spot_img
Saturday, November 23, 2024
spot_imgspot_img
spot_img
spot_img

ಸಾವಯವ ರೈತರಿಗೆ ಆನ್-ಲೈನ್ ಸುಪರ್ ಮಾರ್ಕೆಟ್ “ಬಿಗ್ ಬಾಸ್ಕೆಟ್” ನೀಡುತ್ತೆ ಬೆಂಬಲ!

ಉತ್ತರಪ್ರದೇಶದ ಮಹುರ್-ಸಾ ಗ್ರಾಮದ ರೈತರು ರಾಸಾಯನಿಕ ಕೃಷಿಯಿಂದ ದೂರವಾಗಿ ಇಂದಿಗೆ ಒಂದು ದಶಕ ಸಂದಿದೆ.
ಆಗ ಅವರ ಗುರಿ: ರಾಸಾಯನಿಕ ಕೃಷಿಯಿಂದಾಗಿ ಏರುತ್ತಿರುವ ಒಳಸುರಿಗಳ ವೆಚ್ಚ ತಗ್ಗಿಸುವುದು. ಯಾಕೆಂದರೆ, ಗಂಗಾ ನದಿಯ ದಡದಲ್ಲಿ ಚಾಚಿರುವ ಬುಲಂದ್ ಷಹರ ಜಿಲ್ಲೆಯಲ್ಲಿರುವ ಆ ಗ್ರಾಮದಲ್ಲಿ ನೀರಾವರಿ ಮತ್ತು ಫಲವತ್ತಾದ ಮಣ್ಣು ತಲೆತಲಾಂತರಗಳಿಂದ ಲಭ್ಯ. ಹಾಗಾಗಿ ಅಲ್ಲಿನ ಪರಿಸ್ಥಿತಿ ಸಾವಯವ ಕೃಷಿಗೆ ಹೇಳಿ ಮಾಡಿಸಿದಂತಿದೆ. ಜೊತೆಗೆ, ಸಾವಯವ ಕೃಷಿ ಉತ್ಪನ್ನಗಳಿಗೆ ಏರುತ್ತಿರುವ ಬೇಡಿಕೆ ಲಾಭಕ್ಕೆ ರಹದಾರಿ ಎಂಬ ನಿರೀಕ್ಷೆ.

ಆದರೆ, ಮಹುರ್-ಸಾ ಗ್ರಾಮದ ರೈತರ ನಿರೀಕ್ಷೆಗಳು ಹುಸಿಯಾದವು. ಯಾಕೆ? ಯಾಕೆಂದರೆ, ಅಲ್ಲಿನ ಮಂಡಿ (ಮಾರುಕಟ್ಟೆ)ಯ ಮಧ್ಯವರ್ತಿಗಳು, ರೈತರು ಬೆಳೆದ ಸಾವಯವ ಹಣ್ಣು ಮತ್ತು ತರಕಾರಿಗಳಿಗೆ ಸ್ವಲ್ಪ ಹೆಚ್ಚಿನ ದರ ಪಾವತಿಸಿದರು; ಆದರೆ, ರೈತರ ಒಟ್ಟು ಫಸಲಿನ ಕೇವಲ ಶೇಕಡಾ 10 – 12ರಷ್ಟನ್ನು ಮಾತ್ರ ಖರೀದಿಸಿದರು! ಅದಲ್ಲದೆ, ಮಾರುಕಟ್ಟೆ ಕಮಿಷನ್, ತೂಕದಲ್ಲಿ ಕಡಿತ (ಹಾಳಾಗುವ ಫಸಲಿನ ಬಾಬ್ತು), ಲೋಡಿಂಗ್ ಮತ್ತು ಅನ್-ಲೋಡಿಂಗ್ ಮಜೂರಿ, ಸಾಗಾಟ ವೆಚ್ಚ – ಇವೆಲ್ಲದರ ಹೊರೆ ರೈತರೇ ಭರಿಸಬೇಕಾಗಿತ್ತು.

