spot_img
Sunday, December 8, 2024
spot_imgspot_img
spot_img
spot_img

ಕೋಟೆನಾಡಿನಲ್ಲಿ ಗಟ್ಟಿ ನೆಲೆ ಕಂಡುಕೊಳ್ತಿದೆ ಸೇಬು: ಇದು ಸೇಬು ಬೆಳೆದವರ ಕತೆ!

ಕೋಟೆ ನಾಡು ಚಿತ್ರದುರ್ಗ ಬಯಲುಸೀಮೆಯ ಜಿಲ್ಲೆ. ಈರುಳ್ಳಿ, ದಾಳಿಂಬೆ, ಶೇಂಗಾ (ನೆಲಗಡಲೆ), ಕಡಲೆ, ಮೆಕ್ಕೆಜೋಳ ಸಿರಿಧಾನ್ಯ, ಸೂರ್ಯಕಾಂತಿ, ಮೊದಲಾದವುಗಳನ್ನು ರೈತರು ಹೆಚ್ಚಾಗಿ ನೆಚ್ಚಿಕೊಂಡವರು. ಮಳೆಯಾಶ್ರಿತ ಬೆಳೆಗೆ ಒಗ್ಗಿಕೊಂಡವರು. ನೀರಾಶ್ರಯವಿದ್ದಲ್ಲಿ ಅಡಿಕೆ ನೆಲೆ ಕಂಡುಕೊಂಡಿದೆ. ಆದರೆ ಕೆಲವು ಕಡೆ ಬಿಸಿಲ ಬೇಗೆ ತಡೆಯದೆ ನೀರ ದಾಹ ತಣಿಯದೆ ಅಡಿಕೆ ನೆಲಕಚ್ಚಿದ್ದಿದೆ
ಇದೀಗ ಸೇಬು ಈ ನಾಡಿನಲ್ಲಿ ಬೇರುಬಿಡಲು ಆರಂಭಿಸಿದೆ. ಮಣ್ಣಿನ ಗುಣಕ್ಕೆ ಹೊಂದಿಕೊಂಡು ಬೆಳೆಯುತ್ತಿದೆ ಕಾಶ್ಮೀರ, ಹಿಮಾಚಲ ಪ್ರದೇಶ, ಅರುಣಾಚಲ, ಉತ್ತರಖಂಡ ಸೇರಿದಂತೆ ಕೆಲವು ರಾಜ್ಯಗಳಿಗೆ ಸೀಮಿತವಾಗಿರುವ ಸೇಬುಗಳಿಗಾಗಿ ಕಾಯಬೇಕಾಗಿಲ್ಲ. ಕರ್ನಾಟಕದ ಸೇಬು ಮಾರುಕಟ್ಟೆಯಲ್ಲಿ ಸಿಗುವ ದಿನಗಳು ದೂರವಿಲ್ಲ

ಚಿತ್ರದುರ್ಗದ ಪರಿಸರದಲ್ಲಿ ಸೇಬು ಬೆಳೆಯಬಹುದು ಎಂಬುದನ್ನು ಕೆಲ ರೈತರು ಸಾಬೀತು ಪಡಿಸಿದ್ದಾರೆ. ಅಂತಹವರಲ್ಲಿ ಜ್ಯೋತಿಪ್ರಕಾಶ್ ಪ್ರಮುಖರು. ಚಿತ್ರದುರ್ಗ ತಾಲೂಕಿನ ಗೊಡ¨ನಹಾಳ ಎಂಬಲ್ಲಿರುವ ಅವರ ಜಮೀನಿನಲ್ಲಿ ನೆಟ್ಟ ಸೇಬಿನ ಗಿಡಗಳು ಒಂದು-ಒAದುವರೆ ವರ್ಷದಲ್ಲಿ ಫಲ ಬಿಟ್ಟು ಆಕರ್ಷಕವಾದ ಹಣ್ಣುಗಳು ತೊನೆದಾಡಿ ಅಚ್ಚರಿ ಮೂಡಿಸಿದೆ. ಜ್ಯೋತಿಪ್ರಕಾಶ್ ಅವರು ಅಡಿಕೆ ಬೆಳೆಯನ್ನೇ ಹೆಚ್ಚಾಗಿ ನೆಚ್ಚಿಕೊಂಡಿದ್ದರೂ ಬೇರೆ ಬೆಳೆಗಳ ಬಗ್ಗೆ ಆಸಕ್ತಿ ತಳೆದವರು. ೨೦೧೭-೧೯ರಲ್ಲಿ ಅಡಿಕೆ ತೋಟದ ಕೆಲವು ಭಾಗಗಳು ನೀರಿನ ಅಭಾವದಿಂದ ನೆಲಕಚ್ಚಿದವು. ಟ್ಯಾಂಕರಿನಲ್ಲಿ ನೀರು ತಂದು ಕೆಲವು ಭಾಗಗಳನ್ನು ರಕ್ಷಿಸಿಕೊಂಡರು.

