spot_img
Wednesday, October 30, 2024
spot_imgspot_img
spot_img
spot_img

ಆಹಾ ಎಂಥಾ ರುಚಿ ಈ ಕಲ್ಪರಸ: ದಾಹ ನೀಗಿಸೋ ಆರೋಗ್ಯಕರ ಅಮೃತದ ಕಥೆ ಇದು

ಪುರಾತನ ಕಾಲದಿಂದಲೂ ತೆಂಗು ಮಹತ್ವವನ್ನು ಪಡೆದುಕೊಂಡ ಶ್ರೀಫಲ. ಧಾರ್ಮಿಕ ಆಚರಣೆಯಲ್ಲಿ ಈ ಫಲಕ್ಕೆ ಪ್ರಾಧ್ಯಾನ್ಯತೆ ಇದೆ. ಪೋಷಕಾಂಶ ಭರಿತ ಆಹಾರ, ಆರೋಗ್ಯಕರ ಎಳನೀರು, ತೆಂಗಿನಕಾಯಿ, ಕೊಬ್ಬರಿ, ಎಣ್ಣೆ ಉಪಯೋಗಗಳು ಒಂದೆಡೆಯಾದರೆ ವಸತಿ ಮತ್ತು ಕೈಗಾರಿಕೆಗಳಿಗೆ ಬೇಕಾದ ಕಚ್ಚಾ ವಸ್ತುಗಳು ಸೇರಿದಂತೆ ತೆಂಗಿನ ಮರದಿಂದ ಆಗುವ ಉಪಯೋಗಗಳು ಹಲವು. ಆದರೆ ತೆಂಗು ಬೆಳೆ ಕೃಷಿಕನ ಕೈಯಲ್ಲಿದೆ ಎಂದಾದರೆ ಬೆಲೆ ಕುಸಿತ. ಮಂಗ ಹಾಗೂ ಇತರ ಕಾಡು ಪ್ರಾಣಿಗಳಿಂದ ಬೆಳೆ ನಾಶ. ಇದಕ್ಕೆಲ್ಲಾ ಪರಿಹಾರವೇನು  ಎಂಬ ಯೋಚನೆಯಲ್ಲಿದ್ದಾಗ ಹೊಸ ಭರವಸೆ ಮೂಡಿಸಿರುವುದು ಕಲ್ಪರಸ. ಸೀಯಾಳದಂತೆ ರುಚಿಕರವಾದ ನೈಸರ್ಗಿಕ ಪೇಯ.

ಕೇರಳ ಹಾಗೂ ಗೋವಾ ರಾಜ್ಯಗಳಲ್ಲಿ ಕಲ್ಪರಸ ಬಹಳಷ್ಟು ಜನಪ್ರಿಯವಾದ ಪೇಯವಾದರೂ ರಾಜ್ಯದಲ್ಲಿ ಇತ್ತೀಚೆಗಷ್ಟೇ ಇದರ ಸ್ವಾದಿಷ್ಟತೆಯ ಅರಿವು ಮೂಡ ತೊಡಗಿದೆ. ನೀರಾ ಸಂಗ್ರಹಕ್ಕೆ ಸಂಬಂಧಿಸಿದಂತೆ ೨೦೧೭ರಲ್ಲಿ ಅಬಕಾರಿ ಕಾಯ್ದೆಗೆ ತಿದ್ದುಪಡಿ ತಂದು ನೀರಾ ಕಾನೂನು ರೂಪುಗೊಂಡಾಗ ತೆಂಗು ಬೆಳೆಗಾರರಲ್ಲಿ ಭರವಸೆ ಹುಟ್ಟಿಸಿದ್ದು ಸುಳ್ಳಲ್ಲ. ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಬಾರಂದೂರಿನಲ್ಲಿ ೨೦೧೯ರಲ್ಲಿ ತೆಂಗಿನ ಮರಗಳಿಂದ ಕಲ್ಪರಸ ತೆಗೆಯುವ ಕಂಪೆನಿ ಆರಂಭವಾದರೆ ಕುಣಿಗಲ್ ಸಮೀಪ ಮತ್ತೊಂದು ಸಂಸ್ಥೆ ಆರಂಭದ ಹೆಜ್ಜೆ ಇರಿಸಿದೆ. ರಾಜ್ಯದ ಮೂರನೆಯ ಸಂಸ್ಥೆಯಾಗಿ ಉಡುಪಿ ಕಲ್ಪರಸ ಕೋಕೊನಟ್ ಅ್ಯಂಡ್ ಆಲ್ ಸ್ಪೆöಸಸ್ ಪ್ರೊಡ್ಯುಸರ್ ಕಂಪನಿ ಲಿ. “ಉಕಾಸ ‘’ ಉದಯವಾಗಿದೆ.

