spot_img
Friday, October 18, 2024
spot_imgspot_img
spot_img
spot_img

ಹೈನುಗಾರಿಕೆಯೇ ಇವರ ಕೃಷಿಗೆ ಜೀವಾಳ: ಸುಳ್ಯದ ವೆಂಕಪ್ಪ ಗೌಡರ ಮಾದರಿ ಕೃಷಿ

ಹೈನುಗಾರಿಕೆಯನ್ನು ಇತ್ತೀಚಿನ ದಿನಗಳಲ್ಲಿ ಮುಂದುವರಿಸಿಕೊಂಡು ಹೋಗುವುದೇ ತ್ರಾಸದಾಯಕ. ಪಶು ಆಹಾರದ ಬೆಲೆ ಏರಿಕೆ, ಕೂಲಿ ಕಾರ್ಮಿಕರ ಸಂಬಳ ಹೆಚ್ಚಳ, ಪ್ರತೀ ನಿತ್ಯದ ನಿರ್ವಹಣೆ, ಖರ್ಚುವೆಚ್ಚಗಳು ಲೆಕ್ಕ ಹಾಕಿದರೆ ಹೈನುಗಾರಿಕೆ ಸಾಕಪ್ಪ ಸಾಕು. ಎಂದುಕೊಳ್ಳುವವರೇ ಹೆಚ್ಚು. ಆದರೆ ಕೆಲವರು ಹಾಗಲ್ಲ. ಎಷ್ಟೇ ಕಷ್ಟವಾಗಲಿ, ನಷ್ಟವೇ ಇರಲಿ. ಹೈನುಗಾರಿಕೆಯಿಂದ ಹಿಂದೆ ಸರಿಯುವುದಿಲ್ಲ. ನಾರ್ಕೋಡು ವೆಂಕಪ್ಪ ಗೌಡರು ಅಂತಹವರ ಸಾಲಿನಲ್ಲಿ ಒಬ್ಬರು

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಪೆರುವಾಜೆ ಗ್ರಾಮದ ಬೆಳ್ಳಾರೆ ಸಮೀಪದ ಪೆರ್ಜಿ ಎಂಬಲ್ಲಿಯ ಎನ್.ಎಸ್. ವೆಂಕಪ್ಪ ಗೌಡರಿಗೆ ಕೃಷಿಯೇ ಜೀವಾಳ. ಮೊದಮೊದಲು ಕೃಷಿಗೆ ಪೂರಕವಾಗಿ ದನ ಸಾಕಣೆಯನ್ನು ನೆಚ್ಚಿಕೊಂಡಿದ್ದರು. ಸುಮಾರು 2೦ ಎಕ್ರೆ ಕೃಷಿ ಭೂಮಿಯನ್ನು ಹೊಂದಿರುವ ಇವರಿಗೆ ಅಡಿಕೆಯೇ ಪ್ರಧಾನ ಬೆಳೆ. ಆನಂತರ ರಬ್ಬರು, ತೆಂಗು, ಕಾಳುಮೆಣಸು ಹಾಗೂ ಇತರ ಉಪಬೆಳೆಗಳಿವೆ. ಕೃಷಿಗಾಗಿ ಅವಲಂಬಿಸಿದ್ದು ಕೊಟ್ಟಿಗೆ ಗೊಬ್ಬರವನ್ನು. ಆದ್ದರಿಂದ ಅವರಿಗೆ ದನ ಸಾಕಣೆ ಅತ್ಯವಶ್ಯವಾಯಿತು. ಜರ್ಸಿ ಮಿಶ್ರ ತಳಿಯ ದನವೊಂದನ್ನು ಸಾಕಲು ಆರಂಭಿಸಿದ್ದರು. ಆಗ ಅವರಿಗೆ ಹಾಲು ಮುಖ್ಯವಾಗಿರಲ್ಲಿಲ್ಲ. ತೋಟಕ್ಕೆ ಸಾಂಪ್ರದಾಯಿಕ ಗೊಬ್ಬರ ಒದಗಿಸುವುದಷ್ಟೇ ಅವರ ಮನಸ್ಸಿನಲ್ಲಿ ಇದ್ದದ್ದು. ಆ ನಂತರದ ದಿನದಲ್ಲಿ ಆ ದನದ ಸಂಸಾರ ಬೆಳೆಯುತ್ತಾ ಹೋಯಿತು. ಈಗ ಸುಸಜ್ಜಿತವಾದ ಹಟ್ಟಿ ತುಂಬಿದೆ. ಅದರೊಂದಿಗೆ ಹಟ್ಟಿಯ ಸುತ್ತಮುತ್ತ ಉಳಿದ ಜಾಗದಲ್ಲೂ ದನಕರುಗಳದ್ದೇ ಮನೆ. ಈಗ ಸುಮಾರು ೩೫ಕ್ಕಿಂತಲೂ ಹೆಚ್ಚಿನ ದನಕರುಗಳ ದೊಡ್ಡ ಸಂಸಾರ ಅವರಲ್ಲಿವೆ. ಹೆಚ್‌ಎಫ್, ಜರ್ಸಿ, ಸಿಂಧಿ ಮಿಶ್ರ ತಳಿಗಳು… 150 ಲೀಟರ್ ವರೆಗೆ ಹಾಲು ಡೈರಿಗೆ ನೀಡುತ್ತಿದ್ದರು. ಈಗ ಸ್ವಲ್ಪ ಕಡಿಮೆಯಾಗಿದೆ.

