spot_img
Wednesday, July 1, 2026
spot_imgspot_img

ಮನೆಯಲ್ಲೇ ಬೆಳೆಯಿರಿ ಶುದ್ಧ ಸಹಜ ತರಕಾರಿ: ಹಿರಿಯರಾದ ಎಂ.ಟಿ.ಶಾಂಟಿಮೂಲೆ ಅವರ ಈ ಕೃಷಿಮಾತುಗಳನ್ನು ನೀವು ಓದಲೇಬೇಕು!

-ಎಂ.ಟಿ. ಶಾಂತಿಮೂಲೆ ಪೈಲಾರು

ಆರೋಗ್ಯಕರ ಆಹಾರ ಸೇವನೆಯಿಂದ ಆಸ್ಪತ್ರೆಯ ಒಡನಾಟ ಕಡಿಮೆ ಮಾಡಬಹುದು. ಎಲ್ಲಾ ಜನಕ್ಕೂ ಆಹಾರ ಪೂರೈಸುವಷ್ಟು ರೈತಾಪಿ ಜನ ಇಂದೂ ದೇಶದಲ್ಲಿದ್ದಾರೆ. ಇತರೆ ಕೆಲಸಗಳ ಸೆಳೆತ ಹೆಚ್ಚಾಗಿ ಹಳ್ಳಿಗಳು ವೃದ್ಧಾಶ್ರಮಗಳಾಗಿ ತಲೆಯೆತ್ತಿವೆ. ಯಾಂತ್ರಿಕೃತ ಕೃಷಿಯನ್ನು ನೆಚ್ಚಿ ಬದುಕುವ ರೈತರೇ ಹೆಚ್ಚಾಗಿ ಆಹಾರ ಬೆಳೆಯುತ್ತಿದ್ದಾರೆ. ಇವರೆಲ್ಲಾ ಆಧುನಿಕ ರಾಸಾಯಿನಿಕ ಕೃಷಿಯನ್ನು ಅವಲಂಬಿತರು. ಇವರಿಗೆ ಸಾವಯವದ ಹೆಸರೇ ಬೆಟ್ಟದಷ್ಟು ದೂರ.

ಕೆಲ ಮಂದಿ ಹಳ್ಳಿಗೆರೇ ಪ್ರಶ್ನಿಸುತ್ತಾರೆ- ನಮಗೆ ತರಕಾರಿ ಬೆಳೆಯಲಾಗುತ್ತಿಲ್ಲ. ಇನ್ನು ಆಹಾರ ಬೆಳೆ ಬೆಳೆಯುವುದು ಹೇಗೆ?.. ಮನಸ್ಸಿದ್ದರೆ ಮಾರ್ಗವಿದೆ. ಇದು ಸಾರ್ವಕಾಲಿಕ ಸತ್ಯ. ಕನಿಷ್ಠ ತರಕಾರಿಯನ್ನಾದರೂ ಬೆಳೆದು ನಮ್ಮ ದೈನಂದಿನ ಖರ್ಚಿಗೆ ಬೇಕಾದುದನ್ನು ಹೊಂದಿಸಿಕೊಳ್ಳಲು ಸಾಧ್ಯವಿದೆ. ಮಳೆಗಾಲದಲ್ಲಿ ಅಂಗಳದ ಮೂಲೆಗಳಲ್ಲಿ ಸಾಲಾಗಿ ಮಣ್ಣು ಗೊಬ್ಬರ ಸುಡು ಮಣ್ಣು ಹಾಕಿ ಬೀಜ ಬಿತ್ತಿದರೆ ಅದರಷ್ಟಕ್ಕೆ ತರಕಾರಿ ಉತ್ಪಾದನೆಯಾಗುತ್ತದೆ. ಪುಳಹುಪ್ಪಟ್ಟೆ ಬಾರದಂತೆ ಬೂದಿ ಸಿಂಪಡಿಸಿದರೆ ಸಾಕು. ಬೇಸಗೆಯಲ್ಲಿ ಪ್ಲಾಸ್ಟಿಕ್ ಗೋಣಿ ಚೀಲಗಳಲ್ಲಿ ಮಣ್ಣು ಗೊಬ್ಬರ ಹಾಕಿ ಬೀಜ ಬಿತ್ತಿ ದಿನಾ ನೀರು ಸಿಂಪಡಿಸಿದರೆ ಸಾಕು.”ಅತಿ ಸರ್ವತ್ರ ವರ್ಜಯೇತ್” ಗಾದೆ ಮಾತಿನಂತೆ ಹೆಚ್ಚು ನೀರು ಬೇಕಿಲ್ಲ. ಗೊಬ್ಬರವೂ ಬೇಕಿಲ್ಲ. ತೇವಾಂಶ ಆರದಂತೆ ನೋಡಿಕೊಂಡರೆ ಸಾಕು.

