spot_img
Sunday, November 24, 2024
spot_imgspot_img
spot_img
spot_img

ಕರ್ನಾಟಕದ ಜೇನು ತುಪ್ಪಕ್ಕೆ ಬ್ರ್ಯಾಂಡ್ ನೇಮ್: ಜಾಗತಿಕವಾಗಿಯೂ ಜೇನಿಗೆ ಬೇಡಿಕೆ ?

ಅಂಗಳದಲ್ಲಿ ನೆಟ್ಟಿರುವ  ಹೂ ಗಿಡಗಳಲ್ಲಿರುವ ಹೂವಿನ ಮೇಲೆ ಎಲ್ಲಿಂದಲೋ ಬಂದ ಜೇನು ನೊಣವೊಂದು ಕುಳಿತುಕೊಂಡಿದೆ. ಹೂವನ್ನು ಯಾವುದೇ ರೀತಿಯಲ್ಲಿ ಘಾತಿಗೊಳಿಸದೆ ಮಕರಂದವನ್ನು ಹೀರುತ್ತದೆ. ಸಣ್ಣದಾಗಿ ಹಾಡುತ್ತ ಮತ್ತೊಂದು ಹೂವಿಗೆ ಪಯಣ ಬೆಳೆಸುತ್ತದೆ. ತದೇಕದಿಂದ ಅದನ್ನೇ ನೋಡುತ್ತಾ ನಿಂತರೆ ಕೈ ಬೆರಳುಗಳ ಮೇಲೆ ಹಣೆಯ ಮೇಲೂ ಹರಿದಾಡುವುದಕ್ಕೂ ಹೆದರುವುದಿಲ್ಲ. ಜೇನು ನೊಣ ಮನೆಯ ಸುತ್ತಮುತ್ತ ಹಾರಾಡುತ್ತಿದ್ದರೆ ಸಮೀಪದಲ್ಲೆಲ್ಲೋ ಜೇನಿನ ಕುಟುಂಬವಿದೆ ಎಂಬುದನ್ನು ಊಹಿಸಬಹುದು.

ಮೊದಲೆಲ್ಲಾ ಕಾಡುಗಳಲ್ಲಿ ಜೇನು ಅರಸಿ ಹೋಗಬೇಕಾಗಿತ್ತು..ದೊಡ್ಡ ದೊಡ್ಡ ಮರಗಳಲ್ಲೋ, ಮರದ ಪೊಟ್ಟರೆಗಳಲ್ಲೋ ಇದ್ದ ಜೇನು ಸಂಗ್ರಹಿಸಬೇಕಾಗಿತ್ತು. ಈಗ ಹಾಗಿಲ್ಲ.  ಮನೆಯ ಬಳಿಯ ತೋಟದಲ್ಲಿ, ಆಸುಪಾಸಿನ ವಠಾರದಲ್ಲಿ ನಾವೇ ಸಾಕಿ ಸಲಹಿ ಜೇನು ಸಂಗ್ರಹಿಸಬಹುದು. ಔಷಧಿಗಾಗಿ ಹೆಚ್ಚು ಬಳಕೆಯಾಗುತ್ತಿದ್ದ ಜೇನು ಈಗ ಆಹಾರ ಉತ್ಪನ್ನವಾಗಿ ಉಪಯೋಗವಾಗುತ್ತಿದೆ. ಜೇನು ಸಾಕಾಣಿಕೆ ಸ್ವ ಉದ್ಯಮ-ಉದ್ಯೋಗವಾಗಿ ಬೆಳೆದಿದೆ. ಗ್ರಾಮೀಣ ಭಾಗದಲ್ಲಿ ಸಹಸ್ರಾರು ಯುವಕರು ಜೇನು ಸಾಕಾಣಿಕೆಯಲ್ಲಿ ತೊಡಗಿಕೊಂಡಿದ್ದಾರೆ. ಆದ್ದರಿಂದ ಬದುಕು ಕಟ್ಟಿಕೊಂಡಿದ್ದಾರೆ. ಕರಾವಳಿ, ಮಲೆನಾಡು, ಅರೆಮಲೆನಾಡು, ಬಯಲುಸೀಮೆಯನ್ನೂ ಜೇನು ಕೃಷಿ ವ್ಯಾಪಿಸಿಕೊಂಡಿದೆ. ದೇಶದಲ್ಲಿ ಜೇನು ಉತ್ಪಾದನೆ ಮಾಡುತ್ತಿರುವ ರಾಜ್ಯಗಳಲ್ಲಿ ಕರ್ನಾಟಕವೂ ಪ್ರಮುಖವಾದುದು.

