spot_img
Saturday, July 27, 2024
spot_imgspot_img
spot_img
spot_img

ಮಾಹಿತಿ ಹಕ್ಕು ಕಾಯ್ದೆಯಿಂದ ನಿಮಗಾಗುವ ಉಪಯೋಗಗಳೇನು?:ಕೃಷಿಕರೇ ಒಂದಷ್ಟು ತಿಳ್ಕೊಳ್ಳಿ:

ಭಾರತವು ವಿಶ್ವದಲ್ಲೇ ಅತಿ ದೊಡ್ಡದಾದ ಲಿಖಿತ ಸಂವಿಧಾನವನ್ನು ಹೊಂದಿರುವ ಒಂದು ಬೃಹತ್ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ. ಪ್ರಜೆಗಳು ಪ್ರಭುಗಳಾಗಲು ಆಡಳಿತದಲ್ಲಿ ಮುಕ್ತತೆ, ಸ್ಪಷ್ಟತೆ ಮತ್ತು ಪಾರದರ್ಶಕ ಬಹಳ ಮುಖ್ಯ. ಈ ಹಿನ್ನೆಲೆಯಲ್ಲಿ ಮಾಹಿತಿ ಹಕ್ಕು ಮೂರು ಮುಖ್ಯ ಅಂಶಗಳನ್ನು ಒಳಗೊಂಡಿದೆ.

* ಸರಕಾರ ಮತ್ತು ಕೆಲವೊಮ್ಮೆ ಖಾಸಗಿ ಸಂಸ್ಥೆಗಳಿಂದ ಪ್ರತಿಯೊಬ್ಬ ನಾಗರಿಕನು ಮಾಹಿತಿ ಪಡೆಯುವ ಹಕ್ಕನ್ನು ಹೊಂದಿರುತ್ತಾನೆ

* ವಿನಾಯಿತಿ ಹೊರತುಪಡಿಸಿ ಕೇಳಿರುವ ಮಾಹಿತಿಯನ್ನು ನೀಡುವುದು ಸರಕಾರದ ಕರ್ತವ್ಯವಾಗಿದೆ.

* ನಾಗರಿಕರು ಅರ್ಜಿ ಸಲ್ಲಿಸಿ ಯಾವುದೇ ಮಾಹಿತಿಯನ್ನು ಕೇಳದಿದ್ದರೂ ಕೆಲವೊಂದು ಮಾಹಿತಿಗಳನ್ನು ಸ್ವಪ್ರೇರಣೆಯಿಂದ ಪ್ರಕಟಿಸುವುದು ಸಾರ್ವಜನಿಕ ಪ್ರಾಧಿಕಾರಗಳ ಜವಾಬ್ದಾರಿಯಾಗಿದೆ. ಈ ರೀತಿಯಲ್ಲಿ ಮಾಹಿತಿ ಹಕ್ಕು ಎಲ್ಲಾ ನಾಗರಿಕರ ಒಂದು ಮೂಲಭೂತ ಹಕ್ಕಾಗಿದೆ. ತಿಳಿಯುವ ಹಕ್ಕಾಗಿದೆ ಮತ್ತು ಬದುಕುವ ಹಕ್ಕಾಗಿದೆ

ಮಾಹಿತಿ ಹಕ್ಕು ಕಾಯ್ದೆ ೨೦೦೫

ಆಡಳಿತದಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ತಂದು ನಾಗರಿಕರಿಗೆ ಮಾಹಿತಿಯನ್ನು ವಿಳಂಬವಿಲ್ಲದAತೆ ದೊರಕುವಂತೆ ಮಾಡಲು ಕೇಂದ್ರ ಸರಕಾರವು ೧೩-೧೦-೨೦೦೫ರಿಂದ ಮಾಹಿತಿ ಹಕ್ಕು ಕಾಯ್ದೆಯನ್ನು ಜಾರಿಗೆ ಗೊಳಿಸಿದೆ. ಕರ್ನಾಟಕದಲ್ಲಿ ಮಾಹಿತಿ ಹಕ್ಕು ಕಾಯ್ದೆಯು ೧-೭-೨೦೦೫ ರಿಂದ ಜಾರಿಗೊಳಿಸಲ್ಪಟ್ಟಿದೆ ಈ ಕಾಯ್ದೆಯನ್ನು ಉಪಯೋಗಿಸಿ ನಾಗರಿಕರು ಭ್ರಷ್ಟ ಆಡಳಿತವನ್ನು ಬಯಲಿಗೆಳೆದು ರಾಷ್ಟ್ರದ ರಾಜಕೀಯ, ಆರ್ಥಿಕ ಹಾಗೂ ಸಾಮಾಜಿಕ ಅಭಿವೃದ್ಧಿಗೆ ಕಾರಣರಾಗಬಹುದು