ತೆಂಗು ಬೆಳೆಗಾರರಲ್ಲಿ ಆತ್ಮವಿಶ್ವಾಸ ಹೆಚ್ಚಿಸಿದ ಉಕಾಸ:

ಉಕಾಸವು ಕರಾವಳಿ ಹಾಗೂ ಮಲೆನಾಡು ಸೇರಿದಂತೆ ಉಡುಪಿ ಜಿಲ್ಲೆಯ ತೆಂಗು ಬೆಳೆಗಾರರಲ್ಲಿ ಆತ್ಮ ವಿಶ್ವಾಸ ಮೂಡಿಸಿದೆ. ಕರಾವಳಿ ಹಾಗೂ ಮಲೆನಾಡಿನ ತೆಂಗು ಬೆಳೆಗಾರರು ಮಂಗಗಳ ಹಾವಳಿಯಿಂದ ನಷ್ಟ ಅನುಭವಿಸಿದವರೇ ಹೆಚ್ಚು. ಐವತ್ತು-ನೂರು ತೆಂಗು ಮರ ಇದ್ದವರೂ ತೆಂಗು ಮಾರಾಟ ಮಾಡುವುದು ಬಿಡಿ. ಮನೆ ಬಳಕೆಗೂ ಮಾರುಕಟ್ಟೆಯಿಂದ ಖರೀದಿಸಿ ತರಬೇಕಾದ ಪರಿಸ್ಥಿತಿ! ಹಿಂದೊಮ್ಮೆ ಉಡುಪಿ ಜಿಲ್ಲಾ ಭಾರತೀಯ ಕಿಸಾನ್ ಸಂಘವು ಈ ಸಮಸ್ಯೆಗಳ ಕುರಿತು ಸರಕಾರದ ಗಮನ ಸೆಳೆದಿತ್ತು. ಅಲ್ಲದೆ ಮಂಗಗಳ ಹಾವಳಿ ತಡೆಗೆ  ಅಧ್ಯಯನ ನಡೆಸಿ ಮಂಗಗಳ ಹಾವಳಿಯಿಂದ ಮುಕ್ತವಾಗಲು ಮಂಕಿ ಪಾರ್ಕ್ ರಚಿಸುವಂತೆ ಸರಕಾರಕ್ಕೆ ವರದಿ ಸಲ್ಲಿಸಿತ್ತು. ಆದರೆ ಸರಕಾರ ಕಾರ್ಯಗತಗೊಳಿಸಲು ಮುಂದಾಗಿರಲಿಲ್ಲ.

ಉಡುಪಿ ಜಿಲ್ಲೆಯಲ್ಲಿ ೬೦ ಸಾವಿರ ತೆಂಗು ಬೆಳೆಗಾರರಿದ್ದು ೩೦-೩೫ಲಕ್ಷ ತೆಂಗು ಮರಗಳಿವೆ. ಭಾರತೀಯ ಕಿಸಾನ್ ಸಂಘದ ನೇತೃತ್ವದಲ್ಲಿ ಹೆಬ್ರಿ, ಬ್ರಹ್ಮವರ, ಕಾಪು, ಬೈಂದೂರು, ಉಡುಪಿ, ಕುಂದಾಪುರ, ಕಾರ್ಕಳ ತಾಲೂಕು ಒಳಗೊಂಡಂತೆ ಸುಮಾರು ೭೩ ತೆಂಗು ಬೆಳೆಗಾರರ ಸಂಘ, ೩ ಫಡರೇಶನ್‌ಗಳು, ೬೮೨೦ ರೈತರು ಹಾಗೂ ೩.೬೮ಲಕ್ಷ ತೆಂಗಿನ ಮರಗಳಿವೆ.

