ಪೇರಳೆ ಚಿಗುರಿನ ತಂಬುಳಿ
ಬೇಕಾಗುವ ಸಾಮಗ್ರಿಗಳೇನು?
ಪೇರಳೆ ಚಿಗುರು 15-20, ಹಸಿಶುಂಠಿ 1 ಇಂಚು ಉದ್ದದ್ದು, ತೆಂಗಿನ ತುರಿ ಅರ್ಧ ಕಪ್, ಕಾಳು ಮೆಣಸು 10-15, ಜೀರಿಗೆ ಮೆಣಸು 4, ಬೆಲ್ಲ ಅರ್ಧ ಚಮಚ, ಜೀರಿಗೆ ಅರ್ಧ ಚಮಚ, ಮೊಸರು ಯಾ ಮಜ್ಜಿಗೆ 1 ಕಪ್, ರುಚಿಗೆ ಉಪ್ಪು, ಒಗ್ಗರಣೆಗೆ ಸಾಸಿವೆ, ಉದ್ದಿನ ಬೇಳೆ, ಒಣ ಮೆಣಸು, ಕರಿಬೇವಿನ ಎಲೆ, ಸ್ವಲ್ಪ ತುಪ್ಪ ಯಾ ಎಣ್ಣೆ
ಹೀಗೆ ಮಾಡಿ:
ಪೇರಳೆ ಚಿಗುರನ್ನು ತೊಳೆದು ಸ್ವಚ್ಛಗೊಳಿಸಿ. ಒಂದು ಬಾಣಲೆಗೆ ಸ್ವಲ್ಪ ತೆಂಗಿನೆಣ್ಣೆ ಹಾಕಿ ಪೇರಳೆ ಚಿಗುರು, ಕಾಳುಮೆಣಸು, ಜೀರಿಗೆ, ಜೀರಿಗೆ ಮೆಣಸು, ಹಸಿಶುಂಠಿ ಹಾಕಿ ಸ್ವಲ್ಪ ಹುರಿಯಿರಿ. ನಂತರ ಮಿಕ್ಸಿ ಪಾತ್ರೆಗೆ ಹುರಿದ ಸಾಮಾನು, ತೆಂಗಿನ ತುರಿ, ರುಚಿಗೆ ಉಪ್ಪು ಹಾಕಿ ರುಬ್ಬಿ. ಮೊಸರು ಸೇರಿಸಿ. ನಂತರ ತುಪ್ಪದಿಂದ ಮಾಡಿದ ಒಗ್ಗರಣೆ ಮಾಡಿದರೆ ರುಚಿಯಾದ ಪೇರಳೆ ಚಿಗುರು ತಂಬುಳಿ ಸವಿಯಲು ಸಿದ್ಧ.
ಪೇರಳೆ ಚಿಗುರು ಜೀರ್ಣಕಾರಿ. 15 ದಿನಕ್ಕೊಮ್ಮೆ ಇದರ ತಂಬುಳಿ ಸೇವಿಸಿದರೆ ಆರೋಗ್ಯಕ್ಕೆ ಒಳ್ಳೆಯದು. ಇದು ನಾಲಿಗೆಯನ್ನು ಸ್ವಚ್ಛಗೊಳಿಸುತ್ತದೆ. ದಿನಾಲೂ 1-2 ಪೇರಳೆ ಚಿಗುರನ್ನು ಹಸಿಯಾಗಿಯೇ ತಿನ್ನಬೇಕು. ತಲೆಯಲ್ಲಿ ಹೇನಿದ್ದರೆ ಪೇರಳೆ ಎಲೆಗಳನ್ನು ರುಬ್ಬಿ ತಲೆಗೆ ಹಚ್ಚಿ 1-2 ಗಂಟೆ ಬಿಟ್ಟು ತಲೆ ಸ್ನಾನ ಮಾಡಬೇಕು.
ಬರಹ: ಪುಷ್ಪಾ ಎಸ್.ಗೋರೆ