ಮಳೆಗಾಲ ಕಳೆದು ಚಳಿಯ ಕಂಪು ಕಡಿಮೆಯಾಗುತ್ತಿದ್ದಂತೆ ಬೇಸಗೆಯ ಬಿರು ಬಿಸಿಲು ಮತ್ತು ಸೆಖೆಯು ಮನುಷ್ಯನನ್ನು ಹೈರಾಣಾಗಿಸುತ್ತದೆ. ಫೆಬ್ರವರಿಯಿಂದ ಮೊದಲ್ಗೊಂಡು ಮೇ ತಿಂಗಳಾಂತ್ಯದವರೆಗೂ ಬೇಸಗೆಯ ಕಾವು ಏರುತ್ತಲೇ ಹೋಗುತ್ತದೆ. ದೇಹದ
ಆಯಾಸವನ್ನು ಕಡಿಮೆ ಮಾಡಿಕೊಳ್ಳಲು ಮತ್ತು ಶರೀರವನ್ನು ತಂಪಾಗಿಟ್ಟುಕೊಳ್ಳಲು ಎಳನೀರು,ಕಲ್ಲಂಗಡಿ ಹಣ್ಣು, ಹಣ್ಣುಗಳ ರಸ, ಕಬ್ಬಿನ ಹಾಲು ಸಹಕಾರಿಯಾಗಿದೆ. ಅದೇ ರೀತಿಯಲ್ಲಿ ಮನುಷ್ಯನ
ದೇಹವನ್ನು ತಂಪಾಗಿಡುವಲ್ಲಿ ಕರಾವಳಿಯಲ್ಲಿ ಯಥೇಚ್ಛವಾಗಿ ದೊರೆಯುವ ‘ಈರೋಳ್’ ಅತ್ಯಂತ
ಪರಿಣಾಮಕಾರಿಯಾಗಿದೆ. ಇದರಿಂದಾಗಿ ಕರಾವಳಿಯಲ್ಲಿ ಈರೋಳಗೆ ಪ್ರವಾಸಿಗರು ಮತ್ತು ಸ್ಥಳೀಯರು ಮುಗಿಬೀಳುತ್ತಿದ್ದಾರೆ.
ತುಳುವರು ಇದನ್ನು ‘ಈರೋಳು’ ಎಂದು ಕರೆಯುತ್ತಾರೆ. ತುಳುವಿನಲ್ಲಿ ‘ಇರು ಓಲು’?
ಕನ್ನಡದಲ್ಲಿ ನೀವು ಎಲ್ಲಿ? ಎಂಬ ಶಬ್ದಗಳೇ ಈರೊಳು ಎಂದಾಗಿದೆಯೆಂಬ ಅಭಿಪ್ರಾಯವಿದೆ.
ಬೋರ್ಯಾಸಸ್ ಫ್ಲೆಬರಿಫರ್
ಇದರ ವೈಜ್ಞಾನಿಕ ಹೆಸರಾಗಿದ್ದು, ಇದಕ್ಕೆ ಡೌಬ್ ಪಾಮ್, ಪಲ್ಯಾರಾಪಾಮ್,
ಟಾಟಾ ಪಾಮ್, ಟೆಡ್ಡಿ ಪಾಮ್, ವೈನ್ ಪಾಮ್, ಐಸ್ ಆಪಲ್ ಎಂಬೆಲ್ಲಾ ಹೆಸರಿನಿಂದ ಕರೆಯಲಾಗುತ್ತದೆ. ಇವುಗಳು ಭಾರತ, ನೇಪಾಳ, ಬಾಂಗ್ಲಾದೇಶ, ಶ್ರೀಲಂಕಾ, ಕಾಂಬೋಡಿಯಾ,
ಲಾವೋಸ್, ಮ್ಯಾನ್ಮಾರ್, ವಿಯೆಟ್ನಾಂ,
ಮಲೇಶ್ಯಾ, ಇಂಡೋನೇಷ್ಯಾ, ಫಿಲಿಪೀನ್ಸ್
ಹಾಗೂ ಆಗ್ನೇಯ ಏಷ್ಯಾದ ಶುಷ್ಕ ಹಾಗೂ
ಮರಳು ನೆಲ ಹಾಗೂ ಸಮುದ್ರ ತೀರಗಳಲ್ಲಿ ಬೆಳೆಯುತ್ತವೆ. ಇಂಡೋನೇಶಿಯಾದಲ್ಲಿ
ತಾಟಿ ನುಂಗಿನ ಸಕ್ಕರೆ ಬಳಕೆಯಲ್ಲಿದ್ದು,
ಇದಕ್ಕೆ ಗುಲಜಾವಾ ಎನ್ನುತ್ತಾರೆ.
