spot_img
Saturday, July 27, 2024
spot_imgspot_img
spot_img
spot_img

ಚೆಂದದ ಕೃಷಿ ವನ – ವೈವಿಧ್ಯಮಯ ಹಣ್ಣುಗಳ ಅನಾವರಣ

ಮನೆಯ ಸುತ್ತಮುತ್ತ ಸುಂದರ ಹೂ ತೋಟ, ಗುಡ್ಡ ಬೆಟ್ಟಗಳ ಸೃಷ್ಟಿ ,ಹರಿವ ಝರಿ…
ಸೊಗಡಿನ ಆಪ್ತತೆಯ ಪ್ರತಿಮೆಗಳು, ವಿವಿಧೆಡೆಯಿಂದ ಸಂಗ್ರಹಿಸಲಾದ ವಿವಿಧ ಮಾದರಿಯ ಕಲ್ಲುಗಳು,
ಆಕರ್ಷಕವಾದ ಕ್ಯಾಕ್ಟಸ್ ಕುಂಡದ ಮೆರುಗು,
ತೋಟದ ತುಂಬೆಲ್ಲಾ ತುಂಬಿಕೊಂಡಿರುವ ದೇಶೀಯ ಮತ್ತು ವಿದೇಶೀಯ ಹಣ್ಣಿನ ಗಿಡಗಳು ಬೀಗಿ ಬಾಗಿ ತಮ್ಮ ಇರುವು ಮತ್ತು ವೈವಿಧ್ಯತೆಯನ್ನು ಮೌನವಾಗಿ ಸಾರುತ್ತವೆ. ಸುತ್ತೆಲ್ಲಾ ಹಸಿರ ಸಿರಿ, ನಡುವೆ ತೋಟಗಾರಿಕೆ ಬೆಳೆಗಳ, ಹಣ್ಣು ಹಂಪಲಿನ ಗಿಡಗಳ ಐಸಿರಿ. ಎಂಥವರ ಮನಸ್ಸನ್ನು ಒಮ್ಮೆ ಸಳೆದು ನಿಲ್ಲಿಸುತ್ತದೆ.
ತಮಗರಿವಿಲ್ಲದಂತೆ ಒಳಪ್ರವೇಶಿಸಿ ಸೆಲ್ಫಿ ತೆಗೆದುಕೊಳ್ಳಲು ಪ್ರೇರೇಪಿಸುತ್ತದೆ. ಕೆಲವರಿಗೆ ತೋಟದವರೆಗೂ ಹೋಗಿ ಪೋಟೋ ಕ್ಲಿಕ್ಕಿಸಿಕೊಳ್ಳುವ ಆತುರತೆ.
ಸುಳ್ಯ ತಾಲೂಕಿನ ಬೆಳ್ಳಾರೆ ಸಮೀಪದ ಕೊಡಿಯಾಲ ಗ್ರಾಮದ ಕುರಿಯಾಜೆ ತಿರುಮಲೇಶ್ವರ ಭಟ್ಟರ ಕೃಷಿ ಕ್ಷೇತ್ರ ಊರಿನ ಹಾಗೂ ಪರವೂರಿನ ಜನರ ಆಕರ್ಷಣೆಯ ಕೇಂದ್ರ, ಕೃಷಿ ಪರಂಪರೆಯಲ್ಲಿ
ಬೆಳೆದು ಬಂದ ಭಟ್ಟರು ಕೃಷಿಯಲ್ಲಿ ಹೊಸತನವನ್ನು ರೂಢಿಸಿಕೊಂಡವರು, ಪ್ರಯೋಗಶೀಲತೆಗೆ
ಮನ ಮಾಡಿ ಯಶಸ್ಸಿನ ಹಾದಿ ಕಂಡವರು. ದೂರದಲ್ಲೆಲ್ಲೋ ನೋಡಬಹುದಾದ ಹಣ್ಣಿನ ಗಿಡಗಳನ್ನು ತಮ್ಮ ಕೃಷಿ ಕ್ಷೇತ್ರದಲ್ಲಿ ಬೇರೂರಲು ಅವಕಾಶ ಒದಗಿಸಿ
“”ನಮ್ಮ ಮಣ್ಣಿನಲ್ಲಿ ಏನೂ ಆಗುವುದಿಲ್ಲ””
ಎಂದೆಲ್ಲಾ ಹೇಳುತ್ತಾ ಸುಮ್ಮನಿರುವವರಿಗೆ ಮನಸ್ಸಿದ್ದರೆ ಈ ಮಣ್ಣಿನಲ್ಲಿ ಸತ್ವವಿದೆ ಎಂಬುದನ್ನು
ಸಾಧಿಸಿ ತೋರಿಸಿದವರು. ಎಂಟು ಎಕರೆ ಪ್ರದೇಶದಲ್ಲಿ ಅಡಿಕೆ, ತೆಂಗು, ರಬ್ಬರ್, ಕಾಳುಮೆಣಸು
ಮೊದಲಾದ ಸಾಂಪ್ರದಾಯಿಕ ಬೆಳೆಗಳ ಜತಗೆ 200ಕ್ಕೂ ಹೆಚ್ಚಿನ ಹಣ್ಣಿನ ಗಿಡಗಳನ್ನು ಬೆಳೆದು
ವೈವಿಧ್ಯಮಯವಾದ ಹಣ್ಣಿನ ಲೋಕವನ್ನು ತೆರೆದಿಟ್ಟಿದ್ದಾರೆ. ಕೃಷಿ ಆಸಕ್ತರಿಗೆ, ಪ್ರಯೋಗಶೀಲರಿಗೆ
ಪ್ರಾತ್ಯಕ್ಷಿಕೆಯಾಗಬಲ್ಲ ಚೆಂದದ ನಂದನ ವನವನ್ನು ತನ್ನ ಕೃಷಿ ಕ್ಷೇತ್ರದಲ್ಲೇ ಸೃಷ್ಟಿಸಿದ್ದಾರೆ.
 

