spot_img
Wednesday, October 23, 2024
spot_imgspot_img
spot_img
spot_img

ಚರಂಡಿ ನೀರಿನ ಬಳಕೆಯ ಮೂಲಕ ಕೃಷಿಗೆ ನೀರಿನ ಕೊರತೆಯನ್ನು ನೀಗಿಸೋದು ಹೇಗೆ?

ನಮ್ಮ ದೇಶದ ಹೆಚ್ಚಿನ ಕೃಷಿ ಭೂಮಿಯು ಮಳೆಯಾಶ್ರಿತ ಕೃಷಿ ಭೂಮಿಗಳಾಗಿವೆ. ಮಳೆ ಕೈಕೊಟ್ಟರೆ ಇಲ್ಲಿ ಕೃಷಿಯೂ ಇಲ್ಲ. ಪ್ರಕೃತಿ ಮುನಿಸಿಕೊಂಡಾಗ ಪ್ರಕೃತಿಗೆ ವಿರುದ್ಧವಾಗಿ ಅಂತರ್ಜಲವನ್ನು ಬಳಸಿಕೊಂಡು ಕೃಷಿ ಮಾಡೋಣವೆಂದರೆ ಸಾವಿರ ಅಡಿ ಭೂಮಿಯನ್ನು ಕೊರೆದು ಕೊಳವೆಬಾವಿ ತೋಡಿದರೂ ನೀರು ಸಿಗುತ್ತಿಲ್ಲ. ಒಂದು ಕೊಳವೆ ಬಾವಿ ಕೊರೆಸಬೇಕೆಂದರೆ ಕನಿಷ್ಠ ೧-೧.೫ ಲಕ್ಷ ರೂಪಾಯಿ ಬೇಕು. ಅದಕ್ಕೆ ಪಂಪೆ ಸೆಟ್ ಅಳವಡಿಕೆ ನೀರಾವರಿ ಅಳವಡಿಕೆ ಎಲ್ಲವೂ ಸೇರಿದಾಗ ಕನಿಷ್ಠ ಎಂದರೂ ೨-೨.೫ ಲಕ್ಷ ಮೊತ್ತ ಬೇಕು. ಇಷ್ಟೆಲ್ಲ ಖರ್ಚು ಮಾಡಿ ರೈತ ನೀರಾವರಿ ಅಳವಡಿಕೆ ಮಾಡಿಕೊಂಡರೂ ಕೃಷಿ ಜಮೀನಿಗೆ ಅಗತ್ಯವಿರುವಷ್ಟು ನೀರು ದೊರೆಯುತ್ತದೆ ಎನ್ನುವ ಖಾತರಿಯೇನೂ ಇಲ್ಲ. ಏಕೆಂದರೆ ಇಂದು ಭೂಮಿಯ ಅಂತರ್ಜಲದ ಮಟ್ಟ ಅಷ್ಟು ಕೆಳಕ್ಕೆ ಕುಸಿದಿದೆ. ಆದ್ದರಿಂದ ಇಂದು ನೀರಾವರಿ ವ್ಯವಸ್ಥೆಯೇ ರೈತನಿಗೆ ಕೃಷಿಯಲ್ಲಿನ ಬಹು ದೊಡ್ಡ ಸವಾಲೆಂದರೆ ತಪ್ಪಾಗಲಾರದು.

ಆದರೆ ಡಿ.ವಿ.ಜಿಯವರು ಹೇಳುವ ಮಾತಿನಂತೆ ‘ಇರುವ ಭಾಗ್ಯವ ನೆನೆದು ಬಾರಿ ಎಂಬುದನ್ನು ಬಿಡು ಹರುಷಕ್ಕಿದೆ ದಾರಿ’ ಎಂಬ ಮಾತಿನಂತೆ ಪ್ರತಿಯೊಬ್ಬ ರೈತನು ತನ್ನಲ್ಲಿ ಇರುವ ಕೊರತೆಗಳನ್ನೇ ಹಳಿಯುತ್ತಾ ಆಲಸಿಯಾಗಿ ದಿನವನ್ನು ದೂಡುವ ಬದಲು ತನ್ನ ಕೃಷಿ ಜಮೀನಿನಲ್ಲಿ ಲಭ್ಯವಿರುವ ಅನ್ಯ ಸಂಪನ್ಮೂಲಗಳನ್ನು ಸಮರ್ಪಕವಾಗಿ ಬಳಸಿಕೊಂಡಾಗ ಕೃಷಿಯಲ್ಲಿ ಹೆಚ್ಚು ಯಶಸ್ಸನ್ನು ಗಳಿಸಲು ಸಾಧ್ಯ. ಅಂದರೆ ಕೃಷಿ ಜಮೀನಿಗೆ ಸಮೀಪದಲ್ಲಿ ತ್ಯಾಜ್ಯ ಅಥವಾ ನಿರುಪಯುಕ್ತ ನೀರಿನ ಲಭ್ಯತೆ ಇದ್ದಲ್ಲಿ ಆ ತ್ಯಾಜ್ಯ ನೀರನ್ನು ಅಥವಾ ಮನೆಯ ತ್ಯಾಜ್ಯ ನೀರನ್ನು ಸಮರ್ಪಕವಾಗಿ ಬಳಸಿಕೊಂಡು ಕೃಷಿಯನ್ನು ಮಾಡಲು ಸಾಧ್ಯವಿದೆ ಎಂದು ಇಂದಿನ ಕೆಲವೊಂದು ರೈತರು ಮಾಡಿ ತೋರಿಸಿದ್ದಾರೆ.