ತಾಳೆ ಮರವು ಕಾಂಬೋಡಿಯಾ
ದೇಶದ ರಾಷ್ಟ್ರೀಯ ಮರವಾಗಿದ್ದು,
ವಿಶ್ವ ಪ್ರಸಿದ್ದ ಅಂಕೋರ್‌ವಾಟ್ ದೇಗುಲದ ಸುತ್ತಮುತ್ತ ಹೇರಳವಾಗಿದೆ.
![](https://krishibimba.com/wp-content/uploads/2022/07/rsw_1280-2.webp)
ಕರಾವಳಿಯ ಮುಖ್ಯ ರಸ್ತೆಗಳಲ್ಲಿ ಸಾಗುವ ಪ್ರಯಾಣಿಕರು ತಾಟಿ ನುಂಗು ಅಥವಾ ಇರೋಳಿನ ಸವಿಯನ್ನು ಸವಿದು,
ಪಾರ್ಸೆಲ್ ತೆಗೆದುಕೊಂಡೇ ಮುಂದೆ ಸಾಗುತ್ತಾರೆ.
ಬೇಸಗೆಯಲ್ಲಿ ಇಲ್ಲಿ ಇರೋಳ ವ್ಯಾಪಾರ ಬಹಳ ಜೋರಾಗಿ ನಡೆಯುತ್ತದೆ.
ತೆಂಗಿನಕಾಯಿಯಂತೆ ಕಾಣುವ ಮೂರುಕಣ್ಣಿನ ದೊಡ್ಡ
ಈರೋಳಿನ ಬೆಲೆ ರೂ.20/- ಸಣ್ಣ ಈರೋಳಿನ ಬೆಲೆ ರೂ.15/
ಇದ್ದು ಗ್ರಾಹಕರು ಬೆಲೆಯನ್ನು ಲೆಕ್ಕಿಸದೇ ಖರೀದಿಸುತ್ತಾರೆ,
ಒಂದೊಂದು ಮಾರಾಟ ಕೇಂದ್ರಗಳಲ್ಲಿ ದಿನವೊಂದಕ್ಕೆ ಸುಮಾರು
700 ಇರೋಳು ಮಾರಾಟವಾಗುತ್ತದೆ. ತಾಟಿ ನುಂಗು ಅಥವಾ ಇರೋಳು ಚಳಿಗಾಲದಲ್ಲಿ ಹೆಚ್ಚಾಗಿ ಬೆಳೆಯುತ್ತದೆ.
ಕರ್ನಾಟಕದಲ್ಲಿ ತಾಟಿ ನುಂಗು, ತಾಟೀ ಹಣ್ಣು, ತುಳುವಿನಲ್ಲಿ ತಾಟಿ ಬೊಂಡ, ತಮಿಳಿನಲ್ಲಿ ನುಂಗು, ಮರಾಠಿಯಲ್ಲಿ
ತಾಡ್ಗೋಳ್, ಬೆಂಗಾಲಿಯಲ್ಲಿ ತಾಳ್, ಬಿಹಾರಿ ಭಾಷೆಯಲ್ಲಿ ತಾರಿ, ತೆಲುಗಿನಲ್ಲಿ ತಾಟಿ ಎಂದು ಕರೆಯುತ್ತಾರೆ. ಎಳನೀರಿನಂತೆ ರಸ್ತೆ ಬದಿಗಳಲ್ಲಿ ತಾಜಾ ತಾಟಿ ನುಂಗು ಕತ್ತರಿಸಿ ಮಾರುತ್ತಾರೆ,
ತಾಳೆ ಮರವು ತೆಂಗು, ಅಡಕೆ ಮರಗಳ ಕುಟುಂಬವಾದ ಪಾಮೀ ಅಥವಾ ಅರಿಕೇಸೀ ಕುಟುಂಬಕ್ಕೆ ಸೇರಿದ ವನ್ಯವೃಕ್ಷ.