ಇತ್ತೀಚಿಗಿನ ದಿನಗಳಲ್ಲಿ ಬಯಲುಸೀಮೆಯಲ್ಲಿ ಶೇ.೩೦-೪೦ ರಷ್ಟು ಅಡಿಕೆ ವಿಸ್ತರಿಸಿಕೊಳ್ಳುತ್ತಿದೆ. ಮುಂದಿನ ದಿನಗಳಲ್ಲಿ ಅಡಿಕೆ ಸ್ಥಾನ-ಮಾನ ಕುಸಿದರೆ ಅದಕ್ಕೆ ಪರ್ಯಾಯವಾದ ಬೇರೆ ಬೆಳೆ ಯಾವುದು ಎಂದು ಯೋಚಿಸಿದಾಗ ಸೇಬು ಬಗ್ಗೆ ಕುತೂಹಲ ಮೂಡಿತು ಎನ್ನುತ್ತಾರೆ. ಜ್ಯೋತಿಪ್ರಕಾಶ್.

ಸೇಬಿನ ಬಗೆ ಬಗೆ ತಳಿಗಳು:

ಸುಮಾರು ೧೬೦೦ ಜಾತಿಯ ಸೇಬು ತಳಿಗಳಿವೆ. ಇವೆಲ್ಲವೂ ಶೀತವಲಯದ ತಳಿಗಳು. ಆದರೆ ಮೂರು ತಳಿಗಳು ಉಷ್ಣವಲಯದಲ್ಲೂ ಚೆನ್ನಾಗಿ ಬೆಳೆಯಬಲ್ಲವು. ಸುಮಾರು ೪೮ಡಿಗ್ರಿ ಉಷ್ಣಾಂಶವನ್ನು ಸಹಿಸಿಕೊಳ್ಳುವ ಕ್ಷಮತೆಯನ್ನು ಹೊಂದಿದೆ. ಜ್ಯೋತಿಪ್ರಕಾಶ್ ಅವರು ತನ್ನ ಜಮೀನಿನಲ್ಲಿ ನೆಟ್ಟಿರುವುದು; ಉಷ್ಣವಲಯದಲ್ಲಿ ಬೆಳೆಯಬಲ್ಲ ತಳಿಗಳನ್ನು. ಹರ್ಮನ್ ೧೯ ಮತ್ತು ಡಾರ್‌ಸೆಟ್ ಗೋಲ್ಡನ್ ಎಂಬ ತಳಿಗಳನ್ನು ಅವರು ಬೆಳೆದಿದ್ದಾರೆ. ಸೇಬು ವಿಶ್ವವ್ಯಾಪಿ ಬಹುಬೇಡಿಕೆಯುಳ್ಳ ಹಣ್ಣು. ನಾವು ಬೆಳೆದ ಸೇಬಿಗೆ ಸ್ಥಳೀಯವಾಗಿಯೇ ಮಾರುಕಟ್ಟೆ ಸೃಷ್ಟಿಯಾಗಿದೆ. ಒಂದು ವೇಳೆ ಸ್ಥಳೀಯವಾಗಿ ಮಾರುಕಟ್ಟೆ ದೊರೆಯದಿದ್ದರೆ ಬೆಂಗಳೂರಿನಲ್ಲಿ ಮಾರುಕಟ್ಟೆ ಕಂಡುಕೊಳ್ಳಬಹುದು ಎನ್ನುತ್ತಾರೆ