ಅಡಿಕೆ ಹಾಳೆ ಆಹಾರ

ಅವರ ತೋಟದಲ್ಲಿ ಅಡಿಕೆ ಹಾಳೆ ಸಾಕಷ್ಟು ಲಭ್ಯವಿದೆ. ಇದನ್ನು ಬಳಸಿಕೊಂಡು ಹಾಳೆ ತಟ್ಟೆ ತಯಾರಿಸಬಹುದಿತ್ತು. ಆದರೆ ಹಾಳೆಯಲ್ಲಿ ಪಶುಗಳಿಗೆ ಬೇಕಾದ ಪೋಷಕಾಂಶಗಳು ಇರುವುದರಿಂದ ಹಾಳೆಯನ್ನು ಒಣಗಿಸಿ ಚಾಪ್ ಕಟ್ಟರಿನಲ್ಲಿ ಕತ್ತರಿಸಿ ದನಗಳಿಗೆ ನೀಡುತ್ತಾರೆ. ಹಸುಗಳು ಇದನ್ನು ಇಷ್ಟಪಟ್ಟು ತಿನ್ನುತ್ತವೆ. ಹಸಿರು ಮೇವು, ಜೋಳದ ದಂಟು, ಗೋದಿ, ಜೋಳದ ಬೂಸ ಹಾಗೂ ಲಘು ಪೋಷಕಾಂಶಗಳ್ಳ ಆಹಾರ ದನಗಳಿಗೆ ನೀಡುತ್ತಾರೆ.

