ಪಂಜಾಬಿನ ಲಂಡಾ ಗ್ರಾಮದ ಗೋಬಿಂದರ್ ಸಿಂಗ್ ರಾಂಧವ ಯುವಕರಾಗಿದ್ದಾಗ ತಮ್ಮ ಹಳ್ಳಿಯ ಮುಖ್ಯಸ್ಥರಾದ ರ‍್ದಾರ್ ಬಲದೇವ್ ಸಿಂಗ್ ಮತ್ತು ರ‍್ದಾರ್ ಜಗಜಿತ್ ಸಿಂಗ್ ಕಪೂರ್ ಜೇನ್ನೊಣ ಸಾಕುವುದನ್ನು ಗಮನಿಸುತ್ತಿದ್ದರು.
ಅದನ್ನು ನೋಡುತ್ತಾ ನೋಡುತ್ತಾ ಅವರಲ್ಲೊಂದು ಕನಸು ಹುಟ್ಟಿತು – ತಾನೂ ಜೇನ್ನೊಣ ಸಾಕಬೇಕೆಂಬ ಕನಸು. ಕೊನೆಗೆ ೨೦೦೩ರಲ್ಲಿ “ಬಿಗ್ ಬಿ ಹನಿ” ಹೆಸರಿನಲ್ಲಿ ಜೇನ್ನೊಣ ಸಾಕಣೆ ಶುರು ಮಾಡಿ, ತನ್ನ ಕನಸನ್ನು ನನಸಾಗಿಸಿದರು.
ಇದಕ್ಕಾಗಿ ಅವರು ಮಾಡಿಕೊಂಡ ಪರ‍್ವಸಿದ್ಧತೆ: ಪಂಜಾಬ್ ಕೃಷಿ ವಿಶ್ವವಿದ್ಯಾಲಯದಲ್ಲಿ ಒಂದು-ವಾರ ಅವಧಿಯ ತರಬೇತಿ ಶಿಬಿರಕ್ಕೆ ಹಾಜರಾದದ್ದು ಮತ್ತು ೧೨೦ ಜೇನುಪೆಟ್ಟಿಗೆಗಳ ಖರೀದಿಗಾಗಿ ರೂ.೨.೮ ಲಕ್ಷ ಸಾಲ ಪಡೆದದ್ದು.
ಇಬ್ಬರು ಗೆಳೆಯರ ಜೊತೆಗೆ ಅವರು ಈ ಸಾಹಸಕ್ಕೆ ಕೈಹಾಕಿದ್ದರು. ಆದರೆ ಮರು ವರುಷವೇ ಅವರು ದೊಡ್ಡ ಆಘಾತ ಎದುರಿಸ ಬೇಕಾಯಿತು. ನುಸಿ (ಮೈಟ್) ಸೋಂಕಿನಿಂದಾಗಿ ಆ ವರುಷ ಪಂಜಾಬಿನಲ್ಲಿ ಅನಾಹುತವಾಯಿತು; ಲಕ್ಷಗಟ್ಟಲೆ ಜೇನ್ನೊಣಗಳು ಸತ್ತು ಹೋದವು ಮತ್ತು ಬಹುಪಾಲು ಜೇನ್ನೊಣ ಕುಟುಂಬಗಳು ನಾಶವಾದವು ಎಂದು ನೆನಪು ಮಾಡಿಕೊಳ್ಳುತ್ತಾರೆ ಗೋಬಿಂದರ್ ಸಿಂಗ್. ಆಗ ಅವರ ಇಬ್ಬರು ಗೆಳೆಯರೂ ದೂರವಾದರು. “ಒಬ್ಬ ಗೆಳೆಯ ಆಸ್ಟ್ರೇಲಿಯಾಕ್ಕೆ ಹೋದ; ಇನ್ನೊಬ್ಬ ಬೇರೆ ವ್ಯವಹಾರ ಶುರು ಮಾಡಿದ. ಜೇನ್ನೊಣ ಸಾಕಣೆಯನ್ನು ನಾನೊಬ್ಬನೇ ಮುಂದುವರಿಸಬೇಕಾಯಿತು” ಎನ್ನುತ್ತಾರೆ ಅವರು.
