– ರಾಧಾಕೃಷ್ಣ ತೊಡಿಕಾನ
ಭಾರತೀಯ ಸಂಸ್ಕೃತಿ, ಪರಂಪರೆಯಲ್ಲಿ ಅಡಿಕೆಗೆ ಮಹತ್ವದ ಸ್ಥಾನವಿದೆ. ಮೌಲ್ಯವಿದೆ. ಔಷಧೀಯ ಗುಣವಿದೆ, ಸುಗಂಧ ದ್ರವ್ಯ, ಬಣ್ಣ ತಯಾರಿ ಮೊದಲಾದವುಗಳಲ್ಲಿ ಬಳಕೆಯಿದೆ. ಹಲವಾರು ಮಂದಿ ಅಡಿಕೆ ಉಪಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸಿದ್ದಾರೆ. ಅಡಿಕೆೆ ಜಗಿದು ಉಗಿಯುವುದಕ್ಕೆ ಮಾತ್ರ ಸೀಮಿತವಾದುದ್ದಲ್ಲ. ಜಗಿದು ಉಗಿದರೂ ಬಾಯಿಯ ವಾಸನೆ, ಹಲ್ಲು ಹುಳುಕು ಮೊದಲಾದುವುಗಳನ್ನು ದೂರವಾಗಿಸುವ ಗುಣವಿರುವುದು ಬಲ್ಲರು
ಅಡಿಕೆಯ ಮಾನತೆಗೆಯುವ ಪ್ರಯತ್ನಗಳು ನಿರಂತರ ನಡೆದರೂ ಪ್ರಯೋಗಶೀಲ ಕೃಷಿಕರು, ವಿಜ್ಞಾನಿಗಳು, ಸಂಶೋಧನೆಯನ್ನು ನಡೆಸುತ್ತಲೇ ಬಂದಿದ್ದಾರೆ. ಆ ಪ್ರಯತ್ನ ಪ್ರಯೋಗಗಳಿಂದ ಅಡಿಕೆ ಆಹಾರವೂ, ಔಷಧಿಯೂ ಆಗುತ್ತಿರುವುದು ಸಮಾಧಾನಕರ ವಿಷಯ. ಹಿಂದೆ ಎಲೆಯಡಿಕೆ ಸೇವನೆ ಸಾಮಾನ್ಯವಾಗಿತ್ತು. ಎಲೆಯಡಿಕೆ ಸೇವನೆ ಬಾಯಿಯ ಆರೋಗ್ಯ ವರ್ಧನೆಗೆ ಸಹಕಾರಿ ಎಂಬುದನ್ನು ಜನಪದರು ನಂಬಿದ್ದರು. ಆದರೆ ಅದರ ವೈಜ್ಞಾನಿಕವಾದ ಕಾರಣ ತಿಳಿದುಕೊಂಡವರಲ್ಲ.
ಅಡಿಕೆಯಲ್ಲಿ ಬಾಯಿಯ ದುರ್ವಾಸನೆ, ವಸಡು ಮತ್ತು ಹಲ್ಲು ಹುಳುಕು ಸೇರಿದಂತೆ ಬಾಯಿಗೆ ಸಂಬಂಧಿಸಿದ ಕೆಲವು ಸಮಸ್ಯೆಗಳನ್ನು ನಿವಾರಿಸುವ ಗುಣವಿರುವುದಾಗಿ ವೈಜ್ಞಾನಿಕ ಸಂಶೋಧನೆಗಳು ಈಗಾಗಲೇ ಹೇಳಿವೆ. ಸಂಶೋಧನೆಗಳನ್ನು ಆಧಾರವಾಗಿರಿಸಿಕೊಂಡು ತಣ್ಣೀರುಪಂತದ ವಿಶ್ವೇಶ್ವರ ಭಟ್ ಅವರು ಅಡಿಕೆಯ ಮೌತ್‌ವಾಶ್ ತಯಾರಿಸುವ ಉದ್ಯಮಕ್ಕೆ ಕೈಯಿಕ್ಕಿದ್ದಾರೆ.
