spot_img
Thursday, July 9, 2026
spot_imgspot_img

ನಗರದ ಉದ್ಯೋಗ ತೊರೆದು ಹಳ್ಳಿಯಲ್ಲಿ ನೈಸರ್ಗಿಕ ಕೃಷಿ ಮಾಡಿದ ದಂಪತಿಯ ಕತೆಯಿದು

ಬರಹ-»ರಾಧಾಕೃಷ್ಣ ತೊಡಿಕಾನ, »ಸೌಮ್ಯ ಗೌಡ ಮೈಸೂರು

ಸಾಂಪ್ರದಾಯಿಕ ಹಾಗೂ ರಾಸಾಯನಿಕ ಕೃಷಿಗೆ ಒಗ್ಗಿಕೊಂಡಿರುವ ಈ ದಿನಗಳಲ್ಲಿ, ಅಪರೂಪಕ್ಕೊಮ್ಮೆ ಕೆಲವರು ನೈಸರ್ಗಿಕ ಕೃಷಿಯತ್ತ ಮುಖ ಮಾಡಿ ಗಮನ ಸೆಳೆಯುತ್ತಾರೆ. “ನೈಸರ್ಗಿಕ ಕೃಷಿ ಲಾಭದಾಯಕವಲ್ಲ, ಇದರಿಂದ ಎಂತಹ ಫಸಲು ಪಡೆಯಲು ಸಾಧ್ಯ?” ಎಂಬ ಸಾರ್ವತ್ರಿಕ ನಂಬಿಕೆಯನ್ನು ಸುಳ್ಳು ಮಾಡಿದ ಅನೇಕ ನೈಸರ್ಗಿಕ ಕೃಷಿಕರಿದ್ದಾರೆ. ಅಂತಹ ನೈಸರ್ಗಿಕ ಕೃಷಿ ಮಾಡಿದ ದಂಪತಿಗಳ ಕತೆಯಿದು.

ನಗರದಿಂದ ಹಳ್ಳಿಗೆ:

ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದ ಲೋಕೇಶ್ ಮತ್ತು ಅವರ ಪತ್ನಿ ಸಂಗೀತಾ ಲೋಕೇಶ್ ಅವರಿಗೆ ಮೊದಲಿನಿಂದಲೂ ರಾಸಾಯನಿಕ ಮುಕ್ತ ನೈಸರ್ಗಿಕ ಕೃಷಿ ಮಾಡಬೇಕೆಂಬ ತೀವ್ರ ಆಸೆಯಿತ್ತು. ಇದಕ್ಕಾಗಿ ಅವರು ಈಗಾಗಲೇ ನೈಸರ್ಗಿಕ ಕೃಷಿಯಲ್ಲಿ ತೊಡಗಿಸಿಕೊಂಡಿದ್ದ ಹಲವು ಕೃಷಿಕರ ಕ್ಷೇತ್ರಗಳಿಗೆ ಭೇಟಿ ನೀಡಿ, ಪ್ರಾಯೋಗಿಕ ಅನುಭವಗಳನ್ನು ಪಡೆದುಕೊಂಡಿದ್ದರು. ಕರೋನಾ ಸಾಂಕ್ರಾಮಿಕದ ದಿನಗಳು ನಗರ ಜೀವನವನ್ನು ದುಃಸ್ತರಗೊಳಿಸಿದಾಗ, ಈ ದಂಪತಿಗಳು ತಮ್ಮ ಹಳ್ಳಿಗೆ ಮರಳಿ ನೈಸರ್ಗಿಕ ಕೃಷಿ ಪ್ರಯೋಗಕ್ಕೆ ಮುಂದಾದರು.

