ಶ್ರದ್ಧೆ, ಆಸಕ್ತಿಯಿದ್ದರೆ ನಾವಿರುವ ಊರುಗಳಲ್ಲಿಯೇ ಉದ್ಯೋಗ ಅವಕಾಶಗಳಿವೆ. ಯಶಸ್ಸಿನ ದಾರಿಯಿದೆ. ಆದರೆ ಬಹಳಷ್ಟು ಯುವ ಸಮುದಾಯ ದೂರದ ಪೇಟೆ ಪಟ್ಟಣಗಳತ್ತ ಮುಖ ಮಾಡುತ್ತಾರೆ. ಉದ್ಯೋಗಕ್ಕಾಗಿ ಹುಡುಕಾಡುತ್ತಾರೆ. ಸಣ್ಣಪುಟ್ಟ ಉದ್ಯೋಗದಲ್ಲಿಯೇ ತಮ್ಮನ್ನು ತಾವು ಕಳೆದುಕೊಳ್ಳುತ್ತಾರೆ. ಸ್ವಂತ ಉದ್ಯೋಗ, ತನ್ನಲಿರುವ ಸ್ವಾಭಿಮಾನ, ಹೊಸ ಚಿಂತನೆಗಳ ಅನಾವರಣಕ್ಕೆ ಹಿಂಜರಿಕೆ. ಕೆಲಮಂದಿ ಯುವಕರು ಧೈರ್ಯವಹಿಸಿ ತಾವಿರುವ ಊರಿನಲ್ಲಿಯೇ ಕಿರು ಉದ್ಯಮಗಳನ್ನು ಆರಂಭಿಸಿ ಸೈ ಎನಿಸಿಕೊಳ್ಳುವವರಿದ್ದಾರೆ. ಹಳ್ಳಿಯಲ್ಲಿದ್ದುಕೊಂಡೇ ಹೊಸತನದ ಕಿರು ಉದ್ಯಮವನ್ನು ಆರಂಭಿಸಿದ ಬಂಬಿಲದ ಪುರುಷೋತ್ತಮ ಅವರ ಸ್ವ ಉದ್ಯೋಗ ಒಂದಿಷ್ಟು ವಿಶೇಷ ಆಸಕ್ತಿಯದ್ದೆ.
ದ.ಕ ಜಿಲ್ಲೆಯ ಕಡಬ ತಾಲೂಕಿನ ಪಾಲ್ತಾಡಿ ಗ್ರಾಮದ ಬಂಬಿಲದ ಬಾಬು ಶೆಟ್ಟಿ ಮತ್ತು ಯಮುನಾ ಶೆಟ್ಟಿ ಅವರ ಪುತ್ರರಾದ ಪುರುಷೋತ್ತಮ ಕೃಷಿ ಕುಟುಂಬದವರು. ನಿಂತಿಕಲ್ಲಿನ ಕೆ.ಎಸ್ ಗೌಡ ಐಟಿಐ ಸಂಸ್ಥೆಯಲ್ಲಿ ಆಟೋಮೊಬೈಲ್ನಲ್ಲಿ ಐಟಿಐ ಮಾಡಿದ ಸಂದರ್ಭದಲ್ಲಿ ಪ್ರಾಜೆಕ್ಟ್ ವರ್ಕ್ ಆಗಿ ಮರವನ್ನು ಬಳಸಿ ಡಂಪರ್ ಟ್ರಕ್ ಮಾದರಿಯನ್ನು ತಯಾರಿಸಿದ್ದರು. ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರಿಗೆ ಈ ಮಾದರಿಯನ್ನು ಸಮರ್ಪಿಸಿದಾಗ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇದರಿಂದ ಪುರುಷೋತ್ತಮ ಇನ್ನಷ್ಟು ಉತ್ತೇಜಿತರಾದರು. ಪೇಟೆ ಪಟ್ಟಣದಲ್ಲಿ ಉದ್ಯೋಗ ಅರಸುವ ಬದಲು ತನ್ನ ಊರಲ್ಲಿ ಇದ್ದುಕೊಂಡೇ ಹೊಸ ಪ್ರಯೋಗಗಳನ್ನು ಮಾಡುವುದರತ್ತ ಗಮನ ಹರಿಸಿದರು.
