ಬರಹ-ರಾಧಾಕೃಷ್ಣ ತೊಡಿಕಾನ
ಹಳ್ಳಿಯಲ್ಲಿದ್ದು ಮಾಡುವುದೇನು ಎಂಬ ಪ್ರಶ್ನೆ ಹಲವರದು. ಆದರೆ ಆಸಕ್ತಿ ಪರಿಶ್ರಮ ಹೊಸತನದ ಚಿಂತನೆಯಿದ್ದರೆ ತಾವು ಇರುವ ಪರಿಸರದಲ್ಲಿಯೇ ಸ್ವ ಉದ್ಯೋಗದ ದಾರಿಗಳು ಅನೇಕವಿದೆ. ಆಕಾಶ ನೋಡುತ್ತಾ ಅವಕಾಶಕ್ಕಾಗಿ ಕಾಯಬೇಕಾಗಿಲ್ಲ. ಮನಸ್ಸಿದ್ದರೆ ಅವಕಾಶದ ಬಾಗಿಲು ತೆರೆದು ಕೊಳ್ಳುತ್ತದೆ. ಕೃಷಿ ಉತ್ಪನ್ನ ಹಾಗೂ ಕಾಡುತ್ಪತ್ತಿ ಆಧಾರಿತ ಗೃಹ ಉದ್ಯಮಗಳು ಗ್ರಾಮೀಣ ಜನರ ಬದುಕನ್ನು ಆಧರಿಸಬಲ್ಲವು. ಗ್ರಾಮೀಣ ಭಾಗದಲ್ಲಿ ಆಹಾರ ಪದಾರ್ಥಗಳ ಸಂಸ್ಕರಣೆ ಮತ್ತು ಮೌಲ್ಯವರ್ಧನೆ ಮೂಲಕ ಕೃಷಿ ಉತ್ಪನ್ನಗಳಿಗೆ ಹೆಚ್ಚುವರಿ ಮೌಲ್ಯ ತಂದು ಯಶಸ್ಸು ಕಂಡ ಹಲವರಿದ್ದಾರೆ. ಇವರ ಕೈಗಳಿಗೆ ಸಿಗುವ ಹಣ್ಣು , ಕಾಯಿ ಮತ್ತು ಇತರ ಕೃಷಿ ಉತ್ಪನ್ನಗಳೆಲ್ಲವೂ ಹೊಸ ರೂಪದಲ್ಲಿ ಗ್ರಾಹಕರನ್ನು ತಲುಪುತ್ತದೆ.
ದಕ್ಷಿಣಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಕರ್ನಿರೆ ಗ್ರಾಮದ ನಿವಾಸಿ ಗಣೇಶ್ ಪ್ರಭು ಅವರು ಕೃಷಿ ಮತ್ತು ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ, ಜೇನು ಕೃಷಿ, ಗೃಹ ಉದ್ಯಮದ ಮೂಲಕ ಸ್ವ ಉದ್ಯೋಗದಲ್ಲಿ ಯಶಸ್ಸು ಕಂಡಿದ್ದಾರೆ. ಹಲಸು, ಮಾವು, ಹೆಬ್ಬಲಸು, ದಿವಿಹಲಸು, ಬಾಳೆದಿಂಡು, ಅತ್ತಿಕಾಯಿ, ಕರಂಡೆಕಾಯಿ ಮೊದಲಾದುವುಗಳನ್ನು ಮೌಲ್ಯವರ್ಧನೆ ಮಾಡಿ ಗ್ರಾಹಕರಿಗೆ ಪರಿಚಯಿಸುತ್ತಿದ್ದಾರೆ. ಹಲಸಿನಿಂದಲೇ ಹಲವು ಬಗೆಯ ಉತ್ಪನ್ನಗಳು. ಹಪ್ಪಳ, ಉಪ್ಪುಸೊಳೆ, ಉಂಡ್ಲಕಾಳು, ಮಾಂಬಳ, ಚಿಪ್ಸ್, ಸಂಡಿಗೆ ಮೊದಲಾದುವುಗಳಲ್ಲದೆ ಹಲಸಿನ ಬೀಜದ ಪುಡಿ ಮಿಶ್ರಿತ ಸಾಂಬಾರ್ ಪುಡಿ, ಕಷಾಯದ ಪುಡಿ ಅನೇಕ ಉತ್ಪನ್ನಗಳನ್ನು ಪರಿಚಯಿಸುತ್ತಿದ್ದಾರೆ. 20-25 ಕ್ಕೂ ಹೆಚ್ಚು ಬಗೆಯ ಹಪ್ಪಳ ತಯಾರಿಸುತ್ತಾದರೂ ಗ್ರಾಹಕರ ಬೇಡಿಕೆಯಿರುವ ಹಪ್ಪಳಕ್ಕೆ ಹೆಚ್ಚು ಆದ್ಯತೆ ನೀಡುತ್ತಾರೆ.
