ಕೊಡಗಿನ ಪ್ರಾಕೃತಿಕ ಸೌಂದರ್ಯದ ನಡುವೆ ರಾಜಾಸೀಟ್ ಉದ್ಯಾನದಲ್ಲಿ ಸುಂದರ ಹೂಗಳಿಂದ ಅರಳಿದ ಕಲಾಕೃತಿಗಳು ರಾಜಾಸೀಟ್ ವೀಕ್ಷಕರ ಮನ ಸೂರೆಗೊಂಡಿತು. ಜಿಲ್ಲಾಡಳಿತ, ಕೊಡಗು ಜಿಲ್ಲಾ ಪಂಚಾಯತ್ ಮತ್ತು ತೋಟಗಾರಿಕಾ ಇಲಾಖೆ ಹಮ್ಮಿಕೊಂಡಿದ್ದ ಮೂರು ದಿನಗಳ ಫಲಪುಷ್ಪ ಪ್ರದರ್ಶನದಲ್ಲಿ ಹೂವಿನಲ್ಲಿ ಅರಳಿದ ಕಲಾಕೃತಿಗಳು ಚಿತ್ತಾಕರ್ಷಕವಾಗಿದ್ದವು
ಹೂವಿನಲ್ಲಿ ಮೂಡಿತು ಪಾಡಿ ಇಗ್ಗುತಪ್ಪ ದೇವಾಲಯ:
ಕಕ್ಕಬೆಯ ಬೆಟ್ಟದ ಮೇಲಿರುವ ಪಾಡಿ ಇಗ್ಗುತಪ್ಪ ದೇವಾಲಯ ಕೊಡವರ ಆರಾಧ್ಯಮೂರ್ತಿ ಇರುವ ದೇವ ಸನ್ನಿಧಿ. ಈ ದೇವಾಲಯದ ಮಾದರಿ ಕಲಾಕೃತಿಯನ್ನು ಹೂವಿನಿಂದಲೇ ನಿರ್ಮಾಣ ಮಾಡಿರವುದು ವಿಶೇಷತೆ. ಶ್ರದ್ಧೆ ಭಕ್ತಿಯ ದೇವ ಸನ್ನಿಧಿಯ ಕಲಾಕೃತಿ ರಚನೆಗೆ ಸುಮಾರು 5 ಲಕ್ಷ ಹೂಗಳನ್ನು ಬಳಸಿಕೊಳ್ಳಲಾಗಿದೆ. 15 ಅಡಿ ಎತ್ತರ, 48 ಅಡಿ ಉದ್ದ ಹಾಗೂ 28 ಅಡಿ ಅಗಲದ ಹೂವಿನ ಕಲಾ ಕೃತಿಗೆ ಸೇವಂತಿಗೆ, ಗುಲಾಬಿ, ಅಸ್ಟರ್ ಸೇರಿದಂತೆ ವಿವಿಧ ಜಾತಿಯ ಹೂಗಳು ಗುಡಿಗೆ ಅರ್ಪಿತಗೊಂಡು ಧನ್ಯತೆ ಪಡೆದವು
ರಾಜ್ಯೋತ್ಸವದ ಅಂಗವಾಗಿ ಹೂವಿನಿಂದಲೇ ರಚಿತವಾದ ತ್ರಿವರ್ಣ ಧ್ವಜ, ಫಿರಂಗಿ, ಕಾಳುಗಳಿಂದ ಮಾಡಲ್ಪಟ್ಟ ಯೋಧ, ಕೊಡದಿಂದ ಹರಿದು ಬರುವ ನೀರು ಹಾಗೂ ಇತರ ಕಲಾಕೃತಿಗಳು, ಕಲ್ಲಂಗಡಿ ಹಾಗೂ ತರಕಾರಿಗಳಿಂದ ರಚಿಸಲ್ಪಟ್ಟ ಮಾಹಾನ್ ಸಾಧಕರ ಕಲಾಕೃತಿ. ಕಾಫಿ ಮಂಡಳಿಯ ಸೀಡ್ ಟು ಕಪ್ ಹಾಗೂ ನಾನಾ ಜಾತಿಯ ಹೂಗಳು ವೀಕ್ಷಕರನ್ನು ಹೊಸ ಲೋಕಕ್ಕೆ ಕೊಂಡೊಯ್ದವು. ಸಮೀಪದ ಗಾಂಧಿ ಮೈದಾನದಲ್ಲಿ ವಸ್ತು ಪ್ರದರ್ಶನ ಮಳಿಗೆಗಳು, ಇಲಾಖೆಗಳು ಮಳಿಗೆಗಳು,ತೋಟಗಾರಿಕಾ ಇಲಾಖೆ ಮಳಿಗೆಯಲ್ಲಿದ್ದ ಕಾಫಿ, ಕಿತ್ತಳೆ, ಅಡಿಕೆ, ಶುಂಠಿ, ತಾಳೆ ಅಲ್ಲದೆ ಸ್ಥಳೀಯ ವೈಶಿಷ್ಟ್ಯ ಪೂರ್ಣವಾದ ಗೆಡ್ಡೆ ಗೆಣಸು ತರಕಾರಿ ಗಮನ ಸೆಳೆದವು. ತರಕಾರಿ ಬೀಜಗಳು, ಆಕರ್ಷಕ ಹೂವಿನ ಗಡ್ಡೆಗಳು ದೇಶೀಯ ಹಾಗೂ ವಿದೇಶೀಯ ಹಣ್ಣುಗಳ ನರ್ಸರಿ ಗಿಡಗಳು ಜನರನ್ನು ಆಕರ್ಷಿಸಿದವು