ಮಾಹಿತಿ ಹಕ್ಕು ಕಾಯ್ದೆ ವ್ಯಾಪ್ತಿ

ಮಾಹಿತಿ ಹಕ್ಕು ಕಾಯ್ದೆಯು ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗ ಸೇರಿದಂತೆ ಸಂವಿಧಾನಿಕವಾಗಿ ಸ್ಥಾಪಿಸಲ್ಪಟ್ಟಿದ್ದು ಸರಕಾರದ ನಿಯಂತ್ರಣಕ್ಕೆ ಒಳಪಡುವ, ಸರಕಾರದಿಂದ ಗಣನೀಯ ಧನಸಹಾಯ ಪಡೆದ ಮತ್ತು ಸರಕಾರದಿಂದ ಒದಗಿಸಲ್ಪಟ್ಟ ನಿಧಿಗಳಿಂದ ನೇರವಾಗಿ ಅಥವಾ ಪರೋಕ್ಷವಾಗಿ ನೆರವು ಪಡೆದ ಸರಕಾರೇತರ ಸಂಸ್ಥೆ ಪ್ರಾಧಿಕಾರ ಅಥವಾ ಘಟಕಗಳು ಈ ಕಾಯ್ದೆಯ ವ್ಯಾಪ್ತಿಗೆ ಬರುತ್ತವೆ

ಪಡೆಯಬಹುದಾದ ಮಾಹಿತಿಗಳು
ಯಾವುದೇ ದಾಖಲೆಗಳು, ದಸ್ತಾವೇಜುಗಳು, ಮೆಮೋಗಳು, ಈ-ಮೇಲುಗಳು, ಅಭಿಪ್ರಾಯಗಳು, ಸಲಹೆಗಳು, ಪತ್ರಿಕಾ ಹೇಳಿಕೆಗಳು, ಸುತ್ತೋಲೆಗಳು, ಆದೇಶಗಳು, ಲಾಗ್ ಪುಸ್ತಕಗಳು, ಕರಾರುಗಳು, ವರದಿಗಳು, ಕಾಗದಪತ್ರಗಳು, ನಮೂನೆಗಳು, ಮಾದರಿಗಳು, ವಿದ್ಯುನ್ಮಾನ ರೂಪದ ದತ್ತಾಂಶ ಮತ್ತು ಖಾಸಗಿ ಸಂಸ್ಥೆಗೆ ಸಂಬAಧಿಸಿದ ಯಾವುದೇ ವಿಷಯ ಸಾಮಗ್ರಿಗಳು ಹಾಗೂ ವಿಶೇಷವಾಗಿ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಗ್ರಾಮೀಣ ಅಭಿವೃದ್ಧಿ ಯೋಜನೆಗಳು ಕೃಷಿ ಸಹಾಯಧನ ಯೋಜನೆಗಳು, ಮನ್ರೇಗಾ ಯೋಜನೆ, ಪ್ರಧಾನಮಂತ್ರಿ ಕೃಷಿ ಕಿಸಾನ್ ಸಮ್ಮಾನ್ ಯೋಜನೆ, ರೈತ ಪಿಂಚಣಿ ಯೋಜನೆ, ಪ್ರಧಾನಮಂತ್ರಿ ಶ್ರಮಯೋಗಿ ಮಾನ್‌ಧನ್ ಯೋಜನೆ, ಮಾರುಕಟ್ಟೆ ಭರವಸೆ ವಿಮಾ ಯೋಜನೆ, ಮುಂತಾದ ಎಲ್ಲಾ ಯೋಜನೆಗಳ ಮಾಹಿತಿಯನ್ನು ಪಡೆಯಬಹುದು

ಮಾಹಿತಿಗಾಗಿ ಹಕ್ಕು.