ಹಾಲನ್ನು ಸಮಯಕ್ಕೆ ಸರಿಯಾಗಿ ಕರೆದು ಹಾಲಿನ ಸೊಸೈಟಿಗೆ ನೀಡಬೇಕು. ಹೆಚ್ಚು ದನಗಳನ್ನು ಸಾಕುವವರು ಯಂತ್ರದ ಮೊರೆ ಹೋಗುತ್ತಾರೆ. ವೆಂಕಪ್ಪ ಗೌಡರಲ್ಲಿ ಹಾಲು ಕರೆಯುವುದಕ್ಕೆ ಯಂತ್ರವಿದ್ದರೂ ಅವರು ಹೆಚ್ಚಾಗಿ ಕೈಯಲ್ಲಿ ಹಾಲು ಕರೆಯುವುದನ್ನು ರೂಢಿಸಿಕೊಂಡಿದ್ದಾರೆ. ಮನೆ ಮಂದಿಯೆಲ್ಲ ಈ ಕೆಲಸದಲ್ಲಿ ಭಾಗಿಯಾಗುತ್ತಾರೆ. ಅವರ ಹೈನುಗಾರಿಕೆ ಹಿಂದೆ ಹಾಲಿನ ಲೆಕ್ಕಚಾರವಿಲ್ಲ. ಹೈನುಗಾರಿಕೆಯಲ್ಲಿ ಏನೂ ಆದಾಯ ಇಲ್ಲವೆಂದು ಹೇಳಲಾಗದು. ಬಹಳಷ್ಟು ಮಂದಿ ಹಾಲಿನ ಲೆಕ್ಕಚಾರವನ್ನಷ್ಟೇ ಮಾಡುತ್ತಾರೆ. ಹೈನುಗಾರಿಕೆ ಉಪ ಉತ್ಪನ್ನಗಳ ಬಗ್ಗೆ ಲೆಕ್ಕ ಹಾಕುವುದಿಲ್ಲ. ಉದಾಹರಣೆಗೆ ನಮ್ಮ ಮನೆ ಬಳಕೆಗೆ ಹಾಲು, ಮಜ್ಜಿಗೆ ಮೊದಲಾದುವುಗಳಿಗೆೆ 2-3 ಲೀಟರ್ ಬೇಕಾಗುತ್ತದೆ. ಕೊಂಡು ತರುವುದಾದರೆ ಅದರ ವೆಚ್ಚವೇ ವರ್ಷಕ್ಕೆ 5೦ ಸಾವಿರದಷ್ಟಾಗುತ್ತದೆ. ಸಗಣಿ 15-20  ಬುಟ್ಟಿ ಸಿಗುತ್ತದೆ. ಖರೀದಿಸಿ ತರುವುದಾದರೆ ಅದಕ್ಕೂ 50 ರೂ ಕೊಡಬೇಕಾಗುತ್ತದೆ. ಸ್ಲರಿಗೆ ದುಡ್ಡಿದೆ ಹಾಗಿರುವಾಗ ದನ ಸಾಕಾಣೆಯನ್ನು ನಷ್ಟವೆಂದು ಪರಿಗಣಿಸಲಾಗದು. ಆದರೂ ಒಂದು ಲೀಟರ್ ಹಾಲಿಗೆ ಕನಿಷ್ಠ 5೦ ರೂಪಾಯಿಯಾದರೂ ಹೈನುಗಾರರಿಗೆ ಸಿಗಬೇಕು. ಪಶು ಆಹಾರ ಹಾಗೂ ಇತರ ವಸ್ತುಗಳ ಬೆಲೆ ಹೆಚ್ಚಳವಾಗುತ್ತಿದೆ. ಹಾಗೆಯೇ ಹಾಲಿನ ದರವೂ ಹೆಚ್ಚಳವಾಗಬೇಕು. ರೈತರಿಗೆ ಅದರ ಪ್ರಯೋಜನ ದೊರೆಯಬೇಕು. ಎನ್ನುತ್ತಾರೆ ವೆಂಕಪ್ಪ ಗೌಡರು.