ಸಾಮಾನ್ಯವಾಗಿ ಗುಡ್ಡ ಪ್ರದೇಶ, ತೋಟಗಳ ಬದಿ, ಗದ್ದೆಗಳಂಚಿನಲ್ಲಿ ಬೆಳೆಯುವ ತಾಳೆ ಮರಗಳು 15 ರಿಂದ
50-60 ಅಡಿಗಳ ವರೆಗೆ ಬೃಹತ್ ಗಾತ್ರದಲ್ಲಿ ನೇರವಾಗಿ ಬೆಳೆಯುತ್ತವೆ. ತೆಂಗಿನಕಾಂಡದಂತೆ ಇದರ ಕಾಂಡವಿದ್ದು,
ಕವಲುಗಳಿಲ್ಲದೆ ಉರುಳೆಯಾಕಾರವಾಗಿ ಬೆಳೆಯುತ್ತವೆ. ಮರದ ತುದಿಯಲ್ಲಿ 30-40 ಬೀಸಣಿಗೆಯಾಕಾರದ ಎಲೆಗಳಿದ್ದು,
ಒಂದೊಂದು ಎಲೆಗೂ ಒಂದು ಮೀ. ಉದ್ದದ ಮುಳ್ಳು ಸಹಿತ ತೊಟ್ಟುಗಳಿವೆ, ಕಾಂಡಕಪ್ಪು ಬಣ್ಣದ ಹೊರ ಕವಚದೊಂದಿಗೆ ನೀಳವಾದ ನಾರುಗಳಿಂದ ರಚಿತವಾಗಿದೆ. ಮಧ್ಯದ ದಿಂಡು
ಮಾತ್ರ ಮೃದುವಾಗಿದ್ದು, ಪಿಷ್ಟದ ಹರಳುಗಳಿಂದ ತುಂಬಿದ
ಕೋಶಗಳಿಂದ ರೂಪಿತವಾಗಿದೆ, ಎಳನೀರನ್ನು ಹೋಲುವ
ಈ ತಾಳೆಹಣ್ಣು (ಈರೋಳು) ತಿನ್ನಲು ರುಚಿಯಾಗಿದ್ದು,ವ್ಯಾಪಾರಿಗಳಿಗೆ ಇದೊಂದು ಋತುಮಾನದ ಜೀವನೋಪಾಯದ ಮಾರ್ಗವಾಗಿದೆ. ಈರೋಳು ಕತ್ತರಿಸುವಲ್ಲಿಯೂ ಉತ್ತಮ
ಪರಿಣಿತಿ ಹೊಂದಿರಬೇಕಿದ್ದು, ಕರಾವಳಿಯಲ್ಲಿ ತಲೆಯೆತ್ತಿ ಎಲ್ಲಿ
ನೋಡಿದರೂ ಈಚಲಮರಗಳ (ತಾಳೆ ಮರ) ಸಾಲುಗಳು ,ಬಾನೆತ್ತರ ಚಾಚಿಕೊಂಡಿರುತ್ತಿತ್ತು. ಆದರೆ ಇಂದು ತಾಳೆ ಮರಗಳು ಅವಸಾನದಂಚಿನಲ್ಲಿವೆ.