(ತಿರುಮಲೇಶ್ವರ ಭಟ್  ಮತ್ತು  ವಿಜಯೇಶ್ವರ್.)

ಕೃಷಿ ವನದಲ್ಲಿರುವ ಹಣ್ಣಿನ ಗಿಡ ವೈವಿಧ್ಯ

ಓಲೋಸೊಪ್, ಸೀ ಗ್ರೇಪ್, , ವೆಲ್ವೆಟ್ ಆಪಲ್,  ಮಾಯನ್ ನೆಟ್,
ಸಫಟ್, ಮೆರಿಯನ್‌ ಮ್ಯಾಂಗೊಸ್ಟಿನ್,
ರೆಡ್‌ ಮ್ಯಾಂಗೊ, ಮಿಲ್ಕ್ ಸಪೋಟ, ನಾಮಡಕ್ ರೆಡ್
ನಾಮಡಕ್ ಯಲ್ಲೊ, ಉದಯ ಪ್ಲಮ್, ವೆರಿಕೇಟಿಡ್ ನೆಲ್ಲಿ,
ಸಿದ್ದು ಹಲಸು, ಮ್ಯಾಮೆ ಸಪೋಟ, ಹ್ಯಾಂಡ್ ಪೈನಾಪಲ್,
ಬಡೆ ಬಾಳೆ,  ಹನುಮಾನ ಫಲ,
ಚೋಟ ಪಸಂದ್ ಹಲಸು
ಮೀಟಾಬಾಂಗ್,
ಮಿರಾಕಲ್ ಫ್ಲೈಟ್,
ಗೋಲ್ಡನ್ ಚಕೊತಾ, ಮೆಕ್ಸಿಕನ್ ಸಪೋಟಾ,, ರೆಡ್ ಡ್ರಾಗನ್ ಫುಟ್, ಮಿಲ್ಕ್ ಫ್ರುಟ್, ಜಂಬೋ ರೆಡ್ ಮಾಂಗೊ, ಡಿಸೆಂಬರ್ ಹನಿ ಜಾಕ್ ಫ್ರುಟ್
, ರೆಡ್ ಜಾಬೋಲಿ ಕಾಬಾ, ಗ್ರೂಮಿ ಚಾಮಿ ಬೆರಿ, ಚೈನೀಶ್
ಆರೆಂಜ್, ಸೆಂಟಾಮ್, ವಾಲ್ ನಟ್, ಐಸ್ ಕ್ರೀಮ್ ಬೀನ್ಸ್,
ಸೋನಿ ಮ್ಯಾಂಗೊ, ಬೊರೊಜಾ, ಲಿಚಿ …ಇನ್ನೂ ಹಲವಾರು….