ಕೃಷಿಯಲ್ಲಿ ಕೂಲಿಯಾಳುಗಳ ಸಮಸ್ಯೆಗಳ ಅರಿವಿತ್ತು. ಅದನ್ನು ಕಡಿಮೆ ಮಾಡಲು, ಕೊಯ್ಲು ಮಾಡಿದ ಅಡಿಕೆ ಮನೆ ಅಂಗಳಕ್ಕೆ ಸಾಗಾಟ, ಗೊಬ್ಬರ ಹೊತ್ತೊಯ್ಯುವುದು, ಇತರ ಕೃಷಿ ಉತ್ಪನ್ನಗಳು ತೋಟದಿಂದ ಮನೆಗೆ ಸಾಗಿಸಲು ಅನುಕೂಲವಾಗುವಂತೆ ಕಿರು ಡಂಪರ್ ತಯಾರಿಗೆ ಯೋಚನೆ ಮಾಡಿದರು. ಮನೆಯಲ್ಲಿದ್ದ ಸ್ಕೂಟರಿಗೆ ಹೊಸ ರೂಪ ನೀಡಲು ಮುಂದಾದರು. ವಾಹನದ ಹಿಂದಿನ ಚಕ್ರ ತೆಗೆದು ಎರಡು ಚಕ್ರ ಜೋಡಿಸಿ ಗೇರ್‌ಬಾಕ್ಸ್ ಹೈಡ್ರೋಲಿಕ್ ಅಳವಡಿಸಿ ನಂತರ ಮೇಲುಭಾಗಕ್ಕೆ ಜಿಐ ಕಬ್ಬಿಣದಿಂದ ಮಾಡಿದ ೩ಅಡಿ ಅಗಲ, ೩.೫ ಅಡಿ ಉದ್ದದ ತೊಟ್ಟಿಯನ್ನು ರಚಿಸಿ ಉತ್ಪನ್ನಗಳ ಸಾಗಾಟಕ್ಕೆ ಅನುಕೂಲವಾಗುವ ಮಿನಿ ಡಂಪರ್ ತಯಾರಿಸಿಕೊಂಡಿದ್ದರು. ಈ ಮಾದರಿಯು ಆಸುಪಾಸಿನ ಹಲವಾರು ಕೃಷಿಕರ ಗಮನ ಸೆಳೆಯಿತು.
ಕೃಷಿ ಕೆಲಸಕಾರ್ಯಗಳಿಗೆ ಪೂರಕವಾದ ಕಂಪೆನಿಯ ಕೈಗಾಡಿಗಳು, ಸಣ್ಣ ವಾಹನಗಳು, ಮಿನಿ ಡಂಪರ್ ಇದ್ದರೂ ಸಾಮಾನ್ಯ ರೈತರಿಗೆ ಅದರ ಬೆಲೆ ಕೈಗೆಟಕುವಷ್ಟು ಸುಲಭದಲ್ಲಿರಲಿಲ್ಲ. ತಂತ್ರಜ್ಞಾನ ಪ್ರಚಲಿತದಲ್ಲಿದ್ದರೂ ಪ್ರಯೋಗಗಳು ಹೊಸತನಕ್ಕೆ ಸ್ಪೂರ್ತಿಯಾದವು.
ಹಳೆಯ ಸ್ಕೂಟರ್. ಬೈಕ್, ರಿಕ್ಷಾ, ಮಿನಿ ಟೆಂಪೋಗಳನ್ನು ಅತ್ಯಂತ ಸಣ್ಣ ಡಂಪರ್ ವಾಹನಗಳಾಗಿ ಪರಿವರ್ತಿಸಿಕೊಡಲಾರಂಭಿಸಿದರು. ದ್ವಿಚಕ್ರ ವಾಹನಕ್ಕೆ ಡಂಪರ್ ಅಳವಡಿಸುವುದಾದರೆ ೫೫ಸಾವಿರ ರೂ ಹಾಗೂ ರಿಕ್ಷಾಗಳಿಗಾದರೆ ೩೫ ಸಾವಿರ ವೆಚ್ಚವಾಗುತ್ತದೆ. ದ್ವಿಚಕ್ರ ವಾಹನದಲ್ಲಿ ೨೦೦ಕೆಜಿ ಹಾಗೂ ತ್ರಿಚಕ್ರ ವಾಹನದಲ್ಲಿ ೪೦೦ಕೆಜಿ ಭಾರ ಹೊರುವ ಸಾಮರ್ಥ್ಯ ಹೊಂದಿದೆ. ಮನೆಯಲ್ಲಿದ್ದ ಹಳೆಯದಾದ ದ್ವಿಚಕ್ರ ವಾಹನ ಚಾಲೂ ಸ್ಥಿತಿಯಲ್ಲಿದ್ದರೆ ಕಿರು ಡಂಪರ್ ಆಗಿ ಮಾರ್ಪಡಿಸಿಕೊಳ್ಳಬಹುದು. ಅವುಗಳನ್ನು ಕೃಷಿ ಉತ್ಪನ್ನಗಳ ಸಾಗಾಟಕ್ಕೆ ಬಳಸಿಕೊಳ್ಳಬಹುದು. ಗುಜಿರಿಗೆ ಹಾಕಬೇಕೆಂದೇನೂ ಇಲ್ಲ.