ಆಂತರಿಕ ಮಾರುಕಟ್ಟೆಯನ್ನೇ ನಂಬಿ ಕುಳಿತರೆ ಲಾಭ ಗಳಿಸುವುದು ಕಷ್ಟಸಾಧ್ಯವೆಂದು ಮನಗಂಡ ಗೋಬಿಂದರ್ ಸಿಂಗ್, ೨೦೦೯ರಲ್ಲಿ ಜೇನಿನ ರಫ್ತು ಮತ್ತು ಆಮದಿನ ಪರವಾನಗಿ ಪಡೆದುಕೊಂಡರು. “ಆಗ ಜೇನು ಮಾರಾಟದಿಂದ ಹೆಚ್ಚು ಆದಾಯ ಬರುತ್ತಿರಲಿಲ್ಲ. ತಿಂಗಳಿಗೆ ೨೦,೦೦೦ ರೂಪಾಯಿಗಳ ಜೇನು ಮಾರಲು ಸಾಧ್ಯವಾಗುತ್ತಿತ್ತು. ಆದರೆ ನಾನು ಮಾಡಿದ್ದ ಸಾಲದ ಬಡ್ದಿ ಲಕ್ಷಗಟ್ಟಲೆ ರೂಪಾಯಿಗಳಾಗಿ ಬೆಳೆಯುತ್ತಿತ್ತು. ಪರಿಸ್ಥಿತಿಯನ್ನು ನಿಭಾಯಿಸಲಿಕ್ಕಾಗಿ ನಾನು ಏನಾದರೂ ಮಾಡಲೇ ಬೇಕಾಗಿತ್ತು. ಕೊನೆಗೆ ನಮ್ಮ ಮನೆಯ ಚಿನ್ನಾಭರಣಗಳನ್ನೇ ಕೆಲವು ಸಲ ಮಾರಾಟ ಮಾಡಿದೆ. ಮಾರಾಟದಿಂದ ಬಂದ ಹಣವೆಲ್ಲವನ್ನೂ ಸಾಲ ಮರುಪಾವತಿಗಾಗಿಯೇ ರ‍್ಚು ಮಾಡಿದೆ” ಎಂದು ವಿವರಿಸುತ್ತಾರೆ ಗೋಬಿಂದರ್ ಸಿಂಗ್.
“ನಿಧಾನವಾಗಿ ನನ್ನ ಜೇನಿಗೆ ಬೇಡಿಕೆ ಹೆಚ್ಚಿತು. ೨೦೧೨-೧೩ನೇ ವರುಷದಿಂದ ಜೇನನ್ನು ರಫ್ತು ಮಾಡಲು ಆರಂಭಿಸಿದೆ. ಯುಎಸ್‌ಎಯಿಂದ ಹೆಚ್ಚೆಚ್ಚು ರ‍್ಡರುಗಳು ಬರಲು ಶುರುವಾದವು. ನನ್ನ ಲಾಭವೂ ಹೆಚ್ಚಿತು” ಎಂದು ತಿಳಿಸುತ್ತಾರೆ ಅವರು.
“ಈಗ ಜೇನ್ನೊಣ ಸಾಕಣೆಯಿಂದ ನಾನು ಗಳಿಸುವ ಆದಾಯ ವರುಷಕ್ಕೆ ಸುಮಾರು ನಾಲ್ಕು ಕೋಟಿ ರೂಪಾಯಿ. ಇದು ಜೇನು, ಜೇನುಮೇಣ, ಜೇನ್ನೊಣಪರಾಗ, ಜೇನ್ನೊಣವಿಷ, ರಾಯಲ್-ಜೆಲ್ಲಿ ಮತ್ತು ಜೇನುಕುಟುಂಬಗಳ ಮಾರಾಟ – ಇವೆಲ್ಲದರಿಂದ ಸಿಗುವ ಒಟ್ಟು ಆದಾಯ” ಎಂದು ಮಾಹಿತಿ ನೀಡುತ್ತಾರೆ ಗೋಬಿಂದರ್ ಸಿಂಗ್.