ತೆಂಗು ಬೆಳೆಗಾರರ ಹಿತ ರಕ್ಷಣೆಗೆ ಏನನ್ನಾದರೂ ಮಾಡಬೇಕು. ತೆಂಗು ಕೃಷಿ ನಷ್ಟದ ಹಾದಿಯಿಂದ ಲಾಭದ ಹಳಿಗೆ ಬರಬೇಕು. ಅದಕ್ಕಾಗಿ ಯಾವುದಾದರೂ ಯೋಜನೆ ಹಮ್ಮಿಕೊಳ್ಳಬೇಕೆಂಬ ತುಡಿತ ಉಡುಪಿ ಜಿಲ್ಲಾ ಭಾರತೀಯ ಕಿಸಾನ್ ಸಂಘದ ಪ್ರಧಾನ ಕಾರ್ಯದರ್ಶಿ, ಪ್ರಗತಿ ಕೃಷಿಕರಾದ ಸತ್ಯನಾರಾಯಣ ಉಡುಪ ಜಪ್ತಿ ಅವರಲ್ಲಿತ್ತು. ಆಗ ರೂಪುಗೊಂಡದ್ದೇ ಕಲ್ಪರಸ ತಯಾರಿ.

ಕಲ್ಪರಸ ತಯಾರಿಯ ಹಾದಿಯಲ್ಲಿ:

ಈ ಬಗ್ಗೆ ತನ್ನ ಪರಿಸರದ ಸಮಾನ ಮನಸ್ಕ ರೈತರೊಂದಿಗೆ ಸಮಾಲೋಚಿಸಿ ತೋಟಗಾರಿಕೆ ಇಲಾಖೆಯ ಹಿರಿಯ ಅಧಿಕಾರಿಯಾಗಿದ್ದ ಸಂಜೀವ ನಾಯ್ಕ್ ಅವರು ಸಲಹೆ, ಭಾರತೀಯ ಕಿಸಾನ್ ಸಂಘದ ಮಾರ್ಗದರ್ಶನ ಅವರ ಚಿಂತನೆಗೆ ಇನ್ನಷ್ಟು ಹೊಳಪು ನೀಡಿತು. ಸಿಪಿಸಿಆರ್‌ಐ ಕಾಸರಗೋಡು ಸಂಸ್ಥೆಯನ್ನು ಸಂಪರ್ಕಿಸಿ ಕಲ್ಪರಸ ತೆಗೆಯುವ ತಂತ್ರಜ್ಞಾನವನ್ನು ಪಡೆದುಕೊಂಡರು. ಆನಂತರ ಉಡುಪಿ ಜಿಲ್ಲೆಯ ಸುಮಾರು 1028 ಮಂದಿ ರೈತರಿಂದ ಶೇರು ಸಂಗ್ರಹಿಸಿ ಉಕಾಸ ಕಂಪೆನಿಯನ್ನು ಹುಟ್ಟು ಹಾಕಿದರು. ೨೦೧೯ರಲ್ಲಿ ಪರವಾನಿಗೆಗಾಗಿ ಅರ್ಜಿ ಸಲ್ಲಿಸಿ ಇತ್ತೀಚೆಗೆ ಅಬಕಾರಿ ಇಲಾಖೆಯಿಂದ ನೀರಾ ಸಂಗ್ರಹಣೆ, ಸಾಗಾಟ ಹಾಗೂ ಸಂಸ್ಕರಣೆ ಮೌಲ್ಯವರ್ಧನೆ ಹಾಗೂ ಮಾರಾಟಕ್ಕೆ ಪರವಾನಿಗೆಯನ್ನು ಪಡೆದುಕೊಂಡರು.

