spot_img
Wednesday, February 5, 2025
spot_imgspot_img

ಸಾವಯವ ಕೃಷಿಯಲ್ಲಿ ಲಾಭ ಕಂಡ ರಾಮಕೃಷ್ಣ ಶರ್ಮರ ಕತೆ ಇದು!

ಸಾಂಪ್ರದಾಯಿಕ ಸಾವಯವ ಕೃಷಿಯನ್ನು ಬಿಟ್ಟು ಬಹಳಷ್ಟು ರೈತರು ರಾಸಾಯನಿಕವಾದ ಕೃಷಿಯೆಡೆಗೆ ಸಾಗಿದ್ದಾರೆ. ಆದರೂ ಕೆಲವರು ಸಾವಯವ ಕೃಷಿಯಲ್ಲಿ ಉಳಿದುಕೊಂಡು ಹೊಸ ಹೊಸ ಪ್ರಯೊಗಗಳನ್ನು ಮಾಡುತ್ತಾ ಸಾವಯವದಲ್ಲಿ ಉತ್ತಮ ಫಸಲು ಪಡೆದು ರಾಸಾಯನಿಕ ಮುಕ್ತ ಉತ್ಪನ್ನಗಳನ್ನು ಪ್ರಚುರಪಡಿಸಿದ್ದಾರೆ. ಅಂತಹ ಕೆಲವೇ ಕೆಲವು ಮಂದಿ ಕೃಷಿಕರಲ್ಲಿ ರಾಮಕೃಷ್ಣ ಶರ್ಮ ಬಂಟಕಲ್ಲು ಪ್ರಮುಖರು.

ಅವರ ತೋಟವನ್ನು ಮೇಲ್ನೋಟದಿಂದ ನೋಡಿದವರಿಗೆ ಇದೆಂತಹ ಕೃಷಿ, ಎಂತಹ ಆದಾಯ-ಉಳಿತಾಯ, ಎಂದೆನಿಸಬಹುದು. ಸಾವಯವದಲ್ಲಿ ವೈಜ್ಞಾನಿಕ ಕೃಷಿ ಮಾಡುತ್ತಿರುವ ರಾಮಕೃಷ್ಣ ಶರ್ಮರ ಕೃಷಿಕ್ಷೇತ್ರದಲ್ಲಿ ಸುತ್ತಾಡಿದಾಗ ಹೌದಲ್ಲ! ಈ ತರಹ ಕೃಷಿಯೂ ಮಾಡಬಹುದಲ್ಲ !! ಎಂಬ ಯೋಚನೆ ಹೊಳೆಯದಿರದು. ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಬಂಟಕಲ್ಲಿನ ರಾಮಕೃಷ್ಣ ಶರ್ಮ ಅವರು ಚಿಕ್ಕಂದಿನಲ್ಲಿಯೇ ಕೃಷಿಯಲ್ಲಿ ಒಲವು ಮೂಡಿಸಿಕೊಂಡಿದ್ದರು. ಆದರೂ ತನ್ನ ಶಿಕ್ಷಣ ಪೂರೈಸಿದ ನಂತರ ಮನಸ್ಸು ಉದ್ಯೋಗದತ್ತ ವಾಲಿತು. ಐದು ವರ್ಷಗಳ ಕಾಲ ಕಾಲೇಜುಗಳಲ್ಲಿ ವಾಣಿಜ್ಯ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದರು. ಅದೇಕೋ ಕೃಷಿಯ ಸೆಳೆತ ಅವರನ್ನು ಬಿಡಲಿಲ್ಲ. ಪೂರ್ಣ ಪ್ರಮಾಣದಲ್ಲಿ ಕೃಷಿಯಲ್ಲಿ ತನ್ನನ್ನು ತೊಡಗಿಸಿಕೊಂಡ ಅವರೀಗ ಪ್ರಗತಿಪರ ಕೃಷಿಕರು.