 

ಅಡಿಕೆಯಲ್ಲಿ ಹೊಸ ಪ್ರಯೋಗ
ಅಡಿಕೆ ಗಿಡಗಳನ್ನು 9×9 ಅಡಿ ಅಂತರದ ಗುಂಡಿಗಳಲ್ಲಿ
ಒಂದು ನೆಡುವುದು ಸಾಮಾನ್ಯ. ಇವರು ಹಾಗೆ ಮಾಡಲಿಲ್ಲ. 30ಅಡಿ ಅಂತರವಿಟ್ಟು ನಾಲ್ಕು ಅಡಿ ಆಳ ಮತ್ತು ಅಗಲದ ಗುಂಡಿ ತೋಡಿ ಮೂರು ಅಡಿಕೆ ಗಿಡಗಳನ್ನು ನೆಟ್ಟಿದ್ದಾರೆ. ಗಿಡಗಳಿಗೆ ಈಗ ಮೂರು ವರ್ಷಗಳಾಗಿವೆ. ಕೆಲವು ಫಲ ಬಿಡುವ ಹಂತದಲ್ಲಿದೆ.
ಅಡಕೆ ಗಿಡಗಳ ಮಧ್ಯದಲ್ಲಿರುವ ಅಂತರದಲ್ಲಿ ಹಲವಾರು ವಿದೇಶಿ ಹಣ್ಣಿನ ಗಿಡಗಳು ಹೊಸ ಬದುಕಿಗೆ ಒಗ್ಗಿಕೊಂಡು ಹುಲುಸಾಗಿ ಬೆಳೆದಿವೆ. ಕೆಲವು ಫಲ ಬಿಡಲು ಆರಂಭಿಸಿವೆ.ಮತ್ತೆ ಕೆಲವು ರುಚಿಕರವಾದ ಹಣ್ಣನ್ನು ನೀಡುತ್ತಿವೆ. ಈ ಕೃಷಿಗಾಗಿ
ಬಳಸಿಕೊಂಡಿರುವುದು ತನ್ನ ಮನೆಯೆದುರಿದ್ದ ಗುಡ್ಡ ಜಾಗವನ್ನೆ, ಯಂತ್ರೋಪಕರಣಗಳಿಂದ ಗುಡ್ಡ ಬಗೆದು ಸಮತಟ್ಟು ಮಾಡಿ ಅದರ ಸ್ವರೂಪ ಹಾಳು ಮಾಡಲಿಲ್ಲ. ಬೇಕಾದ ಅಂತರದ ಪಾತಿಗಳನ್ನು ನಿರ್ಮಿಸಿಕೊಂಡಿದ್ದು, ಹಸಿರ ಸಿರಿಯೆಬ್ಬಿಸಿ ಪರಿಸರಕ್ಕೆ
ಹೊಸ ಕಳೆ ಬಂದಿದೆ. ಈ ಪಾತಿಗಳಲ್ಲಿ ಮಳೆ ನೀರನ್ನು ಇಂಗಿಸಿ ಜಲಸಂಪನ್ಮೂಲ ಹೆಚ್ಚಿಸಿಕೊಂಡಿದ್ದಾರೆ.
ಹಲವು ಬಾಳೆಗಳು ತೋಟದಲ್ಲಿ ಸಾಂಪ್ರದಾಯಿಕ ಬಾಳೆ ತಳಿಗಳಲ್ಲದೆ ದೇಶಿಯ ಮತ್ತು ವಿದೇಶಿಯ ಸೇರಿದಂತೆ ಸುಮಾರು 30 ವಿಧದ ಬಾಳೆಗಳವೆ. ಶುದ್ಧ
ತಳಿ ಥೈಲಾಂಡ್ ಬಾಳೆ ಗ್ರೋ ಬ್ಯಾಗಿನಲ್ಲಿಯೇ ಗೊನೆ ಹಾಕುವುದಕ್ಕೆ ತಯಾರಾಗಿದೆ. ಕದಳಿ ಬಾಳೆಯಲ್ಲಿನ ಒಂದು ಪ್ರಬೇಧವಾದ ಸಾವಿರ ಕದಳಿಯಲ್ಲಿ ಸಾವಿರಾರು ಕಾಯಿಗಳು, ಅದರಲ್ಲಿ 2-3