ಶೀತವಲಯದಲ್ಲಿ ಬೆಳೆಯುವ ಸೇಬು ಆಗಸ್ಟ್-ಸೆಪ್ಟೆಂಬರ್-ಒಕ್ಟೋಬರ್ ತಿಂಗಳಲ್ಲಿ ಕೊಯ್ಲಿಗೆ ಬರುತ್ತದೆ. ಆಗ ತಾಜಾ ಹಣ್ಣುಗಳು ಸಿಗುತ್ತವೆ. ಆನಂತರ ಶೈತ್ಯಾಗಾರದಲ್ಲಿ ಇರಿಸಿದ ಹಣ್ಣುಗಳೇ ಮಾರುಕಟ್ಟೆಯಲ್ಲಿ ಲಭ್ಯವಾಗುವುದು. ಇಲ್ಲಿ ಹಾಗಲ್ಲ ಮೇ-ಜೂನ್ ತಿಂಗಳಲ್ಲಿ ಕಾಯಿ ಬಲಿತು ಹಣ್ಣಾಗುತ್ತದೆ. ಆ ಸಂದರ್ಭದಲ್ಲಿ ಸೇಬಿಗೆ ಕಿಲೋವೊಂದಕ್ಕೆ ೨೦೦-೩೦೦ ರೂಪಾಯಿವರೆಗೂ ಬೆಲೆ ಇರುತ್ತದೆ. ಬೆಳೆಗಾರನಿಗೆ ಉತ್ತಮ ಧಾರಣೆ ಸಿಗುತ್ತದೆ. ೬ನೇ ವರ್ಷಕ್ಕೆ ಗಿಡವೊಂದು ಸರಿ ಸುಮಾರು ೮೦ ರಿಂದ ೧೦೦ ಕೆಜಿಯಷ್ಟು ಹಣ್ಣುಗಳನ್ನು ನೀಡುವ ಸಾಮರ್ಥ್ಯ ಹೊಂದಿರುತ್ತವೆ. ೩೦೦ ಗಿಡಗಳಿಂದ ೨೪-೩೨ ಟನ್ ಫಸಲು ಅಂದಾಜಿಸಬಹುದು. ೧೪-೧೫ ಲಕ್ಷ ಆದಾಯ ನಿರೀಕ್ಷಿಸಬಹುದು. ಬೆಳೆಗಾರನಿಗೆ ಕನಿಷ್ಟ ಕಿಲೋವೊಂದಕ್ಕೆ ರೂ.೬೦ ಸಿಕ್ಕರೂ ಸಾಕು. ಏಳೆಂಟು ಲಕ್ಷ ರೂಪಾಯಿ ಗಳಿಕೆ ಸಾಧ್ಯ

ಒಳ್ಳೆ ಫಸಲು ಬಂತು!

ಜ್ಯೋತಿ ಪ್ರಕಾಶ್ ಅವರು ಆರಂಭದಲ್ಲಿ ೩೩೦ ಗಿಡಗಳನ್ನು ತಮ್ಮ ತೋಟದಲ್ಲಿ ನಾಟಿಮಾಡಿದರು. ಎರಡನೇ ಹಂತದಲ್ಲಿ ಮತ್ತೆ ೨೩೦ ಗಿಡ ನಾಟಿ ಮಾಡಿದ್ದಾರೆ. ಮೊದಲ ವರ್ಷವೇ ಈ ಗಿಡಗಳು ಹೂ ಬಿಟ್ಟು ಫಲ ನೀಡಲು ಆರಂಭಿಸಿದವು ಆರರಿಂದ ಎಂಟು, ೪೦ರಿಂದ ೫೦ವರೆಗೂ ಕಾಯಿಗಳು ಬಿಟ್ಟಿವೆ ಜ್ಯೋತಿಪ್ರಕಾಶ್ ಅವರ ಸಹೋದರ ಸುನಿಲ್, ರಾಜಮೋಹನ ಮತ್ತಿತರ ಕೃಷಿಕರು ಸೇಬು ಬೆಳೆದಿದ್ದಾರೆ. ಎಲ್ಲಾ ಕಡೆಯೂ ಒಂದೇ ರೀತಿಯ ಬೆಳವನಿಗೆ ಕಂಡಿದೆ. ಫಸಲೂ ಬಂದಿದೆ