ರಾಸಾಯನಿಕ ಗೊಬ್ಬರ, ಕೀಟನಾಶಕಗಳ ಬಳಸಿ ಕೃಷಿ ಮಾಡಲು ಹೊರಟವರು ಮನಸ್ಸು ಬದಲಾಯಿಸಿ ಹೊರಳಿದ್ದು ಸಾವಯುವ ಕೃಷಿಯತ್ತ. ಮಣ್ಣಿನ ಗುಣ ಧರ್ಮಕ್ಕೆ ಅನುಗುಣವಾದ ವೈಜ್ಞಾನಿಕ ಸಾವಯವ ಕೃಷಿಯನ್ನು ನೆಚ್ಚಿಕೊಂಡರು. ಹಚ್ಚಿಕೊಂಡರು ಆರಂಭದಲ್ಲಿ ಅವರ ಸಾವಯುವ ಕೃಷಿ ನೋಡಿ ಗೇಲಿ ಮಾಡಿದವರಿದ್ದರು. ಅದಾವುದಕ್ಕೂ ಕಿವಿಗೊಡಲಿಲ್ಲ. ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ತುಪ್ಪದ ಹಳ್ಳಿ ಪುರುಷೋತ್ತಮ ರಾವ್ ಅವರ ಪ್ರೇರಣೆ, ಕುದಿ ಶ್ರೀನಿವಾಸ ಭಟ್, ಬಿ.ವಿ ಪೂಜಾರಿ ಪೆರ್ಡೂರು, ಶ್ರೀನಿವಾಸ ಭಟ್ ಇರ್ವತ್ತೂರು ಮತ್ತಿತರರ ಅನುಭವ, ಮಾಹಿತಿ ಪಡೆದರು.

ಪಾರಂಪರಿಕ ವೈಜ್ಞಾನಿಕ ಸಾವಯವ ಕೃಷಿಯಿಂದ ಯಶಸ್ಸು ಸಾಧ್ಯ ಎಂಬ ನಂಬಿಕೆ ಅವರಲ್ಲಿ ದೃಧವಾಗಿತ್ತು. ಮೊದಮೊದಲಿಗೆ ಕೆಲವು ಸಮಸ್ಯೆ ಸವಾಲುಗಳು ಎದುರಾದರೂ ಹಿಂದಡಿ ಇಡಲಿಲ್ಲ. ರಾಸಾಯನಿಕದ ಪ್ರಭಾವ ಹೆಚ್ಚು ಹೆಚ್ಚು ಆಸುಪಾಸಿನ ಕೃಷಿಕರ ಮೇಲಾಗುತ್ತಿದ್ದರೂ ಇವರು ಮಾತ್ರ ಸಾವಯವದಲ್ಲಿ ಪರಿವರ್ತನೆಯ ಹೊಸ ಹಾದಿಯಲ್ಲಿ ಸಾಗಿದರು. ತನಗಿರುವ ಆರು ಎಕರೆ ಕೃಷಿಭೂಮಿಯಲ್ಲಿ ತೆಂಗು, ಅಡಿಕೆ, ಬಾಳೆ, ಕಾಳುಮೆಣಸು, ರಾಂಬುಟಾನ್, ಚಿಕ್ಕು, ಪೇರಳೆ, ಗೇರು, ಅವಕಾಡೊ, ಮಾವು, ಮಲ್ಲಿಗೆ, ಹಿಪ್ಪಲಿ, ಪಪ್ಪಾಯಿ, ಹಲಸು ಹೀಗೆ ೧೫ ಬಗೆಯ ಕೃಷಿ ಹಚ್ಚಿ-ನೆಚ್ಚಿ ಬೆಳೆದು ಬಲ್ಲಿದರಾದವರು.