ಇಂತಹ ಪರಿಸ್ಥಿತಿಯಲ್ಲಿ, ಕಳೆದ ವರುಷ (2021ರಲ್ಲಿ) ಆನ್-ಲೈನ್ ಸೂಪರ್ ಮಾರ್ಕೆಟ್ “ಬಿಗ್-ಬಾಸ್ಕೆಟ್” ಮಹುರ್-ಸಾ ಗ್ರಾಮಕ್ಕೆ ಆಗಮಿಸಿತು. ಇದು ಹಲವು ರೈತರ ಆದಾಯ ಹೆಚ್ಚಳಕ್ಕೆ ನಾಂದಿಯಾಯಿತು. ಯಾಕೆಂದರೆ, ರೈತರ ಫಸಲನ್ನು ಶೇ.15ರಷ್ಟು ಅಧಿಕ ಬೆಲೆಗೆ ಬಿಗ್-ಬಾಸ್ಕೆಟ್ ಖರೀದಿಸಿತು. ಮಾತ್ರವಲ್ಲ, ಸಾಗಾಟ ವೆಚ್ಚ ಮತ್ತು ಇತರ ವೆಚ್ಚಗಳು ಇಲ್ಲವಾದ ಕಾರಣ ಆ ಉಳಿತಾಯದಿಂದಾಗಿ ರೈತರಿಗೆ ಹೆಚ್ಚಿನ ಅನುಕೂಲವಾಯಿತು.

ಉದಾಹರಣೆಗೆ, ಆ ಗ್ರಾಮದ ರೈತ ಪ್ರವೀಣ್ ಕುಮಾರ್ ತನ್ನ 1.6 ಹೆಕ್ಟೇರ್ ಜಮೀನಿನಲ್ಲಿ ಹಲವು ತರಕಾರಿ ಬೆಳೆಯುತ್ತಾರೆ. ಅವರು 300 ಕಿಗ್ರಾ ವಿವಿಧ ತರಕಾರಿಗಳನ್ನು ಕಿಲೋಗೆ ರೂ.15 ದರದಲ್ಲಿ ಬಿಗ್-ಬಾಸ್ಕೆಟಿಗೆ ಮಾರಿದರು. ಇದು, ಸ್ಥಳೀಯ ಮಂಡಿಯಲ್ಲಿ ಅವರಿಗೆ ಸಿಗುತ್ತಿದ್ದ ದರದ ಇಮ್ಮಡಿ! ಇದೀಗ, ಮಹುರ್-ಸಾ ಗ್ರಾಮದ ರೈತರಂತೆ ಐದು ರಾಜ್ಯಗಳ 3,300 ರೈತರಿಗೆ “ಸಾವಯವ ಹಣ್ಣು ಮತ್ತು ತರಕಾರಿ ಮಾರುಕಟ್ಟೆ”ಗೆ ಬಿಗ್-ಬಾಸ್ಕೆಟ್‌ನ ಪದಾರ್ಪಣೆಯಿಂದಾಗಿ ಅನುಕೂಲವಾಗಿದೆ.


ಭಾರತದಲ್ಲಿ ಸಾವಯವ ಕೃಷಿಗೆ ಸರಕಾರದ ಪ್ರೋತ್ಸಾಹ ಮತ್ತು ರೈತರ ಒಲವು ಶುರುವಾದದ್ದು ಎರಡು ದಶಕಗಳ ಹಿಂದೆ. ಆದರೆ, ಗೋಧಿ, ಭತ್ತ, ದ್ವಿದಳಧಾನ್ಯಗಳು ಮತ್ತು ಸಿರಿಧಾನ್ಯಗಳ ಕೃಷಿಯಲ್ಲಿ ಸಾವಯವ ಕೃಷಿವಿಧಾನಗಳ ಅಳವಡಿಕೆಗೆ ಗಮನ ನೀಡಲಾಯಿತು. ಸರಕಾರ ಅಥವಾ ಖಾಸಗಿ ಸಂಸ್ಥೆಗಳು ಪ್ರಮಾಣೀಕೃತ ಸಾವಯವ ಹಣ್ಣು ಮತ್ತು ತರಕಾರಿಗಳ ಮಾರಾಟ ವ್ಯವಸ್ಥೆ ರೂಪಿಸಲು ಮುಂದಾಗಲಿಲ್ಲ. ಇದಕ್ಕೆ ಕಾರಣ: ಅವು ಬೇಗನೇ ಹಾಳಾಗುತ್ತವೆ.