ಮಾಹಿತಿಗಾಗಿ ಹಕ್ಕು ಅಂದರೆ ಈ ಶಾಸನದ ಕಲಂ ೨ (ಜೆ) ಅಡಿಯಲ್ಲಿ ನಾಗರಿಕರಿಗೆ ಲಭ್ಯವಿರುವ ನಾಲ್ಕು ರೀತಿಯ ಹಕ್ಕುಗಳೆಂದು ಅರ್ಥ

  1. ಕೆಲಸದ ದಸ್ತಾವೇಜುಗಳು ಮತ್ತು ದಾಖಲಾತಿಗಳ ಪರಿವೀಕ್ಷಣೆ ಮಾಡುವ ಹಕ್ಕು. 2. ದಾಖಲೆಗಳ ಟಿಪ್ಪಣಿಗಳು ಉದ್ಧೃತ ಭಾಗಗಳು ಅಥವಾ ಪ್ರಾಮಾಣಿಕೃತ ಪ್ರತಿಗಳನ್ನು ತೆಗೆದುಕೊಳ್ಳುವ ಹಕ್ಕು 3. ವಿಷಯ ಸಾಮಾಗ್ರಿಗಳ ಪ್ರಾಮಾಣಿಕೃತ ಮಾದರಿಗಳನ್ನು ಪಡೆದುಕೊಳ್ಳುವ ಹಕ್ಕು 4. ಡಿಸ್ಕೆಟ್‌ಗಳು ಪ್ಲಾಪಿಗಳು, ಟೇಪುಗಳು, ವಿಡಿಯೋ ಕ್ಯಾಸೆಟ್‌ಗಳು ಅಥವಾ ವಿದ್ಯುನ್ಮಾನ ವಿಧಾನ ಅಥವಾ ಗಣಕಯಂತ್ರದಲ್ಲಿ ಸಂಗ್ರಹಿಸಿ ಪಟ್ಟಿರುವ ಮಾಹಿತಿಯ ಮುದ್ರಿತ ಪ್ರತಿಗಳನ್ನು ಪಡೆಯುವ ಹಕ್ಕು

ಮಾಹಿತಿಗಳನ್ನು ಪಡೆಯಲು ನಾಗರಿಕರಿಗೆ ಇರುವ ಹಕ್ಕು

ಶಾಸನದ ಕಲಂ ಮೂರರ ಪ್ರಕಾರ ಭಾರತದ ಯಾವುದೇ ಪ್ರಜೆ ಮಾಹಿತಿಯನ್ನು ಪಡೆಯುವ ಹಕ್ಕುಗಳನ್ನು ಹೊಂದಿರುತ್ತಾನೆ. ಮಾಹಿತಿಯ ಹಕ್ಕನ್ನು ಸಾರ್ವತ್ರಿಕವಾಗಿ ಹಳ್ಳಿಗರು-ಪಟ್ಟಣಿಗರು, ಬಡವ-ಶ್ರೀಮಂತ, ಅಕ್ಷರಸ್ಥ-ಅನಕ್ಷರಸ್ಥ ಗಂಡು-ಹೆಣ್ಣು, ತೃತೀಯ ಲಿಂಗಿ, ಆ ಜಾತಿ ಈ ಜಾತಿ ಎಂಬ ಭೇದವಿಲ್ಲದೆ ೧೮ ವರ್ಷ ಮತ್ತು ೧೮ ವರ್ಷ ಮೇಲ್ಪಟ್ಟ ಭಾರತದಲ್ಲಿ ಭಾರತದ ಎಲ್ಲಾ ನಾಗರಿಕರು ಸುಲಭ, ಸರಳ, ಶೀಘ್ರ ಮತ್ತು ಕಾಲೋಚಿತವಾಗಿ ಪಡೆಯುವ ಅಧಿಕಾರವನ್ನು ಹೊಂದಿದ್ದಾರೆ