ಕಳೆದ ೧೯೯೫ ರಿಂದಲೂ ಸಾವಯವ ಕೃಷಿಯಲ್ಲಿ ತೊಡಗಿಸಿಕೊಂಡವರು. ಇಪ್ಪತ್ತು ವರ್ಷಗಳಿಂದ ವೈಜ್ಞಾನಿಕವಾದ ಸಾವಯವ ಕೃಷಿಯಲ್ಲಿ ತಮ್ಮದಾದ ಪ್ರಯೋಗವನ್ನು ಮಾಡುತ್ತಾ ಬಂದಿದ್ದಾರೆ.
ತೋಟದಲ್ಲಿನ ತೆಂಗಿನ ಮರಗಳಿಗಾಗಲಿ ಅಥವಾ ಇತರ ಮರ ಗಿಡಗಳಿಗೆ ಆಗಲಿ ಬುಡ ಬಿಡಿಸಿ ಗೊಬ್ಬರ ಹಾಕುವ ಸಂಪ್ರದಾಯ ಇವರಲ್ಲಿಲ.್ಲ ತೋಟದಲ್ಲಿ ಸಿಗುವ ಕೃಷಿ ತ್ಯಾಜ್ಯಗಳು, ಹಸಿರೆಲೆ ಗೊಬ್ಬರ, ಕೋಳಿ ಗೊಬ್ಬರ ಮತ್ತು ಅಲ್ಪ ಪ್ರಮಾಣದಲ್ಲಿ ಪೋಟಾಷ್, ರಾಕ್ ಫಾಸ್ಫೇಟ್, ಸುಣ್ಣ ಬಿಟ್ಟರೆ ಬೇರೇನೂ ಹಾಕುವುದಿಲ್ಲ. ಮರಗಳಿಂದ ಬೀಳುವ ಎಲೆಗಳು ಮಣ್ಣು ಸೇರಿ ಗೊಬ್ಬರವಾಗುತ್ತವೆ. ಅಲ್ಲದೆ ತೋಟದ ಕಳೆಗಳನ್ನು ಬೆಳೆಯಲು ಬಿಟ್ಟು ನಂತರ ಕತ್ತರಿಸಿ ಅಲ್ಲೇ ಬಿಡುವುದರಿಂದ ಮಣ್ಣಿನ ಸಂರಕ್ಷಣೆ ಮತ್ತು ಫಲವತ್ತತೆ ಹೆಚ್ಚಿಸಲಾಗುತ್ತದೆ. ತನ್ನದು ಹಳೆಯ ತೆಂಗಿನ ಮರಗಳು. ಕಡಿಯಬೇಕಾದ ಮರಗಳು. ಆದರೆ ವೈಜ್ಞಾನಿಕ ಸಾವಯವ ಕೃಷಿಯಿಂದ ಮರವೊಂದಕ್ಕೆ ಸರಾಸರಿ ೧೦೦-೧೩೦ರ ವರೆಗೆ ಇಳುವರಿ ಪಡೆಯುತ್ತಿದ್ದೇನೆ ಎನ್ನುತ್ತಾರೆ ಶರ್ಮರು.