ಇಂತಹ ಪರಿಸ್ಥಿತಿಯಲ್ಲಿ, 2011ರಲ್ಲಿ ಐವರು ಉದ್ಯಮಶೀಲರು ಸ್ಥಾಪಿಸಿದ ಕಂಪೆನಿ ಬಿಗ್-ಬಾಸ್ಕೆಟ್ ಸಾವಯವ ಹಣ್ಣು ಮತ್ತು ತರಕಾರಿಗಳಿಗೆ ದೊಡ್ಡ ಮಟ್ಟದ ಬೇಡಿಕೆ ಇದೆ ಎಂಬುದನ್ನು ಗುರುತಿಸಿತು. ಹಾಗಾಗಿ ಅದು ಈ ಕ್ಷೇತ್ರಕ್ಕೆ ಲಗ್ಗೆಯಿಟ್ಟಿತು. ಈಗ, ಬಿಗ್-ಬಾಸ್ಕೆಟ್ ಪ್ರತಿ ದಿನ ಮಾರಾಟ ಮಾಡುವ 300 ಟನ್ ಹಣ್ಣು ಮತ್ತು ತರಕಾರಿಗಳಲ್ಲಿ ಸಾವಯವ ವರ್ಗದ ಪಾಲು ಶೇ.5.

ಇದು ಹೇಗೆ ಸಾಧ್ಯವಾಯಿತು? ಸಾವಯವ ಹಣ್ಣು ಮತ್ತು ತರಕಾರಿ ಬೆಳೆಯುವ ರೈತರೊಂದಿಗೆ ಬಿಗ್-ಬಾಸ್ಕೆಟ್ ಒಪ್ಪಂದ ಮಾಡಿಕೊಂಡಿದೆ. ಆ ಉತ್ಪನ್ನಗಳಿಗೆ ಶೀತಲೀಕೃತ ಶೇಖರಣಾ ಮತ್ತು ವೇಗದ ಸಾಗಾಟ ವ್ಯವಸ್ಥೆ ರೂಪಿಸಿ, ಮಾರುಕಟ್ಟೆಯಲ್ಲಿ ಯಶಸ್ವಿಯಾಗಿದೆ.
ನಾಲ್ಕು ಹಂತಗಳ ಖರೀದಿ ಮತ್ತು ಮಾರಾಟ ವ್ಯವಸ್ಥೆ
ಮೊದಲನೆಯ ಹಂತ: ಗ್ರಾಮಮಟ್ಟದಲ್ಲಿ ಪೂರೈಕೆದಾರರ ಸಮೂಹ ಸಂಘಟಿಸುವುದು. ಈಗಾಗಲೇ ಸಾವಯವ ವಿಧಾನದಲ್ಲಿ ಹಣ್ಣು ಮತ್ತು ತರಕಾರಿಗಳನ್ನು ಬೆಳೆಯುತ್ತಿರುವ ಗ್ರಾಮಗಳನ್ನು ಸರ್ವೆ ಮೂಲಕ ಬಿಗ್-ಬಾಸ್ಕೆಟ್ ಗುರುತಿಸುತ್ತದೆ. ಅನಂತರ 20 – 29 ಹೆಕ್ಟೇರ್ ಜಮೀನಿನಲ್ಲಿ ಸಾವಯವ ಕೃಷಿ ಮಾಡುವ 20 – 30 ರೈತರನ್ನು ಒಂದು ತಂಡವಾಗಿ ಸಂಘಟಿಸುತ್ತದೆ (ಕೆಲವೆಡೆ ತಂಡದ ಸದಸ್ಯರ ಸಂಖ್ಯೆ 150 ತನಕ ಇರಬಹುದು.) ಪ್ರತಿಯೊಂದು ಗ್ರಾಮದಲ್ಲಿ ಒಂದು ಕೃಷಿ ಉತ್ಪನ್ನ ಸಂಗ್ರಹ ಕೇಂದ್ರ ಸ್ಥಾಪಿಸಲಾಗುತ್ತದೆ. ಈಗಿನ ಮತ್ತು ಹಿಂದಿನ (ಗ್ರಾಹಕ) ಬೇಡಿಕೆ ಮತ್ತು ಮಾರಾಟ ಮಾಹಿತಿ ಆಧರಿಸಿ, ಯಾವ ಕೃಷಿ ಉತ್ಪನ್ನಗಳನ್ನು ಬಿಗ್-ಬಾಸ್ಕೆಟ್ ಖರೀದಿಸುಬೇಕಾಗಿದೆ ಎಂಬುದನ್ನು ನಿರ್ಧರಿಸಲಾಗುತ್ತದೆ; ಇದನ್ನು ರೈತರಿಗೆ ತಿಳಿಸಲಾಗುತ್ತದೆ. ರೈತರ ಫಸಲಿನ ಕೊಯ್ಲಿನ ಮುಂಚೆ ಸಂಗ್ರಹ ಕೇಂದ್ರದ ಅಧಿಕಾರಿಗಳು ರೈತರ ಹೊಲ ಅಥವಾ ತೋಟಗಳಿಗೆ ಭೇಟಿಯಿತ್ತು, ಬೆಳೆಯ ಗುಣಮಟ್ಟ ಪರಿಶೀಲಿಸುತ್ತಾರೆ.

