ಶಿವಮೊಗ್ಗ: ಶಿವಮೊಗ್ಗ ತಾಲೂಕಿನ ರಾಮನಗರ ಗ್ರಾಮದಲ್ಲಿ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯದ ಅಂತಿಮ ವರ್ಷದ ಕೃಷಿ ವಿದ್ಯಾರ್ಥಿಗಳ ವತಿಯಿಂದ ರೈತ ಈರಪ್ಪ ಅವರ ತೋಟದಲ್ಲಿ ಬೋರ್ಡೋ ದ್ರಾವಣ ತಯಾರಿಸುವ ವಿಧಾನದ ಕುರಿತು ಪ್ರಾತ್ಯಕ್ಷಿಕೆಯನ್ನು ಹಮ್ಮಿಕೊಳ್ಳಲಾಯಿತು.
ಇದರ ಉದ್ದೇಶ ರೈತರಿಗೆ ರೋಗ ನಿವಾರಣೆಯಲ್ಲಿ ರಾಸಾಯನಿಕಗಳ ಬದಲು ಸಾಂಪ್ರದಾಯಿಕ, ಕಡಿಮೆ ವೆಚ್ಚದ ಮತ್ತು ಪರಿಸರ ಸ್ನೇಹಿ ದ್ರಾವಣಗಳ ಬಳಕೆಯ ಬಗ್ಗೆ ಅರಿವು ಮೂಡಿಸುವುದಾಗಿತ್ತು.
ಕಾರ್ಯಕ್ರಮದಲ್ಲಿ ಮೊದಲು ಬೋರ್ಡೋ ದ್ರಾವಣದ ತಯಾರಿಕಾ ವಿಧಾನವನ್ನು ಅಂತಿಮ ವರ್ಷದ ವಿದ್ಯಾರ್ಥಿಯಾದ ಚಂದನ್ ವಿವರಿಸಿದರು. ಕಾಪರ್ ಸಲ್ಫೇಟ್, ಸುಣ್ಣ (ಮಜ್ಜಿಗೆ) ಮತ್ತು ನೀರನ್ನು ನಿಗದಿತ ಪ್ರಮಾಣದಲ್ಲಿ ಬಳಸಿ ಹೇಗೆ ತಯಾರಿಸಬೇಕು, ಯಾವ ಎಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು, ಹಾಗೂ ಇದರ ಸಸ್ಯರಕ್ಷಣೆಯಲ್ಲಿ ಹೇಗೆ ಉಪಯೋಗಿಸಬಹುದು ಎಂಬುದನ್ನು ಹಂತ ಹಂತವಾಗಿ ಪ್ರಾತ್ಯಕ್ಷಿಕೆಯಲ್ಲಿ ವಿವರಿಸಿದರು. ಬೋರ್ಡೋ ದ್ರಾವಣವು ಫಂಗಸ್ ರೋಗಗಳಾದ ಕೊಳೆರೋಗ, ಎಲೆ ಚುಕ್ಕೆ ರೋಗ ಹಾಗೂ ಸುಣ್ಣ–ಮಿಶ್ರಿತ ದ್ರಾವಣದಿಂದ ಕಾಂಡದ ಕೊಳೆ ಮುಂತಾದವುಗಳನ್ನು ತಡೆಯಲು ಬಹಳ ಪರಿಣಾಮಕಾರಿ ಎಂದು ವಿವರಿಸಲಾಯಿತು. ಇದರ ಬಳಕೆ ಪರಿಸರ ಸ್ನೇಹಿಯಾಗಿದ್ದು, ಮಣ್ಣಿನ ಸೂಕ್ಷ್ಮಜೀವಿಗಳಿಗೆ ಹಾನಿ ಆಗುವುದಿಲ್ಲ ಎಂಬುದನ್ನೂ ವಿದ್ಯಾರ್ಥಿಗಳು ಹೇಳಿದರು.ವಿದ್ಯಾರ್ಥಿಗಳ ಪ್ರಯತ್ನವನ್ನು ಮೆಚ್ಚಿ, ಇಂತಹ ಕೃಷಿ ಜ್ಞಾನ ಕಾರ್ಯಕ್ರಮಗಳು ಮುಂದುವರಿಯಬೇಕೆಂದು ಹೇಳಿದರು.
ಈ ಕಾರ್ಯಕ್ರಮದ ಮೂಲಕ ಗ್ರಾಮೀಣ ರೈತರಿಗೆ ಸಾಂಪ್ರದಾಯಿಕ ರೋಗ ನಿವಾರಣಾ ತಂತ್ರಜ್ಞಾನಗಳ ಪ್ರಾಮುಖ್ಯತೆ, ಬೋರ್ಡೋ ದ್ರಾವಣದ ಸುರಕ್ಷಿತ ತಯಾರಿ ಮತ್ತು ಅದರ ಉಪಯೋಗದ ಕುರಿತು ಪ್ರಾಯೋಗಿಕ ಅರಿವು ನೀಡಲಾಯಿತು.