ಉಡುಪ ಅವರು ತನ್ನ ತೋಟದ ಮನೆಯನ್ನೆ  ತರಬೇತಿ ಕೇಂದ್ರವನ್ನಾಗಿಸಿ 21ಕ್ಕೂ ಹೆಚ್ಚು ಮಂದಿಗೆ ಕಲ್ಪರಸ ತೆಗೆಯುವ ತರಬೇತಿ ನೀಡಲಾಗಿದೆ. ಈಗಾಗಲೇ 30 ಮಂದಿ ತೆಂಗು ಬೆಳೆಗಾರರ ತೋಟದಿಂದ ತಲಾ 8 ಮರದಂತೆ ಕಲ್ಪರಸ ತೆಗೆಯಲಾಗುತ್ತಿದೆ. ಪ್ರತಿದಿನ 1೦೦ ಲೀಟರ್‌ಗಿಂತ ಹೆಚ್ಚು ಕಲ್ಪರಸ ಸಂಗ್ರಹವಾಗುತ್ತಿದೆ. ಅದನ್ನು ಜಪ್ತಿಯಲ್ಲಿರುವ ಸಂಸ್ಕರಣ ಕೇಂದ್ರಕ್ಕೆ ಕೊಂಡೊಯ್ದು ಗುಣಮಟ್ಟದ ಆಧಾರದಲ್ಲಿ ಶ್ರೇಣಿಕರಿಸಿ ಪಾನೀಯವಾಗಿ ಬಳಸಲಾಗುತ್ತದೆ. ಕಲ್ಪರಸ ಉಳಿದರೆ ಅದನ್ನು ಕುದಿಸಿ ಜೋನಿ ಬೆಲ್ಲ, ಮತ್ತಷ್ಟು ಕುದಿಸಿ ಹರಳು ರೂಪದ ಬೆಲ್ಲ, ಸಕ್ಕರೆ ಮಾಡಲಾಗುತ್ತದೆ. ಈ ರೀತಿಯ ಜೋನಿ  ಬೆಲ್ಲ, ಸಕ್ಕರೆ ಬೆಲೆ ಹೆಚ್ಚೆನಿಸಿದರೂ ಬಹಳಷ್ಟು ಬೇಡಿಕೆಯಿದೆ. 2೦೦ ಎಮ್.ಎಲ್. ಕಲ್ಪರಸಕ್ಕೆ ರೂ.೪೦, ಒಂದು ಲೀಟರ್ ಪಡೆದುಕೊಂಡರೆ ಸ್ವಲ್ಪ ರಿಯಾಯಿತಿ ಇದೆ.

ಅರ್ಧ ಕೆಜಿ ಬೆಲ್ಲಕ್ಕೆ 4೦೦ರೂ, ಕಾಲು ಕೆಜಿ ಸಕ್ಕರೆಗೆ 250 ರೂ ಬೆಲೆಯಿದೆ. ಔಷಧಿಯ ಗುಣವೂ ಇರುವುದರಿಂದ ಈ ಉತ್ಪನ್ನಗಳಿಗೆ ಬಹುಬೇಡಿಕೆಯಿದೆ. ಜಪ್ತಿಯಲ್ಲಿ ಕೇಂದ್ರ ಕಚೇರಿ ಹಾಗೂ ಸಂಸ್ಕರಣೆ ಘಟಕವನ್ನು ಹೊಂದಿರುವ ಕಂಪೆನಿಯು ಕುಂದಾಪುರದಲ್ಲಿ ಮಾರಾಟ ಮಳಿಗೆಯನ್ನು ಹೊಂದಿದ್ದು ಎರಡು ವಿಭಾಗವನ್ನು ತೆರೆಯಲಾಗಿದೆ. ಒಂದರಲ್ಲಿ ಕಲ್ಪರಸ ಹಾಗೂ ಅದರ ಉಪ ಉತ್ಪನ್ನಗಳು, ಇನ್ನೊಂದರಲ್ಲಿ ತೆಂಗಿನ ಉತ್ಪನ್ನಗಳ ಮಾರಾಟಕ್ಕೂ ಯೋಜನೆ ರೂಪಿಸಲಾಗಿದೆ. ರಾಜ್ಯದಾದ್ಯಂತ ಉತ್ಪನ್ನಗಳನ್ನು ಮಾರಾಟ ಮಾಡುವ ಉದ್ದೇಶವನ್ನು ಕಂಪೆನಿ ಹೊಂದಿದೆ. ಚಾಕಲೇಟ್, ಐಸ್ ಕ್ರೀಮ್, ವಿನೆಗರ್, ತಯಾರಿಯ ಯೋಜನೆಗಳಿವೆ