ಎರಡನೆಯ ಹಂತ: ಫಸಲಿನ ಕೊಯ್ಲಿನ ನಂತರ, ಸಾವಯವ ಉತ್ಪನ್ನಗಳನ್ನು ಸಂಗ್ರಹ ಕೇಂದ್ರಗಳಿಗೆ ರೈತರು ಪೂರೈಸುತ್ತಾರೆ. ರೈತರಿಗೆ ಪ್ರತಿ ಹಂಗಾಮಿನ ನಿರ್ಧರಿತ ದರದ ಅನುಸಾರ ಫಸಲಿನ ಹಣ ಪಾವತಿಸಲಾಗುತ್ತದೆ. ಈ ದರವು ಸಾಮಾನ್ಯ (ಸಾವಯವ ಆಗಿಲ್ಲದ) ಕೃಷಿ ಉತ್ಪನ್ನಗಳ ದರಕ್ಕಿಂತ ಶೇ. 10 -15ರಷ್ಟು ಜಾಸ್ತಿ ಆಗಿರುತ್ತದೆ. ರೈತರು ಕೃಷಿ ಉತ್ಪನ್ನ ಪೂರೈಸಿದ
72 ಗಂಟೆಗಳ ಮುನ್ನ ಅವರಿಗೆ ಫಸಲಿನ ಬೆಲೆ ಪಾವತಿಸಲು ಬಿಗ್-ಬಾಸ್ಕೆಟ್ ಪ್ರಯತ್ನಿಸುತ್ತದೆ ಎಂದು ಬಿಗ್-ಬಾಸ್ಕೆಟಿನ ಆಲೂಗಡ್ಡೆ ಖರೀದಿ ವಿಭಾಗದ ರಾಷ್ಟ್ರೀಯ ಮುಖ್ಯಸ್ಥರಾದ್ ಭರತ್ ಸಿಂಗ್ ತಿಳಿಸುತ್ತಾರೆ. ಒಂದು ವೇಳೆ ಮಾರುಕಟ್ಟೆ ದರಗಳು ಕುಸಿದರೆ ರೈತರಿಗೆ ಪಾವತಿಸುವ ಪೂರ್ವ-ನಿರ್ಧರಿತ ದರದಲ್ಲಿ ಬದಲಾವಣೆ ಮಾಡುವುದಿಲ್ಲ; ಮಾರುಕಟ್ಟೆ ದರಗಳು ಏರಿದರೆ, ಅದರ ಅನುಸಾರ ರೈತರಿಗೆ ಹೆಚ್ಚುವರಿ ಹಣ ಪಾವತಿಸಲಾಗುತ್ತದೆ ಎಂದೂ ಅವರು ಮಾಹಿತಿ ನೀಡುತ್ತಾರೆ.


