ಅಲ್ಲಿ… ನವಿಲು ನರ್ತಿಸುತ್ತದೆ.. ಮುರಳಿಯ ಗಾನ ಕೇಳುತ್ತದೆ. .ದೈವ ದೇವರ ಚಿತ್ರಗಳು ನಮಿಸುವಂತೆ ಮಾಡುತ್ತವೆ. ಚಹಾದ ಕಪ್ ಆಹ್ಲಾದ ನೀಡುತ್ತದೆ. ಹೂವಿನ ಬುಟ್ಟಿ ಮನಸೆಳೆಯುತ್ತದೆ. ಆಕಾಶದ ಬುಟ್ಟಿ ನೇತಾಡುತ್ತದೆ.. ಹೂವಿನ ಕುಂಡಗಳು ಗಮನ ಸೆಳೆಯುತ್ತದೆ. ..ಹೀಗೇ ಆಕರ್ಷಕವಾದ ಹಲವು ಆಲಂಕಾರಿಕ ವಸ್ತುಗಳು. ಅವೆಲ್ಲಾ ಅರಳಿದ್ದು ಬಿದಿರಿನಿಂದ ಎಂದರೆ ಅಚ್ಚರಿಯಾದೀತು
ರಾಜು ಅರ್ಜುನ ಬೋಗೂರ ಅವರ ಕೈಚಳಕದಿಂದ ರೂಪು ಪಡೆದ ಕರಕುಶಲವಸ್ತುಗಳನ್ನು ಕಂಡಾಗ ಬಿದಿರಿಗೆ ಹೀಗೂ ಜೀವಂತಿಕೆ ನೀಡಹುದಲ್ಲಾ..ಅದರಲ್ಲೂ ಬದುಕಿನ ಬುತ್ತಿ ಕಟ್ಟಿಕೊಳ್ಳಬಹುದಲ್ಲಾ ಎಂದೆನಿಸದಿರದು. ಕಾಡುಮೇಡುಗಳನ್ನು ಅಲೆದು ತರುವ ಬಿದಿರು ಇವರಲ್ಲಿ ರೂಪಾಂತರಗೊಂಡು ಮನಸೆಳೆಯುತ್ತದೆ.
ಬೆಳಗಾವಿ ಜಿಲ್ಲೆಯ ಚನ್ನಮ್ಮನ ಕಿತ್ತೂರಿನ ಮೇದಾರ ಓಣಿಯ ರಾಜು ಅರ್ಜುನ ಬೋಗೂರ ಬಿದಿರಿನ ಕರ ಕುಶಲ ವಸ್ತುಗಳನ್ನು ತಯಾರಿಸುವಲ್ಲಿ ನೈಪುಣ್ಯತೆ ಪಡೆದವರು. ಬಿದಿರಿನ ಕರಕುಶಲ ವಸ್ತುಗಳೇ ಅವರ ಸಂಪತ್ತು. ಮತ್ತು ಜೀವನೋಪಾಯದ ದಾರಿ. ಅವರ ತಂದೆ ಬೀಳು ಮತ್ತು ಬಿದಿರುಗಳ ಬುಟ್ಟಿ, ಮರದ ಕಣಜಗಳನ್ನು ತಯಾರಿಸಿ ಅದನ್ನು ಹೊತ್ತು ಊರೂರು ತಿರುಗಾಡಿ ಅದರ ಮಾರಾಟದಿಂದ ಬಂದ ಆದಾಯದಿಂದಲೇ ಬದುಕನ್ನು ಹೇಗೋ ಸರಿದೂಗಿಸಿಕೊಡು ಬಂದವರು. ಪ್ಲಾಸ್ಟಿಕ್ ಉತ್ಪನ್ನಗಳು ಹೆಚ್ಚಾಗಿ ಹಳ್ಳಿಹಳ್ಳಿಗಳನ್ನು ಆವರಿಸಿಕೊಳ್ಳಲು ಆರಂಭಿಸಿದಾಗ ಅವರ ಉದ್ಯೋಗದ ಮೇಲು ಹೊಡೆತ ಬಿತ್ತು. ಜೀವನ ನಿರ್ವಹಣೆ ಕಷ್ಟಕರ ಪರಿಸ್ಥಿತಿ ಎದುರಾಯಿತು.