ಅದಲ್ಲದೆ, ೩೧೦ ರೈತರಿಗೆ ಜೇನುಸಾಕಣೆಗೆ ಮರ‍್ಗರ‍್ಶನ ನೀಡಿ, ಜೇನುಸಾಕಣೆದಾರರ ದೊಡ್ಡ ತಂಡವನ್ನು ಕಟ್ಟಿದ್ದು ಅವರ ದೊಡ್ಡ ಸಾಧನೆ. ಅವರಲ್ಲೊಬ್ಬರಾದ ನರೇಂದರ್ ಪಾಲ್ ಸಿಂಗ್ ಹೀಗೆನ್ನುತ್ತಾರೆ, “ಕಳೆದ ಹತ್ತು ವರುಷಗಳಲ್ಲಿ ಜೇನು ಮಾರಾಟಕ್ಕಾಗಿ ಎರಡು ಮಳಿಗೆ ತೆರೆದಿದ್ದೇನೆ. ಇದಕ್ಕೆ ಗೋಬಿಂದರ್ ಅವರ ಪ್ರೋತ್ಸಾಹವೇ ಕಾರಣ. ಈಗ, ಮಾರಾಟದ ವೆಚ್ಚವೆಲ್ಲ ಕಳೆದು, ತಿಂಗಳಿಗೆ ೩೫,೦೦೦ ರೂಪಾಯಿ ಲಾಭ ಸಿಗುತ್ತಿದೆ.”
ಜೇನ್ನೊಣ ಸಾಕಣೆಯ ದೊಡ್ಡ ಸಮಸ್ಯೆ, ರೈತರು ವಿಷಕಾರಿ ಪೀಡೆನಾಶಕಗಳನ್ನು ಸಿಂಪಡಿಸಿದಾಗ ಸಾವಿರಾರು ಜೇನ್ನೊಣಗಳು ಸಾಯುವುದು; ಅದಕ್ಕಿಂತಲೂ ದೊಡ್ಡ ಸಮಸ್ಯೆ ಜೇನು ಪೆಟ್ಟಿಗೆಗಳ ಕಳವು ಎಂದು ಮಾಹಿತಿ ನೀಡುತ್ತಾರೆ ಗೋಬಿಂದರ್ ಸಿಂಗ್.
“ಅದೇನಿದ್ದರೂ ನನಗೆ ಜೇನುಸಾಕಣೆಯಲ್ಲಿ ತೊಡಗಿದ್ದಕ್ಕೆ ಬೇಸರವಿಲ್ಲ. ಯಾವುದೇ ವೃತ್ತಿಯಲ್ಲಿ ತಾಳ್ಮೆ ಅಗತ್ಯ. ಸಂಬಳ ಪಡೆಯುವ ಉದ್ಯೋಗಿಗಳಿಗೆ ಮೊದಲ ತಿಂಗಳಿನಲ್ಲೇ ಆದಾಯ ಶುರುವಾಗುತ್ತದೆ. ಆದರೆ, ಇಂತಹ ವೃತ್ತಿಗಳಲ್ಲಿ ಹಾಗಲ್ಲ. ಇಲ್ಲಿ ತಾಳ್ಮೆಯಿಂದ ಮುಂದುವರಿಯ ಬೇಕಾಗುತ್ತದೆ. ನನಗಂತೂ ಇದರಲ್ಲಿ ಖುಷಿಯಿದೆ” ಎನ್ನುತ್ತಾರೆ ಗೋಬಿಂದರ್ ಸಿಂಗ್.
-ಅಡ್ಡೂರು ಕೃಷ್ಣ ರಾವ್