ಮರಗಳಿಗೆ ಕಾಳುಮೆಣಸು
ಅಡಿಕೆಗೆ ಪರ್ಯಾಯವಾಗಿ ಭರವಸೆ ಮೂಡಿಸಿರುವ ಬೆಳೆ ಕಾಳುಮೆಣಸು ಎಂಬ ಅಭಿಪ್ರಾಯ ಅವರದು. ಇಲ್ಲಿ ಕಾಳುಮೆಣಸು ಬಹುತೇಕ ತೆಂಗು ಅಲ್ಲದೆ ಇತರ ಮರಗಿಡಗಳನ್ನು ಬಿಗಿದಪ್ಪಿ ಬೆಳೆಯುತ್ತಿದೆ. ಉತ್ತಮ ಫಸಲು ಪಡೆಯುತ್ತಿದ್ದಾರೆ. ಇಲ್ಲಿ ಕಾಳುಮೆಣಸು ಗೇರು, ಅಕೇಶಿಯಾ ಮರವನ್ನು ಹಬ್ಬಿಕೊಳ್ಳದೆ ಬಿಟ್ಟಿಲ್ಲ. ಅಕೇಶಿಯಾವೆಂದರೆ. ಬಹಳಷ್ಟು ಮಂದಿಗೆ ಅಲರ್ಜಿಯೇ. ತೋಟದಲ್ಲಿ ಅಕೇಶಿಯಾ ಗಿಡ ಕಾಣಿಸಿಕೊಂಡರೆ ಬೇರು ಸಹಿತ ಕಿತ್ತೆಸೆಯುತ್ತಾರೆ. ಆದರೆ ಶರ್ಮರು ಹಾಗೆ ಮಾಡಲಿಲ್ಲ. ಆ ಗಿಡಕ್ಕೆ ಕಾಳು ಮೆಣಸು ಬಳ್ಳಿ ನೆಟ್ಟಿದ್ದಾರೆ. ಗೇರು ಮರ ತಳಮಟ್ಟದಲ್ಲಿ ಕವಲೊಡೆಯುವುದರಿಂದ ಹೆಚ್ಚು ಎತ್ತರಕ್ಕೆ ಹೋಗುವುದಿಲ್ಲ. ಆದ್ದರಿಂದ ಇಳುವರಿ ಕಡಿಮೆ

ಜಾಲತಾಣ- ಮಾರುಕಟ್ಟೆ ಅಡ್ಡೆ
ಇವರು ಬೆಳೆದ ಕೃಷಿ ಉತ್ಪನ್ನಗಳಿಗೆ ಹಣ್ಣು-ಹಂಪಲುಗಳಿಗೆ ಜಾಲತಾಣವೇ ಮಾರುಕಟ್ಟೆ ಅಡ್ಡೆ. ಕೃಷಿಕರ ಗ್ರಾಹಕರ ನಡುವೆ ಕೊಂಡಿಯಾಗಿ ಕಾರ್ಯನಿರ್ವಹಿಸುವ ವಾಟ್ಸಪ್ ಗುಂಪುಗಳಿವೆ. ಯಾರಿಗೆ ಯಾವ ಕೃಷಿ ಉತ್ಪನ್ನಗಳು ಬೇಕು ಎಂದರೆ ಸಾಕು ಮರುದಿನವೇ ಅವರ ಮನೆ ಬಾಗಿಲಲ್ಲಿರುತ್ತದೆ. ಆನಂತರ ನಿಗದಿಪಡಿಸಿದ ದರವನ್ನು ಬ್ಯಾಂಕ್ ಖಾತೆಗೆ ಹಾಕುವ ವ್ಯವಸ್ಥೆ. ಉಡುಪಿ ಸುತ್ತಮುತ್ತಲ ಪರಿಸರದವರಿಗೆ ಬೇಕಾದ ವಸ್ತುಗಳನ್ನು ತಲುಪಿಸಲು ನಗರಗಳಿಗೆ ಉದ್ಯೋಗಕ್ಕಾಗಿ ಹೋಗುವವರೇ ಸಂಪರ್ಕಕೊಂಡಿಗಳು. ಹಾಲು, ಪತ್ರಿಕೆಗಳನ್ನು ಮನೆಮನೆಗೆ ವಿತರಿಸುವಂತೆ ಇಲ್ಲಿಯೂ ಅದೇ ಮಾದರಿಯಲ್ಲಿ ಮನೆಮನೆಗೆ ತಲುಪಿಸಲಾಗುತ್ತದೆ. ಸಾವಯವ ಉತ್ಪನ್ನಗಳಿಗೆ ಭಾರೀ ಬೇಡಿಕೆಯಿದೆ. ದರ ಸ್ವಲ್ಪ ಜಾಸ್ತಿ ಆದರೂ ಮಾಮೂಲಿ ಮಾರುಕಟ್ಟೆಯಲ್ಲಿರುವಂತೆ ಆಗಾಗ ಏರಿಳಿತ ಆಗುವುದಿಲ್ಲ. ಆದಷ್ಟು ಸ್ಥಿರ ದರಗಳಿರುತ್ತವೆ.

