ಬರಹ- ರಾಧಾಕೃಷ್ಣ ತೊಡಿಕಾನ
ಹಾಲು ಮೊಸರು ಬೆಣ್ಣೆ ತುಪ್ಪವಿದ್ದ ಮನೆ ಸಿರಿವಂತಿಕೆಯ ಭಾಗವೆಂದೇ ಭಾವಿಸಿದ್ದ ದಿನಗಳಿದ್ದವು.
ಭಾರತೀಯ ಸಂಸ್ಕೃತಿ ಪರಂಪರೆಯಲ್ಲೂ ದೇಶೀ ಹಸುವಿನ ತುಪ್ಪಕ್ಕೆ ವಿಶಿಷ್ಟವಾದ ಸ್ಥಾನವಿದೆ. ಧಾರ್ಮಿಕ ವಿಧಿವಿಧಾನಗಳಲ್ಲಿಯೂ ನಾಟಿ ತುಪ್ಪಕ್ಕೆ ಆದ್ಯತೆ. ಅಡುಗೆ, ಔಷಧಿಗಳಲ್ಲಿಯೂ ತುಪ್ಪದ ಬಳಕೆಯಿದೆ. ದೇಶೀಯ ಹಸುವಿನ ಹಾಲಿನಿಂದ ತಯಾರಾದ ಶುದ್ಧ ತುಪ್ಪಕ್ಕೆ ಮಾರುಕಟ್ಟೆಯಲ್ಲಿ ಬೇಡಿಕೆಯಿದೆ. ನಾಟಿ ಹಸುಗಳಲ್ಲಿ ಹಾಲಿನ ಪ್ರಮಾಣ ಕಡಿಮೆ. ಆದರೂ ಹಾಲಿನಿಂದ ತುಪ್ಪ ತಯಾರಿಸಿ ಉತ್ತಮ ಆದಾಯ ಪಡೆಯಬಹುದು. ಕಬ್ಬಾಳದ ಕೆ.ಎಂ. ಸ್ವಾಮಿ ಗೌಡ ಅವರು ಕೂಡಾ ನಾಟಿ ತುಪ್ಪ ತಯಾರಿಯ ಮೂಲಕ ಗೋ ಆಧಾರಿತವಾದ ಉತ್ಪನ್ನಗಳಿಂದ ಪರಿಚಿತರು.

ಬೆಂಗಳೂರು ದಕ್ಷಿಣದ ಕನಕಪುರ ತಾಲೂಕಿನ ಕಬ್ಬಾಳ ಗ್ರಾಮದ ಕೆ.ಎಂ. ಸ್ವಾಮಿ ಗೌಡ ಅವರು ಕೃಷಿ ಪರಂಪರೆಯ ಹಿನ್ನಲೆಯುಳ್ಳವರು. ಅವರ ಮನೆಯಲ್ಲಿ ದೇಶೀಯವಾದ ಹಳ್ಳಿಕಾರ್ ದನಗಳಿದ್ದವು. ಹಾಲನ್ನು ಮನೆ ಬಳಕೆಗೆ ಬಳಸಿಕೊಂಡು, ಉಳಿದುದುರಲ್ಲಿ ತುಪ್ಪ ತಯಾರಿಸಲಾಗುತ್ತಿತ್ತು. ಮನೆಯಲ್ಲೇ ತಯಾರಿಸುತ್ತಿದ್ದ ಈ ತುಪ್ಪಕ್ಕೆ ಸುತ್ತಮುತ್ತಲಿನ ಪ್ರದೇಶದಲ್ಲಿ ಬೇಡಿಕೆಯೂ ಇತ್ತು. ಕುಟುಂಬದ ಈ ಪರಂಪರೆಯನ್ನು ಉಳಿಸಿ ಇನ್ನಷ್ಟು ವಿಸ್ತರಿಸುತ್ತ ಗಮನ ಹರಿಸಿದ ಸ್ವಾಮಿ ಗೌಡರು, ಸಾಂಪ್ರದಾಯಿಕ ಉದ್ಯಮಕ್ಕೆ ಕಾಯಕಲ್ಪ ನೀಡಿದರು. ತಮ್ಮ ಉತ್ಪನ್ನವನ್ನು ‘ದೈವಿಕ ದೇಶೀ ತುಪ್ಪ’ ಎಂಬ ಬ್ರಾಂಡ್‌ನಡಿ ಮಾರುಕಟ್ಟೆಗೆ ಪರಿಚಯಿಸಿದರು.

ಆರಂಭದಲ್ಲಿ ಮನೆಯಲ್ಲೇ ದೊರೆಯುತ್ತಿದ್ದ ಹಾಲಿನಿಂದ ಬೆಣ್ಣೆ ತೆಗೆದು ಅದರಿಂದ ತುಪ್ಪ ಮಾಡಲಾಗುತ್ತಿತ್ತು. ಬೇಡಿಕೆ ಹೆಚ್ಚಾದಂತೆ ಸುತ್ತಮುತ್ತಲಿನ ಪಶುಪಾಲಕರಿಂದಲೂ ಬೆಣ್ಣೆ ಖರೀದಿಸಿ ತುಪ್ಪ ತಯಾರಿಸಲು ಮುಂದಾದರು. ಮನೆಯಿಂದಲೇ ಹುಟ್ಟಿದ ತುಪ್ಪದ ವ್ಯವಹಾರ ಸಣ್ಣ ಉದ್ಯಮವಾಗಿ ರೂಪುಗೊಂಡಿತು.

