ಬರಹ: ಪ್ರಬಂಧ ಅಂಬುತೀರ್ಥ
ಇತ್ತೀಚೆಗೆ ದಕ್ಷಿಣ ಭಾರತದಲ್ಲಿನ ಅನೇಕರಿಗೆ ಆಂಧ್ರಪ್ರದೇಶದ ಪುಂಗನೂರಿನ “ಪುಂಗನೂರು ಗಿಡ್ಡ ತಳಿ ಹಸುಗಳ ಸಾಕುವ ಶೋಕಿ ಆರಂಭವಾಗಿದೆ, ಮನೆಯಲ್ಲಿ ನಾಯಿ, ಬೆಕ್ಕು ಸಾಕಿದಂತೆ ಈಗ ಈ ಪುಟ್ಟ ತಳಿಯ ಪುಂಗನೂರು ಹಸುಗಳನ್ನು ಸಾಕಲು ಆಂಧ್ರಪ್ರದೇಶದ ಪುಂಗನೂರಿಗೆ ಧಾವಿಸುತ್ತಿದ್ದಾರೆ. ಅಲ್ಲಿಂದ 75,೦೦೦ ರಿಂದ 1 ಲಕ್ಷ ರೂಪಾಯಿ ಕೊಟ್ಟು ಪುಂಗನೂರು ಹಸುಗಳನ್ನು ಖರೀದಿಸಿ ತರುತ್ತಿದ್ದಾರೆ. ಕೆಲವು ಗೋವಿನ ದಲ್ಲಾಳಿಗಳು 4೦,೦೦೦ ಕ್ಕೆ ಪುಂಗನೂರು ಹಸು ತರಿಸಿ ಕೊಡುತ್ತೇವೆ ಎನ್ನುತ್ತಾರೆ ಖಂಡಿತವಾಗಿಯೂ 75-80 ಸಾವಿರ ರೂಪಾಯಿ ಒಳಗೆ ಪುಂಗನೂರು ಹಸುಗಳು ಖರೀದಿಗೆ ಸಿಗುವುದಿಲ್ಲ. ಕೆಲ ದಲ್ಲಾಳಿಗಳು ಕ್ರಾಸ್ ಬ್ರೀಡ್(ಬೆರಕೆ) “ಪುಂಗನೂರು ತಳಿ”ಯನ್ನು ಆಸಕ್ತರಿಗೆ ಮಾರಿ ಲಾಭ ಮಾಡಿಕೊಳ್ಳುತ್ತಿದ್ದಾರೆ. ದಯಮಾಡಿ ಪುಂಗನೂರು ಹಸು ಖರೀದಿಸಲು ಆಸಕ್ತಿ ತೋರಿಸುವವರು ತಾವು ಖರೀದಿಸುವ ಹಸು ಶುದ್ಧ ಪುಂಗನೂರು ತಳಿ ಹೌದೋ ಅಲ್ಲವೋ ಎಂದು ಖಾತರಿ ಮಾಡಿಕೊಳ್ಳಬೇಕು.
ಪುಂಗನೂರು ಏಕೆ ಇತ್ತೀಚೆಗೆ “ಭಾರೀ ಫೇಮಸ್” ಆಗುತ್ತಿದೆ ಎಂದರೆ ಒಂದು ಕಾರಣ ಅದು ತನ್ನ ಚಿಕ್ಕ ಗಾತ್ರಕ್ಕೆ ಮತ್ತು ಪುಂಗನೂರು ತಳಿ ಹಸುವಿನ ಹಾಲನ್ನು ತಿರುಪತಿ ತಿಮ್ಮಪ್ಪ ದೇವರಿಗೆ ಅರ್ಪಿಸುತ್ತಾರೆ ಎಂಬ ಕಾರಣಕ್ಕೆ. ಅದು ಟಿವಿಯಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರವಾದ ಮೇಲೆ ಸಮಾಜದ ಪ್ರಾಣಿ ಪ್ರಿಯರ ಗಮನ ಸೆಳೆದಿದೆ.
ಹೊತ್ತಿಗೆ 1೦ ಲೀಟರ್ ಹಾಲು ಕೊಡುವ ವಿದೇಶಿ ಹಸುಗಳು ಬಂದಮೇಲೆ ಭಾರತೀಯ ಎಲ್ಲಾ ದೇಶೀಯ ಹಸುಗಳುಗಳು ನಿರ್ನಾಮವಾದಂತೆ “ಪುಂಗನೂರು” ತಳಿ ಕೂಡ ತನ್ನ ಅತ್ಯಂತ ಕಡಿಮೆ ಹಾಲಿನ ಉತ್ಪಾದನೆಯ ಕಾರಣಕ್ಕೆ ನಾಶ ಹೊಂದಲು ಆರಂಭಿಸಿದವು. ಯಾವಾಗ ತಿರುಪತಿ ತಿಮ್ಮಪ್ಪ ದೇವರಿಗೆ ಈ ಚಿಕ್ಕ ಗಾತ್ರದ ಹಸುವಿನ ಹಾಲು ಬಳಸುತ್ತಾರೆ ಎಂದು ಜನರಿಗೆ ಗೊತ್ತಾಯ್ತೋ ಆಗ ಹಳ್ಳಿಯ ಗೋಪಾಲಕರು ಮಾತ್ರವಲ್ಲದೆ ಪಟ್ಟಣದ ಮಂದಿಯೂ ಪುಂಗನೂರು ಹಸುಗಳನ್ನು ಖರೀದಿಸಲು ಮುಗಿಬೀಳತೊಡಗಿದರು.
