ಬರಹ: ನವಜಾತ ಕಾರ್ಕಳ
ಮಳೆ ಬಿದ್ದು ಭೂಮಿ ತಂಪಾಗುತ್ತಿದ್ದಂತೆ ರಸ್ತೆ ಬದಿಗಳಲ್ಲಿ, ತೋಟ-ಗದ್ದೆಗಳ ಸಾಲಿನಲ್ಲಿ ಹಾಗೂ ಖಾಲಿ ಜಾಗಗಳಲ್ಲಿ ಅದೆಷ್ಟೋ ಗಿಡಗಳು ಹುಟ್ಟಿ ಅಚ್ಚರಿ ಮೂಡಿಸುತ್ತವೆ .ಇಲ್ಲಿ ಯಾರೂ ಬೀಜ ಬಿತ್ತವುದಿಲ್ಲ. ಗಿಡ ನೆಡುವುದಿಲ್ಲ. ಸ್ವಸಾಮರ್ಥ್ಯದಿಂದಲೇ ಬೆಳೆದು ಗಮನ ಸೆಳೆಯುತ್ತವೆ. ಮಳೆ ನಿಂತು ಬೇಸಿಗೆಯ ತಾಪ ಹೆಚ್ಚಾಗುತ್ತಿದ್ದಂತೆ ಕೆಲವು ಗಿಡಗಳು ತನ್ನ ಜೀವನ ಯಾತ್ರೆಯನ್ನು ಮುಗಿಸಿ ಸದ್ದಿಲ್ಲದೇ ಹೊರಟು ಹೋಗಿಯಾಗುತ್ತದೆ. ‘ಗುಮ್ಮಟೆ ಗಿಡ’ ಅಂತಹ ಅಲ್ಪಾಯುಷಿ ಸಸ್ಯಗಳ ಸಾಲಿನದು.
ಪ್ರಾದೇಶಿಕವಾಗಿ ಈ ಗಿಡಕ್ಕೆ ವೈವಿಧ್ಯಮಯ ಹೆಸರುಗಳಿವೆ. ಕೆಲವು ಭಾಗಗಳಲ್ಲಿ ಗೊಮ್ಮಟೆ ಹಣ್ಣಿನ ಗಿಡವಾದರೆ ಗುಮ್ಮಟೆ, ಅಜ್ಜಿ ಕುಡಿಕೆ ‘ಕುಪ್ಪಟೆ ಅಥವಾ ಗುಪ್ಪಟೆ ಗಿಡ, ಸೇರಿದಂತೆ ಬೇರೆ ಬೇರೆ ಸ್ಥಳೀಯವಾದ ಹೆಸರುಗಳಿವೆ. . ಮೆದುವಾದ ಹಸಿರೆಲೆಗಳ ನಡುವೆ, ನೇತಾಡುವ ಕುಡಿಕೆಗಳನ್ನು ನೋಡುವುದೇ ಚಂದ. ಗಿಡದ ಸೌಂದರ್ಯ ಅಡಗಿರುವುದೇ ಆ ಕುಡಿಕೆಗಳಲ್ಲಿ.

ಕಾಯಿಯಾಗಿದ್ದಾಗ ಹಸಿರು ಬಣ್ಣ. ಸಂಪೂರ್ಣವಾಗಿ ಹಣ್ಣಾದಾಗ ಮನಮೋಹಕ ಕಿತ್ತಳೆ ಅಥವಾ ಹಳದಿ ಬಣ್ಣಕ್ಕೆ ತಿರುಗುತ್ತದೆ. ತೆಳುವಾದ ಹೊರಕವಚವಾದ ಕುಡಿಕೆಯನ್ನು ಒಡೆದು ಒಳಗಿನ ಹಣ್ಣನ್ನು ತಿಂದಾಗ ಸಿಗುವ ಹುಳಿ-ಸಿಹಿ ಮತ್ತು ಸ್ವಲ್ಪ ಒಗರಿನ ರುಚಿ ಬಾಲ್ಯದ ನೆನಪುಗಳನ್ನು ಬಿಚ್ಚಿಡುತ್ತದೆ. ಕಾಡು ಗಿಡ ಅದರಲ್ಲಿರುವ ಕಾಯಿ ಹಣ್ಣು ಗಳನ್ನು ಕಳೆಗಳೆಂದು ಕಡೆಗಣಿಸುವಂತಿಲ್ಲ. ಒಂದಲ್ಲ ಒಂದು ರೀತಿಯ ಔಷಧೀಯ ಗುಣಗಳು ಆ ಗಿಡಗಳಲ್ಲಿರುತ್ತವೆ. ಅದರಂತೆ ಗುಮ್ಮಟೆ ಹಣ್ಣು ಮತ್ತು ಗಿಡದಲ್ಲಿಯೂ ಔಷಧೀಯ ಗುಣಗಳಿವೆ.
ಹಣ್ಣಿಲ್ಲರುವ ಜೀವ ಸತ್ವಗಳು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಬಲ್ಲವು. ಎಲೆ ಮತ್ತು ಬೇರುಗಳಲ್ಲಿ ಹಲವು ರೀತಿಯ ಔಷಧೀಯ ಗುಣಗಳಿದ್ದು,. ಸಂಪ್ರದಾಯಿಕ ಗಿಡಮೂಲಿಕಾ ವೈದ್ಯ ಪದ್ಧತಿಯಲ್ಲಿ ಇದರ ಬಳಕೆಯಿದೆ.

ಮಳೆ ಬಂದಾಗ ಸದ್ದಿಲ್ಲದೆ ಹುಟ್ಟಿ, ತನ್ನ ಸುಂದರ ಹಣ್ಣುಗಳಿಂದ ಗಮನ ಸೆಳೆದು ಸಾರ್ಥಕ್ಯ ಪಡೆಯುತ್ತದೆ. ಬೇಸಿಗೆಯ ಬಿಸಿಲಿಗೆ ಒಣಗಿ ಕಣ್ಮರೆಯಾಗುವ ಈ ಗಿಡ ಅಸ್ತಿತ್ವದಲ್ಲಿದ್ದಷ್ಟು ದಿನವೂ ಪ್ರಕೃತಿಗೆ ಮತ್ತು ಜೀವ ಸಂಕುಲಕ್ಕೆ ಅಮೂಲ್ಯವಾದ ಕೊಡುಗೆ ನೀಡುವ ಗುಮ್ಮಟೆ ಗಿಡ ಗ್ರಾಮೀಣ ಜೀವವೈವಿಧ್ಯದ ಭಾಗವಾಗಿದೆ