ಘಮಘಮಿಸುತ್ತಿದೆ ಮಲ್ಲಿಗೆ
ಮಲ್ಲಿಗೆ ಮೆಲ್ಲಗೆ ಅರಳುವ ಪರಿ ಸುತ್ತಮುತ್ತ ಸೂಸುವ ಪರಿಮಳ ಅರೆ ಘಳಿಗೆ ತಡೆದು ನಿಲ್ಲಿಸಿ ಅದರತ್ತ ನೋಟ ಬೀರುವಂತೆ ಮಾಡುತ್ತದೆ. ಮುತ್ತಿನಂತೆ ಕಾಣುವ ಬಿಳಿಯ ಮೊಗ್ಗುಗಳು ಅರಳಿದಾಗ ಆಹ್ಲಾದ. ರಾಮಕೃಷ್ಣ ಶರ್ಮರು ಮಲ್ಲಿಗೆ ಕೃಷಿಗೆ ಹೆಸರಾದವರು. ಸಾವಯವದಲ್ಲೇ ಮಲ್ಲಿಗೆ ಬೆಳೆಯುವುದು ಇವರ ವಿಶೇಷತೆ. ಸುಮಾರು ೫೦೦ ಗಿಡಗಳು ನೆಲದಲ್ಲಿ ಬೆಳೆದು ಸಾರ್ಥಕತೆ ಪಡೆದುಕೊಂಡರೆ ಪಾಲಿ ಹೌಸಿನಲ್ಲಿಯೂ ಮಲ್ಲಿಗೆಯ ಕಂಪಿದೆ. ೫೦೦ ಗಿಡಗಳು ನರ್ಸರಿ ತೊಟ್ಟೆಯಲ್ಲಿ ಬೆಳೆಯುತ್ತಾ ಧನ್ಯತೆ ಕಂಡುಕೊಂಡಿವೆ. ಗಿಡಗಳಿಗೆ ಗೋಕೃಪಾಮೃತ, ಸೆಗಣಿ ಗೋಮೂತ್ರ, ಹರಳಿನ ಹಿಂಡಿ, ನೆಲಗಡಲೆ ಹಿಂಡಿ, ಕಹಿಬೇವಿನ ಹಿಂಡಿ, ಮಜ್ಜಿಗೆ, ಬೆಲ್ಲ. ಮೊದಲಾದುವುಗಳನ್ನು ದ್ರವರೂಪದಲ್ಲಿ ಒದಗಿಸಿತ್ತಾರೆ. ಕ್ರಿಮಿಕೀಟ ರೋಗ ಬಾಧೆ ಕಾಣಿಸಿಕೊಂಡರೆ ಅದರ ಹತೋಟಿಗಾಗಿ ನೆಚ್ಚಿಕೊಳ್ಳುವುದು ಬೋರ್ಡೋ ದ್ರಾವಣವನ್ನೇ.

ಒಂದುವೇಳೆ ಇದರಲ್ಲಿಯೂ ನಿಯಂತ್ರಣಕ್ಕೆ ಬಾರದಿದ್ದರೆ ಸಾವಯವ ಕೀಟನಾಶಕದ ಮೊರೆ ಹೋಗುತ್ತಾರೆ. ಮಲ್ಲಿಗೆ ಗಿಡಗಳಿಗಾಗಿ ದೂರದೂರಿನಿಂದಲೂ ಇಲ್ಲಿಗೆ ಬರುತ್ತಾರೆ. ಗಿಡಗಳಿಗೂ ಬೇಡಿಕೆಯಿದೆ ಬೆಳೆಗಾರರು ಬೆಳೆದ ಮಲ್ಲಿಗೆ ಖರೀದಿಗೆ ಕಟ್ಟೆಗಳಿವೆ. ಆದ್ದರಿಂದ ಮಾರಾಟ ಸಮಸ್ಯೆಯಿಲ್ಲ. s ಕಟ್ಟೆಯ ಪ್ರತಿನಿಧಿ ಪ್ರತಿದಿನ ಮನೆಗೆ ಬಂದು ಹೂವನ್ನು ಕೊಂಡೊಯ್ಯುತ್ತಾರೆ. ಪಾರದರ್ಶಕವಾದ ಉತ್ತಮ ದರ ಕೃಷಿಕರಿಗೆ ಲಭ್ಯವಾಗುತ್ತದೆ. ಒಂದು ಅಟ್ಟೆ ಹೂವಿಗೆ ಸರಾಸರಿ ೪೦೦ರೂ ಸಿಗುತ್ತದೆ. ಮಳೆಗಾಲ, ಚಳಿಗಾಲ ದರ ಜಾಸ್ತಿ. ಆಗೆಲ್ಲಾ ಅಟ್ಟೆಗೆ ರೂ. ೨೦೦೦ದ ವರೆಗೂ ಹೋದದ್ದಿದೆ.