ಆರಂಭದಲ್ಲಿ ಈ ತೋಟವನ್ನು ನೋಡಿದ ನೆರೆಹೊರೆಯವರು ಮತ್ತು ಕೆಲಸಗಾರರು, “ಇದೇನು ಕಳೆ ತುಂಬಿದ ತೋಟ, ಇದರಿಂದೇನು ಬೆಳೆ ಸಿಗುತ್ತದೆ?” ಎಂದು ಆಶ್ಚರ್ಯ ಪಟ್ಟಿದ್ದರು. ಆದರೆ, ಲೋಕೇಶ್ ಅವರಿಗೆ ಇದು ಕಳೆ ತುಂಬಿದ ತೋಟವಲ್ಲ, ಇದು ‘ಬಹುಸ್ತರ’ ಬೆಳೆಗಳ ಸಮ್ಮಿಲನ! ಬರೀ ಕೃಷಿ ಪದ್ಧತಿಯಲ್ಲ; ಪ್ರಕೃತಿಯೊಂದಿಗಿನ ಅನುಸಂಧಾನದ ಬದುಕು.

ಮೈಸೂರು ಜಿಲ್ಲೆಯ ಟಿ.ನರಸಿಪುರ ತಾಲೂಕಿನ ಹೊರಳಹಳ್ಳಿಯಲ್ಲಿರುವ ಇವರ ‘ಗೌರಿವನ’ ತೋಟದಲ್ಲಿ ಏಕಬೆಳೆ ಪದ್ಧತಿ ಬದಲಿಗೆ ಪ್ರಕೃತಿದತ್ತವಾದ ಬಹುಸ್ತರ ಬೆಳೆ ಪದ್ಧತಿ ಅಳವಡಿಸಿಕೊಂಡಿದ್ದಾರೆ. ಇಲ್ಲಿ ತೆಂಗು, ಅಡಿಕೆ, ಬೆಣ್ಣೆಹಣ್ಣು (ಅವಕಾಡೊ), ಕೊಕ್ಕೋ, ಕಾಳುಮೆಣಸು ಬಾಳೆ, ಮಾವು, ನೇರಳೆ ಸೇರಿದಂತೆ ಹಲವು ಬಗೆಯ ಬೆಳೆಗಳು ಒಂದಕ್ಕೊಂದು ಪೂರಕವಾಗಿ ಬೆಳೆಯುತ್ತಿವೆ. ಗಿಡಗಳ ಬೆಳವಣಿಗೆಯಾಗಲಿ, ರೋಗ ನಿಯಂತ್ರಣವಾಗಲಿ ಎಲ್ಲವೂ ಇಲ್ಲಿ ನೈಸರ್ಗಿಕವಾಗಿಯೇ ನಡೆಯುತ್ತದೆ. ಸುಭಾಷ್ ಪಾಳೇಕರ್ ಅವರ ಪಂಚ ತರಂಗಿಣಿಯ ಮಾದರಿಯನ್ನು ಅನುಸರಿಸಿದ್ದಾರೆ. ಅರಸಿನ ಕೃಷಿ ಮಾಡುವುದಲ್ಲದೆ ಕಾಪರ್ ಏಂಟೆನಾ ಮಾದರಿ ಪ್ರಯೋಗಿಸುವ ಯೋಜನೆ ಅವರದು. ಪರಾಗಸ್ಪರ್ಶಕ್ಕೆ ಅನುಕೂಲವಾಗುವಂತೆ ಜೇನು ಕೃಷಿ ಅಳವಡಿಸಿಕೊಂಡಿದ್ದಾರೆ.