ಈ ಸಂದರ್ಭದಲ್ಲಿ ರಾಜು ಅರ್ಜುನ ಬೋಗೂರು ಅವರಿಗೆ ಭವಿಷ್ಯದ ಚಿಂತೆ ಕಾಡಿತು. ಆಗ ಹಳಿಯಾಳದ ದೇಶಪಾಂಡೆ ಪೌಂಡೇಶನ್ನಿನ ರುಡ್ ಸೆಟ್ ಸಂಸ್ಥೆಯು ಕರಕುಶಲ ವಸ್ತುಗಳ ತಯಾರಿ ಸ್ವದ್ಯೋಗ ಹಮ್ಮಿಕೊಳ್ಳಲು ತgಬೇತಿ ನೀಡುತ್ತಿರುವುದು ಅರಿವಿಗೆ ಬಂತು. ಪಾರಂಪರಿಕ ಕಸುಬಿಗೆ ಪೂರಕವಾಗಿಯೇ ಬಿದಿರಿನ ಕರ ಕುಶಲ ವಸ್ತುಗಳ ತಯಾರಿ ಬಗ್ಗೆ ತರಬೇತಿ ಪಡೆದುಕೊಂಡರು. 2009 ರಿಂದ ರಾಜು ಅವರು ಬಿದಿರಿನ ಕರಕುಶಲ ವಸ್ತುಗಳ ತಯಾರಿಯಲ್ಲಿ ತೊಡಗಿಕೊಂಡರು. ಸ್ವದ್ಯೋಗವಲ್ಲದೆ ಸಿದ್ಧಪಡಸಿದ ಕರಕುಶಲ ವಸ್ತುಗಳ ಮಾರಾಟಕ್ಕೂ ದೇಶಪಾಂಡೆ ಸಂಸ್ಥೆ ವೇದಿಕೆ ಕಲ್ಪಿಸಿಕೊಟ್ಟಿತು. ಇದರಿಂದ ರಾಜು ಅವರ ಬದುಕಿಗೊಂದು ಹೊಸ ತಿರುವು ಲಭಿಸಿತು
ಇವರ ಕೈಚಳಕದಲ್ಲಿ ಬಿದಿರು ಬಾಗಿತು.. ನಾನಾ ರೂಪಗಳನ್ನು ಪಡೆದುಕೊಂಡಿತು. ನವಿಲು, ಕೊಳಲು, ಹೂವಿನ ಬುಟ್ಟಿ, ಹೂವಿನ ಕುಂಡ, ಆಕಾಶ ಬುಟ್ಟಿ ಕೀ ಚೈನ್, ದೈವ ದೇವರ ಚಿತ್ರಗಳು ಲ್ಯಾಂಪ್ ಶೇಡ್ ಹೀಗೆ ಬಿದಿರಿನಿಂದ ಮಾಡಿದ ಹಲವಾರು ಅಲಂಕಾರಿಕ ವಸ್ತುಗಳು ಗ್ರಾಹಕರನ್ನು ಸೆಳೆದಿವೆ. 5೦ರೂಪಾಯಿ ಬೆಲೆಯಿಂದ 1೦೦೦ರೂಪಾಯಿವರೆಗಿನ ವಿವಿಧ ತರಹದ ಅಲಂಕಾರಿಕ ವಸ್ತುಗಳು ಅವರಲ್ಲಿವೆ. ರಾಜು ಅವರ ಕುಟುಂಬ ಈ ಉದ್ಯೋಗದಲ್ಲೇ ತೊಡಗಿಕೊಂಡಿರುವುದಲ್ಲದೆ ಇತರರಿಗೂ ಉದ್ಯೋಗ ದಾತರಾಗಿದ್ದಾರೆ.
ತಮಗೆ ಬೇಕಾದ ಕಚ್ಚಾ ಬಿದಿರುಗಳನ್ನು ಸಿರ್ಸಿ, ಉಳವಿ ಮತ್ತಿತರ ಕಡೆಗಳಿಂದ ಸಂಗ್ರಹಿಸುತ್ತಾರೆ. ಅರಣ್ಯ ಇಲಾಖೆ ಅವರಿಗೆ ಬೇಕಾದ ಕಚ್ಚಾವಸ್ತುಗಳನ್ನು ಒದಗಿಸುಲ್ಲಿ ಸಹಕರಿಸಿದೆ.