ಸೆಗಣಿ ಗೊಬ್ಬರ

ತೋಟಕ್ಕೆ ಸ್ಲರಿಯನ್ನು ನೇರವಾಗಿ ಹಾಯಿಸುವುದಿಲ್ಲ. ಅದರ ಬದಲಿಗೆ ಸಗಣಿಯನ್ನು ಸಂಗ್ರಹಿಸಿ ಅಡಿಕೆ ಮರಗಳ ಬುಡಕ್ಕೆ ಹಾಕುತ್ತಾರೆ. ಅದರೊಂದಿಗೆ ಅಡಿಕೆ ಸೋಗೆ, ಕಳೆ ಗಿಡಗಳನ್ನು ಕೊಚ್ಚಿಹಾಕುವುದರಿಂದ ನೈಸರ್ಗಿಕವಾದ ಗೊಬ್ಬರವೇ ಹೆಚ್ಚು ಸಿಗುತ್ತದೆ. ರಾಸಾಯನಿಕ ಗೊಬ್ಬರನ್ನು ಅಗತ್ಯವಿದ್ದಷ್ಟೇ ಬಳಸುತ್ತಾರೆ. ದನ ಸಾಕಾಣೆಯಲ್ಲಿ ಹೆಚ್ಚಾಗಿ ಮನೆಯವರೇ ತೊಡಗಿಸಿಕೊಳ್ಳುತ್ತಾರೆ. ಗೌಡರ ಪತ್ನಿ ಕೃಷ್ಣವೇಣಿ, ಹಾಗೂ ಮಗ ಅಶ್ವಥ್ ಹೈನುಗಾರಿಕೆಯ ಕೆಲಸಕಾರ್ಯಗಳಲ್ಲಿ ತೊಡಗಿಸಿಕೊಳ್ಳತ್ತಾರೆ.

ಇತರ ಯುವ ಸಮುದಾಯದಂತೆ ಅಶ್ವಥ್ ಅವರೂ ನಗರದತ್ತ ಉದ್ಯೋಗಕ್ಕೆ ಮುಖ ಮಾಡಿದ್ದರು. ಖಾಸಗಿ ಕಂಪೆನಿಯಲ್ಲಿ ಉದ್ಯೋಗದಲ್ಲಿದ್ದರು. ಆದರೆ ತಮ್ಮ ಕೃಷಿ ಭೂಮಿಯಲ್ಲೇ 5-6 ಮಂದಿಗೆ ಕೆಲಸ ನೀಡುತ್ತಿರುವಾಗ ಕಂಪೆನಿಯ ಉದ್ಯೋಗ ಬಿಟ್ಟು ಕೃಷಿಯತ್ತ ಗಮನ ಹರಿಸಿದರು. ಈಗ ಕೃಷಿಯಲ್ಲಿ ಅವರೂ ನೆಮ್ಮದಿ ಕಂಡುಕೊಂಡಿದ್ದಾರೆ.

ಸರಕಾರಗಳು ರೈತರಿಗೆ ಆದ್ಯತೆ ನೀಡುವುದು ಬಹಳ ಕಡಿಮೆ. ರೈತರ ಹಿತ ಕಾಪಾಡುವುದೆಂದರೆ ಸಹಾಯಧನಗಳ ಘೋಷಣೆಗಳಲ್ಲ. ರೈತರು ಬೆಳೆದ ಬೆಳೆಗಳಿಗೆ ಅರ್ಹವಾದ ದರ ನೀಡುವುದು, ಗುಣ ಮಟ್ಟದ ಯಂತ್ರೋಪಕರಣಗಳನ್ನು ರೈತರಿಗೆ ಕಡಿಮೆ ದರದಲ್ಲಿ ಒದಗಿಸುವುದು. ಅತೀ ಅವಶ್ಯಕ ಎನ್ನುತ್ತಾರೆ ಗೌಡರು

ಪಾಲ್ತಾಡು ಹಾಲು ಉತ್ಪಾದಕರ ಸಹಕಾರಿ ಸಂಘದಲ್ಲಿ ವೆಂಕಪ್ಪ ಗೌಡರು ಉಪಾಧ್ಯಕ್ಷರಾಗಿದ್ದಾರೆ. ಇವರ ಹೈನುಗಾರಿಕೆಯ ಸಾಧನೆಯನ್ನು ಗುರುತಿಸಿ ಸ್ಥಳೀಯ ಸಂಘ ಸಂಸ್ಥೆಗಳು ಅವರನ್ನು ಗುರುತಿಸಿ ಗೌರವಿಸಿವೆ.

-ರಾಧಾಕೃಷ್ಣ ತೊಡಿಕಾನ ಮೊ.9481750085

ರಾಧಾಕೃಷ್ಣ ಭಟ್ ಪೋನಡ್ಕ  9448253369

spot_img

ಸಂಬಂಧಿತ ಲೇಖನಗಳು

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group