ಮಾವಿನ ಹಣ್ಣಿನ ಮಾಂಬಳ, ಮಾವಿನ ಉಪ್ಪಿನ ಕಾಯಿ, ಕರಂಡೆ ಉಪ್ಪಿನ ಕಾಯಿ, ಸಾಂಬರಿಗೂ ಅವಲಕ್ಕಿಗೂ ಬಳಸಬಲ್ಲ. ಸಾಂಬಾರು ಪುಡಿ, ಅರಸಿನ ಪುಡಿ, ಮಜ್ಜಿಗೆ ಮೆಣಸು ಸೇರಿದಂತೆ ಹಲವು ಉತ್ಪನ್ನಗಳನ್ನು ತಯಾರಿಸುತ್ತಿದ್ದಾರೆ. ಸಾಂಬಾರು ಪದಾರ್ಥಗಳಿಗೆ ವಿಶಿಷ್ಠ ರುಚಿ ನೀಡುವ ಉಂಡೆ ಹುಳಿ (ಕೆತ್ತೆ ಹುಳಿ)ಯನ್ನು ಮೌಲ್ಯ ವರ್ಧನೆ ಮಾಡುತ್ತಿದ್ದಾರೆ. ಈ ಸ್ವ ಉದ್ಯೋಗದಿಂದ ಕುಟುಂಬದ ಸದಸ್ಯರಿಗೆ ವರ್ಷಪೂರ್ತಿ ಕೈತುಂಬಾ ಕೆಲಸ.
ಗಣೇಶ ಪ್ರಭು ಅವರದು ಅವಿಭಕ್ತ ಕುಟುಂಬ. ಪತ್ನಿ ಶೈಲಾ ಪ್ರಭು, ಅತ್ತಿಗೆ ವಿದ್ಯಾಪ್ರಭು ಹಾಗೂ ಸಹೋದರರು, ಸೇರಿದಂತೆ ಮನೆಯ ಎಲ್ಲಾ ಸದಸ್ಯರ ಸಹಕಾರ ಯಶಸ್ಸಿನ ಹಿಂದಿದೆ
ಕೃಷಿಕ ಕುಟುಂಬವಾದುದರಿಂದ ಅಡಿಕೆ , ತೆಂಗು, ಬಾಳೆ, ಅನನಾಸು ಬೆಳೆಸುವುದರ ಜೊತೆಗೆ ಕೃಷಿಗೆ ಪೂರಕವಾಗಿ ದನ ಸಾಕಣೆಯಿದೆ. ಮನೆಯಲ್ಲಿ ದೊರೆಯುವ ಹಾಲು ಅಲ್ಲದೆ ಹೊರಗಿನಿಂದಲೂ ಹಾಲು ಖರೀದಿಸಿ ತುಪ್ಪ ತಯಾರಿಸುತ್ತಾರೆ. ಉತ್ತಮ ಗುಣಮಟ್ಟವನ್ನು ಕಾಯ್ದುಕೊಂಡಿರುವ ಕಾರಣದಿಂದ ತುಪ್ಪಕ್ಕೆ ಬೇಡಿಕೆಯಿದೆ. ಗ್ರಾಹಕರು ದರದ ಬಗ್ಗೆ ಚರ್ಚೆ ಮಾಡುವುದಿಲ್ಲ. ಇವರ ಉತ್ಪನ್ನಗಳು ಅಂಗಡಿಗಳಲ್ಲಿಯೂ ಲಭ್ಯವಿದೆ. ಆದರೆ ನೇರಾ ಮಾರಾಟಕ್ಕೆ ಹೆಚ್ಚು ಆದ್ಯತೆ ನೀಡುತ್ತಾರೆ. ಇದರಿಂದ ಗ್ರಾಹಕರ ನಿಕಟ ಸಂಪರ್ಕ ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ. ಎಂದು ಗಣೇಶ್ ಪ್ರಭು. ಹೇಳುತ್ತಾರೆ.