ತ್ಯಾಜ್ಯ ನೀರಿನ ಸಮರ್ಪಕ ಬಳಕೆ.

ಕೃಷಿಕನು ತನ್ನ ಕೃಷಿ ಜಮೀನಿನಲ್ಲಿ ನೀರಿನ ಎಲ್ಲ ಮೂಲಗಳನ್ನು ಕಳೆದುಕೊಂಡಾಗ ಕೊನೆಯ ಸಿಗುವ ಆಸರೆಯೇ ತ್ಯಾಜ್ಯ ನೀರಿನ ಸಮರ್ಪಕ ಬಳಕೆ. ಊರಿನ ಅಥವಾ ಇತರ ಮನೆಗಳ ಹೊಲಸು ನೀರನ್ನು ಬಳಸಿ ಕೃಷಿ ಮಾಡುವುದು ಒಂದಷ್ಟು ರೈತರಿಗೆ ಮುಜುಗರ ಎನಿಸಿದರೂ ಇದೊಂದು ನೀರಿನ ಸಮಸ್ಯೆಗೆ ಅತ್ಯುತ್ತಮ ಪರಿಹಾರವೂ ಆಗಬಹುದು. ಕೃಷಿ ಜಮೀನಿನ ಸಮೀಪದಲ್ಲಿ ಅಥವಾ ಜಮೀನಿನಿಂದ ಹೊರ ಭಾಗದಲ್ಲಿ ತ್ಯಾಜ್ಯ ನೀರಿನ ಹರಿವು ಇದ್ದಲ್ಲಿ ಆ ನೀರಿನ ಹರಿವನ್ನು ಕಾಲುವೆಗಳ ನಿರ್ಮಾಣದ ಮೂಲಕ ಕೃಷಿ ಜಮೀನಿನೊಳಗೆ ನಿರ್ಮಿಸಲಾದ ಕೃಷಿ ಹೊಂಡಕ್ಕೆ ತುಂಬಿಸಿ ಶೇಖರಿಸಿ ಇಟ್ಟುಕೊಳ್ಳಬೇಕು. ಇದಕ್ಕಾಗಿ ರೈತರು ತಮ್ಮ ಕೃಷಿ ಜಮೀನಿನಲ್ಲಿ ಸುಮಾರು ಹತ್ತು ಅಡಿ ಆಳ, ಹತ್ತು ಅಡಿ ಅಗಲ ಮತ್ತು ಹತ್ತು ಅಡಿ ಉದ್ದದ ಕೃಷಿ ಹೊಂಡವನ್ನು ನಿರ್ಮಾಣ ಮಾಡಿ ಅದರಲ್ಲಿ ಚರಂಡಿ ಅಥವಾ ತ್ಯಾಜ್ಯ ನೀರನ್ನು ಸಂಗ್ರಹಿಸಬೇಕು.