ಮೈಸೂರು, ಉಡುಪಿ, ತುಮಕೂರು ಸೇರಿದಂತೆ ಬೇರೆ ಬೇರೆ ಜಿಲ್ಲೆಗಳಿಂದ ಇವುಗಳಿಗೆಬೇಡಿಕೆ ಬಂದಿದೆ. ಕೇರಳಕ್ಕೂ ಇಂಥ ವಾಹನ ಮಾಡಿಕೊಟ್ಟಿದ್ದಾರೆ. ಈವರೆಗೆ ಸುಮಾರು ೫೦ಕ್ಕೂ ಹೆಚ್ಚು ದ್ವಿಚಕ್ರ, ತ್ರಿಚಕ್ರ ವಾಹನಗಳು ಸಣ್ಣ ಡಂಪರ್‌ಗಳಾಗಿ ಈಗ ಕೃಷಿಕರ ತೋಟದಲ್ಲಿ ಓಡಾಡುತ್ತಿವೆ.
ಅನುಕೂಲತೆಗಳು
ತೋಟದಿಂದ ಅಡಿಕೆ, ತೆಂಗು ಹಾಗೂ ಇತರ ಉತ್ಪನ್ನಗಳನ್ನು ಮನೆಗೆ ಸಾಗಿಸಲು ಅನುಕೂಲ ಕಿರಿದಾದ ಜಾಗದಲ್ಲಿ, ತೋಟದ ಮಧ್ಯೆ ಸುಲಭವಾಗಿ ಚಲಾಯಿಸಬಹುದು. ಕಡಿಮೆ ಸ್ಥಳಾವಕಾಶಗಳಲ್ಲಿ ಹಿಂದೆ -ಮುಂದೆ ತಿರುಗಿಸಬಹುದು
ನಾಲ್ಕು ಗೇರುಗಳಿವೆ. ಹೈಡ್ರೋಲಿಕ್‌ವ್ಯವಸ್ಥೆ, ಏರು ದಾರಿಗಳಲ್ಲಿ ಅನಾಯಾಸವಾಗಿ ಸಂಚರಿಸುತ್ತದೆ. ಟಿಪ್ಪರ್ ಮಾದರಿ ಸುಲಭವಾಗಿ ಕೃಷಿ ಉತ್ಪನ್ನಗಳನ್ನು ಕೆಳಗಿಳಿಸಿಕೊಳ್ಳಬಹುದು. ಕೂಲಿಯಾಳುಗಳನ್ನು ಹೆಚ್ಚು ಆಶ್ರಯಿಸಬೇಕಿಲ್ಲ. ಸವiಯಾವಕಾಶವೂ ಉಳಿತಾಯವಾಗುತ್ತದೆ. ರೈತರಿಗೆ ಬೇಕಾದ ಇತರ ಕೃಷಿ ಉಪಕರಣಗಳನ್ನು ತಯಾರು ಮಾಡಲು ಮುಂದಾಗಿದ್ದಾರೆ. ತೆಂಗಿನಕಾಯಿ ಸುಲಿಯುವ ಉಪಕರಣ ಅಡಿಕೆ ಸುಲಿಯುವ ಮೆಟ್ಟುಗತ್ತಿ, ಬಹುಪಯೋಗಿ ಮೆಟ್ಟುಗತ್ತಿ, ಮಂಚ ಹಾಗೂ ಇನ್ನಿತರ ಉಪಕರಣಗಳನ್ನು ತಯಾರಿಯಲ್ಲಿ ತೊಡಗಿಕೊಂಡಿದ್ದಾರೆ.ಸ್ಥಳೀಯ ಹಾಗೂ ನೆರೆಕೆರೆಯ ಬಹಳಷ್ಟು ಮಂದಿ ಕೃಷಿಕರು ತಮಗೆ ಬೇಕಾದ ಉಪಕರಣಗಳನ್ನು ಇವರಲ್ಲಿ ಮಾಡಿಸಿಕೊಳ್ಳುತ್ತಿದ್ದಾರೆ ಪೇಟೆ ಪಟ್ಟಣಗಳನ್ನು ಅರಸಿ ಹೋಗದೆ ತನ್ನ ಹಳ್ಳಿ ಪರಸರದಲ್ಲಿಯೇ ಸ್ವ ಉದ್ಯೋಗ-ಉದ್ಯಮದ ಕನಸು ನೆನಸಾಗಿಸಲು ಹೊರಟ ಪುರುಷೋತ್ತಮ ಅವರ ಪ್ರಯತ್ನ ಮೆಚ್ಚುಗೆಗೆ ಪಾತ್ರವಾಗಿದೆ. ಮೊ: ೯೯೪೫೮೨೮೨೭೬
-ನವಜಾತ ಕಾರ್ಕಳ