ಕಲ್ಪರಸ –ನೀರಾ-ಶೇಂದಿ ಒಂದೇ ಅಲ್ಲ

ನೀರಾ- ಶೇಂದಿ- ಹೆಂಡ- ಕಳ್ಳು ಇವೆಲ್ಲವೂ ಒಂದೇ ಎಂಬ ಕಲ್ಪನೆ ಬಹಳಷ್ಟು ಮಂದಿಯಲ್ಲಿ ಇದೆ. ಕಲ್ಪರಸ ಇವೆಲ್ಲಕ್ಕೂ ಮೂಲ ದ್ರವ್ಯವಾಗಿದ್ದರೂ ನೀರಾ-ಶೇಂದಿಯ ಗುಣಧರ್ಮಗಳು, ಬಣ್ಣ ಮತ್ತು ಅದರಲ್ಲಿರವ ಅಂಶಗಳಲ್ಲಿ ವ್ಯತ್ಯಾಸವಿದೆ. ಸರಕಾರ ಬಳಸಿದ ಭಾಷೆ ನೀರಾದಲ್ಲಿ ಹೆಚ್ಚೆಂದರೆ ಶೇಕಡ ಒಂದರಷ್ಟು ಅಮಲಿನ ಅಂಶವಿದ್ದರೆ ಶೇಂದಿ ಶೇ. ೬-೮ ಅಮಲಿರುವ ಪಾನೀಯವಾಗಿದೆ. ಆದರೆ ಕಲ್ಪರಸ ಅಮಲಾಗದ ನೈಸರ್ಗಿಕ ಪಾನೀಯ. ಆದರೂ ಸರಕಾರ ನೀರಾ ಕಾಯ್ದೆಯಡಿ ಕಲ್ಪರಸ ಸಂಗ್ರಹಕ್ಕೆ ಅನುಮತಿ ನೀಡಿದೆ

ಕಲ್ಪರಸ ಸಂಗ್ರಹಕ್ಕೆ ಬೇಕಾದ ಪರಿಕರಗಳು

3-4- ಲೀಟರ್ ಸಾಮರ್ಥ್ಯದ ಪ್ಲಾಸ್ಟಿಕ್ ತೊಟ್ಟೆಗಳು, 1-2 ಕೆಜಿ ಐಸ್, ಸಂಗ್ರಹಕ್ಕೆ ಫೈಬರ್ ಗಡಿಗೆಗಳು, ಮರವೇರುವುದಕ್ಕೆ ಸುಲಭವಾಗುವಂತೆ ಸ್ಕೂಟರ್ ಹಳೆಯ ಟೈಯರ್‌ಗಳು, ತೆಂಗಿನ ಮರಗಳಲ್ಲಿರುವ ಹೊಂಬಾಳೆ (ಹೂವು/ಕೊಂಬು) ಆಯ್ದುಕೊಂಡು ಅದನ್ನು ಹಗ್ಗದಿಂದ ಬಿಗಿಯಾಗಿ ಕಟ್ಟಿ ನಂತರ ಹದಗೊಳಿಸಬೇಕು. ಏಳೆಂಟು ದಿನಗಳ ನಂತರ ಹೂವಿನ ಭಾಗವನ್ನು ವಿಶಿಷ್ಟವಾದ ಕತ್ತಿಯಿಂದ ಸ್ವಲ್ಪ ಕತ್ತರಿಸಲಾಗುತ್ತದೆ. ಆರಂಭದಲ್ಲಿ ಹೂವಿನ ರಸ ಹನಿಹನಿಯಾಗಿ ಜಿನುಗುತ್ತಿರುತ್ತದೆ. 50-1೦೦ ಎಂ.ಎಲ್ ಬಂದ ನಂತರ ಪೂರ್ಣ ಪ್ರಮಾಣದಲ್ಲಿ ಕಲ್ಪರಸ ಸಂಗ್ರಹಿಸಬಹುದಾಗಿದೆ. 4 ಡಿಗ್ರಿ ಸೆಂಟಿಗ್ರೇಡಿಗಿಂತ ಕಡಿಮೆ ಉಷ್ಣಾಂಶದಲ್ಲಿ ಕಲ್ಪರಸ ತನ್ನ ನೈಜತೆಯನ್ನು ಕಾಪಾಡಿಕೊಂಡಿರುತ್ತದೆ. ರೈತರ ತೋಟದಲ್ಲಿ ಸಂಗ್ರಹಿಸಿದ ಕಲ್ಪರಸವನ್ನು ಶೀತಲೀಕರಣ ವ್ಯವಸ್ಥೆಯಲ್ಲಿ ಸಂಸ್ಕರಣೆ ಕೇಂದ್ರದಲ್ಲಿ ಸಂಸ್ಕರಿಸುವ ಕೆಲಸವಾಗುತ್ತದೆ.

