spot_img
Friday, October 18, 2024
spot_imgspot_img
spot_img
spot_img

ಸ್ವಾವಲಂಬನೆಯ ಬದುಕಿಗೆ ಜೇನುಕೃಷಿ, ಖುಷಿ:ಮೂಡುಬಿಳ್ಳೆಯ ಕೃಷಿಕನ ಸಿಹಿಕನಸಿದು!

ಎಲ್ಲೆಲ್ಲೋ ಹಾರಾಟ-ಹುಡುಕಾಟ. ಗಿಡ, ಮರ, ಬಳ್ಳಿಗಳ ಹೂ-ಹಣ್ಣುಗಳಿಂದ ಮಕರಂದ ಸಂಗ್ರಹ. ಜೇನ್ನೊಣಗಳಿಗೆ ಅದೊಂದು ಜೀವನ ಸಾರ್ಥಕತೆ. ಅದೇ ಮಧುಪಾಕ; ಆಹಾರ ಮತ್ತು ಔಷಧಿ. ಆದುದರಿಂದಲೇ ಜೇನು ಕೃಷಿ ಗ್ರಾಮೀಣ ಉದ್ಯೋಗ-ಉದ್ಯಮ. ಕಾಡು ಗುಡ್ಡ ಬೆಟ್ಟಗಳಲ್ಲಿದ್ದ ಜೇನು ಕುಟುಂಬಗಳು ಕೃಷಿ ಭೂಮಿ, ಮನೆಯಂಗಳದಲ್ಲೂ ನೆಲೆ ಕಂಡುಕೊಳ್ಳುತ್ತಿವೆ. ಹವ್ಯಾಸವಾಗಿದ್ದ ಜೇನು ಕೃಷಿ ಸ್ವಾಭಿಮಾನ, ಸ್ವಾವಲಂಬನೆಯಾಗಿ ರೂಪುಗೊಂಡಿದೆ. ಜೇನು ವ್ಯವಸಾಯ ಬದುಕಿಗೊಂದು ಆಧಾರವಾಗುತ್ತಿದೆ. ಜೇನು ಕೃಷಿಯಲ್ಲಿ ಏಳುಬೀಳುಗಳನ್ನು ಕಂಡರೂ ಅದನ್ನೇ ನೆಚ್ಚಿ-ಮೆಚ್ಚಿ ತಮ್ಮ ಬದುಕನ್ನು ಸಿಹಿಯಾಗಿಸಿಕೊಂಡವರು ಸುರೇಶ ಕರ್ಕೇರ

ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಮೂಡುಬಿಳ್ಳೆ ಸಮೀಪದ ಕಟ್ಟಿಂಗೇರಿ ಗ್ರಾಮದ ಕಿನ್ನಿಗುಡ್ಡೆಯ ಸುರೇಶ ಕರ್ಕೇರ ಅವರು ಕಳೆದ 23 ವರ್ಷಗಳಿಂದ ಜೇನು ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಜೇನು ಕೃಷಿಯೇ ಅವರಿಗೆ ಜೀವನಾಧಾರ. ಕರ್ಕೇರರ ಅಜ್ಜ ಕೂಕ್ರ ಪಂಡಿತ ಅವರು ಗಿಡಮೂಲಿಕೆ ಔಷಧಿಯನ್ನು ನೀಡುವಲ್ಲಿ ಸಿದ್ಧಹಸ್ತರಾಗಿದ್ದರು. ಕಾಡು, ಗಿಡ, ಮರ, ಬಳ್ಳಿ ಸಸ್ಯಗಳ ಬಗ್ಗೆ ಅಜ್ಜನ ಆಸಕ್ತಿ, ಪ್ರಾಕೃತಿಕವಾದ ಜೇನು ಸಂಗ್ರಹ. ಅವರನ್ನು ಜೇನು ಕೃಷಿಯತ್ತ ಮನ ಮಾಡುವಂತೆ ಪ್ರೇರೇಪಿಸಿತು. ಬ್ರಹ್ಮಾವರದ ರುಡ್‌ಸೆಟ್ ಮತ್ತು ಜೇನು ಕೃಷಿ ಇಲಾಖೆ 1999 ರಲ್ಲಿ ಕುಂಜಾಲು ಸಮೀಪ ಏಳು ದಿನಗಳ ಕಾಲ ನಡೆಸಿದ ತರಬೇತಿ ಶಿಬಿರದಲ್ಲಿ ಅವರು ಭಾಗವಹಿಸಿದ್ದರು. ಈ ತರಬೇತಿಯಿಂದ ಮತ್ತಷ್ಟು ಉತ್ತೇಜಿತರಾಗಿ ತುಡುವೆ ಜೇನಿನಿಂದ ಜೇನು ಕೃಷಿ ಆರಂಭಿಸಿದರು. ಮೊದಲ ಪ್ರಯತ್ನದಲ್ಲೇ ಅಘಾತ. ಜೇನು ನೊಣಗಳಿಗೆ ವ್ಯಾಪಿಸಿದ್ದ ಕಾಯಿಲೆ ಇವರ ಪೆಟ್ಟಿಗೆಯನ್ನು ಬರಿದು ಮಾಡಿತು. ಮುಂದೇನು ಎಂಬ ಚಿಂತೆ. ಆದರೂ ಜೇನು ಕೃಷಿಯಿಂದ ಹಿಂದೆ ಸರಿಯುವ ಮನಸು ಮಾಡಲಿಲ್ಲ. ಈ ಸಂದರ್ಭದಲ್ಲಿ ಜಿಲ್ಲಾ ಕೈಗಾರಿಕಾ ಕೇಂದ್ರದ ನಿರ್ದೇಶಕರು ಮೆಲ್ಲಿಫೆರಾ ತಳಿಯನ್ನು ಸಾಕುವಂತೆ ಸಲಹೆಯಿತ್ತರು.