ಇದನ್ನು ಗಮನಿಸಿ:

ತರಕಾರಿ ಬೆಳೆಯಲು ಬೀಜ ಸಂರಕ್ಷಣೆ ಅತೀ ಮುಖ್ಯ. ಆರಂಭದಲ್ಲಿ ಬಂದ ಬೆಳೆಯ ಬೀಜಗಳನ್ನು ನಾವೇ ರಕ್ಷಿಸಬೇಕು. ಆಗ ಬೀಜಕ್ಕೆ ತಡಕಾಡುವ ಕೆಲಸವಿಲ್ಲ. ಮುಂದಿನ ಬೆಳೆಗೆ ಅದುವೇ ಶ್ರೀರಕ್ಷೆ. ಒಣಗಿಸಿದ ತರಕಾರಿ ಬೀಜಗಳನ್ನು ಬೂದಿ ಮಿಶ್ರ ಮಾಡಿ ಪ್ಲಾಸ್ಟಿಕ್ ಕರಡಿಗೆಯಲ್ಲಿ ಹಾಕಿ ಭದ್ರ ಪಡಿಸಿದರೆ ಸಾಕು.  ಬೇಕಾದಾಗ ಉಪಯೋಗಿಸಬಹುದು.

ಗೊಬ್ಬರಕ್ಕೆ ಏನು ಮಾಡಬಹುದು? ಇದು ಕೆಲವರ ಪ್ರಶ್ನೆ-ಉತ್ತರ ಬಹಳ ಸುಲಭ! ನಮ್ಮ ಪರಿಸರ ಸ್ವಚ್ಛವಾಗಿರುವುದು ಆರೋಗ್ಯದ ದೃಷ್ಟಿಯಿಂದ ಅತಿ ಅಗತ್ಯದ ವಿಚಾರ. ಅಂಗಳದ ಸುತ್ತಮುತ್ತ ಗುಡಿಸಿದ ಕಸವನ್ನೆಲ್ಲ ಒಟ್ಟುಗೂಡಿಸಿ ಸಗಣಿ ನೀರು ಸಿಂಪಡಿಸಿ ಕಂಪೋಸ್ಟ್ ಗೊಬ್ಬರ ತಯಾರಿಸಿದರೆ ಸಾಕು. ಸಾಧ್ಯವಿದ್ದರೆ ಎರೆಹುಳ ಗೊಬ್ಬರ ತೊಟ್ಟಿಗಳಲ್ಲಿ, ಪ್ಲಾಸ್ಟಿಕ್ ಬಕೇಟ್ಗಳಲ್ಲಿ ತಯಾರಿಸಿದರೆ ಮುಗಿಯಿತು. ಇದಕ್ಕೆ ವಯಸ್ಸಿನ ಅಂತರವಿಲ್ಲ ಯಾರು ಮಾಡಬಹುದು. ಸಾಧ್ಯವಿದ್ದರೆ ಹಾಲೋ ಬ್ಲಾಕ್ಸ್ ತೊಟ್ಟಿಗಳನ್ನು ರಚಿಸಿ ದೊಡ್ಡ ಪ್ರಮಾಣದ ಗೊಬ್ಬರ ತಯಾರಿ ಮಾಡಬಹುದು. ಹೆಚ್ಚಾದರೆ ಮಾರಾಟ ಮಾಡಿ ಹಣ ಗಳಿಸಬಹುದು. ಅಂಗಡಿಗಳಲ್ಲಿ ಸಿಗುವ ಹರಳಿನ ಹಿಂಡಿ ತಂದು ಮಣ್ಣಿಗೆ ಬೆರೆಸಿ ಹಾಕಬಹುದು. ಹರಳಿನ ಹಿಂಡಿಯಿAದ ಉತ್ಕೃಷ್ಟ ಬೆಳೆ ತೆಗೆಯಲು ಸಾಧ್ಯ. ಇದು ನನ್ನ ಅನುಭವದ ಮಾತು.