ರಾಜ್ಯದ ತೋಟಗಾರಿಕೆ ಇಲಾಖೆಯು ರಾಜ್ಯದ ಜೇನು ತುಪ್ಪವನ್ನು ಬ್ರಾö್ಯಂಡ್ ನೇಮ್ ಮೂಲಕ ವಿಶ್ವ ಮಾರುಕಟ್ಟೆಗೆ ಪರಿಚಯಿಸಲು ಹೊರಟಿದೆ. ರಾಜ್ಯದಲ್ಲಿ ಸುಮಾರು 27,೦೦೦ಮಂದಿ ಜೇನು ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. ವಾರ್ಷಿಕವಾಗಿ 1200 ಮೆಟ್ರಿಕ್ ಟನ್ ಜೇನುತುಪ್ಪ ಉತ್ಪಾದನೆಯಾಗುತ್ತಿದೆ ಎಂದು ತೋಟಗಾರಿಕೆ ಇಲಾಖೆಯ ಅಂದಾಜು. ಜೇನು ಸಹಕಾರಿ ಸಂಘಗಳು, ಖಾಸಗಿ ಸಂಸ್ಥೆಗಳು ತಮ್ಮದಾದ ಮಾರುಕಟ್ಟೆಯನ್ನು ಕೊಂಡುಕೊಂಡಿವೆ. ಉತ್ತಮ ಗುಣಮಟ್ಟದ ಜೇನಿಗೆ ಒಳ್ಳೆಯ ಬೆಲೆಯಿದೆ. ವಿದೇಶಗಳಲ್ಲಿಯೂ ಬೇಡಿಕೆಯಿದೆ

ಇಲಾಖೆಯ ಲೆಕ್ಕಾಚಾರಕ್ಕಿಂತಲೂ ಹೆಚ್ಚು ಮಂದಿ ಜೇನು ಸಾಕಾಣೆಯಲ್ಲಿ ತೊಡಗಿಕೊಂಡಿರಬಹುದು. ಕೃಷಿಗೆ ಪೂರಕವಾಗುವಂತೆ ಮತ್ತು ಮನೆ ಉಪಯೋಗಕ್ಕೆ ಹಾಗೂ ಹವ್ಯಾಸಕ್ಕಾಗಿ ಒಂದೆರಡು ಪೆಟ್ಟಿಗೆ ಇಟ್ಟುಕೊಂಡವರು ಹಲವಾರು ಮಂದಿಯಿದ್ದಾರೆ.

ಹಾಲು ಹಾಗೂ ಅದರ ಉತ್ಪನ್ನಗಳು ಎಂದಾಗ ನಂದಿನಿ ಕಣ್ಣೆದುರಿಗೆ ಬಂದು ನಿಲ್ಲುತ್ತದೆ. ಅದರಂತೆ ಜೇನುತುಪ್ಪ ಕೂಡಾ ರಾಜ್ಯದ ಬ್ರಾಂಡ್ ನೇಮ್‌ನಡಿಯಲ್ಲಿ ಲಭ್ಯವಾದರೆ  ಜಾಗತಿಕ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳಲು ಅನುಕೂಲವಾಗಲಿದೆ. ವಿಶ್ವ ಮಾರುಕಟ್ಟೆಯಲ್ಲಿ ರಾಜ್ಯದ ಜೇನು ತುಪ್ಪಕ್ಕೆ ಬೇಡಿಕೆ ಬಂದಲ್ಲಿ ಜೇನಿಗೆ ಉತ್ತಮ ಬೆಲೆಯೂ ಬಂದೀತು. ಜೇನು ಕೃಷಿಕನ ಜೀವನ ಮಟ್ಟವೂ ಸುಧಾರಿಸೀತು

spot_img

ಸಂಬಂಧಿತ ಲೇಖನಗಳು

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group