ಕಾಡನ್ನು ಜಾತಿಯ ಗಿಡವನ್ನು ಆಧಾರವಾಗಿರಿಸಿಕೊಂಡು ಅದಕ್ಕೆ ಸೇಬು ಗಿಡವನ್ನು ಕಸಿ ಮಾಡಲಾಗುತ್ತದೆ ೧೨೨.೩೦ರೂವಿನಂತೆ ಗಿಡಗಳನ್ನು ಹಿಮಾಚಲ ಪ್ರದೇಶದಿಂದ ತರಿಸಿಕೊಳ್ಳಲಾಯಿತು. ಗಿಡಗಳನ್ನು ೧೦*೧೦ಅಡಿ ಅಥವಾ ೧೨*೧೨ ಅಡಿ ಅಂತರದಲ್ಲಿ ನಾಟಿ ಮಾಡಬಹುದು. ಅಡಿಕೆಗಿಂತ ಅರ್ಧದಷ್ಟು ನೀರು ಸಾಕು. ಹೆಚ್ಚಿನ ಆರೈಕೆಯೂ ಬೇಕಾಗಿಲ್ಲ. ಜೂನ್-ಜುಲೈ ತಿಂಗಳಲ್ಲಿ ವರ್ಷಕ್ಕೊಮ್ಮೆ ಕೊಟ್ಟಿಗೆ ಗೊಬ್ಬರ ಹಾಗೂ ಒಕ್ಟೋಬರಿನಲ್ಲಿ ಸೂಕ್ಷö್ಮ ಪೋಷಕಾಂಶ ನೀಡಬೇಕಾಗುತ್ತದೆ. ಜನವರಿಯಲ್ಲಿ ಹೂ ಬಿಡಲು ಆರಂಭಿಸುತ್ತದೆ. ಹೂ ಬಂದ ನಂತರ ಬೋರಾನ್ ಸಿಂಪಡನೆ ಮಿಡಿಗಳುಕಾಣಿಸಿಕೊಂಡಾಗ ಎನ್‌ಪಿಕೆ-೧೯-೧೯-೧೯ ಮತ್ತು ಸೂಕ್ಷ್ಮ ಪೋಷಕಾಂಶಗಳನ್ನು ನೀಡಬೇಕು. ಕಾಯಿಗಳು ಕಿತ್ತಳೆ ಗಾತ್ರÀಕ್ಕೆ ಬಂದಾಗ ಗಿಡಗಳಿಗೆ ಪೊಟಾಷ್ ಸಿಂಪರಣೆ ಮಾಡಬೇಕು

