spot_img
Saturday, November 23, 2024
spot_imgspot_img
spot_img
spot_img

ಗಿಡ‌ಮೂಲಿಕೆಗಳಿಗೂ ಮಹತ್ವ ನೀಡಿ: ಇಲ್ಲಿದೆ ನೀವು ಉಪಯೋಗಿಸಲೇಬೇಕಾದ ಆರು ಮೂಲಿಕೆಗಳು!

-ಚೈತನ್ಯ ಕೋಟ್ಯಾನ್ ಕೆರ್ವಾಶೆ, ಪತ್ರಿಕೋದ್ಯಮ ವಿಭಾಗ ಎಂ.ಪಿ.ಎಂ. ಕಾಲೇಜು ಕಾರ್ಕಳ
                   
                   ನೈಸರ್ಗಿಕವಾಗಿ ಸಿಗುವ ಅದೆಷ್ಟೋ ಗಿಡಮೂಲಿಕೆಗಳು ಮನೆಯ ಹಿತ್ತಿಲಲ್ಲೇ ಇರುತ್ತವೆ.ಇಂತಹ ಗಿಡಮೂಲಿಕೆಗಳು ಆರೋಗ್ಯದ ಯಾವುದೇ ಸಮಸ್ಯೆಗಳನ್ನು ಸಹ ನಿವಾರಿಸುವಂತಹ ಶಕ್ತಿಯನ್ನು ಹೊಂದಿದೆ. ಆದರೆ ಹೆಚ್ಚಿನ ಜನರು ಗಿಡಮೂಲಿಕೆಗಳ ಮಹತ್ವ ಮರೆತು ಇಂಗ್ಲೀಷ್ ಮೆಡಿಸಿನ್ಗಳಿಗೆ ಮಾರು ಹೋಗುತ್ತಿದ್ದಾರೆ. ಈ ಆಯುರ್ವೇದದ ಗುಣಗಳನ್ನು ಹೊಂದಿರುವ ಕೆಲವೊಂದು ಔಷದಿಯುಕ್ತ ಸಸ್ಯಗಳ ಸಣ್ಣ ಪರಿಚಯ ಮತ್ತು ಉಪಯೋಗ ಇಲ್ಲಿದೆ..
1.ಒಂದೆಲಗ :-
                         “ಒಂದೆಲಗ” ಇದನ್ನು ಕರಾವಳಿಯ ಜನರು ಆಡುಭಾಷೆಯಲ್ಲಿ “ತಿಮರೆ”  ಎಂದು ಕರೆಯುತ್ತಾರೆ. ಇದು ಹಲವಾರು ಔಷದೀಯ ಗುಣಗಳನ್ನು ಹೊಂದಿದೆ. ಇದರ ಪ್ರಮುಖವಾದ ಗುಣ ಎಂದರೆ ಬೆಳಗ್ಗೆ ಇದನ್ನು ಸೇವಿಸುವುದರಿಂದ ಮಕ್ಕಳಲ್ಲಿ ಜ್ಞಾಪಕಶಕ್ತಿ ಹೆಚ್ಚುತ್ತದೆ. ಹಾಗೂ ಇದನ್ನು ಪ್ರತಿದಿನ 4-5 ಎಲೆಗಳನ್ನು ಸೇವಿಸುವುದರಿಂದ ಬುದ್ಧಿ ಶಕ್ತಿ ಕೂಡ ಹೆಚ್ಚುತ್ತದೆ.ಇದರ ಎಲೆ ಮತ್ತು ಕಾಂಡ ಎರಡು ಸಹ ಔಷದೀಯ ಗುಣವನ್ನು ಹೊಂದಿದೆ. ಒಂದೆಲಗ ಎಲೆಯ ಚಟ್ನಿ ಮಾಡಿ ಸೇವಿಸುವುದರಿಂದ ಉತ್ತಮವಾದ ಅರೋಗ್ಯ ವೃದ್ಧಿಯಾಗುತ್ತದೆ.
2.ತುಳಸಿ :- 
                ತುಳಸಿ “ಲಕ್ಷ್ಮೀ ದೇವಿ”ಯ ಸ್ವರೂಪ ಎಂದು ಹೇಳುತ್ತಾರೆ. ಹಿಂದೂ ಸಂಪ್ರದಾಯದ ಪ್ರಕಾರ ಪ್ರತಿಯೊಬ್ಬರ ಮನೆಯ ಅಂಗಳದಲ್ಲಿ ತುಳಸಿ ಕಟ್ಟೆ ಕಟ್ಟಿ  ಪೂಜಿಸುತ್ತಾರೆ. ಈ ತುಳಸಿ ಗಿಡದಿಂದ ಆರೋಗ್ಯಕ್ಕೆ ಸಂಬಂದಿಸಿದಂತೆ ಹಲವಾರು ರೀತಿಯ ಸಮಸ್ಯೆಗಳನ್ನು ನಿವಾರಣೆ ಮಾಡುವಂತಹ ಗುಣಗಳನ್ನು ಹೊಂದಿದೆ.