ಈ ಕೃಷಿ ಹೊಂಡದ ಒಳಗಡೆ ಗ್ರಾಮದಲ್ಲಿ ವ್ಯರ್ಥವಾಗಿ ಹರಿಯುವ ಬಟ್ಟೆ ಒಗೆದ, ಪಾತ್ರೆ ತೊಳೆದ ನೀರು, ಸ್ನಾನ ಮಾಡಿದ ನೀರು, ಡ್ರೈನೇಜ್ ಮೂಲಕ ಹರಿದು ಬರುವಾಗ ಅದನ್ನು ಸಂಗ್ರಹಿಸಿಕೊಳ್ಳಬೇಕು. ಇದರಲ್ಲಿ ಸುಮಾರು ಐದು ಅಶ್ವಶಕ್ತಿಯ ಮೋಟಾರ್ ಪಂಪ್ ಮೂಲಕ ನೀರನ್ನು ಮೇಲೆತ್ತಿ ಹನಿನೀರಾವರಿ ಪದ್ಧತಿಯನ್ನು ಬಳಸಿಕೊಂಡು ಕೃಷಿಗೆ ಅಗತ್ಯವಿರುವ ಕಡೆಗಳಲ್ಲಿ ಒದಗಿಸಿ ಉತ್ತಮ ಆದಾಯವನ್ನು ಮತ್ತು ಇಳುವರಿಯನ್ನು ಪಡೆಯಬಹುದು.

ಈ ರೀತಿಯಾಗಿ ಊರಿನ ತ್ಯಾಜ್ಯ ನೀರನ್ನು ಸಂಗ್ರಹಿಸಿದಾಗ ಆ ನೀರಿನ ಒಂದಷ್ಟು ಭಾಗ ಭೂಮಿಗೆ ಇಂಗಿ ಅಂತರ್ಜಲದ ಮಟ್ಟವನ್ನು ಹೆಚ್ಚಿಸಲು ಪರೋಕ್ಷವಾಗಿ ಸಹಾಯ ಮಾಡಿದಂತಾಗುತ್ತದೆ. ಪಾಳು ಬಿದ್ದ ಕೊಳವೆ ಬಾವಿಗಳು ಏನಾದರೂ ಆ ಕೃಷಿ ಜಮೀನಿನಲ್ಲಿ ಇದ್ದರೆ ಅದಕ್ಕೆ ಜಲ ಮರುಪೂವಾಗುತ್ತದೆ. ಈ ಪದ್ಧತಿಯ ಅಳವಡಿಕೆಯಿಂದ ಬರಡು ಭೂಮಿಯಲ್ಲಿ ರೈತ ಬಂಗಾರದ ಬೆಳೆಯನ್ನು ತೆಗೆಯಲು ಸಾಧ್ಯವಾಗುತ್ತದೆ. ಪ್ರತಿನಿತ್ಯ ಗ್ರಾಮದ ಕೊಳಕು ನೀರನ್ನು ಹಿಡಿದಿಟ್ಟುಕೊಂಡು, ಹನಿ ನೀರಾವರಿ ಮೂಲಕ ಹಾಯಿಸುವುದರಿಂದ ಗಿಡಗಳು ಫಲವತ್ತಾಗಿ ಬೆಳೆಯುತ್ತವೆ.

ಚರಂಡಿ ನೀರನ್ನು ಹೀಗೆ ಸದುಪಯೋಗ ಮಾಡುವುದರಿಂದ ಊರಿನ ನೈರ್ಮಲ್ಯವನ್ನೂ ಕಾಪಾಡಿದಂತೆ ಆಗುತ್ತದೆ. ಮಳೆ ಮತ್ತು ಅಂತರ್ಜಲದ ನೀರನ್ನೇ ನಂಬಿಕೊಂಡು ಕೈಕಟ್ಟಿ ಕೂರುವ ಬದಲು ಇಂತಹ ವಿಭಿನ್ನ ಆಲೋಚನೆಯೊಂದಿಗೆ ಮುನ್ನಡೆಯುವುದರಿಂದ ಪರಿಸರ ಸಂರಕ್ಷಣೆಯ ಜತೆಗೆ ನೀರಿನ ಸದ್ಭಳಕೆಯನ್ನು ಮಾಡಿದಂತೆಯೂ ಆಗುತ್ತದೆ. ಬರಗಾಲದ ಪ್ರದೇಶದಲ್ಲಿ ಇಂಥದ್ದೊಂದು ಪ್ರಯತ್ನಕ್ಕೆ ಕೈ ಹಾಕಿದಲ್ಲಿ ಅದು ಕೃಷಿಕರ ಆತ್ಮವಿಶ್ವಾಸ ಹೆಚ್ಚಿಸುವ ಕೆಲಸವನ್ನೂ ಮಾಡುತ್ತದೆ.

ಬರಹ: ಸಂತೋಷ್ ರಾವ್ ಪೆರ್ಮುಡ

spot_img

ಸಂಬಂಧಿತ ಲೇಖನಗಳು

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group