ಸಾಂಪ್ರದಾಯಿಕ ವಿಧಾನದ ತುಪ್ಪ
ಸ್ವಾಮಿ ಗೌಡರು ತಯಾರಿಸುವ ತುಪ್ಪವು ಸಾಂಪ್ರದಾಯಿಕ ವಿಧಾನವನ್ನು ಆಧರಿಸಿದೆ. ತುಪ್ಪ ತಯಾರಿಕೆಯಲ್ಲಿ ಮೆಂತೆ, ಅರಿಶಿನ, ಲವಂಗ, ವೀಳ್ಯದೆಲೆ, ಕರಿಬೇವು, ಕಾಳುಮೆಣಸು ಸೇರಿದಂತೆ ಸಾಂಪ್ರದಾಯಿಕವಾಗಿ ಬಳಸುವ ಮೂಲಿಕೆಯ ಸತ್ವಗಳನ್ನು ಸೇರಿಸಲಾಗುತ್ತದೆ. ಹೀಗಾಗಿ ಗ್ರಾಮೀಣ ಶೈಲಿಯಲ್ಲಿ ತಯಾರಿಸಿದ ತುಪ್ಪಕ್ಕೆ ವಿಶಿಷ್ಟವಾದ ರುಚಿ ಮತ್ತು ಪರಿಮಳ ದೊರೆಯುತ್ತದೆ ಎಂದು ಅವರು ಹೇಳುತ್ತಾರೆ.

ತಿಂಗಳಿಗೆ ಸುಮಾರು 3೦ರಿಂದ 5೦ ಕೆ.ಜಿ.ವರೆಗೆ ತುಪ್ಪ ಮಾರಾಟವಾಗುತ್ತದೆ. ಬೇಡಿಕೆ ಮತ್ತು ಸಂದರ್ಭಕ್ಕೆ ಅನುಗುಣವಾಗಿ ಮಾರಾಟದಲ್ಲಿ ಏರಿಳಿತವಿರುತ್ತದೆ. ನಾಟಿ ಹಸುವಿನ ತುಪ್ಪಕ್ಕೆ ಬೇಡಿಕೆ ಇರುವುದರಿಂದ ಮಾರುಕಟ್ಟೆ ಸಮಸ್ಯೆಯಿಲ್ಲ ಎನ್ನುತ್ತಾರೆ ಸ್ವಾಮಿ ಗೌಡ.

ಸ್ಥಳೀಯ ಅಂಗಡಿಯಿಂದ ದೂರದ ಮಾರುಕಟ್ಟೆಯವರೆಗೆ
ತುಪ್ಪಕ್ಕೆ ಸ್ಥಳೀಯವಾದ ಮಾರುಕಟ್ಟೆಯಿದೆ. ಆನ್ ಲೈನ್ ಮಾರಾಟವಲ್ಲದೆ ಡಿಜಿಟಲ್ ಮಾರುಕಟ್ಟೆಯಿದೆ. ಕಬ್ಬಾಳದಲ್ಲಿರುವ ಅಂಗಡಿಯ ಮೂಲಕ ಗ್ರಾಹಕರು ನೇರವಾಗಿ ಬಂದು ತುಪ್ಪ ಖರೀದಿಸುತ್ತಾರೆ. ಜೊತೆಗೆ ದೂರದ ಊರುಗಳ ಗ್ರಾಹಕರಿಗೂ ಕೊರಿಯರ್ ಮೂಲಕ ಉತ್ಪನ್ನವನ್ನು ಕಳುಹಿಸಲಾಗುತ್ತಿದೆ. ಬೆಂಗಳೂರು ಜಿಕೆವಿಕೆ ಆವರಣದಲ್ಲಿ ನಡೆಯುವ ಕೃಷಿ ಮೇಳಗಳು, ವಿವಿಧ ವಸ್ತು ಪ್ರದರ್ಶನಗಳು ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ತಮ್ಮ ಉತ್ಪನ್ನವನ್ನು ಮಾರಾಟ ಮಾಡುತ್ತಿದ್ದಾರೆ.
ಕುಟುಂಬದ ಪರಂಪರೆಯಿಂದ ಬಂದಿದ್ದ ತುಪ್ಪ ತಯಾರಿಕೆಯ ಜ್ಞಾನವನ್ನು ಉದ್ಯಮದ ರೂಪಕ್ಕೆ ತಂದು, ಅದಕ್ಕೆ ಬ್ರಾಂಡ್ ರೂಪವಿತ್ತು ಮಾರುಕಟ್ಟೆ ಕಂಡುಕೊಂಡಿರುವುದು ಸ್ವಾಮಿ ಗೌಡರ ಶ್ರದ್ಧೆ, ಛಲ ಸಾಧನೆಯ ಫಲ. ಉದ್ಯೋಗ ಅರಸಿ ಯುವಕರು ಹಳ್ಳಿ ಬಿಟ್ಟು ನಗರ ಸೇರುವ ಬದಲು ತಾವಿರುವ ಪ್ರದೇಶದಲ್ಲಿಯೇ ಸ್ವ ಉದ್ಯೋಗದ ಸಾಧ್ಯತೆಯನ್ನು ಕಂಡುಕೊಳ್ಳುವುದಕ್ಕೆ ಪ್ರೇರಣೆಯಾಗಿದ್ದಾರೆ
ಮಾಹಿತಿಗಾಗಿ: 97399 90262