ಮಾಹಿತಿಯನ್ನು ಪಡೆಯುವ ವಿಧಾನ
1. ಮಾಹಿತಿಯನ್ನು ಪಡೆಯಲಿಚ್ಚಿಸುವ ವ್ಯಕ್ತಿಯು ಲಿಖಿತವಾಗಿ ಅಥವಾ ವಿದ್ಯುನ್ಮಾನ ಸಾಧನಗಳ ಮೂಲಕ ಇಂಗ್ಲಿಷ್ ಅಥವಾ ಹಿಂದಿಯಲ್ಲಿ ಅಥವಾ ಅಧಿಕೃತ ಪ್ರಾದೇಶಿಕ ಭಾಷೆಯಲ್ಲಿ ಮಾಹಿತಿಯ ವಿವರಗಳನ್ನು ನಿರ್ದಿಷ್ಟ ಪಡಿಸಿ ನಿಗದಿತ ಪಡಿಸಲಾದ ಶುಲ್ಕದೊಂದಿಗೆ ಕೇಂದ್ರ ಅಥವಾ ರಾಜ್ಯ ಸರಕಾರದ ಮಾಹಿತಿ ಅಧಿಕಾರಿ ಅಥವಾ ಸಂದರ್ಭನುಸಾರ ಕೇಂದ್ರ /ರಾಜ್ಯದ ಸರ್ಕಾರದ ಸಹಾಯಕ ಮಾಹಿತಿ ಅಧಿಕಾರಿಗಳಿಗೆ ಕೋರಿಕೆಯನ್ನು ಸಲ್ಲಿಸಬಹುದಾಗಿದೆ ಅರ್ಜಿಯನ್ನು ಸಾಧಾರಣ ರೀತಿಯ ಬಿಳಿಯ ಕಾಗದದ ಮೇಲೆ ಬರೆದು ಸಲ್ಲಿಸಬಹುದು 2. ಅರ್ಜಿಯನ್ನು ಲಿಖಿತವಾಗಿ ಸಲ್ಲಿಸಲು ಸಾಧ್ಯವಿಲ್ಲದಿದ್ದಲ್ಲಿ ಅಥವಾ ಮೌಖಿಕವಾಗಿ ಕೋರಿಕೆಯನ್ನು ಸಲ್ಲಿಸಿದರೆ ಕೇಂದ್ರ /ರಾಜ್ಯ ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಅದನ್ನು ಬರವಣಿಗೆಗೆ ಇಳಿಸಲು ಸಹಾಯ ಮಾಡಬೇಕೆಂದು ಶಾಸನದಲ್ಲಿ ಸ್ಪಷ್ಟಪಡಿಸಲಾಗಿದೆ. 3. ಅರ್ಜಿದಾರರು ಕೋರಿಕೆಗೆ ಯಾವುದೇ ಕಾರಣಗಳನ್ನು ಅಥವಾ ವೈಯಕ್ತಿಕ ವಿವರಗಳನ್ನು ನೀಡುವ ಅವಶ್ಯಕತೆ ಇಲ್ಲ

ಕೋರಿಕೆಯನ್ನು ಈಡೇರಿಸುವ ಅವಧಿ

ಕೋರಿಕೆ ಸ್ವೀಕರಿಸಿದ 3೦ ದಿನಗಳೊಳಗೆ ಕೇಂದ್ರ ಅಥವಾ ರಾಜ್ಯ ಸಾರ್ವಜನಿಕ ಮಾಹಿತಿ ಅಧಿಕಾರಿಯು ಮಾಹಿತಿಯನ್ನು ನೀಡಬೇಕು. ಆದರೆ ಕೋರಿಕೆಯೂ ಒಬ್ಬ ವ್ಯಕ್ತಿಯ ಜೀವ ಸ್ವಾರ್ಥ ಅಥವಾ ಸ್ವಾತಂತ್ರ‍್ಯಕ್ಕೆ ಸಂಬಂಧಿಸಿದಲ್ಲಿ ಮಾಹಿತಿಯನ್ನು ಅರ್ಜಿ ಸ್ವೀಕರಿಸಿದ 48 ಗಂಟೆಯೊಳಗೆ ಒದಗಿಸಬೇಕು. ಒಂದು ವೇಳೆ ಮಾಹಿತಿ ನೀಡಲು ನಿರಾಕರಿಸಿದರೆ ಅದಕ್ಕೆ ಕಾರಣಗಳನ್ನು ನೀಡುವುದರ ಜೊತೆಗೆ ಮೇಲ್ಮನವಿ ಪ್ರಾಧಿಕಾರ ಮತ್ತು ಮೇಲ್ಮನವಿ ಸಲ್ಲಿಸಲು ಇರುವ ಕಾಲಾವಕಾಶಗಳ ಮಾಹಿತಿಯನ್ನು ಕೇಂದ್ರ ಅಥವಾ ರಾಜ್ಯ ಸರ್ಕಾರ ರಾಜ್ಯ ಸಾರ್ವಜನಿಕ ಮಾಹಿತಿ ಅಧಿಕಾರಿಯ ನೀಡಬೇಕು. ಒಂದು ವೇಳೆ ಕೇಳಿರುವ ಮಾಹಿತಿ ತಮ್ಮ ಇಲಾಖೆಗೆ ಸಂಬಂಧಿಸದಿದ್ದರೂ ಅರ್ಜಿಯನ್ನು ನಿರಾಕರಿಸುವಂತಿಲ್ಲ ಮತ್ತು ಅರ್ಜಿಯನ್ನು ಐದು ದಿನಗಳೊಳಗಾಗಿ ಸಂಬಂಧಿಸಿದ ಇಲಾಖೆಗೆ ರವಾನಿಸಿ ಅರ್ಜಿದಾರನಿಗೆ ಮಾಹಿತಿಯನ್ನು ನೀಡಬೇಕು.