ಕಲ್ಪರಸ ರೈತರಿಗೆ ಆದಾಯ ಹೆಚ್ಚಳ

ಕಲ್ಪರಸ ತೆಗೆಯುವುದರಿಂದ ರೈತರಿಗೆ ಏನು ಲಾಭ ಎಂಬ ಪ್ರಶ್ನೆ ಹಲವರನ್ನು ಕಾಡಬಹುದು. ಆದರೆ ಅದರ ಅಂಕಿ-ಅಂಶಗಳು ರೈತರ ಹುಬ್ಬೇರಿಸುವಂತೆ ಮಾಡುತ್ತದೆ. ತೆಂಗಿನ ಮರ ಒಂದರ ಒಂದು ಹೂವಿನಿಂದ ಕಡಿಮೆಯೆಂದರೂ ದಿನವೊಂದಕ್ಕೆ ಎರಡು ಮೂರು ಲೀಟರ್ ಕಲ್ಪರಸ ಪಡೆಯಬಹುದು. ತೆಂಗಿನ ಮರವೊಂದಕ್ಕೆ ಕನಿಷ್ಠ 2-3 ಹೂವಿಗೆ ಗಡಿಗೆ ಅಳವಡಿಸಬಹುದು. ಒಂದು ತೆಂಗಿನ ಮರಕ್ಕೆ ಕನಿಷ್ಠವೆಂದರೆ ನೂರು ತೆಂಗಿನಕಾಯಿ ಎಂದಾದರೂ ಕಾಯಿಯೊಂದಕ್ಕೆ 10-15  ರೂಪಾಯಿಯಂತೆ ಮರದಿಂದ 1500 ರೂ. ಗಳಿಸಬಹುದು. ಕಲ್ಪ ರಸವನ್ನು ತೆಗೆದರೆ ಮರವೊಂದರಿಂದ ಕನಿಷ್ಠ ೬೦೦-೭೦೦ ಲೀಟರ್ ಸಂಗ್ರಹಿಸಿ ೭-೮ ಸಾವಿರ ರೂಪಾಯಿ ಆದಾಯ ಪಡೆಯಬಹುದಾಗಿದೆ