ವಿಶ್ವಮಾರುಕಟ್ಟೆಯಲ್ಲಿ ತಾಳೆಗೆ ಬಹು ಬೇಡಿಕೆಯಿದ್ದು, ಕರಾವಳಿಯಲ್ಲಿ ತಾಳೆಯನ್ನು ಹಿಂದಿನಿಂದಲೂ ಭಟ್ಟಿ ಇಳಿಸಿದ ಶೇಂದಿ ತೆಗೆಯುವಿಕೆಗಾಗಿ ಬಳಸುತ್ತಿದ್ದರು. ಇಂದು ತಾಳೆಯಿಂದ
ಶೇಂದಿ ತೆಗೆಯುವ ತಜ್ಞರ ಕೊರತೆಯಿಂದ ಈ ಉದ್ದೇಶಕ್ಕೆ ಬಳಸುತ್ತಿಲ್ಲ. ದೇಶದಲ್ಲಿ ಆಹಾರ ಕ್ರಾಂತಿಯಾದ ಸಂದರ್ಭದಲ್ಲಿ
ತಾಳ ಮರಗಳಿಂದ ತೈಲ ತೆಗೆಯುವ ಪದ್ಧತಿಯಿದ್ದು,ತೈಲಕ್ಕನುಗುಣವಾದ ಗುಣಮಟ್ಟದ ತಾಳೆಮರಗಳ
ಕೊರತೆಯಿಂದಾಗಿ ತಾಳೆಗೆ ಮಹತ್ವವಿಲ್ಲದಂತಾಯಿತು.
![](https://krishibimba.com/wp-content/uploads/2022/07/rsw_1280.webp)
ನಿಧಾನಗತಿಯ ಬೆಳವಣಿಗೆ
ತಾಳೆಮರದ ವಂಶವೃದ್ಧಿ ಬೀಜಗಳ ಮೂಲಕ ನಡೆಯುತ್ತದೆ. ಗಿಡದ ನಾಟಿ ಅಥವಾ ಮೊಳಕೆಯೊಡೆದ ನಂತರ ಪ್ರಾರಂಭಿಕ ಹಂತದಲ್ಲಿ ಕಾಂಡದ ಮಣ್ಣಿನಲ್ಲಿ ಹೂತಿರುವ ಭಾಗದ ಗಾತ್ರವಷ್ಟೇ ಹೆಚ್ಚುತ್ತಾ ಹೋಗುತ್ತದೆ.
ಇದರ ಕಾಂಡವು ಬೆಳೆಯುತ್ತಾ ಬೃಹತ್
ಗಾತ್ರಕ್ಕೆ ಬೆಳೆಯುವುದು ಬೀಜ ಮೊಳೆತ 15-20 ವರ್ಷಗಳ ನಂತರವೇ ಎನ್ನುವುದು ವಿಶೇಷ.
ಈಚಲ ಮರವು ಪ್ರತಿ ವರ್ಷ ನವೆಂಬರ್-ಡಿಸೆಂಬರ್ ತಿಂಗಳಿನಲ್ಲಿ ಹೂ (ಹಿಂಗಾರ ಅಥವಾ ಗೊನೆ)ಬಿಡುತ್ತದೆ. ಹೂವುಗಳಲ್ಲಿ ಗಂಡು ಮತ್ತು ಹೆಣ್ಣು ಎಂಬ
ಪ್ರತ್ಯೇಕ ಹೂವುಗಳಿದ್ದು, ಭಿನ್ನ ಭಿನ್ನವಾದ ಮರಗಳಲ್ಲ ಅರಳುತ್ತವೆ. ಹೂ ಗೊಂಚಲನ ದಿಂಡನ್ನು ಕತ್ತರಿಸಿದರೆ ಅದರಿಂದ ಸಿಹಿಯಾದ ರಸ ಒಸರುತ್ತದೆ. ಇದು
ಕಾಯಿಯಾಗಿ ಬಂತ ನಂತರ ಇದರ ಹೊರ ಕವಚವು ಸಿಕ್ಕು ಸಿಕ್ಕು ಆಗುವಂತೆ ನಾರಿದೆ. ಹಣ್ಣಿನ ಒಳಗೆ ತೆಂಗಿನ ಕಾಯಿಗೆ ಮೂರು ಕಣ್ಣುಗಳಿರುವಂತೆಯೇ
ಮೂರು ವಿಭಾಗಗಳಿರುತ್ತದೆ. ಪ್ರತಿಯೊಂದು ವಿಭಾಗಗಳಲ್ಲೂ ಬಿಳಿಯ ಬಣ್ಣದ ಒಂದೊಂದು ಬೀಜವಿರುತ್ತದೆ. ಎಳೆಯ ಹಣ್ಣಿನ ಹೊರಕವಚ ಮತ್ತು
ತಿರುಳು ಮೆದುವಾಗಿದ್ದು, ಒಳಭಾಗದಲ್ಲಿ ನೀರಿರುತ್ತದೆ.