ಬಾಯಿಯು ಕೆಟ್ಟ ವಾಸನೆಯಿಂದ ಕೂಡಿದ್ದಾರೆ ತುಳಸಿ ಎಲೆಯನ್ನು ತಿನ್ನುವುದರಿಂದ ಆ ಸಮಸ್ಯೆಯನ್ನು ದೂರ ಮಾಡಬಹುದು. ಖಾಲಿ ಹೊಟ್ಟೆಯಲ್ಲಿ ತುಳಸಿಯನ್ನು ಸೇವಿಸುವುದರಿಂದ ಅಥವಾ ಬಿಸಿ ನೀರಿನೊಂದಿಗೆ ಎಲೆಯನ್ನು ಹಾಕಿ ನೀರಿನ ಸೇವನೆ ಮಾಡುವುದರಿಂದ ಜೀರ್ಣಕ್ರಿಯೆ ಸುಗಮಗೊಳ್ಳುತ್ತದೆ. ಜ್ವರ, ಶೀತ ಅಥವಾ ನೆಗಡಿ ಇದ್ದ ಸಂದರ್ಭದಲ್ಲಿ ಬಿಸಿ ನೀರಿಗೆ ತುಳಸಿ ಎಲೆಯನ್ನು ಹಾಕಿ, ಸ್ವಲ್ಪ ಅರಿಶಿನ ಹಾಕಿ ಅದರ ಹಬೆ ತೆಗೆದುಕೊಳ್ಳುವುದರಿಂದ ಜ್ವರ, ಶೀತ ಮತ್ತು ನೆಗಡಿ ಕಡಿಮೆಗೊಳ್ಳುತ್ತದೆ.
3. ವೀಳ್ಯದೆಲೆ :-
                       ವೀಳ್ಯದೆಲೆಯನ್ನು ನಮ್ಮ ಹಿರಿಯರು ಊಟದ ಆದ ಬಳಿಕ ಎಲೆ-ಅಡಿಕೆ ಅಗಿಯುತ್ತಿದ್ದರು. ಇದರಿಂದ ಜೀರ್ಣಕ್ರಿಯೆ ಸುಗಮವಾಗುತ್ತದೆ ಮತ್ತು ಇದನ್ನು ಅಗಿಯುದರಿಂದ ಹಲ್ಲುಗಳಿಗೆ ಒಳ್ಳೆಯ ವ್ಯಾಯಾಮ ಆಗುತ್ತದೆ.ವೀಳ್ಯದೆಲೆಯನ್ನು ಸೇವಿಸುದರಿಂದ ಬಾಯಿಯ ದುರ್ವಾಸನೆಯನ್ನು ದೂರಮಾಡಬಹುದು. ಹೊಟ್ಟೆನೋವು, ಅಜೀರ್ಣ ಆದಂತಹ ಸಂದರ್ಭದಲ್ಲಿ ವೀಳ್ಯದೆಲೆಯನ್ನು ಸೇವಿಸುವುದರಿಂದ ಈ ಸಮಸ್ಯೆಯನ್ನು ನಿವಾರಿಸಬಹುದು.
4. ಸಂಬರಬಳ್ಳಿ :-
                    ಇತ್ತೀಚಿನ ದಿನಗಳಲ್ಲಿ ಜ್ವರ, ಶೀತ, ನೆಗಡಿ ಆದಂತಹ ಸಂದರ್ಭದಲ್ಲಿ ಇಂಗ್ಲೀಷ್ ಮೆಡಿಸಿನ್ ಬಳಸುವವರ ಸಂಖ್ಯೆ ಹೆಚ್ಚು. ಜ್ವರ, ಶೀತಕ್ಕೆ ಔಷದೀಯ ಗುಣಗಳನ್ನು ಹೊಂದಿರುವ ಸಂಬರಬಳ್ಳಿ ಎಲೆಯ ರಸವನ್ನು ಉಪಯೋಗಿಸಿದರೆ ಬಹುಬೇಗನೆ ಜ್ವರ ಕಡಿಮೆ ಆಗುತ್ತದೆ. ಸಂಬರಬಳ್ಳಿ ಎಲೆಯು ನೋಡಲು ದಪ್ಪವಾಗಿದ್ದು, ಜ್ವರ ಇದ್ದಂತಹ ಸಂದರ್ಭದಲ್ಲಿ ಇದರ ಎಲೆಗಳನ್ನು ಕೊಯ್ದು ಸ್ವಲ ಬೆಂಕಿಯಲ್ಲಿ ಬಾಡಿಸಿದಾಗ ಎಲೆಯಲ್ಲಿ ನೀರು ಸಿಗುತ್ತದೆ. ಬಾಡಿಸಿದ ಎಲೆಯನ್ನು ನೆತ್ತಿಗೆಇಟ್ಟಾಗ ಜ್ವರ ಬೇಗನೆ ಕಡಿಮೆಯಾಗುತ್ತದೆ.