ನಾನು 82 ರ ವೃದ್ಧ ಪಿತಾಮಹ. ಮನೆ ಖರ್ಚಿಗೆ ಶೇಕಡ 9೦ರಷ್ಟು ತರಕಾರಿ ಬೆಳೆಯುತ್ತೇನೆ. ಕುಂಬಳ ಸಿಹಿಗುಂಬಳ, ಅಲಸಂಡೆ, ಬದನೆ, ಹಸಿಮೆಣಸಿನಕಾಯಿ ಮೊದಲಾದುವು ಬೆಳೆಯುತ್ತೇನೆ. ಮೆಣಸಿನ ವೈವಿಧ್ಯ ತಳಿಗಳು ನನ್ನಲ್ಲಿವೆ. ಗಾಂಧಾರಿ ಮೆಣಸಿನ ಹೊಸ ತಳಿಗಳನ್ನು ಸೃಷ್ಟಿಸಿದ್ದೇನೆ. ಬೀಜಗಳು ಲಭ್ಯವಿದೆ. ಆಸಕ್ತರು ಬಂದು ನೋಡಿ ಸಂಗ್ರಹಿಸಿ ಬೆಳೆಯಬಹುದು.

ಸ್ವಾವಲಂಬಿಗಳಾಗೋಣ:

ಕೃಷಿಕ ಸ್ವಾವಲಂಬಿಯಾಗಿ ಬೆಳೆ ಬೆಳೆದರೆ ಅದು ಲಾಭದಾಯಕ. ವಿವಿಧ ರೀತಿಯ ತರಕಾರಿ ಬೆಳೆಗಳು ಅದರಲ್ಲೂ ಗಡ್ಡೆ ಗೆಣಸುಗಳು ಬಹು ವಾರ್ಷಿಕಗಳು. ಮುಂಡಿ ಮುಂಡಿಕೆಸು ತುರಿಕೆ ಇಲ್ಲದ ಕೇಸು ಬೆಳೆಯುತ್ತೇನೆ. ಬೇಕಾದಾಗ ಕಿತ್ತು ಉಪಯೋಗಿಸುತ್ತೇನೆ. ಭತ್ತ ಮಾತ್ರ ಬೆಳೆಯಲಾಗುತ್ತಿಲ್ಲ. ಮಂಗಗಳ ಕಾಟ. ಹೀಗಾಗಿ ಊಟದ ಅಕ್ಕಿ ಮಾತ್ರ ಬೇಟೆಯಿಂದ ತರುವುದು ಅನಿವಾರ್ಯ. ಇರುವ ಜಾಗದಲ್ಲಿ ಮಳೆಗಾಲ ಬಂದರೆ ಹಾಗಲ ಬೆಳೆಯುತ್ತೇನೆ. ಅದು ಮಂಗಗಳಿಗೆ ಅಪಥ್ಯ. ತರಕಾರಿಗೆ ಹೆಚ್ಚು ಬಿಸಿಲು ಇದ್ದರೆ ಒಳ್ಳೆಯದು. ಗಡ್ಡ ಗೆಣಸುಗಳು ನೆರಳಲ್ಲೂ ಬೆಳೆಯುತ್ತವೆ.

ಒಂದೆರಡು ಪುನರ್ಪುಳಿ ಮರ ಬೆಳೆದು ನೋಡಿ- ಹಣ್ಣು ಜ್ಯೂಸು, ಸಾರು ಮಾಡಲು ಉಪಯೋಗ. ಒಣಗಿಸಿ ಇಟ್ಟುಕೊಂಡರೆ ಸಾರ್ವಕಾಲಿಕ ಉಪಯೋಗವಿದೆ. ಹರಿವೆ, ಒಂದೆಲಗ, ಸೊಪ್ಪು ತರಕಾರಿ ಬೆಳೆದರೆ ಆರೋಗ್ಯಕ್ಕೆ ಒಳ್ಳೆಯ ಸಸ್ಯಗಳು.ಒಂದೆಲಗ ರಕ್ತದೊತ್ತಡ ನಿಯಂತ್ರಿಸುವ ಬಲ್ರಳಿ ತರಕಾರಿ. ನನ್ನ ಮನೆಯ ಸುತ್ತಮುತ್ತ ಹೇರಳವಾಗಿ ಬೆಳೆದಿದೆ. ಬೇಕಾದಾಗ ಉಪಯೋಗಕ್ಕೆ ಸಿಗುವ ಎಲೆ ತರಕಾರಿ. ಹರಿವೆ ಕಬ್ಬಿಣದ ಅಂಶ ಪೂರೈಸುವ ಗಿಡ. ನಾವು ಬೆಳೆಯುವ ತರಕಾರಿಗಳು ಔಷಧಿಯುಕ್ತವಾಗಿದ್ದರೆ ವೈದ್ಯರ ಚೀಟಿಗೆ ವಿದಾಯ.