ಬೇಸಿಗೆಯಲ್ಲಿ ತರಕಾರಿ ಬೆಳೆಯನ್ನೂ ಬೆಳೆಯುತ್ತಾರೆ. ಕುಂಬಳ, ಸಿಹಿಗುಂಬಳ, ಸೋರೆಕಾಯಿ, ಹೀರೆಕಾಯಿ, ಹಾಗಲ, ಬೆಂಡೆ ಸುವರ್ಣಗೆಡ್ಡೆ, ಅಲಸಂಡೆ ಮೊದಲಾದ ತರಕಾರಿ ಬೆಳೆಯುತ್ತಾರೆ. ಮಲೆನಾಡು ಗಿಡ್ಡ ತಳಿಯ ದನವನ್ನು ಕೃಷಿಗೆ ಪೂರಕವಾಗಿ ಸಾಕುತ್ತಿದ್ದಾರೆ.
ಕೃಷಿಯಷ್ಟು ಲಾಭದಾಯಕವಾದ ಉದ್ಯೋಗ ಬೇರೊಂದಿಲ್ಲ. ಆದರೆ ಅದನ್ನು ವೈಜ್ಞಾನಿಕವಾಗಿ ಮಾಡಿದರೆ ಲಾಭದಾಯಕ. ಅವೈಜ್ಞಾನಿಕವಾಗಿ ಕೃಷಿ ಮಾಡಿದರೆ ಲಾಭ ಬಿಡಿ ಜಾಗವೇ ಮಾರಾಟ ಮಾಡಬೇಕಾದೀತು. ಎಂದು ಎಚ್ಚರಿಸುತ್ತಾರೆ. ಕೃಷಿಗೂ ಮಾಹಿತಿ ಮಾರ್ಗದರ್ಶನ ಪಡೆಯುವುದು ಮುಖ್ಯ. ಇಲ್ಲವಾದರೆ ಹಿನ್ನಡೆ ಅನುಭವಿಸಬೇಕಾದೀತು. ನಾವು ದಿನನಿತ್ಯದ ಆಹಾರ ಸೇವಿಸುವಂತೆ ಗಿಡಗಳಿಗೂ ಅದರ ಅವಶ್ಯಕತೆ ಇದೆ. ಅದನ್ನು ನಾವು ವೈಜ್ಞಾನಿಕ ರೀತಿಯಲ್ಲಿ ಪೂರೈಸಬೇಕು