ಜೀವಜಲ ರಕ್ಷಣೆ ಮತ್ತು ಮಳೆನೀರು ಕೊಯ್ಲು

ಸಾಂಪ್ರದಾಯಿಕ ಕೃಷಿಗೆ ನೀರಿನ ಪ್ರಮಾಣ ಹೆಚ್ಚು ಬೇಕು, ಆದರೆ ನೈಸರ್ಗಿಕ ಕೃಷಿಗೆ ಕಡಿಮೆ ಪ್ರಮಾಣದ ನೀರು ಸಾಕು. ಭೂಮಿಯ ತೇವಾಂಶವನ್ನು ಕಾಯ್ದುಕೊಳ್ಳುವ ಪ್ರಕೃತಿಯ ಸಾಮರ್ಥ್ಯವೇ ಇಲ್ಲಿ ಗಿಡಗಳನ್ನು ಬೆಳೆಸುತ್ತದೆ. ಇವರ ಸುತ್ತಮುತ್ತಲಿನ ತೋಟಗಳ ಕೊಳವೆಬಾವಿಗಳು 7೦೦ಅಡಿ ಆಳಕ್ಕೆ ಹೋಗಿದ್ದರೂ, ಲೋಕೇಶ್ ಅವರ ತೋಟದಲ್ಲಿ ಕೇವಲ 120 ಅಡಿಗಳಲ್ಲೇ ನೀರು ಲಭ್ಯವಾಗಿದೆ.

ಇದಕ್ಕೆ ಕಾರಣ ಅವರು ಅಳವಡಿಸಿಕೊಂಡಿರುವ ಮಳೆನೀರು ಕೊಯ್ಲು ಪದ್ಧತಿ. ತೋಟದ ಮಳೆನೀರು ಹೊರಗೆ ಹರಿದು ಹೋಗದಂತೆ ಸಣ್ಣ ಸಣ್ಣ ಕಾಲುವೆ ಮತ್ತು ತೋಡುಗಳನ್ನು ನಿರ್ಮಿಸಿ ಕೊಳವೆ ಬಾವಿಗೆ ಮರುಪೂರಣ ಮಾಡಿ ನೀರನ್ನು ಭೂಮಿಗೆ ಇಂಗಿಸಿದ್ದಾರೆ. ಜಮೀನಿನ ಸುತ್ತಲೂ ನೈಸರ್ಗಿಕವಾಗಿ ಗೊಬ್ಬರ ನೀಡುವ ಗಿಡಗಳನ್ನು ನೆಟ್ಟಿದ್ದಾರೆ. ತೋಟದ ಕಳೆಗಳನ್ನು ಕಿತ್ತು ಎಸೆಯದೆ, ಅಲ್ಲೇ ಕೊಳೆಯಲು ಬಿಟ್ಟು ಗಿಡಗಳಿಗೆ ಆಹಾರವಾಗಿಸಿದ್ದಾರೆ.

ಸಾರಜನಕಕ್ಕಾಗಿ ‘ಅಗಸೆ ‘ ಕೃಷಿ

ಮಣ್ಣಿಗೆ ಅಗತ್ಯವಿರುವ ಸಾರಜನಕದ ((Nitrogen) ಪೂರೈಕೆಗಾಗಿ ಲೋಕೇಶ್ ತಮ್ಮ ತೋಟದಲ್ಲಿ ಸುಮಾರು 4೦೦ ಅಗಸೆ ಗಿಡಗಳನ್ನು ಬೆಳೆಸಿದ್ದಾರೆ. ಅಗಸೆ ಕೃಷಿ ಕೇವಲ ಲಾಭಕ್ಕಾಗಿ ಅಲ್ಲದಿದ್ದರೂ, ಅದರ ಬೀಜ ಮತ್ತು ಸೊಪ್ಪು ಮಣ್ಣಿನ ಫಲವತ್ತತೆಗೆ ವರದಾನ. ಇಲ್ಲಿ ಬೆಳೆಯುವ ಅಗಸೆ ಬೀಜವನ್ನು ಸಂಸ್ಕರಿಸಿ 1 ಕೆಜಿ, ಅರ್ಧ ಕೆಜಿ ಪ್ಯಾಕೆಟ್‌ಗಳನ್ನಾಗಿ ಮಾಡಿ ಕರ್ನಾಟಕದಾದ್ಯಂತ ಹಾಗೂ ತಮಿಳುನಾಡು ಸೇರಿದಂತೆ ಹೊರರಾಜ್ಯಗಳಿಗೂ ಕೊರಿಯರ್ ಮೂಲಕ ಮಾರಾಟ ಮಾಡುತ್ತಾ ಉಪ ಆದಾಯವನ್ನೂ ಗಳಿಸುತ್ತಿದ್ದಾರೆ.