ಮಾಹಿತಿ ಪಡೆಯಲು ಪ್ರತಿ ಅರ್ಜಿಗೆ ಹತ್ತು ರೂಪಾಯಿ ಶುಲ್ಕವನ್ನು ನಿಗದಿಪಡಿಸಲಾಗಿದೆ. ಆದರೆ ಬಡತನ ರೇಖೆಗಿಂತ ಕೆಳಗಿನವರು ಯಾವುದೇ ಶುಲ್ಕವನ್ನು ನೀಡಬೇಕಿಲ್ಲ. ಶುಲ್ಕವನ್ನು ಡಿಡಿ, ಬ್ಯಾಂಕರ್ ಚೆಕ್ ಅಥವಾ ಐಪಿಓ ಮೂಲಕ ಮುಖಾಂತರ ಪಾವತಿಸಬೇಕು. ಮಾಹಿತಿಯ ಮುದ್ರಿತ ಪ್ರತಿಗಳನ್ನು ಪಡೆಯಲು ಪ್ರತಿಪುಟಕ್ಕೆ ಎರಡು ರೂ.ಹಣವನ್ನು ಪಾವತಿಸಬೇಕು

ಮೇಲ್ಮನವಿಗೆ ಅವಕಾಶ
ಕೇಂದ್ರ ಅಥವಾ ರಾಜ್ಯ ಸರಕಾರದ ಮಾಹಿತಿ ಅಧಿಕಾರಿಯ ನಿರ್ಣಯದಿಂದ ಬಾಧಿತನಾದ ವ್ಯಕ್ತಿಯು ಅವಧಿಯ ಮುಕ್ತಾಯಗೊಂಡ ದಿನದಿಂದ ಅಥವಾ ನಿರ್ಣಯವನ್ನು ಸ್ವೀಕರಿಸಿದ ನಂತರ ೩೦ ದಿನಗಳೊಳಗೆ ಕೇಂದ್ರ ಅಥವಾ ರಾಜ್ಯ ಸಾರ್ವಜನಿಕ ಮಾಹಿತಿ ಅಧಿಕಾರಿಗಿಂತ ಹಿರಿಯ ದರ್ಜೆಯ ಅಧಿಕಾರಿಗೆ ಮೇಲ್ಮನವಿಯನ್ನು ಸಲ್ಲಿಸಬಹುದು. ಸಕಾರಣಗಳಿದ್ದರೆ ೩೦ ದಿನಗಳ ನಂತರವೂ ಅರ್ಜಿಯನ್ನು ಸಲ್ಲಿಸಬಹುದು. ಮೊದಲನೆಯ ಮೇಲ್ಮನವಿ ನಿರ್ಣಯದಿಂದ ಬಾಧಿತನಾದ ವ್ಯಕ್ತಿ ೯೦ ದಿನಗಳೊಳಗಾಗಿ ಎರಡನೆಯ ಮೇಲ್ಮನವಿಯನ್ನು ಕೇಂದ್ರ ಅಥವಾ ರಾಜ್ಯ ಮಾಹಿತಿ ಆಯೋಗಕ್ಕೆ ಸಲ್ಲಿಸಬಹುದು. ಸಕಾರಣಗಳಿದ್ದರೆ ೯೦ ದಿನಗಳ ನಂತರವೂ ಎರಡನೇ ಮೇಲ್ಮನವಿ ಸಲ್ಲಿಸಬಹುದು. ಕೇಂದ್ರ ಅಥವಾ ರಾಜ್ಯ ಮಾಹಿತಿ ಆಯೋಗವು ನೀಡುವ ನಿರ್ಣಯವು ಅಂತಿಮವಾಗಿರುತ್ತದೆ ಮತ್ತು ಪ್ರತಿಬಂಧಕವಾಗಿರುತ್ತದೆ