ಮೂರನೆಯ ಹಂತ: ಗ್ರಾಮಮಟ್ಟದ ಸಂಗ್ರಹ ಕೇಂದ್ರದಿಂದ ಕೃಷಿ ಉತ್ಪನ್ನಗಳನ್ನು ಮುಖ್ಯ ಬಟವಾಡೆ ಕೇಂದ್ರಕ್ಕೆ ಸಾಗಿಸಲಾಗುತ್ತದೆ. ಇವು ದೊಡ್ಡ ನಗರಗಳಲ್ಲಿ ಇರುತ್ತವೆ. ಅಲ್ಲಿ ಕೃಷಿ ಉತ್ಪನ್ನಗಳ ವರ್ಗೀಕರಣ, ಶುಚಿಗೊಳಿಸುವುದು, ಗ್ರೇಡಿಂಗ್, ಪ್ಯಾಕಿಂಗ್ ಮತ್ತು ಬ್ರಾಂಡಿಂಗ್ ಮಾಡಿ, ಅಂತಿಮ ಬಟವಾಡೆ ತನಕ ಸಂಗ್ರಹಿಸಿ ಇಡಲಾಗುತ್ತದೆ. ಈಗ ಭಾರತದಲ್ಲಿ 40 ಮುಖ್ಯ ಬಟವಾಡೆ ಕೇಂದ್ರಗಳಿವೆ. ಪ್ರತಿಯೊಂದು ಮುಖ್ಯ ಬಟವಾಡೆ ಕೇಂದ್ರವು ದಿನಕ್ಕೆ 100 ಟನ್ ಹಣ್ಣು ಮತ್ತು ತರಕಾರಿಗಳ ಸಂಸ್ಕರಣೆ ಮಾಡುವ ಸಾಮರ್ಥ್ಯ ಹೊಂದಿದೆ.

ನಾಲ್ಕನೆಯ ಹಂತ: ಮುಖ್ಯ ಬಟವಾಡೆ ಕೇಂದ್ರಗಳು ಗ್ರಾಹಕರಿಂದ ಕೃಷಿ ಉತ್ಪನ್ನಗಳ ಬೇಡಿಕೆಗಳನ್ನು ಸ್ವೀಕರಿಸುತ್ತವೆ ಮತ್ತು ಆ ಬೇಡಿಕೆಗಳ ಅನುಸಾರ, ಗ್ರಾಹಕರ ವಿಳಾಸಕ್ಕೆ ಅತ್ಯಂತ ಹತ್ತಿರದಲ್ಲಿರುವ ಗ್ರಾಹಕ ಬಟವಾಡೆ ಕೇಂದ್ರಗಳಿಗೆ ಕೃಷಿ ಉತ್ಪನ್ನಗಳನ್ನು ಕಳಿಸಿಕೊಡುತ್ತವೆ. ಗ್ರಾಹಕ ಬಟವಾಡೆ ಕೇಂದ್ರಗಳು ಅಂತಿಮವಾಗಿ ಹಣ್ಣು ಮತ್ತು ತರಕಾರಿಗಳನ್ನು ಗ್ರಾಹಕರಿಗೆ ತಲಪಿಸುತ್ತವೆ. ಅಂತಿಮ ಘಟ್ಟದ ಪ್ರಕ್ರಿಯೆ 24 ಗಂಟೆಗಳಲ್ಲಿ ಪೂರ್ತಿಯಾಗುತ್ತದೆ ಎಂಬುದು ಬಿಗ್-ಬಾಸ್ಕೆಟಿನ ಅಧಿಕಾರಿಗಳ ಹೇಳಿಕೆ.