ಸ್ವಾವಲಂಬಿ ರೈತ ದೇಶದ ಆಸ್ತಿ. ಸ್ವಚ್ಛ ಭಾರತ ಎಂದೆಲ್ಲ ಘೋಷಣೆ ಕೂಗಿದರೆ ಸಾಕೆ- ಸಾಧಿಸಿ ತೋರಿಸಬೇಕು. ನಮ್ಮ ಶಾಲೆಗಳಲ್ಲಿ ಮಕ್ಕಳಿಗೆ ತರಕಾರಿ ಬೆಳೆಯಲು ಶಿಕ್ಷಕರು ಪ್ರೋತ್ಸಾಹಿಸಬೇಕು. ಶಾಲಾ ಕೈತೋಟ ನಿರ್ಮಿಸಿ ಮಕ್ಕಳಿಂದಲೇ ತರಕಾರಿ ಬೆಳೆಸಿ ಬಿಸಿ ಊಟಕ್ಕೆ ಉಪಯೋಗಿಸಬಹುದು. ಕೆಲ ಶಾಲೆಗಳಲ್ಲಿ ಇಂತಹ ಪ್ರಯತ್ನ ಮಾಡಿ ಯಶಸ್ಸು ಕಂಡಿದ್ದಾರೆ.

ನಾನು ಮಾಜಿ ಶಿಕ್ಷಕ. ಶಾಲೆಯಲ್ಲಿ ಪ್ರೌಢಶಾಲೆಯ ಮಕ್ಕಳಿಂದಲೇ ತರಕಾರಿ ಬೆಳೆಸಿದ್ದೆ. ಆಗ ಬಿಸಿಯೂಟ ಇರಲಿಲ್ಲ. ಇದು 24 ವರ್ಷಗಳ ಹಿಂದೆ. ಬೆಳೆಯನ್ನು ಏಲಂ ಮಾಡಿ ಬಂದ ಹಣದಿಂದ ಆಗಸ್ಟ್ 15, ಜನವರಿ 26ರ ಶಾಲಾ ಹಬ್ಬದ ದಿನ ಅವರಿಗೆ ಸಿಹಿ ಹಂಚಲು ಹಣ ಉಪಯೋಗಿಸಿದ್ದೆ. “ಕೆರೆಯ ನೀರನ್ನು ಕೆರೆಗೆ ಚೆಲ್ಲಿ” ಎಂಬಂತೆ. ಅದು ಮಕ್ಕಳಿಗೂ ಒಂದು ತರಹದ ಖುಷಿ. ನಾವೇ ಬೆಳೆದ ತರಕಾರಿ, ಸಿಕ್ಕಿದ ಹಣ ನಾವೇ ಹಂಚಿಕೊಂಡು ತಿಂದಿದ್ದೇವೆ ಎನ್ನುವ ಮನೋಭಾವ ಸಂತಸ ಅವರಲ್ಲಿ ಇರುತ್ತದೆ.

ಮಕ್ಕಳಿಗೆ ಎಲ್ಲಾ ವಿಷಯಗಳನ್ನು ಕಲಿಸಿದರೆ ಅವರು ಸ್ವಾವಲಂಬಿಗಳಾಗಿ ಬೆಳೆದು ದೇಶದ ಹೊರೆ ಕಡಿಮೆಯಾಗುತ್ತದೆ. ಅಡಿಪಾಯ ಗಟ್ಟಿಯಾಗಿದ್ದರೆ ಕಟ್ಟಡ ಸುಸ್ಥಿತಿಯಲ್ಲಿರುತ್ತದೆ. “ಮನೆಯೇ ಮಗುವಿಗೆ ಮೊದಲ ಪಾಠ ಶಾಲೆ” ಹಿರಿಯರು ನಡೆದ ದಾರಿಯಲ್ಲೇ ಮಕ್ಕಳು ಸಾಗುತ್ತಾರೆ. ಒಳ್ಳೆಯ ಸಂಸ್ಕಾರ ಮಗುವಿಗೆ ಮುಖ್ಯವಾಗಿ ಸಿಗುವಂತೆ ಹಿರಿಯರು ನಡೆದು ಆಚರಿಸಿ ತೋರಿಸಿ ಮಕ್ಕಳನ್ನು ಬೆಳೆಸೋಣ. ಇಂದಿನ ಮಕ್ಕಳೇ ಮುಂದಿನ ಜನಾಂಗವಲ್ಲವೇ?

-ಮಾಹಿತಿಗಾಗಿ ಸಂಪರ್ಕಿಸಿ: ಮೊ.9901722681

ಸಂಬಂಧಿತ ಲೇಖನಗಳು

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group