ವಿಶ್ವೇಶ್ವರ ಭಟ್ ಅವರು ಕಂಪ್ಯೂಟರ್ ಪದವಿ ಪಡೆದವರು. ಎರಡು ವರ್ಷಗಳ ಕಾಲ ದುಬೈಯಲ್ಲಿ ಉದ್ಯೋಗದಲ್ಲಿದ್ದರು. ವಿದೇಶಕ್ಕೆ ಹೋಗಬೇಕು, ಕೈತುಂಬಾ ಗಳಿಸಬೇಕು ಎಂಬ ಆಸೆ ಸಾಮಾನ್ಯ. ಆದರೆ ಭಟ್ ಅವರು ವಿದೇಶ ಬಂದವರು ಮರಳಿ ಉದ್ಯೋಗಕ್ಕಾಗಿ ಹೋಗುವ ಮನಸ್ಸು ಮಾಡಲಿಲ್ಲ. ತನ್ನೂರಲ್ಲೇ ಹೊಸ ಉದ್ಯಮ ಮಾಡಬೇಕೆಂಬ ಆಸಕ್ತಿ ಮೂಡಿತು. ಅವರ ಊರು ಬೆಳ್ತಂಗಡಿ ತಾಲೂಕಿನ ಕಲ್ಲೇರಿ ಸಮೀಪದ ತಣ್ಣೀರುಪಂತ. ತೀರಾ ಹಳ್ಳಿ. ಇಲ್ಲೇನು ಮಾಡಬಹುದು ಎಂದು ಯೋಚಿಸಿದಾಗ ಅವರಿಗೆ ಕಂಡದ್ದು ಅಡಿಕೆ ತೋಟ. ಮೂಲತಃ ಕೃಷಿಕರು. ಸುಮಾರು ಹತ್ತು ಎಕ್ರೆ ಕೃಷಿಯಿದೆ. ಅಡಿಕೆ, ತೆಂಗು, ಕಾಳುಮೆಣಸು, ಬಾಳೆ, ಮಿಶ್ರಬೆಳೆ. ಆದರೂ ಮುಖ್ಯ ಬೆಳೆ ಅಡಿಕೆ. ಅಡಿಕೆ ಆಹಾರವಾಗುತ್ತಿರುವುದು, ಔಷಧೀಯವಾಗುತ್ತಿರುವುದು ಅವರು ಅರಿತಿದ್ದರು. ಅಡಿಕೆಯನ್ನೇ ಒರೆಗೆ ಹಚ್ಚಲು ಮುಂದಾದರು.
ಬಾಯಿ ನೋವು, ಹಲ್ಲು ನೋವು, ಗಂಟಲಿನ ಉರಿಯೂತ ಮೊದಲಾದವುಗಳಿಗೆ ಉಪಯುಕ್ತವಾದ ಔಷಧಿ ತಯಾರಿ ಯೋಜನೆಯನ್ನು ರೂಪಿಸಿಕೊಂಡರು. ರಾಕಾ ಇನಿಷಿಯೇಟಿಯು ಪ್ರೈವೇಟ್ ಲಿಮಿಟೆಡ್ ಎಂಬ ಸಂಸ್ಥೆ ಆರಂಭಿಸಿದರು. ಅಡಿಕೆ ಮತ್ತು ಇತರ ಗಿಡ ಮೂಲಿಕೆಗಳನ್ನು ಪ್ರಧಾನವಾಗಿರಿಸಿಕೊಂಡು “ಓರೋ ಸ್ರಂಮ್ಸಿ” ಎಂಬ ಹರ್ಬಲ್ ಮೌತ್‌ವಾಶ್ ಅಡಿಕೆಯ ಉತ್ಪನ್ನವನ್ನು ತಯಾರಿಸಿದ್ದಾರೆ. ಅತ್ತ ಎಳೆಯದು ಅಲ್ಲದ ಇತ್ತ ಹೆಚ್ಚು ಬಲಿಯದ ಅಡಿಕೆಯನ್ನು ಸಂಸ್ಕರಿಸಿ ಅದರ ಸಾರವನ್ನು ತೆಗೆದು ಅದರೊಂದಿಗೆ ಗಿಡಮೂಲಿಕೆಗಳನ್ನು ಸೇರಿಸಿ ಸುವಾಸನೆಯುಳ್ಳ “ಬಾಯಿ ಮುಕ್ಕಳಿಸುವ” ಮೌತ್‌ವಾಶ್ ಉತ್ಪನ್ನವನ್ನು ತಯಾರಿಸಿದ್ದಾರೆ. ಅದಲ್ಲದೆ ಹಲ್ಲು ನೋವು, ವಸಡು ನೋವು ಹಲ್ಲು ಹುಳುಕು ನಿವಾರಣೆಯ ಔಷಧಿ, ಗಾಯಗಳ ಶಮನಕ್ಕೆ ಸ್ಪ್ರೇ ತಯಾರಾಗುತ್ತಿದೆ.