ಪುಂಗನೂರು ನಮ್ಮ ಮಲೆನಾಡು ಗಿಡ್ಡ ಮತ್ತು ಕಾಸರಗೋಡು ಗಿಡ್ಡ ತಳಿಯ ನಮೂನೆಯೇ. ಆಕಾರದಲ್ಲಿ ಮಲೆನಾಡು ತಳಿಗಿಂತ ತುಸು ಚಿಕ್ಕ ಗಾತ್ರ ಎಂಬುದು ಬಿಟ್ಟರೆ ಮತ್ತೆ ಬೇರೆ ತೀರಾ ವ್ಯತ್ಯಾಸವೇನಿಲ್ಲ. ಗಿಡ್ಡದ ಆಕಾರ, ಮನುಷ್ಯರ ಜೊತೆಗೆ ಹೊಂದಿಕೊಳ್ಳುವ ಗುಣ ಮತ್ತು ಅತ್ಯುತ್ಕೃಷ್ಟ ದರ್ಜೆಯ ಔಷಧೀಯ ಗುಣದ ಹಾಲು ಮತ್ತು ಗೋಮೂತ್ರ ಇತ್ಯಾದಿ ಗವ್ಯ ಉತ್ಪನ್ನಗಳು ನಮ್ಮ ಮಲೆನಾಡು ಗಿಡ್ಡ ತಳ್ಳಿ ಹೆಚ್ಚು ಶ್ರೇಷ್ಠ ಎನಿಸುತ್ತದೆ. ನಾವು ಮಲೆನಾಡು ಮತ್ತು ಕರಾವಳಿಯ ಗೋಪಾಲಕರು ಕೂಡ ಇತ್ತೀಚಿನ ದಿನಗಳಲ್ಲಿ ಪುಂಗನೂರು ತಳಿ ಹಸುಗಳನ್ನು ಲಕ್ಷ ಲಕ್ಷ ಹಣ ಖರ್ಚು ಮಾಡಿ ಆಂಧ್ರಪ್ರದೇಶದಿಂದ ಖರೀದಿಸಿ ತಂದು ಸಾಕಲು ಉಮೇದಿಗೆ ಬಿದ್ದಿದ್ದೇವೆ.
ಇದರ ಬದಲಿಗೆ ನಮ್ಮದೇ ಶ್ರೇಷ್ಠ ತಳಿಯ ಮಲೆನಾಡು ಗಿಡ್ಡ ಹಸುಗಳನ್ನು ಸಾಕಲು ಮನಸ್ಸು ಮಾಡಿದರೆ ಮಲೆನಾಡು ಗಿಡ್ಡ ಪುಂಗನೂರು ತಳಿಯಂತೆ ಉಳಿಯುತ್ತದೆ. ಏಕೆಂದರೆ ಪುಂಗನೂರು ಪುಂಗನೂರು ತಳಿಯಷ್ಟೇ ನಮ್ಮ ಮಲೆನಾಡು ಗಿಡ್ಡ ತಳಿಯೂ ಅತ್ಯಂತ ವೇಗವಾಗಿ ನಶಿಸುತ್ತಿದೆ. ಮುಂದಿನ ದಿನಗಳಲ್ಲಿ ಮಲೆನಾಡು ಗಿಡ್ಡ ಹಸುಗಳು ಪುಂಗನೂರು ತಳಿಯಂತೆ ನೂರು-ಇನ್ನೂರು-ಸಾವಿರಕ್ಕೆ ಖುಷಿಯುವ ಭೀತಿ ಇದೆ. ಪುಂಗನೂರು ತಳಿ ಈ ಪರಿ ವಿನಾಶವಾಗಿದೆ ಎಂದರೆ ಮಲೆನಾಡು ಗಿಡ್ಡ ತಳಿಯ ಹಸುಗಳು ಉಳಿಯುವುದು ಹೇಗೆ!? ಹೌದು, ಮಲೆನಾಡು ಗಿಡ್ಡ ತಳಿ ಹಸುಗಳಿಗೆ ನಾವು ಮಲೆನಾಡು ಮತ್ತು ಕರಾವಳಿಯ ಗೋಪಾಲಕರೇ ಆಶ್ರಯದಾತರಾಗಿ ತಳಿ ಉಳಿಸಿ ಗೋ ಸಂವರ್ಧನೆ ಮಾಡಬೇಕಾಗಿದೆ. ಹಾಗಾದಲ್ಲಿ ಇನ್ನೊಂದು ಹತ್ತು ವರ್ಷಗಳಲ್ಲಿ ನಮ್ಮ ಮಲೆನಾಡು ಗಿಡ್ಡ ತಳಿಯ ಹಸುಗಳಿಗೂ ಲಕ್ಷ ಲಕ್ಷ ಬೆಲೆ ಬರುತ್ತವೆ. ಗೋಪಾಲಕರು ಮಲೆನಾಡು ಗಿಡ್ಡ ಹಸುಗಳಿಗೆ ಹಾಲು ಕಡಿಮೆ ಎಂದು ದಯಮಾಡಿ ಮಾರದಿರಿ. ಇದೇ ಪುಂಗನೂರು ಟ್ರೆಂಡ್ ನಮ್ಮ ಮಲೆನಾಡು ಗಿಡ್ಡ ಹಸುಗಳಿಗೂ ಖಂಡಿತವಾಗಿ ಮುಂದೆ ಬರಲಿದೆ.