ಗಿಡ ಸವರುವಿಕೆ ಹೇಗೆ?
ಗಿಡಗಳಲ್ಲಿ ಅನಗತ್ಯವಾಗಿ ಒತ್ತಾಗಿ ಬೆಳೆದ ಕುಡಿಗಳನ್ನು ಸವರುವುದು ಅತಿ ಮುಖ್ಯವಾಗುತ್ತಿದೆ. ಗಿಡಗಳ ಬೇಡವಾದ ಕುಡಿಗಳನ್ನು ಕತ್ತರಿಸಿ ತೆಗೆದು ಗಾಳಿಯಾಡುವಂತೆ ಮಾಡಬೇಕು ಆರಂಭದಲ್ಲಿ ಗಿಡವು ಕಾಂಡದ ಬಳಿಯೇ ಟಿಸಿಲೊಡೆಯದಂತೆ ನೋಡಿಕೊಳ್ಳಬೇಕು. ಕವಲೊಡೆಯಲು ಬಿಟ್ಟರೆ ಗಿಡದ ಬೆಳವಣಿಗೆ ನಿಧಾನವಾಗುತ್ತದೆ. ನವಂಬರ್ ಕೊನೆಗೆ ಅಥವಾ ಡಿಸೆಂಬರ್ ಮೊದಲ ವಾರದೊಳಗೆ ಪ್ರೋನಿಂಗ್ ಅಥವಾ ಗಿಡದ ಸಿಕ್ಕು ಬಿಡಿಸುವ ಕೆಲಸವಾಗಬೇಕು.

ಕಾಡುವ ರೋಗಗಳು:

ಮಳೆ ಜಾಸ್ತಿಯಾದರೆ ಫಂಗಸ್ ರೋಗ ತಗುಲಿ ಎಲೆಗಳು ಕಂದು ಬಣ್ಣಕ್ಕೆ ತಿರುಗುತ್ತವೆ ಈ ಸಂದರ್ಭಲ್ಲಿ ಉತ್ತಮವಾದ ಫಂಗಿಸೈಡ್ ಸಿಂಪಡನೆ ಅಗತ್ಯ. ಚಿಕ್ಕ ಗಿಡಗಳಿಗೆ ಎಲೆ ಮುದುರು ರೋಗ ಬಾಧಿಸಬಹುದು. ಸಾವಯುªದÀ ಬೇವಿನೆಣ್ಣೆ, ಗಂಜಲ ಅಥವಾ ರಾಸಾಯನಿಕ ಔಷಧಿಗಳನ್ನು ಸಿಂಪಡಿಸಿ ರೋಗ ನಿವಾರಿಸಿಕೊಳ್ಳಬಹುದು. ಗಿಡಗಳಿಗೆ ಹೆಚ್ಚಿನ ರೋಗಬಾಧೆಗಳಿಲ್ಲ. ಆಯಾ ಪರಿಸರಕ್ಕೆ ಹೊಂದಿಕೊಂಡು ಚೆನ್ನಾಗಿ ಬೆಳೆಯಬಲ್ಲವು.

ಇವರ ಸೇಬು ಬೆಳೆ ಯಶಸ್ಸನ್ನು ಕಂಡು ಹಲವಾರು ರೈತರು ಸೇಬು ಬೆಳೆಯಲು ಆಸಕ್ತರಾಗಿದ್ದಾರೆ. ಸುನಿಲ್ ಅವರು ೨೩ ಸಾವಿರಕ್ಕೂ ಹೆಚ್ಚು ಗೂಟಿಗಳನ್ನು ಮಾರಾಟ ಮಾಡಿದ್ದಾರೆ. ೧೦ಸಾವಿರಕ್ಕೂ ಹೆಚ್ಚು ಕಸಿಕಟ್ಟಿದ ಸಸಿಗಳನ್ನು ಮಾರಿದ್ದಾರೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ಅಲ್ಲದೆ ಆಂದ್ರದಿAದಲೂ ಈ ಗಿಡಗಳಿಗೆ ಬೇಡಿಕೆ ಬಂದಿದೆ. ಬೇರೆ ಬೇರೆ ಊರುಗಳಿಂದ ರೈತರು ಬಂದು ಸೇಬು ಕೃಷಿ ನೋಡಿ ಹೋಗುತ್ತಿದ್ದಾರೆ.
ಮಾಹಿತಿಗೆ ಜ್ಯೋತಿಪ್ರಕಾಶ್ ಮೊ 9880549495  (ಸಂಜೆ ೭ರ ನಂತರ) ಸುನಿಲ್ ಮೊ: 815096808

-ರಾಧಾಕೃಷ್ಣ ತೊಡಿಕಾನ

spot_img

ಸಂಬಂಧಿತ ಲೇಖನಗಳು

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group