ರೈತರಿಗೆ ಸಹಾಯಧನದ ಅಗತ್ಯವಿಲ್ಲ. ಈ ಸಹಾಯಧನಗಳು ಅರ್ಹರಿಗೆ ತಲುಪುತ್ತವೆ ಎಂದು ಹೇಳಲಾಗುವುದಿಲ್ಲ. ರೈತರಿಗೆ ಬೇಕಾಗಿರುವುದು ಬೆಳೆದ ಬೆಳೆಗಳಿಗೆ ಉತ್ತಮವಾದ ಬೆಲೆ. ಈ ನಿಟ್ಟಿನಲ್ಲಿ ಸರಕಾರ, ಇಲಾಖೆಗಳು ಪ್ರಯತ್ನಿಸಬೇಕು. ರೈತರ ಕಂಪನಿಗಳ ಸ್ಥಾಪನೆಯ ಅವಶ್ಯಕತೆ ಇದೆ. ರೈತರ ಸಂಘಟನೆಯ ಮೂಲಕ ಮೌಲ್ಯವರ್ಧನೆ, ನಮ್ಮ ಬೆಳೆಗಳಿಗೆ ನಾವೇ ದರ ನಿಗದಿ ಮಾಡುವಂತಹ ಯೋಜನೆ ರೂಪಿಸಿಕೊಳ್ಳಬೇಕು. ಆಗ ಮಾತ್ರ ಬೆಳೆಗಾರರಿಗೆ ಉತ್ತಮ ಧಾರಣೆ ಸಿಗಲು ಸಾಧ್ಯವಾಗುತ್ತದೆ ಎಂಬುದು ಅವರ ಅಭಿಪ್ರಾಯ
ಕೆಲಸಕ್ಕೆ ಜನವಿಲ್ಲ ಕೃಷಿ ಕಾರ್ಮಿಕರಿಗೆ ಕೆಲಸವಿಲ್ಲ

ಕೃಷಿ ಕಾರ್ಮಿಕರಿಗೆ ವರ್ಷವಿಡೀ ಕೆಲಸ ಸಿಗುವಂತೆ ರೈತರು ನೋಡಿಕೊಳ್ಳಬೇಕು. ವರ್ಷದಲ್ಲಿ ೧೫೦-೨೦೦ ಕೆಲಸಗಳು ಸಿಗುವುದೇ ಹೆಚ್ಚು. ಉಳಿದ ದಿನಗಳಲ್ಲಿ ಕೆಲಸಕ್ಕಾಗಿ ಪರದಾಡಬೇಕಾಗುತ್ತದೆ. ಏಕ ಕಾಲದಲ್ಲಿ ಕೃಷಿ ಕೆಲಸಗಳು ಆರಂಭವಾಗುವುರಿAದ ಒಮ್ಮೆಲೆ ಕೆಲಸಗಾರರ ಬೇಡಿಕೆಯಿರುತ್ತದೆ. ಉಳಿದ ದಿನಗಳಲ್ಲಿ ಅವರಿಗೆ ಕೆಲಸವಿಲ್ಲದಂತಾಗುತ್ತದೆ. ಆದರಿಂದ ಯುವ ಸಮುದಾಯ ಕೃಷಿಕೆಲಸಗಳತ್ತ ಆಕರ್ಷಿತರಾಗುವುದಿಲ್ಲ. ಈ ಹಿನ್ನಲೆಯಲ್ಲಿ ಕಾರ್ಮಿಕರ ಕೊರತೆ ಕಾಡುತ್ತಿದೆ