ಹಂತದಲ್ಲಿ ದೊಡ್ಡ ದೊಡ್ಡ ಬಾಳೆಕಾಯಿಗಳಿದ್ದರೆ ನಂತರ ಜಡೆಯಂತೆ ಇಳಿಬೀಳುವ ಗೊನೆಯ ತುಂಬ ಸಣ್ಣ ಸಣ್ಣ ಕಾಯಿಗಳು.ಬಾಳೆಯ ಕೈಗಳಲ್ಲಿ ಮಣಿ ಪೋಣಿಸಿದಂತಿರುವ ಮತ್ತೊಂದು ಸಣ್ಣ ಬಾಳೆ ಗೊನೆ ಬಿಡುವುದಕ್ಕೆ ಸಿದ್ಧ. ಯಕ್ಷಗಾನದ ಬಡಗಿನ ಕಿರೀಟದಂತೆ ಕಾಣುವ ಅನಾನಸುಗಳು. ಇರಿಯನ್ ಅಲ್ಲದೆ ಹಲಸಿನಲ್ಲಿ ಹಲವಾರು ವೈವಿಧ್ಯತೆಯ ತಳಿಗಳು. ಇವರಲ್ಲಿರುವ ಗೇರು ತಳಿಯೊಂದರ ಬೀಜವನ್ನು ಸಿಪ್ಪೆ ಸಹಿತ ತಿನ್ನಬಹುದು.
ಬಾಯಿಗೆ ಸೊನೆಯಾಗುವುದಿಲ್ಲ ನವೆಯಾಗುವುದಿಲ್ಲ.
ತಿರುಮಲೇಶ್ವರ ಭಟ್ಟರು ದೊಡ್ಡದಾದ ಅಡಿಕೆ ಮರವನ್ನುತೋರಿಸುತ್ತಾ `ಈ ಅಡಿಕೆ ಮರ ನೋಡಿ; ಇತರ ಅಡಿಕೆ ಮರದಂತೆ ಇದ್ದರೂ ಕೂಡ ಇದು ಪಾಂಡವರ ಅಡಿಕೆ, ಗಾತ್ರದಲ್ಲಿ ದೊಡ್ಡದು,
ಇದರ ಸಿಪ್ಪೆ ತೆಳು, ಆದರೆ ಸಿಹಿಯಾಗಿದೆ. ಮಾರುಕಟ್ಟೆಯಲ್ಲಿ ಇದಕ್ಕೆಬೇಡಿಕೆ ಕಡಿಮೆ. ಇದು ನೋಡಿ, ಜಪಾನಿನ ಕಾಳುಮೆಣಸು, ನಮ್ಮ
ಕಾಳುಮೆಣಸಿನಂತಿಲ್ಲ. ಇದರದೇ ಆದ ರುಚಿ ಮತ್ತು ಪರಿಮಳ ಎನ್ನುತ್ತಾ ತಿನ್ನಲು ಕೊಟ್ಟರು. ಬಾಯಿ ಗಮ್ಮನ್ನುವ ಪರಿಮಳ ವಿಶೇಷತೆಯುಳ್ಳ ಹಲವಾರು ಮಾಹಿತಿಗಳನ್ನು ನೀಡುತ್ತಲೇ ಇದ್ದರು. ವಿಜಯೇಶ್ವರರು ಕೆಲವು ಹಣ್ಣಿನ ವಿಶಿಷ್ಟತೆಯನ್ನು
ತಿಳಿಸುತ್ತಲೇ ಇದೊಂದು ಗಿಡದ ಒಂದೆರಡು ಹಣ್ಣುಗಳನ್ನು ಕೈಗಿತ್ತರು. ಗಾತ್ರದಲ್ಲಿ ನೇರಳೆ ಹಣ್ಣಿಗಿಂತ ಸ್ವಲ್ಪ ಚಿಕ್ಕದಾಗಿತ್ತು. ತುಂಬಾ ರುಚಿ. ಹಣ್ಣಾಗುತ್ತಿದ್ದಂತೆ ಹಕ್ಕಿಗಳೆಲ್ಲಾ ತಿಂದು ಖಾಲಿ..
(ಸಂಪೂರ್ಣ ಲೇಖನ “ಕೃಷಿ ಬಿಂಬ”ನವೆಂಬರ್ ತಿಂಗಳ  ಪತ್ರಿಕೆಯಲ್ಲಿ ಪ್ರಕಟವಾಗಿದೆ.)

spot_img

ಸಂಬಂಧಿತ ಲೇಖನಗಳು

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group