ತರಬೇತಿ :ಮರ ಹತ್ತುವುದು ಅದರ ಹೆಡೆಗಳನ್ನು ಮೇಲೆ ನಿಂತು ಕೆಲಸ ಮಾಡುವುದಕ್ಕೆ ಕೌಶಲ್ಯ ತಾಂತ್ರಿಕತೆಯ ನಿಪುಣತೆ ಬೇಕು. ಅದಕ್ಕಾಗಿ ಹಲವು ಮಂದಿ ಸ್ಥಳೀಯ ಯುವಕರಿಗೆ ತರಬೇತಿಯನ್ನು ನೀಡಿದೆ. ಕೃಷ್ಣ ಪೂಜಾರಿಯವರು ಯುವಕರಿಗೆ ತರಬೇತಿದಾರರು. ಈವರೆಗೆ 22 ಯುವಕರು ತರಬೇತಿ ಪಡೆದಿದ್ದಾರೆ. 14 ಮಂದಿ ಈ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಇದು ಗ್ರಾಮೀಣ ಭಾಗದ ಹಸಿರು ಉದ್ಯೋಗ. ಬೆಳಿಗ್ಗೆ ಮತ್ತು ಸಂಜೆ ಕೆಲಸ. ಸುಮಾರು ಇಪ್ಪತ್ತು ಇಪ್ಪತ್ತೈದು ಸಾವಿರ ರೂಪಾಯಿ ತಿಂಗಳಿಗೆ ಪಡೆಯಬಹುದು. ಇನ್ಸೂರೆನ್ಸ್, ಪಿಎಫ್ ಮೊದಲಾದ ಸೌಲಭ್ಯಗಳನ್ನು ನೀಡಲಾಗುತ್ತದೆ. ಬಿಡುವಿನ ಅವಧಿಯಲ್ಲಿ ಅರೆಕಾಲಿಕವಾಗಿ ಇತರ ಉದ್ಯೋಗವನ್ನು ಹೊಂದಿಸಿಕೊಳ್ಳಬಹುದು. ತಮ್ಮ ತೋಟದ ತೆಂಗಿನ ಮರಗಳಿಂದ ಮನೆಯವರೇ ತೆಗೆದುಕೊಳ್ಳುವುದಾದರೆ ಅದು ಲಾಭದಾಯಕವೇ ಎನ್ನುತ್ತಾರೆ ಸತ್ಯನಾರಾಯಣ ಉಡುಪ

ಕಲ್ಪರಸದಲ್ಲಿರುವ ಪೋಷಕಾಂಶಗಳು

ಕಲ್ಪರಸ ಯಾವುದೇ ಅಮಲಿರದ ನೈಸರ್ಗಿಕವಾದ ಪಾನೀಯ. ಆರೋಗ್ಯಕ್ಕೆ ಉತ್ತಮ. ಆ್ಯಂಟಿ ಬ್ಯಾಕ್ಟೀರಿಂiÀiಲ್ ಆ್ಯಂಟಿ ಆಕ್ಸಿಡೆಂಟ್ ಅಂಶಗಳು ಹೇರಳವಾಗಿದೆ. ಕಬ್ಬಿಣ, ಸತು, ಪೊಟಾಶಿಯಂ, ತಾಮ್ರ ಸೇರಿದಂತೆ ಹಲವಾರು ಜೀವಸತ್ವಗಳು ಇದರಲ್ಲಿ ಅಡಕವಾಗಿವೆ. ಮನುಷ್ಯನ ದೇಹಕ್ಕೆ ಪೂರಕವಾದ  17 ರೀತಿಯ ಅಮೈನೊ ಆಮ್ಲ ಇವುಗಳಲ್ಲಿ ಇದೆ. ಗ್ಲೆöÊಸಮಿಕ್ ಇಂಡೆಕ್ಸ್ 35ಕ್ಕಿಂತ ಕಡಿಮೆ ಇರುವುದರಿಂದ ಮಧುಮೇಹಿಗಳು ಕೂಡ ಇದರ ಪಾನೀಯ ಅಥವಾ ಇದರ ಉಪಉತ್ಪನ್ನಗಳನ್ನು ಉಪಯೋಗಿಸಬಹುದು. ಔಷಧೀಯ ಗುಣವನ್ನು ಹೊಂದಿರುವುದರಿಂದ ರೋಗ ನಿರೋಧಕ ಶಕ್ತಿ ಕಲ್ಪರಸದಲ್ಲಿದೆ. ರಕ್ತದೊತ್ತಡ, ದೃಷ್ಟಿದೋಷ, ಮೈಗ್ರೇನ್ ತಲೆನೋವು, ಮೂತ್ರಕೋಶದ ಸಮಸ್ಯೆ, ಅಸ್ತಮ, ಚರ್ಮ ಅಲರ್ಜಿ, ಜ್ವರ ಶಮನ ಕ್ಯಾನ್ಸರ್ ತಡೆಗೆ ಪೂರಕವಾದ ಔಷಧೀಯ ಗುಣಗಳಿವೆ ಎಂದು ತಜ್ಞರು ಹೇಳುತ್ತಾರೆ