ಜಿಲ್ಲಾ ಕೃಷಿಕ ಸಂಘ ಸ್ಥಾಪಕರು
ರಾಮಕೃಷ್ಣ ಶರ್ಮ ಅವರು ಉಡುಪಿ ಜಿಲ್ಲಾ ಕೃಷಿಕರ ಸಂಘಟನೆಯನ್ನು ಕುದಿ ಶ್ರೀನಿವಾಸ ಭಟ್ ಮತ್ತು ಇತರ ಸಮಾನ ಮನಸ್ಕರೊಂದಿಗೆ ಸೇರಿಕೊಂಡು ಸ್ಥಾಪಿಸಿ ಅದರ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಂಘವು ವೈಜ್ಞಾನಿಕ ಕೃಷಿ, ರೈತಪರ ಹೋರಾಟ, ಸಂಘಟನೆ, ಮಾಹಿತಿ ಮಾರ್ಗದರ್ಶನ, ನೀಡುವುದಲ್ಲದೆ ಪ್ರತಿ ವರ್ಷ ಸಮಾವೇಶಗಳನ್ನು ಸಂಘಟಿಸಿ ಸಾಧಕ ಕೃಷಿಕರನ್ನು ಗೌರವಿಸುತ್ತಾ ಬಂದಿದೆ. ಜೊತೆಯಲ್ಲಿ ವಿಚಾರ ಸಂಕಿರಣಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಸಂಘದ ವತಿಯಿಂದ ವಾರಕ್ಕೆ ೨-೩ ಕಾರ್ಯಕ್ರಮವಾದರೂ ಹಮ್ಮಿಕೊಳಲಾಗುತ್ತಿದೆ. ೨೦-೩೦ ರೈತರಿರುವ ಪ್ರದೇಶಗಳಿಗೂ ಹೋಗಿ ಕೃಷಿ ಮಾಹಿತಿ ನೀಡುತ್ತಿದ್ದು ಸಂಘವು ಇತ್ತೀಚೆಗೆ ೨೫ ವರ್ಷಗಳನ್ನು ಪೂರೈಸಿ ರಜತ ಸಂಭ್ರಮವನ್ನು ಆಚರಿಸಿಕೊಂಡಿದೆ. ರೈತರಿಗೆ ಸುಲಭದ ಕೃಷಿ, ಕಡಿಮೆ ಖರ್ಚಿನಿಂದ ಲಾಭದಾಯಕ ಸಮಗ್ರ ಮಿಶ್ರ ಬೇಸಾಯ ಪದ್ಧತಿಯ ಮಾಹಿತಿಯನ್ನು ನೀಡುತ್ತಿದ್ದೇವೆ ಎನ್ನುತ್ತಾರೆ.

ರಾಮಕೃಷ್ಣ ಶರ್ಮರ ತಂದೆ ಲಕ್ಷ್ಮೀ ನಾರಾಯಣ ಶರ್ಮ ಸ್ವಾತಂತ್ರö್ಯ ಹೋರಾಟಗಾರರು. ಸ್ವಾತಂತ್ರö್ಯ ಬಂದ ನಂತರ ಶಿರ್ವದ ಹಿಂದೂ ಜೂನಿಯರ್ ಕಾಲೇಜಿನಲ್ಲಿ ಹಿಂದಿ ಪಂಡಿತರಾಗಿ ೩೦ ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಈ ನಡುವೆ ಅವರು ತಮ್ಮ ಕೃಷಿ ಮೂಲವನ್ನು ಬಿಟ್ಟಿರಲಿಲ್ಲ. ಜತೆಗೆ ಮಲ್ಲಿಗೆ ಕೃಷಿಯ ಬಗ್ಗೆ ವಿಶೇಷ ಆಸಕ್ತಿಯನ್ನು ತಳೆದು ಮಲ್ಲಿಗೆ ಕಂಪು ಸುತ್ತು ಮುತ್ತ ಪಸರಿಸುಂತೆ ಮಾಡಿದ್ದರು.

ರಾಮಕೃಷ್ಣ ಶರ್ಮ ಅವರ ಪತ್ನಿ ಶುಭದಾ ಶರ್ಮ ಅವರು ಕೃಷಿಯಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಶರ್ಮ ಅವರು ಸಂಘಟನೆಯ ಕೆಲಸಕಾರ್ಯಗಳಲ್ಲಿ ನಿರತರಾದಾಗ ಶುಭದಾರವರದೇ ಕೃಷಿಯ ಹೆಚ್ಚಿನ ಹೊಣೆಗಾರಿಕೆ.
ಮಾಹಿತಿಗೆ ಮೊ: ೯೬೮೬೮೬೬೯೪೦ 9686866940

ರಾಧಾಕೃಷ್ಣ ತೊಡಿಕಾನ 
-ಪ್ರಸಾದ್ ಶೆಣೈ ಕಾರ್ಕಳ

spot_img

ಸಂಬಂಧಿತ ಲೇಖನಗಳು

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group