ಆಲೂಗಡ್ಡೆಯಂತಹ ತರಕಾರಿಗಳ ಬಾಳ್ವಿಕೆ ಜಾಸ್ತಿ. ಹಾಗಾಗಿ ಅಂಥವನ್ನು ದೊಡ್ಡ ಪರಿಮಾಣದಲ್ಲಿ ಖರೀದಿಸಿ ಬಿಗ್-ಬಾಸ್ಕೆಟ್ ಶೇಖರಿಸಿಡುತ್ತದೆ. ಬೇಡಿಕೆ ಬಂದಂತೆ ಅವನ್ನು ದೇಶದ ಉದ್ದಗಲದಲ್ಲಿ ಸರಬರಾಜು ಮಾಡುತ್ತದೆ. ಆದರೆ ಎಲೆ-ತರಕಾರಿಗಳು ಮತ್ತು ಬಹುಪಾಲು ಹಣ್ಣುಗಳ ಬಾಳ್ವಿಕೆ ಕೇವಲ 24 ಗಂಟೆಗಳು. ಇಂಥವನ್ನು ವರ್ಗೀಕರಿಸಿ, ಬೇಡಿಕೆ ಇರುವ ಸ್ಥಳಗಳಿಗೆ ಬೇಗನೇ ಸರಬರಾಜು ಮಾಡಲಾಗುತ್ತದೆ. ಈ ವಿಧಾನ ಅನುಸರಿಸುವ ಕಾರಣ “ಹಾಳಾಗುವ ಕೃಷಿ ಉತ್ಪನ್ನಗಳ” ಪ್ರಮಾಣ ಕೇವಲ ಶೇ.5 ಮತ್ತು ವೆಚ್ಚಗಳು ಶೇ.3ರಷ್ಟು ಕಡಿಮೆಯಾಗುತ್ತವೆ ಎನ್ನುತ್ತಾರೆ ಬಿಗ್-ಬಾಸ್ಕೆಟ್ ಅಧಿಕಾರಿಗಳು.

ಏರುತ್ತಿರುವ ಸಾವಯವ ಕೃಷಿ ಉತ್ಪನ್ನಗಳ ಬೇಡಿಕೆ ಪೂರೈಸಲಿಕ್ಕಾಗಿ ಬಿಗ್-ಬಾಸ್ಕೆಟ್ ಇನ್ನೊಂದು ವ್ಯವಸ್ಥೆಯನ್ನೂ ಮಾಡಿಕೊಂಡಿದೆ: ಸಾವಯವ ರೈತರಿಂದ ಹೆಚ್ಚಿನ ದರ ತೆತ್ತು ಆಹಾರಧಾನ್ಯ, ದ್ವಿದಳ ಧಾನ್ಯ ಮತ್ತು ಸಿರಿಧಾನ್ಯಗಳನ್ನು ಪಡೆಯುವ ಮಿಲ್ಲುಗಳು, ಸಂಸ್ಕರಣೆದಾರರು, ಕೃಷಿಕ ಉತ್ಪಾದಕರ ಕಂಪೆನಿಗಳು ಮತ್ತು ಫೆಡರೇಷನ್‌ಗಳಿಂದ ಅವನ್ನು ಖರೀದಿಸುವುದು. ಅಂತೂ ಬಿಗ್-ಬಾಸ್ಕೆಟ್‌ನ ಒಟ್ಟು ಮಾರಾಟದಲ್ಲಿ ಸಾವಯವ ಕೃಷಿ ಉತ್ಪನ್ನಗಳ ಪಾಲು ಶೇ.13 – 15. ಈ ಪಾಲು ವರುಷದಿಂದ ವರುಷಕ್ಕೆ ಹೆಚ್ಚುತ್ತಿದ್ದು, ಇದರಿಂದ 2016 -2022 ಅವಧಿಯಲ್ಲಿ ಮೂರು ಲಕ್ಷ ಗ್ರಾಹಕರನ್ನು ಪಡೆಯಲು ಬಿಗ್-ಬಾಸ್ಕೆಟ್‌ಗೆ ಸಹಾಯವಾಗಿದೆ.

ಸಾವಯವ ಕೃಷಿ ಉತ್ಪನ್ನಗಳ ನಿರಂತರ ಪೂರೈಕೆ ಖಚಿತಪಡಿಸಲಿಕ್ಕಾಗಿ ಹೆಚ್ಚೆಚ್ಚು ರೈತರು ಸಾವಯವ ಕೃಷಿ ವಿಧಾನಗಳನ್ನು ಅಳವಡಿಸಿಕೊಳ್ಳುವಂತೆ ಪ್ರೇರೇಪಿಸುವುದು ಅತ್ಯಗತ್ಯ. ಈ ನಿಟ್ಟಿನಲ್ಲಿ ಆಸಕ್ತ ರೈತರು ಸಾವಯವ ಕೃಷಿಗೆ ಪರಿವರ್ತನೆಯಾಗಲು ಬಿಗ್-ಬಾಸ್ಕೆಟ್ ಸಹಾಯ ಮಾಡುತ್ತಿದೆ. ಅದಕ್ಕಾಗಿ “ರೈತ ಸಂಪರ್ಕ” ಕಾರ್ಯಕ್ರಮದ ಅನುಸಾರ ಗ್ರಾಮಮಟ್ಟದ ಸಂಗ್ರಹ ಕೇಂದ್ರಗಳಲ್ಲಿ ಒಬ್ಬ ಅಗ್ರಾನಮಿಸ್ಟ್ ಅನ್ನು ನೇಮಿಸಿ, ಆತನ ಮೂಲಕ ರೈತರಿಗೆ ಬೆಳೆ ನಿರ್ವಹಣೆ ಬಗ್ಗೆ ಸಲಹೆ ನೀಡುತ್ತಿದೆ.