ಬಾಳೆಯಿಂದ ‘ಪೊಟ್ಯಾಶ್’ ಗೊಬ್ಬರ!

ಬಾಳೆಯನ್ನು ಕೇವಲ ವಾಣಿಜ್ಯ ಉದ್ದೇಶ ಅಥವಾ ಹಣ್ಣಿಗಾಗಿ ಮಾತ್ರ ಇವರು ಬೆಳೆಸುತ್ತಿಲ್ಲ. ತೋಟಕ್ಕೆ ಬೇಕಾಗುವ ಪೊಟ್ಯಾಶ್ (Potash) ಗೊಬ್ಬರವನ್ನು ಬಾಳೆಯಿಂದಲೇ ತಯಾರಿಸುತ್ತಾರೆ. ಬಾಳೆ ಗಿಡದ ದಿಂಡುಗಳನ್ನು ಸಣ್ಣದಾಗಿ ತುಂಡರಿಸಿ, ಡ್ರಮ್‌ಗಳಲ್ಲಿ ಹಾಕಿ ಕೊಳೆಯಲು ಬಿಡುತ್ತಾರೆ. ನಂತರ ಆ ದ್ರಾವಣಕ್ಕೆ ನೀರು ಸೇರಿಸಿ ಗಿಡಗಳಿಗೆ ಹರಿಸುತ್ತಾರೆ. ಇದಲ್ಲದೆ ದೇಶಿ ತಳಿಯ ಹಸುವಿನ ಸಗಣಿ ಮತ್ತು ಗಂಜಲವನ್ನು ಬಳಸಿ ‘ಜೀವಾಮೃತ’ ತಯಾರಿಸಿ ಗಿಡಗಳಿಗೆ ಉಣಿಸುತ್ತಾರೆ.

ಇವರ ನೈಸರ್ಗಿಕ ಕೃಷಿ ಪ್ರಯೋಗಕ್ಕೆ 5 ವರ್ಷ ತುಂಬಿದ್ದು, ತೋಟದಲ್ಲಿ ಫಸಲು ಆರಂಭವಾಗಿದೆ. ಕೃಷಿಯಲ್ಲೇ ನೆಮ್ಮದಿ ಕಂಡುಕೊಂಡಿರುವ ಲೋಕೇಶ್ ಈಗ ಪೂರ್ಣ ಸಮಯವನ್ನು ತೋಟದಲ್ಲೇ ಕಳೆಯುತ್ತಾರೆ.

ಗೌರವ ಪರಸ್ಕಾರ

ಇವರ ಸಾಧನೆಯನ್ನು ಗುರುತಿಸಿ ಕೃಷಿ ಮತ್ತು ತೋಟಗಾರಿಕೆ ಇಲಾಖೆಯಿಂದ 2024-25 ರಲ್ಲಿ ಟಿ. ನರಸಿಪುರ ತಾಲೂಕು ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿ ಹಾಗೂ 2025-2006 ರಲ್ಲಿ ಮೈಸೂರು ಜಿಲ್ಲಾ ಮಟ್ಟದ ನೈಸರ್ಗಿಕ ಕೃಷಿಕ ಪ್ರಶಸ್ತಿ ನೀಡಿ ಗೌರವಿಸಿದೆ. ಭೂಮಿಯು ನಮ್ಮ ಅವಶ್ಯಕತೆಗಳನ್ನು ಪೂರೈಸಬಲ್ಲದು. ಆದರೆ ದುರಾಸೆಗಳನ್ನಲ್ಲ. ನೈಸರ್ಗಿಕ ಕೃಷಿ ನಮ್ಮ ಅಗತ್ಯಗಳನ್ನು ಈಡೇರಿಸುತ್ತಿದೆ. ಅದು ತೃಪ್ತಿಯನ್ನು ತಂದಿದೆ ಎನ್ನುತ್ತಾರೆ ಲೋಕೇಶ್

ಮೊ.9844283009

 

 

ಸಂಬಂಧಿತ ಲೇಖನಗಳು

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group