                 ಈ ಎಲೆಯ ಕಷಾಯ ಮಾಡಿ ಕುಡಿದರೆ ಉಬ್ಬಸದಂತಹ ಸಮಸ್ಯೆ ಕಡಿಮೆಯಾಗುತ್ತದೆ. ಅಲ್ಲದೇ ಈ ಎಲೆಯ ರಸವನ್ನು ಸೇವಿಸುವುದರಿಂದ ಹಳದಿ ರೋಗ, ಹಾಗೂ ಎಲೆಯ ರಸವನ್ನು ಜೇನಿನೊಂದಿಗೆ ಸೇವಿಸುವುದರಿಂದ ಕಫ, ಕೆಮ್ಮು ಮುಂತಾದವುಗಳನ್ನು ನಿವಾರಿಸಬಹುದು.
5. ಪಪ್ಪಾಯ ಎಲೆ :-
                 ಪಪ್ಪಾಯ ಹಣ್ಣನ್ನು ತಿನ್ನುವುದರಿಂದ ಅರೋಗ್ಯಕ್ಕೆ ಬಹಳ ಒಳ್ಳೆಯದು. ಹಾಗೆಯೇ ಪಪ್ಪಾಯ ಎಲೆ ಔಷದೀಯ ಗುಣಗಳನ್ನು ಹೊಂದಿದೆ. ಇದರ ಎಲೆಯ ರಸದಿಂದ ರೋಗಗಳನ್ನು ತಡೆಯಬಹುದು. ಪಪ್ಪಾಯ ಎಲೆಯ ರಸವನ್ನು ಸೇವಿಸುವುದರಿಂದ ಡೆಂಗ್ಯೂ ಜ್ವರಕ್ಕೆ ಸಂಬಂದಿಸಿದ ರೋಗ ಲಕ್ಷಣಗಳನ್ನು ಇದು ನಿವಾರಿಸುತ್ತದೆ.
6. ಮುಟ್ಟಿದರೆ ಮುನಿ :-
                   “ಮುಟ್ಟಿದರೆ ಮುನಿ” ಇದರ ಹೆಸರೇ ಹೇಳುವಂತೆ ಈ ಸಸ್ಯವನ್ನು ಮುಟ್ಟಿದರೆ ಅದು ಮುದುಡಿಕೊಳ್ಳುತ್ತದೆ. ಇದು ಸಾಮಾನ್ಯವಾಗಿ ಎಲ್ಲಾ ಕಡೆಯಲ್ಲೂ ಕಾಣಸಿಗುವಂತಹ ಒಂದು ಗಿಡಮೂಲಿಕೆ. ಇದು ಸಹ ಹಲವಾರು ರೀತಿಯ ಔಷದೀಯ ಗುಣಗಳನ್ನು ಹೊಂದಿದೆ. ಈ ಗಿಡದ ಹೂವು, ಬೇರು, ಎಲೆ ಮತ್ತು ಕಾಂಡ ಎಲ್ಲಾ ಭಾಗಗಳು ಸಹ ಔಷದೀಯ ಗುಣಗಳನ್ನು ಹೊಂದಿದೆ. ಮುಟ್ಟಿದರೆ ಮುನಿ ಗಿಡದ ರಸವು ಚರ್ಮಕ್ಕೆ ಸಂಬಂದಿಸಿದ ರೋಗಕ್ಕೆ ಪರಿಹಾರವನ್ನು ನೀಡುತ್ತದೆ. ಅಲ್ಲದೇ ಮೂಲವ್ಯಾದಿ, ಮಲಬದ್ಧತೆಯಂತಹ ಸಮಸ್ಯೆಗಳಿಗೆ ಇದು ಪರಿಹಾರ ನೀಡುತ್ತದೆ.
                  ಪರಿಸರದಲ್ಲಿ ಅದೆಷ್ಟೋ ಗಿಡಮೂಲಿಕೆಗಳು ಔಷದೀಯ ಗುಣಗಳನ್ನು ಹೊಂದಿರುತ್ತವೆ.ಇತ್ತೀಚಿನ ದಿನಗಳಲ್ಲಿ ಗಿಡಮೂಲಿಕೆಗಳ ನಾಶ ಆಗುತ್ತಿದೆ. ಅವುಗಳನ್ನು ನಾಶವಾಗದಂತೆ ಉಳಿಸುವುದು ನಮ್ಮೆಲ್ಲರ ಕರ್ತವ್ಯ.ಗಿಡಮೂಲಿಕೆಗಳ ಮಹತ್ವ ಎಲ್ಲರಿಗೂ ತಿಳಿಯಬೇಕು ಮತ್ತು ಅದರ ಉಪಯೋಗವನ್ನು ಪಡೆಯಬೇಕು. ಆಗ ಗಿಡಮೂಲಿಕೆಗಳ ಉಳಿವು ಖಂಡಿತ ಸಾಧ್ಯ.
spot_img

ಸಂಬಂಧಿತ ಲೇಖನಗಳು

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group