ಕೇರಳದ ಚಿತ್ತಾರಿಕಲ್ ಎಂಬಲ್ಲಿ ನಡೆದ ಒಂದು ವಾರದ ತರಬೇತಿ ಆನಂತರ ಚಂಡೀಗಡದಲ್ಲಿ ನಡೆದ ತರಬೇತಿಗೆ ಹೋಗಿ ಬಂದರು. ಆನಂತರ ತುಡುವೆ ಬಿಟ್ಟು ಮೆಲ್ಲಿಫೆರಾ ತಳಿಯನ್ನು ಸಾಕಲು ಆರಂಭಿಸಿದರು. ಇವುಗಳನ್ನು ಬಯಲು ಸೀಮೆಯ ಸೂರ್ಯಕಾಂತಿ ಮತ್ತು ಇತರ ಹೂ ಬೆಳೆಗಳ ಬಳಿ ಸಾಕಿದರೆ ಹೆಚ್ಚು ಲಾಭದಾಯಕವೆಂಬ ಹಿನ್ನಲೆಯಲ್ಲಿ ಬಯಲು ಸೀಮೆಗೆ ಇವರ ಜೇನು ಕೃಷಿ ಸ್ಥಳಾಂತರವಾಯಿತು. ಮೂರು ಪೆಟ್ಟಿಗೆಯಿಂದ ಆರಂಭವಾದ ಇವರ ಜೇನು ಕೃಷಿ ಯಾನ 250 ಪೆಟ್ಟಿಗೆ ವರೆಗೂ ತಲುಪಿತ್ತು. ಸುಮಾರು 8 ವರ್ಷಗಳ ಕಾಲ ಅಲ್ಲೆ ಜೇನು ಕೃಷಿಯಲ್ಲಿ ತೊಡಗಿಕೊಂಡಿದ್ದರು. ಒಂದಿಷ್ಟು ಸಂಪಾದನೆ ಕೈ ಸೇರಿತ್ತು. ಆದರೆ ಮತ್ತೆ ಅವರ ಜೇನು ವ್ಯವಸಾಯಕ್ಕೆ ಕುತ್ತು ಎದುರಾಯಿತು. ಜೇನು ನೊಣಗಳು ಕಾಯಿಲೆಗೆ ತುತ್ತಾದವು. ಕೆಲವು ಸಮಯಗಳ ಕಾಲ ದಿಕ್ಕು ತೋಚದೆ ಮನೆಯಲ್ಲೇ ಉಳಿದರು. ಇದನ್ನೇ ವೃತ್ತಿಯನ್ನಾಗಿಸಿ ಕೊಂಡಿದ್ದ ಅವರಿಗೆ ಜೇನು ಕೃಷಿಯಿಂದ ಹೊರಬರಲಾಗಲಿಲ್ಲ. ಪರ್ಯಾಯ ದಾರಿ ತೋರಲಿಲ್ಲ. ಮೆಲ್ಲಿಫೆರಾ ಸಹವಾಸ ಬಿಟ್ಟು ತುಡುವೆಯೊಂದಿಗೆ ಜೇನುಕೃಷಿಯ ಎರಡನೆಯ ಅಧ್ಯಾಯ ತನ್ನೂರಲ್ಲೇ ಆರಂಭಿಸಿದರು. ತುಡುವೆ ತೊಡಕಾಗಲಿಲ್ಲ. 5-6 ಪೆಟ್ಟಿಗೆಯಿಂದ ಪುನರಾರಂಭವಾದ ಜೇನುಕೃಷಿ ತಮ್ಮ ಮನೆಯ ಸುತ್ತಮುತ್ತ ಸೇರಿದಂತೆ ೧೮೦ ಪೆಟ್ಟಿಗೆವರೆಗೆ ತಲುಪಿತು. ಜೇನುಕುಟುಂಬ ಸಮೇತ ಪೆಟ್ಟಿಗೆಯನ್ನು ಮಾರಾಟ ಮಾಡುತ್ತಿರುವುದರಿಂದ ಈಗ 80 ಪೆಟ್ಟಿಗೆಯಷ್ಟೇ ಉಳಿದಿದೆ

ಪೆಟ್ಟಿಗೆ ಒಂದರಲ್ಲಿ 12-15  ಕೆಜಿವರೆಗೆ ಇಳುವರಿ ಪಡೆಯುತ್ತಾರೆ. ಜನವರಿಯಿಂದ ಮೇವರೆಗೆ ಜೇನು ಇಳುವರಿ ಪಡೆಯುವ ಕಾಲವಾದರೆ ಜೂನ್-ಸೆಪ್ಟೆಂಬರ್ ತನಕ ಜೇನು ಅಭಾವ ಕಾಲವಾದುದರಿಂದ ಅವುಗಳ ರಕ್ಷಣೆಯತ್ತ ಗಮನ ಹರಿಸಬೇಕಾಗುತ್ತದೆ. ಸೆಪ್ಟೆಂಬರ್-ಜನವರಿ ಕುಟುಂಬವೃದ್ದಿಯ ಕಾಲ. ಈ ಸಂದರ್ಭದಲ್ಲಿ ಕುಟುಂಬ ವೃದ್ದಿಗೆ ಬೇಕಾದಂತೆ ಸ್ಥಳಾಂತರಿಸಬೇಕಾಗುತ್ತದೆ. ಆರು ಮತ್ತು ಎಂಟು ಪ್ರೇಮಿನ ಪೆಟ್ಟಿಗೆಗಳನ್ನು ಬಳಸುತ್ತಾರೆ. ವರ್ಷವೊಂದಕ್ಕೆ ಸುಮಾರು 13ರಿಂದ 14 ಕ್ವಿಂಟಾಲು ಜೇನು ಮಾರಾಟ ಮಾಡುತ್ತಾರೆ. ಜೇನನ್ನು ಮನೆಗೆ ಬಂದು ಕೊಂಡು ಹೋಗುವುದರಿಂದ ಪ್ರತ್ಯೇಕ ಮಾರುಕಟ್ಟೆ ಹುಡುಕುವ ಪ್ರಮೇಯವಿಲ್ಲ. ರಾಜ್ಯದ ವಿವಿಧ ಜಿಲ್ಲೆಗಳಿಂದ ಹಾಗೂ ಹೊರ ರಾಜ್ಯಗಳಿಂದಲೂ ಬಂದು ಜೇನು ಖರೀದಿಸುತ್ತಾರೆ. ವಿದೇಶಗಳಿಗೆ ಕೊಂಡೊಯ್ಯುತ್ತಾರೆ ಎನ್ನುತ್ತಾರೆ ಸುರೇಶ ಕರ್ಕೇರ