ಮಾಹಿತಿಯನ್ನು ಬಹಿರಂಗಪಡಿಸುವುದರಿಂದ ವಿನಾಯತಿ

ಸಾರ್ವಜನಿಕ ಮಾಹಿತಿ ಅಧಿಕಾರಿಯು ಮಾಹಿತಿಯನ್ನು ನಿರಾಕರಿಸಬಹುದಾದ ಸಂದರ್ಭಗಳೆಂದರೆ

ದೇಶದ ಸಾರ್ವಭೌಮತ್ವ ಮತ್ತು ಏಕತೆ, ರಾಷ್ಟ್ರ ಭದ್ರತೆ ಕಾರ್ಯತಂತ್ರ, ರಾಜ್ಯದ ವೈಜ್ಞಾನಿಕ ಅಥವಾ ಆರ್ಥಿಕ ಹಿತಾಸಕ್ತಿಗಳು, ವಿದೇಶದೊಂದಿಗಿನ ಸಂಬಂಧ ಅಥವಾ ಅಪರಾಧಕ್ಕೆ ಪ್ರೇರಣೆ, ನ್ಯಾಯಾಲಯದ ನಿಂದನೆಗೆ ಒಳಗಾಗುವ ಪ್ರಸಂಗಗಳು, ಸಂಸತ್ತು ಅಥವಾ ರಾಜ್ಯ ವಿಧಾನ ಮಂಡಲದ ಹಕ್ಕು ಚ್ಯುತಿ ಪ್ರಸಂಗಗಳು, ಮೂರನೇ ಪಕ್ಷದಾರನ ಅಥವಾ ಥರ್ಡ್ ಪಾರ್ಟಿಯ ಸ್ಪರ್ಧಾತ್ಮಕತೆಗೆ ಧಕ್ಕೆ ತರುವ, ವಾಣಿಜ್ಯ ರಹಸ್ಯ ವ್ಯಾಪಾರದ ಗೌಪ್ಯತೆಗಳು, ಬೌದ್ಧಿಕ ಆಸ್ತಿಯ ಮಾಹಿತಿ ಅಥವಾ ಸಾರ್ವಜನಿಕ ಹಿತದೃಷ್ಟಿಗೆ ಧಕ್ಕೆಯಾಗುವ ಮಾಹಿತಿಗಳು, ವಿದೇಶಿ ಸರಕಾರದಿಂದ ಪಡೆದ ರಹಸ್ಯ ಮಾಹಿತಿಗಳು, ವ್ಯಕ್ತಿಯೊಬ್ಬನ ಜೀವ ಅಥವಾ ದೈಹಿಕ ಸುರಕ್ಷತೆಗೆ ಅಪಾಯ ತರುವ ಪ್ರಸಂಗಗಳು, ತನಿಖೆ, ದಸ್ತಗಿರಿ ಅಥವಾ ಪ್ರಾಸಿಕ್ಯೂಷನ್ ಕಾರ್ಯಕ್ಕೆ ಅಡ್ಡಿಯಾಗುವ ಪ್ರಸಂಗಗಳು