ಉದ್ದೇಶಗಳು: ರೈತರ ಹಿತದೃಷ್ಟಿಯಿಂದ ತೆಂಗಿನ ಮರದಿಂದ ವಾರ್ಷಿಕವಾಗಿ 80,000-1,00,000  ಆದಾಯ ತರುವ ಯೋಜನೆ. ಕೃಷಿ ಆಧಾರಿತ ಹಸಿರು ಉದ್ಯೋಗ. ೨೫೦೦-೩೦೦೦ ಉದ್ಯೋಗ ಸೃಷ್ಟಿ. ಗ್ರಾಮೀಣ ಯುವಕರ ಕೈಗೆ ದುಡಿಮೆ ಮತ್ತು ಆರ್ಥಿಕ ಶಕ್ತಿ ತುಂಬುವುದು ಕಂಪೆನಿಯ ಉದ್ದೇಶವಾಗಿದೆ. ರಾಜ್ಯದಲ್ಲಿ ಆರಂಭದಲ್ಲಿ 5೦ ಮಾರಾಟ ಕೇಂದ್ರಗಳನ್ನು ತೆರೆಯುವುದು. ಈಗಿರುವ ಉತ್ಪಾದನಾ ಸಾಮರ್ಥ್ಯವನ್ನು 200-300 ಲೀಟರಿಗೆ ಹೆಚ್ಚಿಸುವುದು. ಹಾಲಿನ ಸೊಸೈಟಿ ಮಾದರಿಯಲ್ಲಿ ಕಲ್ಪರಸ ಸಂಗ್ರಹಣೆ ಮೊದಲಾದ ಚಿಂತನೆ ಸಂಸ್ಥೆಯ ಆಡಳಿತ ಮಂಡಳಿಯದ್ದು.

ಉಕಾಸದ ಸ್ಥಾಪನೆಯ ರೂವಾರಿ ಸತ್ಯನಾರಾಯಣ ಉಡುಪ ಜಪ್ತಿ. ಪ್ರಗತಿಪರ ಕೃಷಿಕ, ಉಡುಪಿ ಜಿಲ್ಲಾ ಭಾರತೀಯ ಕಿಸಾನ್ ಸಂಘದ ಪ್ರಧಾನ ಕಾರ್ಯದರ್ಶಿ, ವಕೀಲರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಾಮಾಜಿಕ ಕಾಳಜಿಯುಳ್ಳವರು. ಉಕಾಸದ ಸ್ಥಾಪಕಾಧ್ಯರಾಗಿ ಸಾರಥ್ಯ ವಹಿಸಿದ್ದಾರೆ. ನಿರ್ದೇಶಕರಾಗಿ ವತ್ಸಲಾ ಉಳ್ಳೂರ, ಸೀತಾರಾಮ ಗಾಣಿಗ ಹಾಲಾಡಿ, ಜಗದೀಶ ಉಡುಪ, ಗಾವಳಿ ಲಕ್ಷ್ಮಿ ನಾರಾಯಣ ಕೆದಿಲಾಯ, ಚಂದ್ರ ಶೆಟ್ಟಿ, ಶ್ರೀನಿವಾಸ ಉಡುಪ, ಶಾನಾಡಿ ಪ್ರಶಾಂತ ಭಟ್, ಪಣಿಧರ ಉಡುಪ, ಪ್ರಶಾಂತ್ ಕಾರಂತ್ ಅವರು ಸಂಸ್ಥೆ ಯಶಸ್ಸಿಗೆ ಸಹಕರಿಸುತ್ತಿದ್ದಾರೆ. ಸಿ.ಎ ಆಗಿರುವ ಮುರಳೀಧರ ಉಳ್ಳೂರ ಹಾಗೂ ಹಲವಾರು ಪ್ರಗತಿಪರ ರೈತರು ಕಾರ್ಯ ಯೋಜನೆಗಳ ಅನುಷ್ಟಾನಕ್ಕೆ ಬೆಂಬಲವಾಗಿರುವುದನ್ನು ಉಡುಪರು ಸ್ಮರಿಸುತ್ತಾರೆ

ರಾಧಾಕೃಷ್ಣ ತೊಡಿಕಾನ

ಚಿತ್ರಗಳು: ರಾಮ್ ಅಜೆಕಾರ್

 

 

spot_img

ಸಂಬಂಧಿತ ಲೇಖನಗಳು

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group