ಈ ಉತ್ಪನ್ನಗಳಿಗೆ ಬಳಕೆದಾರರಿಂದ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಈ ಹಿನ್ನಲೆಯಲ್ಲಿ ಹಳ್ಳಿಯಲ್ಲಿ ಇದ್ದುಕೊಂಡು ಔಷಧಿ ತಯಾರಿಯ ಉದ್ಯಮ ರೂಪಿಸಲು ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿದ್ದಾರೆ. ಅಡಿಕೆಗೆ ಬೆಲೆ ಕುಸಿಯಲಿ ಅಥವಾ ಹೆಚ್ಚಳವಾಗಲಿ ಅಡಿಕೆಯಿಂದ ಉಪ ಉತ್ಪನ್ನಗಳ ತಯಾರಿಯ ಮೂಲಕ ಅಡಿಕೆ ಬೆಳೆಗಾರರಲ್ಲಿ ಭರವಸೆ ಮೂಡಿಸುವುದು ಹಾಗೂ ಆಯುರ್ವೇದ ಔಷಧಿಗಳನ್ನು ಪರಿಚಯಿಸುವುದು ಈ ಕಂಪನಿ ಸ್ಥಾಪನೆ ಉದ್ದೇಶವಾಗಿದೆ ಎನ್ನುತ್ತಾರೆ ವಿಶ್ವೇಶ್ವರ ಭಟ್.
ಅಡಿಕೆಯಿಂದ ಟೂತ್‌ಪೇಸ್ಟ್ ಮತ್ತು ದಿನ ಬಳಕೆಯ ಇತರ ವಸ್ತುಗಳು ತಯಾರಿಸುವ ಯೋಜನೆಯು ಅವರ ಮುಂದಿದೆ. ಈ ವರ್ಷದಲ್ಲಿ ಅಡಿಕೆಯ ಟೂತ್‌ಪೇಸ್ಟ್ ಮಾರುಕಟ್ಟೆಗೆ ಬಿಡುಗಡೆ ಮಾಡುವ ಆಶಯ ಆಶಯ ಅವರದು. ಈಗ ಅವರು ತಯಾರಿಸಿದ ಉತ್ಪನ್ನಗಳನ್ನು ಸಾಮಾಜಿಕ ಜಾಲತಾಣ ಮೂಲಕ ಮಾರುಕಟ್ಟೆ ಮಾಡಲಾಗುತ್ತಿದೆ. ಪುತ್ತೂರು, ವಿಟ್ಲ ಮೊದಲಾದ ಆಯುರ್ವೇದ ಕ್ಲಿನಿಕ್‌ಗಳಲ್ಲೂ ಲಭ್ಯವಿದೆ. ಈಗ ಬೇಡಿಕೆಯಷ್ಟು ಉತ್ಪಾದನೆ ಮಾಡಲು ಸಾಧ್ಯವಾಗುತ್ತಿಲ್ಲ. ಉತ್ಪಾದನೆ ಹೆಚ್ಚಳವಾದಂತೆ ದಕ್ಷಿಣ ಕನ್ನಡ ಅಲ್ಲದೆ ಇತರ ಜಿಲ್ಲೆಗಳಿಗೆ ಮಾರುಕಟ್ಟೆ ವಿಸ್ತರಿಸುವ ಗುರಿ ಇರಿಸಿಕೊಂಡಿದ್ದಾರೆ.
ಭಟ್ ಅವರ ಪತ್ನಿ ಡಾ| ಅಹಲ್ಯಾ ಸರಸ್ವತಿ ಭಟ್ ಆಯುರ್ವೇದ ವೈದ್ಯೆ. ಇವರು ಹಾಗೂ ಸತ್ಯನಾರಾಯಣ ಭಟ್ ಸಂಸ್ಥೆಯ ನಿರ್ದೇಶಕರಾಗಿ ಸಂಸ್ಥೆಯ ಬೆಳವಣಿಗೆಗೆ ಸಹಕರಿಸುತ್ತಿದ್ದಾರೆ. ಅಡಿಕೆಯಲ್ಲಿನ ಔಷಧೀಯ ಗುಣಗಳ ಬಗ್ಗೆ ಬೆಳಕು ಚೆಲ್ಲುತ್ತಿರುವ ಸಂಶೋಧಕ ಡಾ. ಕೇಶವ ಭಟ್ ಸರ್ಪಂಗಳ, ಡಾ. ಜೆಡ್ಡು ಗಣಪತಿ ಭಟ್, ಮಹೇಶ್ ಪುಣ್ಚತ್ತೋಡಿ ಸಂಸ್ಥೆಯ ಮಾರ್ಗದರ್ಶಕರಾಗಿದ್ದಾರೆ.
ಅಡಿಕೆಯನ್ನು ಔಷಧಿಯಾಗಿ ಬಳಕೆ ಮಾಡುವ ಹಲವು ಸಾಧ್ಯತೆಗಳನ್ನು ಪರಿಶೀಲಿಸಿ ಇನ್ನಷ್ಟು ಉತ್ಪನ್ನಗಳ ತಯಾರಿಗೂ ವಿಶ್ವೇಶ್ವರ ಭಟ್ ಮುಂದಾಗಿದ್ದಾರೆ. ಮಾಹಿತಿಗೆ 8197139948