ಸಾವಯವ ಹಣ್ಣು ಮತ್ತು ತರಕಾರಿಗಳ ಮಾರುಕಟ್ಟೆಗೆ ಲಗ್ಗೆಯಿಟ್ಟಿರುವ ಬಿಗ್-ಬಾಸ್ಕೆಟ್ ಸವಾಲುಗಳನ್ನೂ ಎದುರಿಸುತ್ತಿದೆ. ಉದಾಹರಣೆಗೆ, ಸಾವಯವ ಉತ್ಪನ್ನಗಳ ಬೆಲೆ ದುಬಾರಿ. ಹಾಗಾಗಿ, ಗ್ರಾಹಕರಿಗೆ ಹೊರೆಯಾಗದ ಮಟ್ಟದಲ್ಲಿ ಸಾವಯವ ಉತ್ಪನ್ನಗಳ ದರ ನಿಗದಿಪಡಿಸಿ, ಅವುಗಳ ಪೂರೈಕೆಯ ಪರಿಮಾಣ ಉಳಿಸಿ, ಬೆಳೆಸಿಕೊಳ್ಳುವುದೊಂದು ಸವಾಲು. ಈಗ ದಿನಕ್ಕೆ ಒಂದೂವರೆ ಲಕ್ಷ ಗ್ರಾಹಕ ಬೇಡಿಕೆಗಳನ್ನು ಸ್ವೀಕರಿಸುತ್ತಿರುವ ಬಿಗ್-ಬಾಸ್ಕೆಟ್ ಇಂತಹ ಸವಾಲುಗಳನ್ನು ಸಮರ್ಥವಾಗಿ ಎದುರಿಸಲೆಂದು ಹಾರೈಸೋಣ.

ಇತ್ತೀಚೆಗೆ, ಬಿಗ್-ಬಾಸ್ಕೆಟ್‌ನ ಮಾರುಕಟ್ಟೆ ವ್ಯವಹಾರಗಳನ್ನು ಅಧ್ಯಯನ ಮಾಡಿದ ನವದೆಹಲಿಯ ವಿಜ್ನಾನ ಮತ್ತು ಪರಿಸರ ಕೇಂದ್ರದ ಪರಿಣತರ ವರದಿಯಲ್ಲಿರುವ ಎರಡು ಸಂಗತಿಗಳು ಗಮನಾರ್ಹ: ಈಗ ಬಿಗ್-ಬಾಸ್ಕೆಟಿನ ಸಾವಯವ ಉತ್ಪನ್ನಗಳ ಬೆಲೆಗಳು ಸಾವಯವವಲ್ಲದ ಅವೇ ಉತ್ಪನ್ನಗಳ ಬೆಲೆಗಳಿಗಿಂತ ಶೇ.20ರಷ್ಟು ಜಾಸ್ತಿ. ಜೊತೆಗೆ, ಭಾರತದ ಇತರ ಕೆಲವು ಸಾವಯವ ಕೃಷಿ ಉತ್ಪನ್ನಗಳ ಬ್ರಾಂಡ್‌ಗಳ ದರಪಟ್ಟಿಗೆ ಹೋಲಿಸಿದಾಗ ಬಿಗ್-ಬಾಸ್ಕೆಟಿನ ಉತ್ಪನ್ನಗಳ ದರಗಳು ಕಡಿಮೆ.

-ಅಡ್ಡೂರು ಕೃಷ್ಣ ರಾವ್

spot_img

ಸಂಬಂಧಿತ ಲೇಖನಗಳು

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group