ಇವರು ತಯಾರಿಸಿದ ಬಿದಿರಿನ ಕರಕುಶಲ ವಸ್ತುಗಳು ಕರ್ನಾಟಕ ರಾಜ್ಯವಲ್ಲದೆ ಮಹಾರಾಷ್ಟ್ರ, ಗೋವಾ, ಆಂಧ್ರಪ್ರದೇಶ, ತಮಿಳುನಾಡು, ತೆಲಂಗಾಣ ಸೇರಿದಂತೆ ಹಲವಾರು ರಾಜ್ಯಗಳಲ್ಲಿ ಪ್ರದರ್ಶನ ಹಾಗೂ ಮಾರಾಟ ಕಂಡಿವೆ. ಈ ಕರ ಕುಶಲ ವಸ್ತು ಪ್ರದರ್ಶನ ಮತ್ತು ಮಾರಾಟಕ್ಕಾಗಿ ದೇಶಾದ್ಯಂತ ಸುತ್ತಾಡಿದ್ದಾರೆ. ಅಂಗಡಿ ಮಾರುಕಟ್ಟೆಯಲ್ಲದೆ ಸಾಮಾಜಿಕ ಜಾಲ ತಾಣಗಳ ಮೂಲಕವೂ ಕರಕುಶಲ ಉತ್ಪನ್ನಗಳನ್ನು ಮಾರಾಟ ಮಾಡುತ್ತಾರೆ. ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಕರಕುಶಲ ವಸ್ತುಗಳ ಬಗ್ಗೆ ಜನರಲ್ಲಿ ಆಸಕ್ತಿಯಿದೆ. ಬೇಡಿಕೆಯೂ ಇದೆ. ಎನ್ನುತ್ತಾರೆ ರಾಜು ಎ. ಬೋಗೂರು
ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ, ಮಹಿಳೆಯರಿಗೆ, ಸ್ವಸಹಾಯ ಸಂಘಗಳಿಗೆ ತರಬೇತಿಯನ್ನು ನೀಡುತ್ತಾರೆ. ಇವರಿಂದ ತರಬೇತಿ ಪಡೆದ ಹಲವಾರು ಮಂದಿ ಸ್ವ ಉದ್ಯೋಗದಲ್ಲಿ ತೊಡಗಿಕೊಂಡಿದ್ದಾರೆ. ರಾಜು ಅವರ ಸಾಧನೆಯನ್ನು ಗುರುತಿಸಿ ಹಲವಾರು ಸಂಘ ಸಂಸ್ಥೆಗಳು, ಇಲಾಖೆಗಳು, ಬ್ಯಾಂಕುಗಳು ಇವರನ್ನು ಸನ್ಮಾನಿಸಿ ಅಭಿನಂದಿಸಿವೆ.
“ಹುಟ್ಟಿನಿಂದ ಚಟ್ಟದವರೆಗೆ..” ಬಿದಿರಿನ ಉಪಯೋಗಗಳು ಹಲವು. ಎಳೆಯ ಬಿದಿರು ಆಹಾರವಾದರೆ ಬೆಳೆದ ಬಿದಿರು ಗ್ರಾಮೀಣ ಪರಿಸರದಲ್ಲಿ ಮನೆಗೆ ಬೇಕಾದ ಮರಮಟ್ಟುಗಳಿಗೆ ಪರ್ಯಾಯವಾಗಿ ಬಳಕೆಯಾಗುತ್ತಿತ್ತು. ಆದರೆ ಈಗ ಅವು ಹಳ್ಳಿಗಷ್ಟೇ ಸೀಮಿತವಾಗದೆ ಕಲೆಯ ಜೀವಂತಿಕೆಯಲ್ಲಿ ಪೇಟೆ ಪಟ್ಟಣಗಳ ಮನೆಮನಗಳನ್ನು ಆಕರ್ಷಿಸುತ್ತಿದೆ.
ಬರಹ: ರಾಧಾಕೃಷ್ಣ ತೊಡಿಕಾನ
ಮಾಹಿತಿಗೆ 9880861172