಉದ್ಯಮದ ಬಗ್ಗೆ ವಿವರಿಸಿದರು. ಸುಂದರ ಶೆಟ್ಟಿ ವರಂಗ, ನಿರ್ಮಲ ಮಿಯ್ಯಾರು, ಅನಂತ್ ಭಟ್ ಇರ್ವತ್ತೂರು, ಚಂದ್ರಹಾಸ ಶೆಟ್ಟಿ ಇನ್ನಾ ಗ್ರಾಮ ಮತ್ತು ತಾಲೂಕು ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು