spot_img
Wednesday, October 23, 2024
spot_imgspot_img
spot_img
spot_img

ಹುಣಸೆ ಚಿಗುರು, ಪ್ರಯೋಜನ ನೂರು: ಕೃಷಿಗೂ ಹುಣಸೆ ಚಿಗುರು ಪೂರಕ ಶಕ್ತಿ!

ಜನರಿಗೆ ರೋಗ ಬರದಂತೆ ಕಾಪಾಡುವ ಅಸಂಖ್ಯಾತ ಗಿಡ, ಮರ, ಬಳ್ಳಿ, ಗೆಡ್ಡೆ, ಗೆಣಸು ಮೊದಲಾದ ಉತ್ಪನ್ನಗಳನ್ನು ಪ್ರಕೃತಿ ಮಾತೆ ನಮಗೆಲ್ಲ ನೀಡಿದ್ದಾಳೆ. ಅಂತವುಗಳಲ್ಲಿ ಹುಣಸೆ ಪ್ರಮುಖವಾದುದು. ಹುಣಸೆ ಚಿಗುರು, ಮೊಗ್ಗು, ಹೂವುಗಳನ್ನು ಜನರು ತಮ್ಮ ಅಡುಗೆ, ಆಹಾರಗಳಲ್ಲಿ ಬಳಸಬೇಕು. ಇದು ಪ್ರಕೃತಿಯಲ್ಲಿ ಜನರಿಗೆ ಉಚಿತವಾಗಿ, ಸುಲಭವಾಗಿ ದೊರೆಯುವ ಆಹಾರದ ತರಕಾರಿ ಹಾಗೂ ಔಷಧೀಯ ತರಕಾರಿಯಾಗಿದೆ.

ಹುಣಿಸೆ ಚಿಗುರು, ಮೊಗ್ಗು, ಹೂಗಳಿಂದ ರುಚಿಕರ ಸಾಂಬಾರ್, ಸೂಪ್, ಪಲ್ಯ ತಿಳಿಸಾರುಗಳನ್ನು ತಯಾರಿಸಬಹುದು. ಒಂದೇ ಬಗೆಯ ಆಹಾರ ಉಣ್ಣಲು ಯಾರಿಗೂ ಆಗಲಿ ಬೇಸರವಾಗುತ್ತದೆ. ಆದ್ದರಿಂದ ಬದಲಾವಣೆ ಆಹಾರ ತಯಾರಿಸಲು ಹುಣಸೆ ಗಿಡದ ಈ ಉತ್ಪನ್ನಗಳು ಸಹಾಯ ಮಾಡುತ್ತವೆ. ಈ ಉತ್ಪನ್ನಗಳನ್ನು ಬಳಸುವುದರಿಂದ ಜನರನ್ನು ಬಹಳಷ್ಟು ಕಾಡಬಹುದಾದ ವಾತ, ಪಿತ್ತ, ಕಫದ ಸಮಸ್ಯೆಗಳನ್ನು ಪವಾಡ ರೀತಿ ದೂರವಾಗುತ್ತವೆ.

ಯಾವುದೇ ರೀತಿಯು ಅಡ್ಡ ಪರಿಣಾಮಗಳು ಇರುವುದಿಲ್ಲ. ಜೀರ್ಣಕ್ರಿಯೆಯನ್ನು ಸುಗಮಗೊಳಿಸುವ ನೈಸರ್ಗಿಕ ಶಕ್ತಿ ಸಾಮರ್ಥ್ಯ ಈ ಉತ್ಪನ್ನಗಳಲ್ಲಿದೆ. ಈ ಉತ್ಪನ್ನಗಳು ವರ್ಷದಲ್ಲಿ ಒಂದು ತಿಂಗಳು ದೊರೆಯುತ್ತದೆ. ನಂತರ ಹುಣಸೆ ಕಾಯಿಯಾಗಿ ಬಿಡುತ್ತವೆ. ಹುಣಸೆಕಾಯಿ ಆದ ನಂತರ ಅದರ ರಸದಿಂದ ಗೊಜ್ಜು, ಚಿತ್ರಾನ್ನ, ಸಾಂಬಾರು ಹುಳಿ ಹುಣಸೆ ಚಟ್ನಿ ತಯಾರಿಸಿಕೊಳ್ಳಬಹುದು. ಹುಳಿಗಾಯಿ ಎಂದು ಚಿತ್ರದುರ್ಗ, ಉತ್ತರ ಕರ್ನಾಟಕ, ಮಹಾರಾಷ್ಟ್ರ ಮುಂತಾದ ಕಡೆ ತಯಾರಿಸಿಕೊಳ್ಳುತ್ತಾರೆ.

ಹಸಿಮೆಣಸಿನ ಕಾಯಿ, ಅರಿಷಿಣ, ಮೆಂತ್ಯ, ಉಪ್ಪು, ಹುಣಸೆ ಕಾಯಿ ಬೇಯಿಸಿ ಹಿಂಡಿಕೊಂಡ ರಸದಿಂದ ಹುಳಿಗಾಯಿ ತಯಾರಿಸುತ್ತಾರೆ. ಇದನ್ನು ಉಪ್ಪಿನಕಾಯಿ ರೀತಿಯಲ್ಲಿಯೂ ಬಿಸಿ ಅನ್ನದ ಮೇಲೆ ಸುರಿದುಕೊಂಡು, ತುಪ್ಪ ಹಾಕಿಕೊಂಡು ಊಟ ಮಾಡುತ್ತಾರೆ. ಇದು ಸಹ ದೇಹದ ಇಡೀ ದೇಹದ ಶುದ್ಧೀಕರಣಕ್ಕೆ ಸಹಾಯ ಮಾಡುತ್ತದೆ. ಬಾಯಿಯನ್ನು ಸ್ವಚ್ಛಗೊಳಿಸುತ್ತದೆ, ರಸಗ್ರಂಥಿಗಳು ಚುರುಕಾಗುತ್ತವೆ. ದೇಹಕ್ಕೆ ಬೇಕಾದ ಪೋಷಕಾಂಶಗಳು ದೊರೆಯುತ್ತವೆ. ಹುಣಿಸೆ ಚಿಗುರು, ಮೊಗ್ಗು, ಹೂ ಆಂಟಿ ಆಕ್ಸಿಡೆಂಟ್‌ಗಳು (ಉತ್ಕರ್ಷಣ ನಿರೋಧಕಗಳು), ಫೈಟೋ ರಾಸಾಯನಿಕಗಳು, ಎ, ಸಿ, ಇ, ಕೆ, ಬಿ ವಿಟಮಿನ್‌ಗಳು, ಮೆಗ್ನೇಷಿಯಂ, ಫಾಸ್ಪರಸ್, ಕ್ಯಾಲ್ಸಿಯಂ, ಪ್ರೊಟೀನ್‌ಗಳನ್ನು ಹುಣಸೆ ಚಿಗುರು ಒಳಗೊಂಡಿದ್ದು ಒಂದು ಪೌಷ್ಟಿಕವಾದ ಹಾಗೂ ಉಚಿತವಾಗಿ ಸಿಸನ್ ಎಲೆ ತರಕಾರಿಗಳಾಗಿವೆ

ಬೇಸಿಗೆ ಕಾಲದಲ್ಲಿ ಬಾಯಾರಿಕೆ ಹಿಂಗಲು ಮತ್ತು ದೇಹದ ದ್ರವ ಶಕ್ತಿ ಹೆಚ್ಚಲು ನಿಂಬೆಹಣ್ಣು, ಕಿತ್ತಳೆ ಹಣ್ಣು, ಅನಾನಸ್ ಪೈನಾಪಲ್, ಬೇಲದ ಹಣ್ಣು, ಕಲ್ಲಂಗಡಿ ಪಾನಕಗಳನ್ನು ಬೆಲ್ಲ, ಸಕ್ಕರೆ, ಜೋನಿಬೆಲ್ಲ, ಯಾಲಕ್ಕಿ, ಕೇಸರಿ ಬಳಸಿ ತಯಾರಿಸಿಕೊಂಡು ಕುಡಿಯುವ ವಾಡಿಕೆ ಇದೆ. ಇವೆಲ್ಲ ಆರೋಗ್ಯ ವೃದ್ಧಿಗೆ ಬಹಳ ಸಹಾಯ ಮಾಡುತ್ತದೆ. ಮಜ್ಜಿಗೆ ಎಳೆನೀರು ಸಹ ಕುಡಿಯುತ್ತಾರೆ. ಅದರಂತೆ ಇವಾವೂ ಸಿಗದಿದ್ದಾಗ ಹುಣಸೆ ಚಿಗುರು ಕುದಿಸಿದಾಗ ಹುಳಿ ಕಷಾಯ ದೊರೆಯುತ್ತದೆ. ಇದಕ್ಕೆ ಬೆಲ್ಲ, ಕಲ್ಲುಸಕ್ಕರೆ, ಯಾಲಕ್ಕಿ ಪುಡಿ, ಕೇಸರಿ ಹಾಕಿ ಪಾನಕ ಮಾಡಿ ಕುಡಿಯಬಹುದು. ಇದರಿಂದ ನಾವ್ಯಾರೂ ನಿರೀಕ್ಷಿಸದ ರೀತಿಯಲ್ಲಿ ನಮ್ಮ ವಿವಿಧ ಆರೋಗ್ಯ ಅನಾನುಕೂಲತೆಗಳು ನಿವಾರಣೆಯಾಗಿ ದೇಹದ ಕಸುವು ಮತ್ತು ಚೈತನ್ಯ ಲವಲವಿಕೆಗಳು ಅಭಿವೃದ್ಧಿಗೊಳ್ಳುತ್ತವೆ. ಪಾನಕದ ರುಚಿಯ ಮೇಲೆ ಬಗೆಗೆ ಯಾರು ತಕರಾರು ತೆಗೆಯಬಾರದು. ಆರೋಗ್ಯದ ಬಗೆಗೆ ಗಮನ ನೀಡಬೇಕು.

ಆರೋಗ್ಯವೇ ಭಾಗ್ಯ:

ಇದೊಂದು ಸಹಜ ಸ್ಥಿತಿ. ಆರೋಗ್ಯವಿದ್ದಾಗ ಯಾವ ನೋವು ದುಗುಡ ದುಮ್ಮಾನಗಳಿರುವುದಿಲ್ಲ. ನಾವದನ್ನು ತಿಳಿದೋ ತಿಳಿಯದೆಯೋ ಮಾಡಿದ ಆಚಾತುರ್ಯ, ತಪ್ಪುಗಳಿಂದ ಆರೋಗ್ಯದ ಸಹಜ ಸ್ಥಿತಿಯಲ್ಲಿ ಏರುಪೇರು ಉಂಟಾದರೆ ಉಸಿರಾಟ, ರಕ್ತ ಸಂಚಾರ, ಪಚನಕ್ರಿಯೆ, ಶೌಚಕ್ರಿಯೆ ಮುಂತಾದವುಗಳಲ್ಲಿ ಅಸಹಜತೆ ಉಂಟಾಗಿ ರೋಗರು ರುಜಿನಗಳು ಭಾಧಿಸ ತೊಡಗುತ್ತವೆ. ಇದರಿಂದ ರೋಗಿಷ್ಠ ವ್ಯಕ್ತಿಯು ನೋವು ಅನುಭವಿಸುವುದರ ಜೊತೆಗೆ ಮನೆ-ಮಂದಿ ನೋವಿಗೆ ಒಳಗಾಗಿ ಸಂಕಟ ಪಡುತ್ತಾರೆ.

ಈ ಅಸಹಜ ಪರಿಸ್ಥಿತಿಯಿಂದ ಸಹಜ ಪರಿಸ್ಥಿತಿಗೆ ಬರುವಂತೆ ಮಾಡಲು ಪ್ರಕೃತಿ ಮಾತೆ ನಮ್ಮ ಸುತ್ತಮುತ್ತಲು ಬೇಕಾದಷ್ಟು ಆಹಾರ ಔಷಧಿಗಳನ್ನು ನೀಡಿರುವುದನ್ನು ತಿಳಿದುಕೊಂಡು ಪ್ರಯೋಜನ ಪಡೆದುಕೊಳ್ಳಬೇಕು ಎಂದು ನಿಸರ್ಗ ಚಿಕಿತ್ಸೆಯಲ್ಲಿ ಹೇಳಲಾಗಿದೆ. ಹುಣಸೆ ಚಿಗುರಿನ ಸದ್ಬಳಕೆಯಿಂದ ಮಧುಮೇಹ, ಪಿತ್ತವಿಕಾರ, ಚರ್ಮರೋಗಗಳು, ಸ್ಕರ್ವಿ ರೋಗ, ಅಲ್ಸರ್, ಕ್ಯಾನ್ಸರ್ ಮೊದಲಾದುವುಗಳನ್ನು ಹದ್ದು ಬಸ್ತಿನಲ್ಲಿಡಲು ಸಹಾಯ ಮಾಡುತ್ತದೆ. ಗಾಯಗಳು ವೇಗವಾಗಿ ಗುಣವಾಗಲು ನೆರವಾಗುತ್ತದೆ. ಅಪೌಷ್ಟಿಕತೆ, ನಿಶಕ್ತಿಗಳನ್ನು ನಿವಾರಿಸುವಲ್ಲಿ ಸಹಕಾರಿಯಾಗಿದೆ.

ಕಣ್ಣುರಿ,ಕಣ್ಣು ನೋವು, ಕಣ್ಣು ಕೆಂಪು, ಕೈ ಕಾಲು ಊತ, ಮೂಳೆ ನೋವು, ಮೈಕೈ ನೋವು, ಟಾನ್ಸಿಲ್, ರಕ್ತ ಬೇಧಿ, ಶೀತ ಬೇಧಿ, ಪಿತ್ತ ವಿಕೃತಿ ಮುಂತಾದ ಅನಾರೋಗ್ಯ ಸಮಸ್ಯೆಗಳಿಗೆ ಹುಣಸೆ ಚಿಗುರು, ಮೊಗ್ಗು, ಹೂವು, ಎಲೆಗಳಿಂದ ಸಿದ್ಧೌಷಧಿ ನೀಡುತ್ತಾರೆ. ಬಡವ ಬಲ್ಲಿದರು ಬಳಸಬಹುದಾದ ಸ್ಥಳೀಯವಾಗಿ ದೊರೆಯುವ ಉಚಿತ ಪೌಷ್ಟಿಕ ರುಚಿಕರ ಸೊಪ್ಪು ತರಕಾರಿ ಯಾಗಿದೆ.

ಹುಣಸೆ ಗಿಡದ ಎಲೆಗಳಿಂದ ಎರೆಹುಳು ಗೊಬ್ಬರ, ಸಾವಯವ ಗೊಬ್ಬರ ತಯಾರಿಸಿಕೊಂಡು ಉತ್ತಮ ಬೆಳೆಗಳನ್ನು ಬೆಳೆದುಕೊಳ್ಳಬಹುದು. ಇದರ ಒಣಗಿದ ಕಡ್ಡಿ ಕಸಗಳು ನೀರು ಕಾಯಿಸಲು ಅಡಿಗೆ ಮಾಡಲು ನೆರವಾಗುವುದಲ್ಲದೆ ಬೆಳೆಗಳಿಗೆ ಬೇಕಾದ ಬೂದಿ ಗೊಬ್ಬರ ದೊರೆಯುತ್ತದೆ. ಟನ್‌ಗಟ್ಟಲೆ ಆಕ್ಸಿಜನ್ ಹುಣಸೆ ಮರಗಳು ನೀಡುತ್ತವೆ.

ಬರಹ: ಡಾ.ಎಂ.ಜಿ.ಬಸವರಾಜ ಮೈಸೂರು

spot_img

ಸಂಬಂಧಿತ ಲೇಖನಗಳು

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group