ವೈವಿಧ್ಯಮಯ ಬಳಕೆ
ಈ ಮರಗಳು ತೀರಾಗಟ್ಟಿ ಸ್ವಭಾವವಾದ್ದರಿಂದ ನೇರವಾಗಿ
ಮತ್ತು ದಪ್ಪವಾಗಿ ಬೆಳೆಯುವುದರಿಂದ ಹಿಂದಿನ ಕಾಲದಲ್ಲಿ ಬಡವರು ಮನೆ, ವಿವಿಧ ಪೀಠೋಪಕರಣಗಳ ತಯಾರಿಗೆ
ತಾಳೆ ಮರವನ್ನು ಬಳಸುತ್ತಿದ್ದರು. ಇದರ ದಟ್ಟವಾದ ಬೇರಿನ ಕಾರಣದಿಂದ ಮಣ್ಣಿನ ತಡೆಯುವಲ್ಲಿ ಮತ್ತು
ನೀರಿಂಗಿಸುವಿಕೆಯಲ್ಲಿ ಇವುಗಳು ಮಹತ್ತರ ಪಾತ್ರ ವಹಿಸುತ್ತವೆ.
ಈ ಮರದಿಂದ ಬೆಲ್ಲವನ್ನೂ ತಯಾರಿಸಲಾಗುತ್ತಿದ್ದು, ಈ ಬೆಲ್ಲ
ಬಾಣಂತಿಯರಿಗೆ ಮತ್ತು ಮುಟ್ಟಿನ ತೊಂದರೆ ಇರುವವರಿಗೆ
ಸಿದೌಷಧಿ. ಇದರಲ್ಲಿ ಪೊಟಾಶಿಯಂ ಹಾಗೂ ನಾರಿನಂಶ
ಹೆಚ್ಚಿದ್ದು, ತಿನ್ನಲು ರುಚಿಯಾದ ಇದರಲ್ಲಿ ಕೊಬ್ಬಿನಂಶ ಅತ್ಯಂತ ಕಡಿಮೆಯಿದೆ. ಬಾಯಾರಿಕೆ ನೀಗಿಸುವ ಪೇಯವಾಗಿಯೂ
ತಾಟಿನುಂಗನ್ನು `ನೀರಾ’ (ಶೇಂದಿ) ರೂಪದಲ್ಲೂ ಬಳಸುತ್ತಿದ್ದು,
12 ಸುಕೋಸ್ ಇರುವ ಇದು ಸಾಂಪ್ರದಾಯಿಕವಾದ ನಶೆಯ
ಪೇಯವೂ ಹೌದು. ಇದನ್ನು ಸರಿಯಾಗಿ ಸಂಸ್ಕರಿಸದಿದ್ದಲ್ಲಿ
(ಮರದಿಂದ ತೆಗೆದ 3-4 ಗಂಟೆಯ ನಂತರ) ನಿಧಾನವಾಗಿ ಹುಳಿಯಾಗಿ ಹೆಂಡವಾಗಿಯೂ ಮಾರ್ಪಡುತ್ತದೆ.
ಇದು ಹಣ್ಣಾದಾಗ ಇದರ ಮೆದುವಾದ ಭಾಗ ಗಟ್ಟಿಯಾಗಿ ಮೂಳೆಯಂತ ತಿರುಳಾಗುತ್ತದೆ. ಇದರ ಬೀಜ ಮೊಳೆಯುವಾಗ ಬೇಳೆ ಹಾಲಿನ ಬಣ್ಣವಾಗಿದ್ದು, ತಿನ್ನಲು ರುಚಿಯಾಗಿರುತ್ತದೆ.
ತಾಟಿ ನುಂಗಿನಲ್ಲಿ ಈಸ್ಟ್‌ನ ಅಂಶ ಹೇರಳವಾಗಿದೆ.