ಮುಜೆಂಟಿ ಜೇನು

ಇತ್ತೀಚಿಗಿನ ದಿನಗಳಲ್ಲಿ ಮುಜೆಂಟಿ ಜೇನು ಕೃಷಿಯು ಹೆಚ್ಚು ಪ್ರಸಿದ್ಧಿಗೆ ಬರುತ್ತಿದೆ. ಇದರಲ್ಲಿ ಜೇನಿನ ಪ್ರಮಾಣ ಕಡಿಮೆಯಾದರೂ ಈ ಜೇನಿಗೆ ಹೆಚ್ಚು ಬೇಡಿಕೆ. ಉತ್ತಮ ಬೆಲೆಯೂ ಇದೆ. ಹಾಗಾಗಿ ಮುಜೆಂಟಿ ಜೇನು ಸಾಕಾಣೆಯನ್ನು ಮಾಡುತ್ತಿದ್ದಾರೆ. ೨೨ ಮುಜೆಂಟಿ ಪೆಟ್ಟಿಗೆಗಳಿವೆ.

ಜೇನು ಉತ್ಪಾದನೆಯಲ್ಲದೆ ಜೇನು ಕೃಷಿಗೆ ಬೇಕಾದ ಪೆಟ್ಟಿಗೆ, ಜೇನು ಕುಟುಂಬ, ಸ್ಟಾö್ಯಂಡ್, ಜೇನು ಸಂಸ್ಕರಿಸುವ ಯಂತ್ರವನ್ನೂ ಮಾರಾಟ ಮಾಡುತ್ತರೆ. ಜೇನು ಕೃಷಿ ತರಬೇತಿ ನೀಡುತ್ತಾರೆ. ಜೇನು ಕೃಷಿ ಮಾತ್ರವಲ್ಲದೆ ಕೃಷಿಯತ್ತಲೂ ಗಮನಹರಿಸಿದ್ದಾರೆ. ಭತ್ತದ ಕೃಷಿಗೆ ಒತ್ತು ನೀಡಿದ್ದಾರೆ. ತರಕಾರಿಯಲ್ಲದೆ ಉದ್ದು, ಹೆಸರು, ಮೊದಲಾದುವುಗಳನ್ನು ಬೆಳೆಸುತ್ತಾರೆ. ಜೇನು ಕೃಷಿಗೆ ಪೂರಕವಾಗುವಂತೆ ಮಿಯೊಸಾಕಿ ಕಾಡು ಬೆಳೆಸಲು ಗಿಡಗಳನ್ನು ನೆಟ್ಟಿದ್ದಾರೆ. ಸಹಜ ಕೃಷಿ, ಸಾವಯವ ಕೃಷಿ ಆಸಕ್ತಿ ಅವರದು ಮಾಹಿತಿಗೆ-9448409675

  • ರಾಧಾಕೃಷ್ಣ ತೊಡಿಕಾನ

ಚಿತ್ರ : ರಾಮ್

spot_img

ಸಂಬಂಧಿತ ಲೇಖನಗಳು

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group