ಈ ಗೃಹ ಉದ್ಯಮಕ್ಕಿಂತ ಮೊದಲು ಗಿಡಗಳ ಕಸಿ ಕಟ್ಟುವುದು ಹಾಗೂ ನರ್ಸರಿ ನಿರ್ವಹಣೆಯಲ್ಲಿ ಆಸಕ್ತರಾಗಿದ್ದರು. ಆ ಕ್ಷೇತ್ರದಲ್ಲಿ ಪರಿಣಿತರಾಗಿದ್ದರೂ ಬೆನ್ನು ನೋವಿನ ಸಮಸ್ಯೆಯಿಂದ ನರ್ಸರಿಯನ್ನು ಬಿಟ್ಟು ಕೃಷಿ ಮತ್ತು ಮೌಲ್ಯ ವರ್ಧಿತ ಉತ್ಪನ್ನಗಳ ತಯಾರಿಯಲ್ಲಿ ತೊಡಗಿಕೊಂಡರು. ಈ ನಡುವೆ ಜೇನು ಕೃಷಿ ಕುತೂಹಲ ಹೆಚ್ಚಾಯಿತು.
ಜೇನು ಕೃಷಿ:
ಜೇನು ಕೃಷಿಯಲ್ಲಿ ತರಬೇತಿ ಪಡೆದ ಪ್ರಭು ಅವರು ಮೂರು ಜೇನು ಪೆಟ್ಟಿಗೆಯಿಂದ ಆರಂಭಿಸಿದ ಜೇನು ಕೃಷಿ ಈಗ ಹಲವು ಪೆಟ್ಟಿಗೆಗಳಿಗೆ ವಿಸ್ತರಿಸಿದ್ದಾರೆ. ಸ್ಥಳಾಂತರ ಜೇನು ಕೃಷಿ. ಅನುಸರಿಸುತ್ತಾರೆ. ಜೇನು ಸಾಕಣೆಯಿಂದ ತಮ್ಮ ಆದಾಯ ಹೆಚ್ಚುವುದರ ಜೊತೆಗೆ ಸುತ್ತಮುತ್ತಲಿನ ರೈತರಿಗೂ ಅನುಕೂಲವಾಗಿದೆ. ಜೇನುನೊಣಗಳ ಪರಾಗಸ್ಪರ್ಶದಿಂದ ಅಡಿಕೆ, ತೆಂಗು ಮತ್ತಿತರ ಬೆಳೆಗಳ ಇಳುವರಿ ಹೆಚ್ಚಳಕ್ಕೂ ಪೂರಕವಾಗಿದೆ. ಪ್ರಕೃತಿಗೆ ಉತ್ತಮ ಕೊಡುಗೆಯಾಗಿದೆ ಮಾಹಿತಿಗೆ 9449469520