ಮರದ ಎಲೆಗಳ ತೊಟ್ಟಿನಲ್ಲಿ ತಂತಿಯಂತಹ ಗಟ್ಟಿಯಾಗಿರುವ
ನೀಳವಾದ ನಾರಿದ್ದು, ಇದರಿಂದ ಬ್ರಷ್ ಮತ್ತು ಬರಲುಗಳನ್ನು
ತಯಾರಿಸಲಾಗುತ್ತದೆ. ನೀರಾ ತೆಗೆಯುವುದಕ್ಕೆ ಮೊದಲು
ಹಳೆಯ ಎಲೆಗಳನ್ನು ಕತ್ತರಿಸಿ ತೊಟ್ಟಿನ ತುದಿಯನ್ನು ಜಜ್ಜಿತೊಟ್ಟನ್ನು ಮೃದುವಾದ ಅಂಗಾಂಶದಿಂದ ನಾರನ್ನು
ಪ್ರತ್ಯೇಕಿಸಲಾಗುತ್ತದೆ. ಈ ನಾರಿಗೆ ಬ್ಯಾಸೈನ್ ಎಂಬ ಹೆಸರಿದ್ದು.
ತೊಟ್ಟಿನ ಅಂಚಿನ ಭಾಗದಿಂದ ಲಭಿಸುವ ನಾರು ಉತ್ತಮ ದರ್ಜೆಯದ್ದಾಗಿದೆ. ಇದರ ನಾರು ತೆಗೆಯುವುದೂ ಒಂದು ಗೃಹ
ಕೈಗಾರಿಕೆಯಾಗಿದ್ದು, ಆಂಧ್ರಪ್ರದೇಶದ ಕೃಷ್ಣಾ, ಗೋದಾವರಿ, ತಿನ್ನವೆಲ್ಲಿ ಜಿಲ್ಲೆಗಳಲ್ಲಿ, ತಿರುವಾಂಕೂರಿನ ದಕ್ಷಿಣ ಭಾಗದಲ್ಲಿ
ಹೆಚ್ಚಿನ ಜನರು ಇದನ್ನು ಗುಡಿಕೈಗಾರಿಕೆಯಾಗಿ ಮಾಡುತ್ತಾರೆ.
ನಾರನ್ನು ವಿವಿಧ ದರ್ಜೆಗಳಾಗಿ ವಿಂಗಡಿಸಿ ಉದ್ದಕ್ಕೆ ಕತ್ತರಿಸಿ ಕಂತೆಗಳಾಗಿ ಕಟ್ಟಿ ಮಾರಾಟ ಮಾಡುತ್ತಾರೆ. ಇದರ ಒಳಗಿನ
ತಿರುಳನ್ನು ತೆಗೆದು ಕೊಳವೆ ಮಾಡಿ ಹೊಲಗಳಿಗೆ ನೀರು ಹಾಯಿಸುತ್ತಾರೆ. ಇದರ ಎಲೆಗಳಿಂದ ಬೀಸಣಿಗೆ, ಛತ್ರಿ, ಬುಟ್ಟಿ,ಚಾಪೆಗಳನ್ನು ವೈವಿಧ್ಯಮಯವಾಗಿ ಹೆಣೆಯುತ್ತಾರೆ. ಇದರಿಂದ
ಕಪ್ಪಾದ ಅಂಟನ್ನೂ ವಾಣಿಜ್ಜಿಕವಾಗಿ ತೆಗೆದು ಮಾರಾಟ ಮಾಡುತ್ತಾರೆ. ತೆಂಗಿನ ಮರದಂತೆಯೇ ತಾಳೆಮರದ ಗರಿ,
ಬೊಡ್ಡೆ.ಕಾಯಿಗಳು ಬಹುಪಯೋಗಿಯಾಗಿದೆ.
ತೆಂಗನ್ನು
ಕಲ್ಪವೃಕ್ಷವೆಂದು ಕರೆಯುತ್ತಾರಾದರೂ ಇದರ ವಿವಿಧ ಬಳಕೆಯ
ಕಾರಣಕ್ಕೆ ಮುಂದೆ ಕಲ್ಪವೃಕ್ಷವೆಂದೂ ಕರೆಯಲ್ಪಡಬಹುದು.