ಮಾಹಿತಿ ಹಕ್ಕು ಕಾಯ್ದೆಯಿಂದ ಆಗುವ ಉಪಯೋಗಗಳು

ಹಳ್ಳಿಗರು, ರೈತರನ್ನು ಅಧಿಕಾರಸ್ಥರು ಮನಬಂದಂತೆ ಆಟವಾಡಿಸುವುದು ತಪ್ಪುತ್ತದೆ,

ರೈತರು, ಹಳ್ಳಿಗರು ತಮ್ಮ ಕೆಲಸ ಕಾರ್ಯಗಳು ಯಾವ ಹಂತದಲ್ಲಿ ಯಾವ ರೀತಿ ನಿರ್ವಹಿಸಲ್ಪಡುತ್ತವೆ ಮತ್ತು ಅವುಗಳಿಗಾಗುವ ವೆಚ್ಚ ಎಷ್ಟೆಂಬುದನ್ನು ಸ್ಪಷ್ಟವಾಗಿ ತಿಳಿಯಲು ಸಾಧ್ಯವಾಗುತ್ತದೆ

ರೈತರ/ಹಳ್ಳಿಗರ ಮೂಲಭೂತ ಸಮಸ್ಯೆಗಳು ಮತ್ತು ಪ್ರಶ್ನೆಗಳನ್ನು ಮುಚ್ಚಿಹೋಗದಂತೆ ತಡೆಯಬಹುದು.

ರೈತರು/ಹಳ್ಳಿಗರು ನಮ್ಮ ಹಣ, ನಮಗೆ ಲೆಕ್ಕ ಕೊಡಿ ಎಂದು ಕೇಳಲು ಸಾಧ್ಯವಾಗುತ್ತದೆ

ಸಾರ್ವಜನಿಕ ಆಡಳಿತದಲ್ಲಿ ಮುಖಂಡರ ಬೆಂಬಲ, ದಲ್ಲಾಳಿತನ, ತೋಳ್ಬಲ, ಅನೀತಿ ಮಾರ್ಗ, ಅಪವಿತ್ರ ಮೈತ್ರಿಯಿಂದಾಗುವ ಅನ್ಯಾಯಗಳನ್ನು ತಡೆಗಟ್ಟಲು ಸಾಧ್ಯವಾಗುತ್ತದೆ

ಆಡಳಿತದಲ್ಲಿನ ಭ್ರಷ್ಟಾಚಾರ, ಸಿನಿಕತನ ಮತ್ತು ಸ್ವಜನ ಪಕ್ಷಪಾತಗಳನ್ನು ತಡೆಗಟ್ಟಬಹುದು

ಸಾರ್ವಜನಿಕ ಅವಾಂತರಗಳನ್ನು ಬಯಲಿಗೆ ತಂದು ಅಧಿಕಾರಿಗಳನ್ನು ಜಾಗೃತಗೊಳಿಸಲು ಸಾಧ್ಯವಾಗುತ್ತದೆ.

ಸ್ಥಳೀಯ ಸಂಸ್ಥೆಗಳು, ಸಹಕಾರಿ ಸಂಸ್ಥೆಗಳು ಮತ್ತು ಪ್ರಾಧಿಕಾರಿಗಳ ಲೆಕ್ಕಪತ್ರಗಳ ತಪಾಸಣೆಯನ್ನು ಬಹಿರಂಗಗೊಳ್ಳುವಂತೆ ಮಾಡಿ ಅವ್ಯವಹರವನ್ನು ತಡೆಗಟ್ಟಬಹುದು.

ಆಡಳಿತದಲ್ಲಿ ಪಾರದರ್ಶಕತೆ, ಮುಕ್ತತೆ ಮತ್ತು ಹೊಣೆಗಾರಿಕೆಗಳು ಏರ್ಪಟ್ಟು ಸಾರ್ವಜನಿಕ ಹಣ ದುರುಪಯೋಗವಾಗುವುದು ತಪ್ಪುತ್ತದೆ ಕೊನೆಗೆ ಪ್ರಜೆಗಳೇ ನಿಜವಾದ ಅರ್ಥದಲ್ಲಿ ಪ್ರಭುಗಳು ಆಗಿರುವುದರಿಂದ ಆಡಳಿತದಲ್ಲಿ ಪ್ರಜಾ ಸಮುದಾಯದ ಅತಿ ದೊಡ್ಡ ಸಂಖ್ಯೆಯ ರೈತರು ಹಳ್ಳಿಗರು ಆಡಳಿತದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಸಾಧ್ಯವಾಗುತ್ತದೆ.

ಡಾ.ಶರಶ್ಚಂದ್ರ ರಾನಡೆ, ಬೆಂಗಳೂರು

spot_img

ಸಂಬಂಧಿತ ಲೇಖನಗಳು

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group